ಸೆಟ್​ನಲ್ಲಿ ಕ್ಯಾಮೆರಾ ಸಹಾಯಕಿ ಸಾವು, ಚಿತ್ರೀಕರಣ ನಿಲ್ಲಿಸಿದ ನಾನಿ ಸಿನಿಮಾ

Nani: ಶೂಟಿಂಗ್​ ಸೆಟ್​ನಲ್ಲಿ ಅವಘಡಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಕಳೆದ ವರ್ಷ ಸಹ ಕೆಲವು ಸಿನಿಮಾ ಸೆಟ್​ಗಳಲ್ಲಿ ಇಂಥಹಾ ಅವಘಡಗಳು ನಡೆದಿವೆ. ತೆಲುಗಿನ ಜನಪ್ರಿಯ ನಟ ನಾನಿ ನಟಿಸುತ್ತಿರುವ ‘ಹಿಟ್ 3’ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಸಿನಿಮಾ ತಂಡದ ಭಾಗವಾಗಿದ್ದ ಯುವತಿಯೊಬ್ಬರು ನಿಧನ ಹೊಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೆಟ್​ನಲ್ಲಿ ಕ್ಯಾಮೆರಾ ಸಹಾಯಕಿ ಸಾವು, ಚಿತ್ರೀಕರಣ ನಿಲ್ಲಿಸಿದ ನಾನಿ ಸಿನಿಮಾ
Nani

Updated on: Jan 02, 2025 | 12:42 PM

ಸಿನಿಮಾ ಸೆಟ್​ಗಳಲ್ಲಿ ಅವಘಡಗಳು ನಡೆಯುತ್ತಲೇ ಇರುತ್ತವೆ. ಕಳೆದ ವರ್ಷ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ನಡೆದ ಅವಘಡಗಳಿಂದ ಕೆಲವರು ಜೀವ ಕಳೆದುಕೊಂಡಿದ್ದಾರೆ. ಇದೀಗ ತೆಲುಗಿನ ಜನಪ್ರಿಯ ನಟ ನಾನಿ ಸಿನಿಮಾದ ಸೆಟ್​ನಲ್ಲಿ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಾಕೆ ಜೀವ ಕಳೆದುಕೊಂಡಿದ್ದಾರೆ. ಆದರೆ ಇದು ಶೂಟಿಂಗ್​ನಿಂದ ಆದ ಅವಘಡ ಅಲ್ಲ ಎನ್ನಲಾಗುತ್ತಿದೆ. ಬದಲಿಗೆ ಯುವತಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಾನಿ ನಟನೆಯ ‘ಹಿಟ್ 3’ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ಸಿನಿಮಾದ ಸಿನಿಮಾಟೊಗ್ರಫರ್ ತಂಡದಲ್ಲಿ ಸಹಾಯಕಿಯಾಗಿ ಕೆಆರ್ ಕೃಷ್ಣ ಹೆಸರಿನ ಯುವತಿ ಕೆಲಸ ಮಾಡುತ್ತಿದ್ದರು. 30 ವರ್ಷದ ಈ ಯುವತಿ ಸೆಟ್​ನಲ್ಲಿಯೇ ನಿಧನ ಹೊಂದಿದ್ದಾರೆ. ಚಿತ್ರೀಕರಣ ನಡೆಯುವಾಗಲೇ ಯುವತಿ ಕೃಷ್ಣ ಎದೆ ನೋವಿನಿಂದ ಬಳಲು ಆರಂಭಿಸಿದರು. ಕೂಡಲೇ ಅವರನ್ನು ಶ್ರೀನಗರ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಕೃಷ್ಣ, ತಮ್ಮ ಕುಟುಂಬದವರೊಡನೆ ಫೋನ್​ನಲ್ಲಿ ಮಾತನಾಡಿದ್ದಾರೆ. ಆ ನಂತರ ಕೃಷ್ಣ ಅವರನ್ನು ಜನರಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಅದಾದ ಬಳಿಕ ಯುವತಿ ನಿಧನ ಹೊಂದಿದ್ದಾರೆ.

ಇದನ್ನೂ ಓದಿ:‘ಹಂಸಾ ಇದ್ದಲ್ಲಿ ನಾನಿರಲ್ಲ’; ಬಿಗ್ ಬಾಸ್ ಮನೆಯಲ್ಲಿ ಸಿಡಿದೆದ್ದ ಜಗದೀಶ್ ಗೆಳೆಯ

ಕಾಶ್ಮೀರದ ಚಳಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ಕಾರಣ ಯುವತಿಗೆ ಎದೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು ಮತ್ತು ತೀವ್ರ ಹೃದಯಾಘಾತವೂ ಆದ ಕಾರಣ ಯುವತಿ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ ನ ಸದಸ್ಯೆ ಆಗಿದ್ದ ಕೃಷ್ಣ, ಸ್ವತಂತ್ರ್ಯ ಸಿನಿಮಾಟೊಗ್ರಾಫರ್ ಆಗುವ ಕನಸು ಹೊಂದಿದ್ದರು. ಕೆಲ ವರ್ಷಗಳಿಂದ ಸಿನಿಮಾಟೊಗ್ರಫಿ ಸಹಾಯಕಿಯಾಗಿ ಅವರು ಕೆಲಸ ಮಾಡುತ್ತಿದ್ದರು.

ಕೃಷ್ಣ ನಿಧನದಿಂದ ಆಘಾತಕ್ಕೆ ಒಳಗಾದ ಚಿತ್ರತಂಡ, ಸಿನಿಮಾದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ‘ಹಿಟ್ 3’ ಸಿನಿಮಾದಲ್ಲಿ ನಟ ನಾನಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಎರಡು ‘ಹಿಟ್’ ಸರಣಿ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಸಸ್ಪೆನ್ಸ್ ಥ್ರಿಲ್ಲರ್ ಕತೆಯುಳ್ಳ ‘ಹಿಟ್ 3’ ಸಿನಿಮಾದಲ್ಲಿ ಆಂಟಿ ಹಿರೋ ಪಾತ್ರದಲ್ಲಿ ನಾನಿ ನಟಿಸುತ್ತಿದ್ದಾರೆ. ಕೃಷ್ಣ ನಿಧನಕ್ಕೆ ಚಿತ್ರತಂಡ ಮತ್ತು ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ ಸಂತಾಪ ವ್ಯಕ್ತಪಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ