Boiled Egg VS Omelette: ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್, ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ
ಪ್ರೋಟೀನ್ನ ಉತ್ತಮ ಮೂಲವಾದ ಮೊಟ್ಟೆಯನ್ನು ಹೆಚ್ಚಿನವರು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲಿ ಕೆಲವರು ಬೇಯಿಸಿದ ಮೊಟ್ಟೆಗಳನ್ನು ತಿನ್ನಲು ಇಷ್ಟಪಟ್ಟರೆ, ಇನ್ನೂ ಕೆಲವರು ಮೊಟ್ಟೆ ಆಮ್ಲೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಇವೆರಡಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಈ ಕುರಿತ ಮಾಹಿತಿ ಇಲ್ಲಿದೆ.

ಮೊಟ್ಟೆಯನ್ನು ಪೋಷಕಾಂಶಗಳ ನಿಧಿ ಎಂದು ಕರೆಯಲಾಗುತ್ತದೆ. ಇದರ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಕನಿಷ್ಟ ಒಂದು ಮೊಟ್ಟೆಯಾದರು ತಿನ್ನಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಇದು ನಮ್ಮ ದೇಹಕ್ಕೆ ಅಗತ್ಯವಿರುವ ದೈನಂದಿನ ಪೋಷಕಾಂಶವನ್ನು ಒದಗಿಸುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್ ವಿಟಮಿನ್ ಡಿ, ವಿಟಮಿನ್ ಬಿ12, ಬಯೋಟಿನ್, ಥಯಾಮಿನ್, ರೈಬೋಫ್ಲಾವಿನ್, ಉತ್ಕರ್ಷಣ ನಿರೋಧಕಗಳು ಮತ್ತು ಸೆಲೆನಿಯಂನಂತಹ ಅನೇಕ ಖನಿಜಗಳು ಮತ್ತು ಪೋಷಕಾಂಶಗಳಿವೆ. ಅಲ್ಲದೆ ಮೊಟ್ಟೆ ಪ್ರೋಟೀನ್ನ ಸಮೃದ್ಧ ಮೂಲವಾಗಿದೆ. ಇವೆಲ್ಲವೂ ಮೂಳೆಗಳ ಆರೋಗ್ಯ, ಕಣ್ಣಿನ ಆರೋಗ್ಯ ಸೇರಿದಂತೆ ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ಮೊಟ್ಟೆಯನ್ನು ಕೆಲವರು ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ, ಇನ್ನೂ ಕೆಲವರು ಮೊಟ್ಟೆ ಆಮ್ಲೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರವಾದುದು ಎಂಬುದು ನಿಮಗೆ ತಿಳಿದಿದೆಯೇ? ಆ ಕುರಿತ ಮಾಹಿತಿ ಇಲ್ಲಿದೆ.
ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ಯಾವುದು ಹೆಚ್ಚು ಪ್ರಯೋಜನಕಾರಿ?
ಬೇಯಿಸಿದ ಮೊಟ್ಟೆಗಳು:
ಜಿಮ್ನಲ್ಲಿ ವರ್ಕ್ಔಟ್ ಮಾಡುವವರು ಹೆಚ್ಚಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಾರೆ. ಏಕೆಂದರೆ ಅದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಂಶವಿದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದಲ್ಲದೆ, ಮೊಟ್ಟೆಯನ್ನು ಬರೀ ನೀರಿನಲ್ಲಿ ಬೇಯಿಸಲಾಗುವುದರಿಂದ ಇದರಲ್ಲಿ ಯಾವುದೇ ರೀತಿಯ ಕ್ಯಾಲೋರಿ ಇರುವುದಿಲ್ಲ. ಆದ್ದರಿಂದ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ತುಂಬಾ ಒಳ್ಳೆಯದು. ಬೇಯಿಸಿದ ಮೊಟ್ಟೆಗಳು ಪೌಷ್ಟಿಕಾಂಶದ ಉತ್ತಮ ಮೂಲವಾಗಿದ್ದು, ಇದು ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಅಲ್ಲದೆ ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಲಾಗುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯವೂ ಕಳೆದುಹೋಗುವುದಿಲ್ಲ. ಆದ್ದರಿಂದ ಇದು ತಿನ್ನಲು ಆರೋಗ್ಯಕರ ಆಯ್ಕೆಯಾಗಿದೆ. ಬೇಯಿಸಿದ ಮೊಟ್ಟೆಗಳು ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ರೈಬೋಫ್ಲಾವಿನ್ನ ಅತ್ಯುತ್ತಮ ಮೂಲವಾಗಿದ್ದು, ಇದು ದೇಹದ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದಲ್ಲದೆ ಬೇಯಿಸಿದ ಮೊಟ್ಟೆಗಳು ಕೋಲಿನ್ ಅಂಶವನ್ನು ಹೊಂದಿದ್ದು, ಇದು ಮೆದುಳಿನ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ.
ಆಮ್ಲೆಟ್:
ಹೆಚ್ಚಿನವರು ಬೆಳಗಿನ ಉಪಹಾರಕ್ಕೆ ಆಮ್ಲೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಆಮ್ಲೆಟ್ ತಯಾರಿಸಲು ಎಣ್ಣೆ ಅಥವಾ ಬೆಣ್ಣೆಯನ್ನು ಬಳಸಲಾಗುತ್ತದೆ. ಇದರಿಂದ ಕ್ಯಾಲೋರಿ ಪ್ರಮಾಣವು ಹೆಚ್ಚಾಗುತ್ತದೆ. ಮತ್ತು ಎಣ್ಣೆಯನ್ನು ಬಳಸುವುದರಿಂದ ಅದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೆ ಇದರಿಂದಾಗಿ ಅದರ ಪೌಷ್ಟಿಕಾಂಶದ ಮೌಲ್ಯವೂ ಬದಲಾಗಬಹುದು. ಇದರ ಹೊರತಾಗಿ ಆಮ್ಲೆಟ್ ರುಚಿಯನ್ನು ಹೆಚ್ಚಿಸಲು ಚೀಸ್, ಕೆಲವು ಬಗೆಯ ತರಕಾರಿಗಳನ್ನು ಸಹ ಅದಕ್ಕೆ ಸೇರಿಸಲಾಗುತ್ತದೆ. ಇದು ಆಮ್ಲೆಟ್ನಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ತರಕಾರಿಗಳನ್ನು ಬೆರೆಸಿದ ಆಮ್ಲೆಟ್ ವಿಟಮಿನ್ ಸಿ ಜೀವಸತ್ವದ ಉತ್ತಮ ಮೂಲವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿರುವ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ.
ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ?
ಆರೋಗ್ಯಕರ ಆಯ್ಕೆಯ ಬಗ್ಗೆ ನೋಡುವುದಾದರೆ ಆಮ್ಲೆಟ್ಗಿಂತ ಬೇಯಿಸಿದ ಮೊಟ್ಟೆಯು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದನ್ನು ಯಾವುದೇ ಹೆಚ್ಚುವರಿ ಪದಾರ್ಥಗಳಿಲ್ಲದೆ ಬೇಯಿಸಲಾಗುತ್ತದೆ. ಅಲ್ಲದೆ ಮೊಟ್ಟೆಯ ಎಲ್ಲಾ ಪೋಷಕಾಂಶಗಳು ಅದನ್ನು ಕುದಿಸುವ ಪ್ರಕ್ರಿಯೆಯಲ್ಲಿ ಸುರಕ್ಷಿತವಾಗಿ ಉಳಿಯುತ್ತವೆ. ಮತ್ತೊಂದೆಡೆ, ಆಮ್ಲೆಟ್ ಪೋಷಕಾಂಶಗಳ ಉತ್ತಮ ಮೂಲವಾಗಿದೆ ಏಕೆಂದರೆ ಅವುಗಳನ್ನು ತರಕಾರಿಗಳನ್ನು ಬೇರೆಸಿ ತಯಾರಿಸಲಾಗುತ್ತದೆ. ಇದು ಕೂಡಾ ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಅವುಗಳನ್ನು ಎಣ್ಣೆ ಅಥವಾ ಬೆಣ್ಣೆಯಲ್ಲಿ ಬೇಯಿಸುವುದರಿಂದ ಅವು ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: