ಅಮೀರ್ ಖಾನ್ ನಟಿಸಿದ್ದ ಫೇಮಸ್ ಸಿನಿಮಾ ಘಜಿನಿಯನ್ನು ನೀವು ಕೂಡ ನೋಡಿರಬಹುದು. ಇದರಲ್ಲಿ ನಾಯಕನಿಗೆ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಸಮಸ್ಯೆ ಇರುತ್ತದೆ. ಅಂದರೆ, ಸ್ವಲ್ಪ ಹೊತ್ತಿನ ಮೊದಲು ನಡೆದಿದ್ದು ಕೂಡ ನಾಯಕನಿಗೆ ತಕ್ಷಣ ಮರೆತುಹೋಗುತ್ತಿರುತ್ತದೆ. ಈ ಕಾಯಿಲೆಯಿಂದ ನಾಯಕ ಏನೆಲ್ಲ ಸಂಕಷ್ಟಕ್ಕೀಡಾಗುತ್ತಾನೆ, ತಾನಂದುಕೊಂಡಿದ್ದನ್ನು ಹೇಗೆ ಸಾಧಿಸುತ್ತಾನೆ ಎಂಬುದು ಈ ಘಜಿನಿ ಸಿನಿಮಾದ ಕತೆ. ಈ ರೀತಿ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಸಮಸ್ಯೆ ನಿಮ್ಮಲ್ಲೂ ಹಲವರಿಗೆ ಇರಬಹುದು. ಇದು ತೀರಾ ಗಾಢವಾಗಿರದಿದ್ದರೂ ಯಾಕೋ ಇತ್ತೀಚೆಗೆ ತುಂಬ ಮರೆಗುಳಿ ಆಗುತ್ತಿದ್ದೇನೆ ಎಂದು ನಿಮಗೆ ಆಗಾಗ ಅನಿಸಬಹುದು. ಈ ಸಮಸ್ಯೆಗೆ ಕಾರಣವೇನು? ಇದರಿಂದ ಹೊರಬರುವುದು ಹೇಗೆ? ಇದು ಶಾಶ್ವತ ಸಮಸ್ಯೆಯಾ? ಎಂಬಿತ್ಯಾದಿ ಗೊಂದಲಗಳಿಗೆ ಉತ್ತರ ಇಲ್ಲಿದೆ.
ಯಾವುದೋ ವಸ್ತುವನ್ನು ತಕ್ಷಣ ಸಿಗಬೇಕೆಂದು ಒಂದು ಕಡೆ ಇಟ್ಟಿರುತ್ತೀರಿ. ಆದರೆ, ಆ ಜಾಗ ಯಾವುದು ಎಂಬುದನ್ನೇ ಮರೆತಿರುತ್ತೀರಿ. ಕನ್ನಡಕವನ್ನು ಜೇಬಿನಲ್ಲೋ, ಕೈಯಲ್ಲೋ ಅಥವಾ ಕಣ್ಣಿನ ಮೇಲೋ ಇಟ್ಟುಕೊಂಡಿರುತ್ತೀರಿ, ಕನ್ನಡಕ ಎಲ್ಲೂ ಕಾಣುತ್ತಿಲ್ಲ ಎಂದು ಮನೆಯೆಲ್ಲ ಹುಡುಕಾಡುತ್ತೀರಿ. ಈ ರೀತಿ ಒಂದು ವಸ್ತುವನ್ನು ಎಂದಾದರೂ ಹತಾಶರಾಗಿ ಹುಡುಕಿದ್ದೀರಾ? ಇದನ್ನು ಇಂಗ್ಲಿಷಿನಲ್ಲಿ ಬ್ರೈನ್ ಫಾಗ್ (ಮೆದುಳಿನ ಮುಸುಕು) ಎಂದು ಕರೆಯುತ್ತಾರೆ. ನಿಮ್ಮ ಅಲ್ಪಾವಧಿಯ ಜ್ಞಾಪಕಶಕ್ತಿಗೆ ಇದು ಅಡ್ಡಿಪಡಿಸಬಹುದು.
ಇದನ್ನೂ ಓದಿ: ಕಿಡ್ನಿ ಬೀನ್ಸ್ ಸೇವನೆಯಿಂದ ಆರೋಗ್ಯಕ್ಕೆ ಆಗುವ 5 ಪ್ರಯೋಜನಗಳು ಇಲ್ಲಿವೆ
ಬ್ರೈನ್ ಫಾಗ್ ವಿವಿಧ ರೋಗಲಕ್ಷಣಗಳ ಮೂಲಕ ಗೋಚರವಾಗುತ್ತದೆ. ಇದರಲ್ಲಿ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ತೊಂದರೆ, ಏಕಾಗ್ರತೆಯ ಸಮಸ್ಯೆ ಅಥವಾ ಗಮನವನ್ನು ಕೇಂದ್ರೀಕರಿಸಲು ಹೆಣಗಾಡುವುದು ಹೀಗೆ ಹಲವಾರು ರೀತಿಯಲ್ಲಿ ಸಮಸ್ಯೆಗಳು ತಲೆದೋರುತ್ತವೆ. ಇದಕ್ಕೆ ಕಾರಣವೇನೆಂಬ ಮಾಹಿತಿ ಇಲ್ಲಿದೆ…
ಪೌಷ್ಟಿಕಾಂಶದ ಕೊರತೆಗಳು:
ವಿಟಮಿನ್ ಬಿ, ಮೆಗ್ನೀಸಿಯಮ್, ವಿಟಮಿನ್ ಡಿ, ಅಥವಾ ಒಮೆಗಾ-3 ಕೊಬ್ಬಿನಾಮ್ಲಗಳಂತಹ ಅಗತ್ಯ ಪೋಷಕಾಂಶಗಳ ಕೊರತೆಯಿಂದ ಬ್ರೈನ್ ಫಾಗ್ ಉಂಟಾಗಬಹುದು. ನಮ್ಮ ದೈಹಿಕ ಕ್ರಿಯೆಗಳಲ್ಲಿ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಅವುಗಳಲ್ಲಿನ ಕೊರತೆಯು ಮೆದುಳಿನ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತವೆ.
ಹೈಪೋಥೈರಾಯ್ಡಿಸಮ್:
ಥೈರಾಯ್ಡ್ ಸಮಸ್ಯೆ ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಬಹುದು. ಇದರಿಂದ ನಿಮ್ಮ ಮೆದುಳಿಗೆ ಸರಿಯಾದ ಶಕ್ತಿ ದೊರೆಯುವುದಿಲ್ಲ. ಇದು ಬ್ರೈನ್ ಫಾಗ್ಗೆ ಕಾರಣವಾಗುತ್ತದೆ.
ಒತ್ತಡ ಮತ್ತು ಜೀವನಶೈಲಿ:
ದೀರ್ಘಕಾಲದ ಮಾನಸಿಕ ಒತ್ತಡ ಬ್ರೈನ್ ಫಾಗ್ಗೆ ಪ್ರಮುಖ ಪ್ರಚೋದಕವಾಗಬಹುದು. ಸರಿಯಾಗಿ ನಿದ್ರೆ ಮಾಡದಿರುವುದು ಮತ್ತು ಅತಿಯಾದ ಮದ್ಯಪಾನ ಸಹ ಇದಕ್ಕೆ ಕಾರಣಗಳಾಗಿವೆ.
ಔಷಧಿಗಳು:
ಆ್ಯಂಟಿಹಿಸ್ಟಮೈನ್‌ಗಳು, ಜ್ವರಕ್ಕೆ ನೀಡಲಾಗುವ ಔಷಧಿಗಳು ಸೇರಿದಂತೆ ಕೆಲವು ಔಷಧಿಗಳು ಬ್ರೈನ್ ಫಾಗ್ ಅನ್ನು ಉಂಟುಮಾಡಬಹುದು. ರಕ್ತದೊತ್ತಡವನ್ನು ನಿರ್ವಹಿಸಲು ಬಳಸುವ ಔಷಧಿಗಳೂ ಸಹ ಇದೇ ರೋಗಲಕ್ಷಣಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ವಯಸ್ಸಾಗುವಿಕೆಯಿಂದ ಉಂಟಾಗುವ ನೆನಪಿನ ಶಕ್ತಿ ದುರ್ಬಲತೆಗೆ ಪ್ರಮುಖ ಕಾರಣಗಳು
ವಯಸ್ಸಾಗುತ್ತಿದ್ದಂತೆ ಸ್ವಲ್ಪ ಪ್ರಮಾಣದಲ್ಲಿ ನೆನಪಿನ ಶಕ್ತಿ ಕುಂದುತ್ತಾ ಹೋಗುವುದು ಸಾಮಾನ್ಯ. ಆದರೆ, ಬ್ರೈನ್ ಫಾಗ್ ಎಂಬುದು ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿಯ ಕೊರತೆಗಿಂತ ವಿಭಿನ್ನವಾಗಿರುತ್ತದೆ. ನಿಮಗೆ ಯಾಕೆ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಇದೆ ಎಂಬುದರ ಕಾರಣವನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಸೋಂಕು, ವಿಷತ್ವ ಅಥವಾ ದೀರ್ಘಕಾಲದ ಒತ್ತಡ ಹೀಗೆ ಅದಕ್ಕೆ ನಾನಾ ಕಾರಣಗಳು ಇರುತ್ತವೆ. ಇದಕ್ಕಾಗಿ ನೀವು ವೈದ್ಯರನ್ನು ಭೇಟಿಯಾಗಿ, ಸಮಾಲೋಚನೆ ಮಾಡಬೇಕಾಗುತ್ತದೆ. ಅದಾದ ನಂತರ ಮೆಡಿಸಿನ್ ಪಡೆಯಬಹುದು.
ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ಬ್ರೈನ್ ಫಾಗ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಆಯಿಲ್ ಸೀಡ್ಸ್, ಸಕ್ಕರೆ, ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್ ಫುಡ್‌ಗಳ ಸೇವನೆಯನ್ನು ಕಡಿಮೆ ಮಾಡುವುದು, ಮೊಟ್ಟೆ ಮತ್ತು ಮಾಂಸದಂತಹ ಉತ್ತಮ-ಗುಣಮಟ್ಟದ ಪ್ರೋಟೀನ್‌ಗಳನ್ನು ಸೇವಿಸುವುದು, ಓಟ್ಸ್ ಮತ್ತು ಜೇನುತುಪ್ಪದಂತಹ ಆರೋಗ್ಯಕರ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿಯಂತ್ರಿಸಬಹುದು. ಮೆದುಳನ್ನು ಚುರುಕುಗೊಳಿಸುವ ಆಹಾರ ಸೇವನೆಯಿಂದ ಮರೆವಿನ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ