
ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಮನೆ ಊಟ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ಕಾನೂನಿನ ತೊಡಕು ಉಂಟಾಗುತ್ತಿದೆ. ಪವಿತ್ರಾ ಗೌಡ (Pavithra Gowda) ಅವರು ಗಂಭೀರವಾದ ಕೊಲೆ ಪ್ರಕರಣದಲ್ಲಿ ಸಿಲುಕುಕೊಂಡಿರುವುದರಿಂದ ಅವರಿಗೆ ಜೈಲಿನಲ್ಲಿ ನಿಯಮಗಳು ಕಠಿಣ ಆಗಿವೆ. ಕೊನೇ ಪಕ್ಷ ವಾರಕ್ಕೆ ಒಮ್ಮೆಯಾದರೂ ಮನೆ ಊಟ ಪಡೆಯಲು ಕೂಡ ಅವರು ಕಷ್ಟಪಡುವಂತಾಗಿದೆ.
ಈ ಮೊದಲು ಪವಿತ್ರಾ ಗೌಡ ಅವರಿಗೆ ಮನೆ ಊಟ ನೀಡುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಜೈಲಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವಿಷಯದಲ್ಲಿ ಕೋರ್ಟ್ ತನ್ನದೇ ತೀರ್ಪನ್ನು ಮಾರ್ಪಾಡು ಮಾಡಿತ್ತು. ವಾರದಲ್ಲಿ ಒಮ್ಮೆ ಮಾತ್ರ ಊಟ ನೀಡಲು ಅವಕಾಶ ನೀಡಿತ್ತು. ಆದರೆ ಈಗ ಆ ಆದೇಶವನ್ನು ಕೂಡ ಪ್ರಶ್ನಿಸಿ ರಿಟ್ ಅರ್ಜಿ ಹಾಕಲಾಗಿದೆ.
ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ಗೆ ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ನೀಡಿರುವ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ರಿಟ್ ಅರ್ಜಿ ಸಲ್ಲಿಸಿದೆ. ಕೊಲೆ ಕೇಸಿನ ಯಾವುದೇ ಆರೋಪಿಗಳಿಗೆ ಮನೆ ಊಟ ನೀಡುವ ಸೌಲಭ್ಯವಿಲ್ಲ. ಕೋರ್ಟ್ ಆದೇಶ ಪಾಲಿಸಿದರೆ ಇತರೆ ಆರೋಪಿಗಳೂ ಕೇಳುತ್ತಾರೆ ಎಂಬ ಕಾರಣದಿಂದ ಸರ್ಕಾರ ರಿಟ್ ಅರ್ಜಿ ಸಲ್ಲಿಕೆ ಮಾಡಿದೆ.
ಜೈಲಿನ ಊಟಕ್ಕೆ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) 4 ಸ್ಟಾರ್ ನೀಡಿದೆ. ಆದ್ದರಿಂದ ಜೈಲಿನ ಊಟದ ಗುಣಮಟ್ಟದ ಬಗ್ಗೆ ಬೇರೆ ಕೈದಿಗಳು ಆಕ್ಷೇಪ ಎತ್ತಿಲ್ಲ. ಹೀಗಾಗಿ 57ನೇ ಸಿಸಿಹೆಚ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ರಾಜ್ಯ ಸರ್ಕಾರ ಮನವಿ ಮಾಡಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಭೇಟಿ ಮಾಡಲು ಪವಿತ್ರಾ ಗೌಡ ಯತ್ನ: ಬೇಡವೇ ಬೇಡ ಎಂದ ದಾಸ
ಪವಿತ್ರಾ ಗೌಡ ಅವರು ಜೈಲಿನ ಊಟದ ಬಗ್ಗೆ ತಕರಾರು ಎತ್ತಿದ್ದರು. ಜೈಲೂಟದಿಂದ ಚರ್ಮರೋಗ ಉಂಟಾಗಿದೆ. ಮೈಮೇಲೆ ಗುಳ್ಳೆಗಳು ಆಗುತ್ತಿವೆ ಎಂದು ಅವರು ವಾದ ಮಂಡಿಸಿದ್ದರು. ಜೈಲೂಟದಿಂದ ಫುಡ್‌ಪಾಯಿಸನ್ ಕೂಡ ಆಗುತ್ತಿದೆ ಎಂದು ನ್ಯಾಯಾಲಯದ ಎದುರು ಪವಿತ್ರಾ ಗೌಡ ಅವರು ಹೇಳಿದ್ದರು. ಅವರ ವಾದ ಆಲಿಸಿದ ಬಳಿಕ ವಾರಕ್ಕೊಮ್ಮೆ ಮನೆ ಊಟಕ್ಕೆ ಕೋರ್ಟ್ ಆದೇಶಿಸಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.