ರಾಜಮೌಳಿಗೆ ಜಕ್ಕಣ್ಣ ಹೆಸರು ಬಂದಿದ್ದು ಹೇಗೆ? ಹೆಸರಿನ ಅರ್ಥವೇನು? ಹೆಸರಿಟ್ಟಿದ್ದು ಯಾರು?
ನಿರ್ದೇಶಕ ರಾಜಮೌಳಿಗೆ ಜಕ್ಕಣ್ಣ ಹೆಸರು ಬಂದಿದ್ದು ಹೇಗೆ? ಹೆಸರಿನ ಅರ್ಥವೇನು? ಹೆಸರಿಟ್ಟಿದ್ದು ಯಾರು?
ಆರ್ಆರ್ಆರ್ (RRR) ಸಿನಿಮಾದ ನಾಟು-ನಾಟು ಹಾಡಿಗೆ ಆಸ್ಕರ್ (Oscar) ಬಂದ ಬೆನ್ನಲ್ಲೆ ಸಂಗೀತ ನಿರ್ದೇಶಕ ಕೀರವಾಣಿಯ (Keeravani) ಜೊತೆಗೆ ಸಿನಿಮಾದ ನಿರ್ದೇಶಕ ರಾಜಮೌಳಿಯ ಬಗ್ಗೆ ಪ್ರಶಂಸೆಗಳ ಸುರಿಮಳೆಯೇ ಆಗುತ್ತಿದೆ. ಆರ್ಆರ್ಆರ್ ಸಿನಿಮಾ ಮೂಲಕ ರಾಜಮೌಳಿ ಹೆಸರು ವಿಶ್ವದಾದ್ಯಂತ ಜನಪ್ರಿಯಗೊಂಡಿದೆ. ಅಂದಹಾಗೆ ರಾಜಮೌಳಿಗೆ ಇನ್ನೊಂದು ಹೆಸರು ಇದೆ. ಅದುವೇ ಜಕ್ಕಣ್ಣ ಅಥವಾ ತೆಲುಗಿನಲ್ಲಿ ಜಕ್ಕನ್ನ. ರಾಜಮೌಳಿಗೆ ಈ ಹೆಸರು ಬರಲು ಕಾರಣವಿದೆ.
ಹೊಯ್ಸಳರ ಕಾಲದ ಅಪೂರ್ವ ಶಿಲ್ಪಿ ಜಕಣಾಚಾರಿಯ ಹೆಸರನ್ನೇ ಚುಟುಕುಗೊಳಿಸಿ ರಾಜಮೌಳಿಗೆ ನಿಕ್ ನೇಮ್ ಆಗಿ ಅವರ ಗೆಳೆಯರೊಬ್ಬರು ಇಟ್ಟಿದ್ದಾರೆ. ಜಕಣಾಚಾರಿ ಬಹಳ ತಾಳ್ಮೆಯುಳ್ಳ ಅಪ್ರತಿಮ ಶಿಲ್ಪಿಯಾಗಿದ್ದರು. ಕಲ್ಲನ್ನು ಸುಂದರ ಶಿಲ್ಪವನ್ನಾಗಿ ರೂಪಿಸುವ ಮಹಾನ್ ಕಲೆಗಾರ ಅವರು. ರಾಜಮೌಳಿಯ ಸಿನಿಮಾ ಮೇಕಿಂಗ್ ಶೈಲಿ ಸಹ ಜಕಣಾಚಾರಿಯವರ ಶೈಲಿ ಹೋಲುತ್ತದೆ ಎನಿಸಿ ಈ ಹೆಸರನ್ನು ರಾಜಮೌಳಿಗೆ ಅನ್ವರ್ಥವಾಗಿ ಇಡಲಾಯಿತು.
ರಾಜಮೌಳಿಯ ಮೊದಲ ಸಿನಿಮಾ ‘ಸ್ಟೂಡೆಂಟ್ ನಂಬರ್ 1’ ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆಗೆ ಅವರಷ್ಟೆ ಪ್ರಮುಖ ಪಾತ್ರದಲ್ಲಿ ನಟ ರಾಜೀವ ಕನಕಾಲ ನಟಿಸಿದ್ದರು. ರಾಜಮೌಳಿ, ದೃಶ್ಯಗಳನ್ನು ಸಂಯೋಜಿಸಲು ತೆಗೆದುಕೊಳ್ಳುತ್ತಿದ್ದ ಆಸಕ್ತಿ. ಸಣ್ಣ ಸಣ್ಣ ವಿಷಯಗಳ ಬಗ್ಗೆ ವಹಿಸುತ್ತಿದ್ದ ಕಾಳಜಿ ಗಮನಿಸಿದ ರಾಜೀವ್ ಕನಕಾಲ, ಜಕ್ಕನ್ನ ಎಂಬ ಹೆಸರನ್ನು ರಾಜಮೌಳಿಗೆ ಇಟ್ಟರು. ಆ ಹೆಸರನ್ನು ಜನಪ್ರಿಯಗೊಳಿಸಿದ ಶ್ರೇಯ ಜೂ ಎನ್ಟಿಆರ್ಗೆ ಲಭಿಸುತ್ತದೆ. ಪ್ರಭಾಸ್ ಸೇರಿದಂತೆ ತೆಲುಗು ಚಿತ್ರರಂಗದಲ್ಲಿ ಹಲವರು ರಾಜಮೌಳಿಯನ್ನು ಜಕ್ಕನ್ನ ಎಂದೇ ಕರೆಯುತ್ತಾರೆ.
ರಾಜಮೌಳಿಗೆ ಜಕ್ಕಣ್ಣ ಎಂದು ನಾಮಕರಣ ಮಾಡಿದ ರಾಜೀವ್ ಕನಕಾಲ, ರಾಜಮೌಳಿಯ ಆಪ್ತ ಸ್ನೇಹಿತರಲ್ಲಿ ಒಬ್ಬರು. ರಾಜಮೌಳಿ ನಿರ್ದೇಶನದ ಹಲವು ಸಿನಿಮಾಗಳಲ್ಲಿ ರಾಜೀವ್ ನಟಿಸಿದ್ದಾರೆ. ಇದೀಗ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಆರ್ಆರ್ಆರ್ ಸಿನಿಮಾದಲ್ಲಿಯೂ ರಾಜೀವ್ ಕನಕಾಲ ಒಂದು ಸಣ್ಣ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಶಿಲ್ಪಿ ಜಕಣಾಚಾರಿ ಕರ್ನಾಟಕದ ತುಮಕೂರಿನ ಕೈದಾಲ ಗ್ರಾಮದವರು. ಕೈದಾಲದ ಚೆನ್ನಕೇಶವ ದೇವಾಲಯ ಸೇರಿ ಹಲವು ಅಪೂರ್ವ ಶಿಲ್ಪಗಳನ್ನು ಜಕಣಾಚಾರಿ ಕೆತ್ತಿದ್ದಾರೆ. ಜಕಣಾಚಾರಿ ಜೀವನ ಆಧರಿಸಿ ಕನ್ನಡದಲ್ಲಿ ‘ಅಮರಶಿಲ್ಪ ಜಕಣಾಚಾರಿ’ ಸಿನಿಮಾ ನಿರ್ಮಾಣಗೊಂಡಿದೆ. ಇದೇ ಸಿನಿಮಾ ತೆಲುಗಿನಲ್ಲಿ ‘ಅಮರಶಿಲ್ಪಿ ಜಕ್ಕನ್ನ’ ಹೆಸರಿನಲ್ಲಿ ರೀಮೇಕ್ ಆಗಿತ್ತು, ಕನ್ನಡದಲ್ಲಿ ಕಲ್ಯಾಣ್ ಕುಮಾರ್ ನಟಿಸಿದ್ದ ಪಾತ್ರದಲ್ಲಿ ತೆಲುಗಿನ ನಾಗಾರ್ಜುನ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದ್ದರು.