ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

| Updated By: ರಾಜೇಶ್ ದುಗ್ಗುಮನೆ

Updated on: Jun 13, 2021 | 5:26 PM

Sushant Singh Rajput Death Anniversary: 2014ರ ಬ್ಲಾಕ್​ಬಸ್ಟರ್​ ಸಿನಿಮಾ ‘ಪಿಕೆ’ಯಲ್ಲಿ ಸುಶಾಂತ್​ ಒಂದು ಮುಖ್ಯ ಪಾತ್ರವನ್ನು​ ನಿಭಾಯಿಸಿದ್ದರು. ಅಷ್ಟುಹೊತ್ತಿಗಾಗಲೇ ಬಾಲಿವುಡ್​ನಲ್ಲಿ ಸ್ಟಾರ್​ ಆಗಿ ಅವರು ಗುರುತಿಸಿಕೊಂಡಿದ್ದರು. ಅದರ ನಂತರವೂ ಅವರು ಕಿರುತೆರೆಗೆ ಮರಳಬೇಕಾಯಿತು.

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?
ಸುಶಾಂತ್​ ಸಿಂಗ್​ ರಜಪೂತ್​
Follow us on

ಕಿರುತೆರೆಯಲ್ಲಿ ಮಿಂಚಿದ ಬಳಿಕ ಸಿನಿಮಾ ಲೋಕಕ್ಕೆ ಕಾಲಿಟ್ಟು ಸ್ಟಾರ್​ ಆದವರು ಅನೇಕರಿದ್ದಾರೆ. ಯಶ್​, ಶಾರುಖ್​ ಖಾನ್​ ಮುಂತಾದವರೇ ಈ ಮಾತಿಗೆ ಬೆಸ್ಟ್​ ಉದಾಹರಣೆ. ಅದೇ ರೀತಿ ಸುಶಾಂತ್​ ಸಿಂಗ್​ ರಜಪೂತ್​ ಕೂಡ ಮೊದಲು ಧಾರಾವಾಹಿಯಲ್ಲಿ ನಟಿಸಿ ನಂತರ ಬಾಲಿವುಡ್​ಗೆ ಕಾಲಿಟ್ಟವರು. ‘ಪವಿತ್ರ ರಿಶ್ತಾ’ ಸೀರಿಯಲ್​ ಮೂಲಕ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿತ್ತು. ಆ ಜನಪ್ರಿಯತೆ ಆಧಾರದ ಮೇಲೆ ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ಸು ಕಂಡರು.

ಮೊದಲ ಚಿತ್ರ ‘ಕೈ ಪೋ ಚೆ’ ಗಮನ ಸೆಳೆಯಿತು. ನಂತರ ನಟಿಸಿದ ‘ಶುದ್ಧ್​ ದೇಸಿ ರೊಮ್ಯಾನ್ಸ್​’ ಕೂಡ ಹೆಸರು ತಂದುಕೊಟ್ಟಿತ್ತು. ನಂತರ ರಾಜ್​ಕುಮಾರ್​ ಹಿರಾನಿ ನಿರ್ದೇಶನದ ಬ್ಲಾಕ್​ಬಸ್ಟರ್​ ಸಿನಿಮಾ ‘ಪಿಕೆ’ಯಲ್ಲಿ ಒಂದು ಮುಖ್ಯ ಪಾತ್ರವನ್ನು ಸುಶಾಂತ್​ ನಿಭಾಯಿಸಿದ್ದರು. ಆದರೆ ಬಾಲಿವುಡ್​ನಲ್ಲಿ ಸ್ಟಾರ್​ ಆದ ಬಳಿಕವೂ ಅವರು ಕಿರುತೆರೆಗೆ ಮರಳಬೇಕಾಯಿತು.

ಕಿರುತೆರೆಗೆ ವಾಪಸ್​ ಬಂದರು ಎಂದರೆ ಸುಶಾಂತ್​ ಅವರಿಗೆ ಬಾಲಿವುಡ್​ನಲ್ಲಿ ಅವಕಾಶ ಇರಲಿಲ್ಲ ಎಂದೇನಲ್ಲ. ಅವರು 2015ರಲ್ಲಿ ‘ಡಿಟೆಕ್ಟೀವ್​ ಬ್ಯೋಮಕೇಶ್​ ಬಕ್ಷಿ’ ಸಿನಿಮಾದಲ್ಲಿ ಪತ್ತೇದಾರಿ ಮಾತ್ರ ಮಾಡಿದ್ದರು. ಆ ಚಿತ್ರದ ಪ್ರಮೋಷನ್​ ಸಲುವಾಗಿ ‘ಸಿಐಡಿ’ ಧಾರಾವಾಹಿಯಲ್ಲೂ ಕೂಡ ಅದೇ ಪಾತ್ರವನ್ನು ಅವರು ಮಾಡಿದರು. ಒಂದು ಎಪಿಸೋಡ್​ನಲ್ಲಿ ಅವರು ಅತಿಥಿ ಮಾತ್ರ ನಿಭಾಯಿಸಿದರು. ಈ ಮೂಲಕ ಧಾರಾವಾಹಿಯಲ್ಲಿ ತಮ್ಮ ಸಿನಿಮಾ ಪಾತ್ರವನ್ನು ಪ್ರಚಾರ ಮಾಡಿದ್ದರು.

2015ರ ಏಪ್ರಿಲ್​ 3ರಂದು ‘ಡಿಟೆಕ್ಟೀವ್​ ಬ್ಯೋಮಕೇಶ್​ ಬಕ್ಷಿ’ ಸಿನಿಮಾ ಬಿಡುಗಡೆ ಆಯಿತು. 2016ರಲ್ಲಿ ‘ಎಂಎಸ್​ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ರಿಲೀಸ್​ ಆದ ನಂತರವಂತೂ ಸುಶಾಂತ್​ ವಿಶ್ವಾದ್ಯಂತ ಜನಪ್ರಿಯರಾದರು. ‘ಡಿಟೆಕ್ಟೀವ್​ ಬ್ಯೋಮಕೇಶ್​ ಬಕ್ಷಿ’ ಚಿತ್ರದ ಸೀಕ್ವೆಲ್​ ಮಾಡಬೇಕು ಎಂಬ ಪ್ಲ್ಯಾನ್​ ಸಿದ್ಧಗೊಂಡಿತ್ತು. ಆದರೆ ಸುಶಾಂತ್​ ನಿಧನದ ನಂತರ ಆ ಯೋಜನೆಯನ್ನು ಕೈ ಬಿಡಲಾಯಿತು.

ಸೋಮವಾರಕ್ಕೆ (ಜೂ.14) ಸುಶಾಂತ್​ ನಿಧನರಾಗಿ ಒಂದು ವರ್ಷ ಭರ್ತಿ ಆಗುತ್ತದೆ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸುಶಾಂತ್​ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರ ಕುಟುಂಬದವರು ಮತ್ತು ಅಭಿಮಾನಿಗಳು ಇಂದಿಗೂ ಹೋರಾಡುತ್ತಲೇ ಇದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇನ್ನೂ ಅಂತಿಮ ವರದಿ ಸಲ್ಲಿಸಿಲ್ಲ.

ಇದನ್ನೂ ಓದಿ:

SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

Sushant Singh Rajput: ಸುಶಾಂತ್​ ಸಾವಿನ ನಂತರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನೀಡಿದ ಅಚ್ಚರಿಯ​ ಹೇಳಿಕೆಗಳು