AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃತಿಕ್ ರೋಶನ್​ರ ಆ ಚಿತ್ರವನ್ನು ಅವರ ತಂದೆಯ ಸ್ನೇಹಿತರೆಲ್ಲಾ ಅಸಡ್ಡೆಯಿಂದ ನೋಡಿದ್ದರು; ಆದರೆ ಮುಂದೆ ಆಗಿದ್ದೇ ಬೇರೆ!

Hrithik Roshan: ಹೃತಿಕ್ ರೋಷನ್ ತಮ್ಮ ವೃತ್ತಿ ಜೀವನದಲ್ಲೇ ವಿಶಿಷ್ಟ ಚಿತ್ರ ‘ಜಿಂದಗಿ ನಾ ಮಿಲೇಗಿ ದೊಬಾರ’ ಚಿತ್ರವು ಹತ್ತು ವರ್ಷ ಪುರೈಸಿದ ಹಿನ್ನೆಲೆಯಲ್ಲಿ ಹಲವು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.

ಹೃತಿಕ್ ರೋಶನ್​ರ ಆ ಚಿತ್ರವನ್ನು ಅವರ ತಂದೆಯ ಸ್ನೇಹಿತರೆಲ್ಲಾ ಅಸಡ್ಡೆಯಿಂದ ನೋಡಿದ್ದರು; ಆದರೆ ಮುಂದೆ ಆಗಿದ್ದೇ ಬೇರೆ!
‘ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರದ ಒಂದು ದೃಶ್ಯ
TV9 Web
| Edited By: |

Updated on: Jul 15, 2021 | 4:51 PM

Share

ಹೃತಿಕ್ ರೋಶನ್​ರ ವೃತ್ತಿ ಜೀವನದಲ್ಲೇ ಅತ್ಯಂತ ವಿಭಿನ್ನ ಚಿತ್ರವೆಂದು ಕರೆಯಲ್ಪಡುವ ‘ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರಕ್ಕೆ ಹತ್ತು ವರ್ಷ ತುಂಬಿದ  ಸಂದರ್ಭದಲ್ಲಿ ಹೃತಿಕ್ ಅದರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆ ಚಿತ್ರವನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಹೃತಿಕ್ ಅನುಭವಿಸುತ್ತಿದ್ದ ಮಾನಸಿಕ ತುಮುಲಗಳನ್ನೂ ಅವರು ಬಿಚ್ಚಿಟ್ಟಿದ್ದಾರೆ. ಆ ಚಿತ್ರವನ್ನು ಒಪ್ಪಿಕೊಂಡಿದ್ದೇ ಪಾತ್ರಗಳ ಏಕತಾನತೆಯಿಂದ ಹೊರಬರುವುದಕ್ಕೆ. ಆದರೆ  ತನ್ನ ತಂದೆ ರಾಕೇಶ್ ರೋಶನ್​ರ ಸ್ನೇಹಿತರು ಅಂತಹ ಪಾತ್ರ ಒಪ್ಪಿಕೊಂಡಿದ್ದು ನನ್ನ ವೃತ್ತಿ ಜೀವನದ ಬಹುದೊಡ್ಡ ತಪ್ಪೆಂದು ಭಾವಿಸಿದ್ದರು ಎಂಬ ಕುತೂಹಲಕರ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಲೀಡಿಂಗ್ ಡೈಲಿಗೆ ಅವರು ನೀಡಿರುವ ಸಂದರ್ಶನದಲ್ಲಿ ಜಿಂದಗಿ ನಾ ಮಿಲೇಗಿ ದೊಬಾರಾ ಚಿತ್ರದಲ್ಲಿ ನಿರ್ವಹಿಸಿದ ಅರ್ಜುನ್ ಎಂಬ ಪಾತ್ರವನ್ನು ಒಪ್ಪಿಕೊಂಡ ಕಾರಣವನ್ನು ಅವರು ಬಹಿರಂಗಗೊಳಿಸಿದ್ದಾರೆ. ನನ್ನ ಓದು, ತಿಳುವಳಿಕೆಗಳಿಂದ ರೂಪಿಸಿಕೊಂಡ ಮೌಲ್ಯಗಳನ್ನು ನಿಜ ಜೀವನದಲ್ಲೂ ಅನುಸರಿಸುತ್ತಿದ್ದೆ. ಇದು ನನ್ನ ಸುತ್ತ ಒಂದು ಗೋಡೆ ಕಟ್ಟಿಕೊಂಡಂತೆ ಭಾಸವಾಗುತ್ತಿತ್ತು. ಅದನ್ನು ಮುರಿಯಲು ನಾನು ನಿಜ ಜೀವನದಲ್ಲೂ ಪ್ರಯತ್ನಿಸುತ್ತಿದ್ದೆ. ಅಂತಹ ಸಂದರ್ಭದಲ್ಲೇ ಅರ್ಜುನ್ ಪಾತ್ರ ಹುಡುಕಿಕೊಂಡು ಬಂತು. ನಾನು ಅದನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ.

ಚಿತ್ರದಲ್ಲಿ ಅರ್ಜುನ್ ಸಲೂಜಾ(ಹೃತಿಕ್) ಜೀವನದಲ್ಲಿ ಹಣ ಗಳಿಸುವುದೊಂದೇ ಗುರಿಯೆಂದು ತಿಳಿದಿರುತ್ತಾನೆ. ತನ್ನ ಸ್ನೇಹಿತ ಹಾಗೂ ಗೆಳತಿಯ ಸಹವಾಸದಿಂದ ಇದರ ಹೊರತಾದ ಹೊಸ ಜೀವನದ ದರ್ಶನ ಅರ್ಜುನ್​ಗಾಗುತ್ತದೆ. ನಿಜ ಜೀವನದಲ್ಲೂ ಇಂಥದ್ದೇ ಸನ್ನಿವೇಶವನ್ನು ತಾನು ಎದುರಿಸುತ್ತಿದ್ದೆ ಎಂದು ಹೃತಿಕ್ ಬಹಿರಂಗಪಡಿಸಿದ್ದಾರೆ. ಅದರಿಂದ ಹೊರಬರಲು ಬಹಳ ಪ್ರಯತ್ನಿಸುತ್ತಿದ್ದೆ. ನನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಕಂಡುಕೊಳ್ಳಬೇಕು ಎನ್ನುವುದು ನನ್ನ ಕನಸಾಗಿತ್ತು. ನಾನು ಹೃತಿಕ್ ಆಗಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವತ್ತಲೇ ನನ್ನ ಆಲೋಚನೆಯೆಲ್ಲಾ ಕೇಂದ್ರೀಕೃತವಾಗಿತ್ತು ಎಂದು ಅವರು ಹೇಳಿದ್ದಾರೆ.

ಜಿಂದಗಿ ನಾ.. ಚಿತ್ರ ಒಪ್ಪಿಕೊಂಡಾಗ ತಮ್ಮ ತಂದೆಯ ಸ್ನೇಹಿತರ ಕಳಕಳಿಗಳನ್ನು ಹೃತಿಕ್ ನೆನಪಿಸಿಕೊಂಡಿದ್ದಾರೆ. ನಾನು ನನ್ನ ವೃತ್ತಿ ಜೀವನದಲ್ಲಿ ಬಹುದೊಡ್ಡ ತಪ್ಪನ್ನು ಮಾಡುತ್ತಿದ್ದೇನೆ ಎಂದೇ ಅವರೆಲ್ಲರ ಅನಿಸಿಕೆಯಾಗಿತ್ತು. ಕಾರಣ, ಚಿತ್ರದಲ್ಲಿ ನನ್ನದೇನು ನಾಯಕನ ಪಾತ್ರವಲ್ಲ; ಒಂದು ಪ್ರಮುಖ ಪಾತ್ರವಷ್ಟೇ. ಆಗಿನ ಸಂದರ್ಭದಲ್ಲಿ ಎಲ್ಲಾ ಸ್ಟಾರ್​ಗಳೂ ಅನುಸರಿಸುತ್ತಿದ್ದ ಅಲಿಖಿತ ನಿಯಮವೆಂದರೆ ತಮ್ಮ ಸ್ಟಾರ್​ಗಿರಿಯನ್ನು ತೆರೆಯ ಮೇಲೆ ವಿಜೃಂಬಿಸುವುದು. ಆದರೆ ನಾನು ಅದರ ವಿರುದ್ಧ ದಾರಿಯಲ್ಲಿ ಸಾಗುವ ಹಂತದಲ್ಲಿದ್ದೆ. ಆ ಸಂದರ್ಭದಲ್ಲಿ ನಾನು ನನ್ನದೇ ಆದ ಪಾತ್ರಗಳ ಹುಡುಕಾಟದಲ್ಲಿದ್ದೆ. ಸ್ಟಾರ್​ಗಿರಿಯೆಲ್ಲಾ ನನ್ನ ಆದ್ಯತೆಯೇ ಆಗಿರಲಿಲ್ಲ. ಅದನ್ನೇನಿದ್ದರೂ ಜನ ಪ್ರೀತಿಯಿಂದ ನಮಗೆ ನೀಡುವುದಷ್ಟೇ. ನಾವು ಮಾಡುವ ಕೆಲಸವು ನಮ್ಮೊಳಗಿನ ತುಡಿತದಿಂದ ಬಂದಿರಬೇಕು. ಆಗಲೇ ಅದು ಯಶಸ್ವಿಯಾಗುತ್ತದೆ. ಅದಕ್ಕೆ ಈ ಚಿತ್ರವೇ ಉದಾಹರಣೆ ಎಂದು ಅವರು ಹೇಳಿದ್ದಾರೆ.

ಜಿಂದಗೀ ನಾ ಮಿಲೇಗಿ ದೊಬಾರಾ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಅಭಯ್ ಡಿಯೊಲ್, ಫರ್ಹಾನ್ ಅಖ್ತರ್, ಕತ್ರೀನಾ ಕೈಫ್ ಮತ್ತು ಕಲ್ಕಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು ಮೂವರು ಗೆಳೆಯರು ತಮ್ಮ ಬದುಕಿನ ಅರ್ಥವನ್ನು ಕಂಡುಕೊಳ್ಳುವ ಕತೆಯನ್ನು ಒಳಗೊಂಡಿದೆ. 2011ರಲ್ಲಿ ಬಿಡುಗಡೆಗೊಂಡ ಈ ಚಿತ್ರವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದರು. ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: Kannada Movies: ಯೂಟ್ಯೂಬ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬೇಕೆ?

(Zindagi Na Milegi Dobara turns 10 years today and Hrithik Roshan shares his memory on this iconic movie)