ಸುಧಾಕರ್ ಪರ ಪ್ರಚಾರಕ್ಕೆ ಬಂದ ತೆಲುಗು ಹಾಸ್ಯನಟ ಬ್ರಹ್ಮಾನಂದಂ
Election Campaign: ತೆಲುಗಿನ ಜನಪ್ರಿಯ ಹಾಸ್ಯನಟ ಬ್ರಹ್ಮಾನಂದಂ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರವಾಗಿ ಪ್ರಚಾರ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಅಭ್ಯರ್ಥಿಗಳು, ರಾಜ್ಯ, ರಾಷ್ಟ್ರ ಮುಖಂಡರುಗಳ ಜೊತೆಗೆ ಸಿನಿಮಾ ತಾರೆಯರು ಸಹ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ (Sudeep), ಶಿವರಾಜ್ ಕುಮಾರ್ (Shiva Rajkumar), ರಮ್ಯಾ(Ramya), ಸಾಧುಕೋಕಿಲ (Sadhukokila), ಶ್ರುತಿ, ಹರ್ಷಿಕಾ ಪೂಣಚ್ಚ, ನಿಶ್ವಿಕಾ ನಾಯ್ಡು ಇನ್ನೂ ಹಲವು ತಾರೆಯರು ಅಖಾಡಕ್ಕೆ ಇಳಿದಿದ್ದಾರೆ. ಕನ್ನಡದ ನಟರುಗಳು ಮಾತ್ರವೇ ಅಲ್ಲದೆ, ಚುನಾವಣಾ ಅಖಾಡಕ್ಕೆ ತೆಲುಗು ಚಿತ್ರರಂಗದ ನಟರೂ ಧುಮುಕಿದ್ದಾರೆ.
ಚಿಕ್ಕಬಳ್ಳಾಪುರ, ಕೋಲಾರಗಳಲ್ಲಿ ತೆಲುಗು ಭಾಷಿಕರು ಹೆಚ್ಚು, ತೆಲುಗು ಸಿನಿಮಾಗಳ ಪ್ರಭಾವವೂ ಈ ಭಾಗದಲ್ಲಿ ಹೆಚ್ಚಿದೆ. ಹಾಗಾಗಿ ಮೊದಲಿನಿಂದಲೂ ಚುನಾವಣೆಗಳು ಬಂದಾಗ ತೆಲುಗು ಚಿತ್ರನಟರನ್ನು ಕರೆಸಿ ಈ ಭಾಗದಲ್ಲಿ ಚುನಾವಣಾ ಪ್ರಚಾರ ಮಾಡಿಸುವ ರೂಢಿ ಇದೆ. ಈ ಬಾರಿಯೂ ಸಂಪ್ರದಾಯ ಮುಂದುವರೆದಿದ್ದು, ತೆಲುಗಿನ ಜನಪ್ರಿಯ ನಟ ಬ್ರಹ್ಮಾನಂದಂ ಅವರು ಇಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರವಾಗಿ ಮತಯಾಚನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಪುರ ಗ್ರಾಮ, ಚಿಕ್ಕಬಳ್ಳಾಪುರದ ಪಟ್ಟಣ ಪ್ರದೇಶ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ರ್ಯಾಲಿ ಮಾಡಿದ ನಟ ಬ್ರಹ್ಮಾನಂದಂ ಬಿಜೆಪಿ ಅಭ್ಯರ್ಥಿ ಡಾ ಸುಧಾಕರ್ ಅವರಿಗೆ ಮತಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಾನಂದಂ ಅವರನ್ನು ನೋಡಲು ಭಾರಿ ಸಂಖ್ಯೆಯ ಜನ ಸೇರಿದ್ದರು, ಬ್ರಹ್ಮಾನಂದಂ ಸಹ ತಮ್ಮ ಸಿನಿಮಾಗಳ ಹಾಸ್ಯ ಸಂಭಾಷಣೆಗಳನ್ನು ಹೇಳಿ ಜನರನ್ನು ರಂಜಿಸಿದರು.
ಬ್ರಹ್ಮಾನಂದಂ, ಸುಧಾಕರ್ ಪರವಾಗಿ ಪ್ರಚಾರಕ್ಕೆ ಬಂದಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಸುಧಾಕರ್ ಅವರು ಬೈ ಎಲೆಕ್ಷನ್ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದಾಗಲೂ ಬ್ರಹ್ಮಾನಂದಂ ಅವರು ಸುಧಾಕರ್ ಪರವಾಗಿ ಪ್ರಚಾರ ನಡೆಸಿದ್ದರು. ಗಡಿ ಜಿಲ್ಲೆಯವರಾದ ಸುಧಾಕರ್ ಅವರಿಗೆ ಕನ್ನಡ ಚಿತ್ರರಂಗದವರ ಜೊತೆಗೆ ತೆಲುಗು ಚಿತ್ರರಂಗದವರ ಜೊತೆಗೂ ಉತ್ತಮ ನಂಟಿದೆ. ಜೂ ಎನ್ಟಿಆರ್ ಅವರೊಟ್ಟಿಗೂ ಸುಧಾಕರ್ ಅವರಿಗೆ ಉತ್ತಮ ನಂಟು ಇದೆ.
ಬ್ರಹ್ಮಾನಂದಂ ತೆಲುಗು ಚಿತ್ರರಂಗದ ಸ್ಟಾರ್ ಹಾಸ್ಯನಟ, ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿಶ್ವದಾಖಲೆಯೂ ಅವರ ಹೆಸರಲ್ಲಿದೆ. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟಿಸಿರುವ ‘ನಿನ್ನಿಂದಲೆ’ ಸಿನಿಮಾದಲ್ಲಿ ಬ್ರಹ್ಮಾನಂದಂ ನಟಿಸಿದ್ದಾರೆ.
ಇನ್ನು ಈ ಹಿಂದಿನ ಕರ್ನಾಟಕ ಚುನಾವಣೆಗಳಲ್ಲಿ ತೆಲುಗಿನ ಪವನ್ ಕಲ್ಯಾಣ್, ಹಾಸ್ಯನಟ ಆಲಿ, ಹಾಡುಗಾರ್ತಿ ಮಂಗ್ಲಿ ಇನ್ನೂ ಹಲವರು ವಿವಿಧ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಆದರೆ ಈ ಬಾರಿ ಬ್ರಹ್ಮಾನಂದಂ ಹೊರತುಪಡಿಸಿ ತೆಲುಗಿನ ನಟರು ಇತ್ತಕಡೆ ಬಂದಿಲ್ಲ. ಇನ್ನು ಸುಧಾಕರ್ ಪರವಾಗಿ ನಟಿ ಹರ್ಷಿಕಾ ಪೂಣಚ್ಚ ಈಗಾಗಲೇ ಜೋರು ಪ್ರಚಾರ ನಡೆಸಿದ್ದಾರೆ. ಸುದೀಪ್ ಸಹ ಮುಂದಿನ ದಿನಗಳಲ್ಲಿ ಸುಧಾಕರ್ ಪರವಾಗಿ ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಗಾಯಕಿ ಮಂಗ್ಲಿ ಸಹ ಸುಧಾಕರ್ ಪರವಾಗಿ ಪ್ರಚಾರ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚಿಕ್ಕಬಳ್ಳಾಪುರ, ಕೋಲಾರ ಭಾಗಗಳಲ್ಲಿ ತೆಲುಗು ಸಿನಿಮಾಗಳ ಪ್ರಭಾವ ಬಹಳ ದೊಡ್ಡ ಪ್ರಮಾಣದಲ್ಲಿದೆ. ತೆಲುಗಿನ ಸೂಪರ್ ಹಿಟ್ ಸಿನಿಮಾ ಆರ್ಆರ್ಆರ್ನ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರದಲ್ಲಿಯೇ ಆಯೋಜನೆ ಮಾಡಿದ್ದು ಇದಕ್ಕೆ ಉದಾಹರಣೆ. ಪವನ್ ಕಲ್ಯಾಣ್, ಚಿರಂಜೀವಿ ಅವರುಗಳಿಗೆ ದೊಡ್ಡ ಅಭಿಮಾನಿ ವರ್ಗ ಈ ಭಾಗದಲ್ಲಿದೆ. ಎನ್ಟಿಆರ್ ಕುಟುಂಬದ ಅಭಿಮಾನಿಗಳೂ ಸಹ ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ