ಮಣಿರತ್ನಂ (Mani Rathnam) ನಿರ್ದೇಶನದ ಬಹುತಾರಾಗಣದ ಸಿನಿಮಾ ಪೊನ್ನಿಯಿನ್ ಸೆಲ್ವನ್ 2 (Ponniyin Selvan 2) ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಕೆಲವೇ ದಿನಗಳಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಅನ್ನು ಸಿನಿಮಾ ಮಾಡಿದ್ದು, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಬಹುವಾಗಿ ಮೆಚ್ಚುಗೆ ಗಳಸಿದೆ. ಮಣಿರತ್ನಂರ ಈವರೆಗಿನ ಅತ್ಯುತ್ತಮ ಸಿನಿಮಾ ಎಂದೂ ಕೆಲವರು ಪೊನ್ನಿಯಿನ್ ಸೆಲ್ವನ್ 2 ಸಿನಿಮಾವನ್ನು ಕೊಂಡಾಡಿದ್ದಾರೆ. ಆದರೆ ಇದೀಗ ತಮಿಳಿನ ಲೇಖಕ ಮುರುಗವೇಲು ಪೊನ್ನಿಯಿನ್ ಸೆಲ್ವನ್ 2 ನಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದಿರುವ ಜೊತೆಗೆ ಹಿಂದುತ್ವದ ಹೇರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಕಾದಂಬರಿಯಲ್ಲಿ ಲೇಖಕ ಕಲ್ಕಿ ಬರೆದಿರುವಂತೆ, ಮಂದಾಕಿನಿ/ನಂದಿನಿ ಆದಿತ್ಯ ಕರಿಕಾಳನ್ ಜೊತೆಗಿನ ಪ್ರೇಮ ಮರೆತು ವೀರ ಪಾಂಡಿಯನ್ ಜೊತೆಗೆ ಸಂಸಾರ ಸಾಗಿಸುತ್ತಾಳೆ, ಗರ್ಭಿಣಿಯೂ ಆಗುತ್ತಾಳೆ. ಆದರೆ ಮಣಿರತ್ನಂರ ಈ ಸಿನಿಮಾದಲ್ಲಿ ವೀರ ಪಾಂಡಿಯನ್, ಸುಂದರ ಚೋಳನ ವಿರುದ್ಧ ಸೇಡಿನಿಂದ ಮಂದಾಕಿನಿ ಮೇಲೆ ಅತ್ಯಾಚಾರ ಮಾಡಿರುವಂತೆ ಹೇಳಲಾಗಿದೆ. ಕಾದಂಬರಿಯನ್ನು ಸಿನಿಮಾ ಕತೆಗೆ ಅಳವಡಿಸಿರುವ ಮಣಿರತ್ನಂ ಹಾಗೂ ಜಯಮೋಹನ್, ಮಂದಾಕಿನಿ ಪಾತ್ರದ ಸ್ವಾತಂತ್ರ್ಯವನ್ನು ಸಹಿಸಿಕೊಂಡಿಲ್ಲ ಎಂದಿದ್ದಾರೆ ಮುರುಗವೇಲು.
ಮುಂದುವರೆದು, ಮಹಿಳೆಯು ಬೇರೆ ಪುರುಷನ ಬಗ್ಗೆ ಯೋಚಿಸಬಾರದು, ಒಬ್ಬನೇ ಪುರುಷನಿಗೆ ಅಂಟಿಕೊಂಟಿರಬೇಕು ಎಂಬ ಮಣಿರತ್ನಂ ಹಾಗೂ ಜಯಮೋಹನ್ರ ಯೋಚನೆ ಹಿಂದುತ್ವದ ಮನಸ್ಥಿತಿಯಂತೆ ತೋರುತ್ತಿದೆ. ಮಣಿರತ್ನಂರ ಈ ಹಿಂದಿನ ಸಿನಿಮಾಗಳಲ್ಲಿ ಈ ರೀತಿಯದ್ದಿರಲಿಲ್ಲ, ಬಹುಷಃ ಇದು ಜಯಮೋಹನ್ ಜೊತೆಗಿನ ಗೆಳೆತನದಿಂದ ಬಂದಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ ಮುರುಗವೇಲು. ಪೊನ್ನಿಯಿನ್ ಸೆಲ್ವನ್ 2 ಸಿನಿಮಾದಲ್ಲಿ ಮಾಡಲಾಗಿರುವ ತಪ್ಪುಗಳ ಬಗ್ಗೆ ಮುರುಗವೇಲು ಉದ್ದನೇಯ ಫೇಸ್ಬುಕ್ ಪೋಸ್ಟ್ ಬರೆದಿದ್ದು ಪೋಸ್ಟ್ ಇದೀಗ ವೈರಲ್ ಆಗಿದೆ.
ಪೊನ್ನಿಯಿನ್ ಸೆಲ್ವನ್ ಸಿನಿಮಾದ ಎರಡು ಭಾಗಗಳನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಎರಡೂ ಸಿನಿಮಾಗಳು ತಮಿಳಿನ ಜನಪ್ರಿಯ ಕಾದಂಬರಿ ಪೊನ್ನಿಯಿನ್ ಸೆಲ್ವನ್ ನಿಂದ ಪ್ರೇರಣೆ ಪಡೆದಿವೆ. 1950 ರಿಂದ 1954 ರವರೆಗೆ ಮ್ಯಾಗಜೀನ್ ಒಂದರಲ್ಲಿ ಕತೆಯಾಗಿ ಪ್ರಕಟವಾಗಿದ್ದ ಪೊನ್ನಿಯಿನ್ ಸೆಲ್ವನ್ 1955 ರಲ್ಲಿ ಪುಸ್ತಕವಾಯಿತು. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಈ ಐತಿಹಾಸಿಕ ಕಾದಂಬರಿ ತಮಿಳುನಾಡಿನ ಅತ್ಯಂತ ಜನಪ್ರಿಯ ಕಾದಂಬರಿಯಾಗಿದೆ. ಹಲವು ವರ್ಷಗಳಿಂದಲೂ ಈ ಕತೆಯನ್ನು ಸಿನಿಮಾ ಮಾಡುವ ಸಾಹಸಗಳು ನಡೆದಿದ್ದವು, ಆದರೆ ಇದು ಬೃಹತ್ ಕತೆಯಾಗಿದ್ದರಿಂದ ಯಾರಿಗೂ ಇದನ್ನು ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಮಣಿರತ್ನಂ ಅವರು ಎರಡು ಭಾಗಗಳಲ್ಲಿ ಈ ಕತೆಯನ್ನು ಸಿನಿಮಾ ಮಾಡಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಚಿಯಾನ್ ವಿಕ್ರಂ, ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ಜಯಂ ರವಿ, ಐಶ್ವರ್ಯಾ ಲಕ್ಷ್ಮಿ, ಶೋಭಿತ ದುಲಿಪಾಲ, ಪ್ರಕಾಶ್ ರೈ, ಕಿಶೋರ್, ಪ್ರಭು, ಜಯರಾಂ, ಶರತ್ ಕುಮಾರ್, ಮಲಯಾಳಂನ ಲಾಲ್ ಇನ್ನೂ ಅನೇಕ ಸ್ಟಾರ್ ನಟರು ನಟಿಸಿದ್ದಾರೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದು ಸಿನಿಮಾವನ್ನು ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ