ಆಲ್ಝೈಮರ್ಸ್ ಖಾಯಿಲೆ: ಭಯದಿಂದಲ್ಲ, ಧೈರ್ಯದಿಂದ ಎದುರಿಸೋಣ
ದುರದೃಷ್ಟವಶಾತ್, ಅಲ್ಝೈಮರ್ಸ್ ಖಾಯಿಲೆಗೆ ಯಾವುದೇ ಪರಿಹಾರ ಎನ್ನುವುದಿಲ್ಲ. ಇನ್ನು ಪ್ರಸ್ತುತ ಲಭ್ಯವಿರುವ ಚಿಕಿತ್ಸಾ ವಿಧಾನಗಳು ಅದರ ಲಕ್ಷಣಗಳನ್ನು ನಿವಾರಿಸಿ, ಖಾಯಿಲೆ ವೃದ್ಧಿಸದಂತೆ ತಡೆಯುವ ಗುರಿ ಹೊಂದಿವೆ. ಸಾಮಾನ್ಯವಾಗಿ ರೋಗಿಗಳ ನೆನಪಿನ ಶಕ್ತಿ, ವರ್ತನೆ ಮತ್ತು ಅರಿವನ್ನು ವೃದ್ಧಿಸಲು ಕಾಲಿನೆಸ್ಟೆರೇಸ್ ಇನ್‌ಹಿಬಿಟರ್ ಹಾಗೂ ಮೆಮಂಟೈನ್ ಎಂಬ ಔಷಧಿಗಳನ್ನು ನೀಡಲಾಗುತ್ತದೆ.
ವೈದ್ಯಕೀಯ ಜಗತ್ತಿನ ಮುಂದೆ ಇರುವ ಸವಾಲುಗಳಲ್ಲಿ ಅಲ್ಝೈಮರ್ಸ್ (Alzheimer’s) ಖಾಯಿಲೆಯೂ ಒಂದಾಗಿದೆ. ಇದು ಅತ್ಯಂತ ಗಾಢವಾದ, ವಿನಾಶಕಾರಿ ಖಾಯಿಲೆಯಾಗಿದ್ದು, ಜನರಲ್ಲಿ ಭಯ, ಗೊಂದಲಗಳನ್ನು ಉಂಟುಮಾಡಿದೆ. ಈ ಲೇಖನದಲ್ಲಿ ನಾವು ಈ ನಿಗೂಢ ಖಾಯಿಲೆಯ ಕುರಿತು ಒಂದಷ್ಟು ಮಾಹಿತಿ ಪಡೆದುಕೊಳ್ಳೋಣ. ಅಲ್ಝೈಮರ್ಸ್ ಹೇಗೆ ಆರಂಭಗೊಳ್ಳುತ್ತದೆ, ರೋಗಿಯ ಮೇಲೆ ಬೀರುವ ಪರಿಣಾಮಗಳೇನು, ಅದರ ಚಿಕಿತ್ಸೆ ಹೇಗೆ, ಎಂಬ ಕುರಿತು ಒಂದಷ್ಟು ವಿಚಾರಗಳನ್ನು ಅರಿಯುವ ಪ್ರಯತ್ನ ಮಾಡೋಣ.
ಆಲ್ಝೈಮರ್ಸ್ ಖಾಯಿಲೆಯ ಆರಂಭ ಹೇಗೆ?
ಆಲ್ಝೈಮರ್ಸ್ ಖಾಯಿಲೆ ಎನ್ನುವುದು ಒಂದು ಪ್ರೋಗ್ರೆಸಿವ್ ನ್ಯೂರೋಡಿಜನರೇಟಿವ್ ಖಾಯಿಲೆಯಾಗಿದ್ದು, ಮೂಲತಃ ಮಾನವರ ನೆನಪಿನ ಶಕ್ತಿ, ಅರಿವು ಹಾಗೂ ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಝೈಮರ್ಸ್ ಸಮಸ್ಯೆ ಹೇಗೆ ತಲೆದೋರುತ್ತದೆ ಎಂಬ ಕುರಿತು ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲವಾದರೂ, ಸಂಶೋಧನೆಗಳು ಇದಕ್ಕೆ ಅನುವಂಶಿಕತೆ, ವಾತಾವರಣ ಮತ್ತು ಜೀವನಶೈಲಿಯ ಸಂಯೋಜನೆಗಳು ಕಾರಣ ಎನ್ನುತ್ತವೆ. ಅಲ್ಝೈಮರ್ಸ್‌ನಲ್ಲಿ ಅಸಹಜ ಪ್ರೋಟೀನ್ ಒಗ್ಗೂಡುವಿಕೆ ಹೆಚ್ಚಾಗುತ್ತದೆ. ಅದರಲ್ಲೂ, ಬೀಟಾ-ಅಮಿಲೋಯಿಡ್ ಪ್ಲೇಕ್‌ಗಳು ಮತ್ತು ಟಾವ್ ಟ್ಯಾಂಗಲ್‌ಗಳು ಮೆದುಳಿನಲ್ಲಿ ಹೆಚ್ಚಾಗಿ ಸಂಗ್ರಹಗೊಳ್ಳುತ್ತವೆ. ಇದರ ಕಾರಣದಿಂದ, ನ್ಯೂರಾನ್‌ಗಳ ನಡುವಿನ ಸಂವಹನಕ್ಕೆ ಅಡೆತಡೆ ಉಂಟಾಗಿ, ಅವುಗಳ ಕಾರ್ಯಾಚರಣೆ ಅಸಮರ್ಪಕವಾಗಿ, ನ್ಯೂರಾನ್‌ಗಳು ಕ್ರಮೇಣ ಸಾವಿಗೀಡಾಗುತ್ತವೆ. ನೆನಪಿನ ರೂಪುಗೊಳ್ಳುವಿಕೆಗೆ ಅತ್ಯಂತ ಮಹತ್ವದ ಪ್ರದೇಶವಾದ, ಮೆದುಳಿನ ಹಿಪ್ಪೋಕ್ಯಾಂಪಸ್ ಅಲ್ಝೈಮರ್‌ನಿಂದ ಮೊದಲು ಬಾಧಿತವಾಗುತ್ತದೆ. ಇದರ ಪರಿಣಾಮವಾಗಿ, ಅಲ್ಝೈಮರ್ಸ್ ಖಾಯಿಲೆಯ ಹೆಗ್ಗುರುತಾಗಿರುವ ಮರೆವು ಆರಂಭಗೊಳ್ಳುತ್ತದೆ.
ಅಲ್ಝೈಮರ್ಸ್‌ಗೆ ಕಾರಣವೇನು?
ಅಲ್ಝೈಮರ್ಸ್ ಖಾಯಿಲೆ ಯಾರಲ್ಲೂ ಭೇದ ಭಾವ ತೋರಿಸುವುದಿಲ್ಲ. ಅದು ಎಲ್ಲಾ ವರ್ಗದ, ಎಲ್ಲಾ ರೀತಿಯ ಜನರನ್ನೂ ಸಮಾನವಾಗಿ ಕಾಡುತ್ತದೆ. ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ ಅಲ್ಝೈಮರ್ಸ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗುತ್ತದೆ ಎನ್ನಲಾಗುತ್ತದಾದರೂ, ಅಲ್ಝೈಮರ್ಸ್ ವಯಸ್ಸಾದಂತೆ ಬರುವ ಸಾಮಾನ್ಯ ಸಮಸ್ಯೆ ಅಲ್ಲವೆನ್ನುವುದು ಗಮನಿಸಬೇಕಾದ ವಿಚಾರ.
ಸಣ್ಣ ವಯಸ್ಸಿನಲ್ಲೇ ಅಲ್ಝೈಮರ್ಸ್ ಖಾಯಿಲೆ ಕಾಣಿಸಿಕೊಳ್ಳುವುದು (ಅರ್ಲಿ ಆನ್‌ಸೆಟ್) ಅಪರೂಪವಾದರೂ, ಹಲವು ಬಾರಿ 40 ಮತ್ತು 50ರ ಹರಯದಲ್ಲಿರುವ ವ್ಯಕ್ತಿಗಳಲ್ಲೂ ಇದು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುವ ಪ್ರಕರಣಗಳಲ್ಲಿ (ಲೇಟ್ ಆನ್‌ಸೆಟ್), 65 ವರ್ಷ ವಯಸ್ಸಿನ ನಂತರ ವ್ಯಕ್ತಿಗಳಲ್ಲಿ ಅಲ್ಝೈಮರ್ಸ್ ಖಾಯಿಲೆ ತಲೆದೋರುತ್ತದೆ. ಇನ್ನು ವಂಶಪಾರಂಪರ್ಯವಾಗಿ ಅಲ್ಝೈಮರ್ಸ್ ಕಾಣಿಸಿಕೊಳ್ಳುವ ಪ್ರಕರಣಗಳಲ್ಲಿ, ವಯಸ್ಸಾದ ಮೇಲೆ ಕಾಣಿಸಿಕೊಳ್ಳುವುದಕ್ಕೆ ಆನುವಂಶಿಕ ರೂಪಾಂತರ ಕಾರಣವಾದರೆ, ಮೊದಲೇ ಕಾಣಿಸಿಕೊಳ್ಳುವುದಕ್ಕೆ ಹೆಚ್ಚು ಸಂಕೀರ್ಣ ಆನುವಂಶಿಕತೆ ಮತ್ತು ಪಾರಿಸರಿಕ ಕಾರಣಗಳು ಸೇರಿರುತ್ತವೆ.
ಅಲ್ಝೈಮರ್ಸ್: ಚಿಕಿತ್ಸೆ ಮತ್ತು ನಿರ್ವಹಣೆ
ದುರದೃಷ್ಟವಶಾತ್, ಅಲ್ಝೈಮರ್ಸ್ ಖಾಯಿಲೆಗೆ ಯಾವುದೇ ಪರಿಹಾರ ಎನ್ನುವುದಿಲ್ಲ. ಇನ್ನು ಪ್ರಸ್ತುತ ಲಭ್ಯವಿರುವ ಚಿಕಿತ್ಸಾ ವಿಧಾನಗಳು ಅದರ ಲಕ್ಷಣಗಳನ್ನು ನಿವಾರಿಸಿ, ಖಾಯಿಲೆ ವೃದ್ಧಿಸದಂತೆ ತಡೆಯುವ ಗುರಿ ಹೊಂದಿವೆ. ಸಾಮಾನ್ಯವಾಗಿ ರೋಗಿಗಳ ನೆನಪಿನ ಶಕ್ತಿ, ವರ್ತನೆ ಮತ್ತು ಅರಿವನ್ನು ವೃದ್ಧಿಸಲು ಕಾಲಿನೆಸ್ಟೆರೇಸ್ ಇನ್‌ಹಿಬಿಟರ್ (Cholinesterase Inhibitors) ಹಾಗೂ ಮೆಮಂಟೈನ್ (memantine) ಎಂಬ ಔಷಧಿಗಳನ್ನು ನೀಡಲಾಗುತ್ತದೆ. ಆದರೆ, ಈ ಔಷಧಗಳು ಅಲ್ಝೈಮರ್ಸ್ ವೃದ್ಧಿಯನ್ನು ನಿಲ್ಲಿಸಲು ಸಾಧ್ಯವಿಲ್ಲದ ಕಾರಣ, ಈ ಕುರಿತು ರೋಗಿಗಳ ನಿರೀಕ್ಷೆಯನ್ನು ಜಾಗರೂಕವಾಗಿ ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಅದರೊಡನೆ, ಔಷಧಶಾಸ್ತ್ರೀಯವಲ್ಲದ ವಿಧಾನಗಳಾದ ಅರಿವಿನ ಪ್ರಚೋದನೆ, ದೈಹಿಕ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರ ಕ್ರಮಗಳು ರೋಗಿಗಳ ಒಟ್ಟಾರೆ ಅರಿವಿನ ವೃದ್ಧಿ ಸಾಧಿಸುವಲ್ಲಿ ಭರವಸೆ ಮೂಡಿಸಿವೆ.
ಒಂದು ಆಶಾ ಕಿರಣ – ನೆರವಾಗಬಲ್ಲ ಸಂಶೋಧನೆಗಳು
ಅಲ್ಝೈಮರ್ಸ್ ಖಾಯಿಲೆಗೆ ಒಂದು ನಿರ್ಣಾಯಕ ಚಿಕಿತ್ಸೆಗಾಗಿ ಹುಡುಕಾಟ ಇನ್ನೂ ಮುಂದುವರಿದಿದೆ. ಜಗತ್ತಿನಾದ್ಯಂತ ಸಂಶೋಧಕರು ಅಲ್ಝೈಮರ್ಸ್ ಖಾಯಿಲೆಗೆ ಸಂಬಂಧಿಸಿದ ರಹಸ್ಯಗಳನ್ನು ಹೊರಗಡೆವಲು ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ. ಅಲ್ಝೈಮರ್ಸ್‌ಗೆ ಇನ್ನಷ್ಟು ನವೀನ, ಪರಿಣಾಮಕಾರಿ ಚಿಕಿತ್ಸೆಗಳನ್ನು ಒದಗಿಸುವ ಸಲುವಾಗಿ ಈ ಖಾಯಿಲೆಯಲ್ಲಿ ಉರಿಯೂತದ ಪಾತ್ರ, ಆನುವಂಶಿಕತೆ ಮತ್ತು ಮೆದುಳಿನ ಆರೋಗ್ಯದ ಕುರಿತು ಹೊಸ ಹೊಳಹುಗಳನ್ನು ಪಡೆಯಲಾಗುತ್ತಿದೆ. ಬೀಟಾ ಅಮಿಲಾಯ್ಡ್ ಹಾಗೂ ಟಾವ್ ಮೇಲೆ ಗಮನ ಹರಿಸುವ ಇಮ್ಯುನೋಥೆರಪಿ ಎಂಬ ಚಿಕಿತ್ಸೆ ಕೇವಲ ಅದರ ಲಕ್ಷಣಗಳನ್ನು ಪರಿಹರಿಸುವ ಬದಲು, ನೇರವಾಗಿ ಖಾಯಿಲೆಯನ್ನು ಪರಿಹರಿಸುವ ಸಾಧ್ಯತೆಗಳ ಕುರಿತು ಒಂದು ಆಶಾ ಭಾವನೆ ಮೂಡಿಸಿದೆ. ರೋಗಿಗಳು ವೈದ್ಯಕೀಯ ಪ್ರಯೋಗಗಳಲ್ಲಿ ಭಾಗವಹಿಸುವುದು ಮತ್ತು ಸಂಶೋಧನೆಗಳನ್ನು ಬೆಂಬಲಿಸುವುದರಿಂದ, ರೋಗಿಗಳಿಗೆ ಪ್ರಯೋಜನವಾಗುವುದು ಮಾತ್ರವಲ್ಲದೆ, ಈ ಸವಾಲನ್ನು ಎದುರಿಸಲು ವೈದ್ಯಕೀಯ ಮತ್ತು ಸಂಶೋಧನಾ ವಲಯಕ್ಕೂ ನೆರವಾಗುತ್ತದೆ.
ಅರಿಯಬೇಕಾದ ಸಂದೇಶ: ಮೆದುಳಿನ ಸ್ವಾಸ್ಥ್ಯದ ರಕ್ಷಣೆ
ಓರ್ವ ನರಶಾಸ್ತ್ರಜ್ಞೆಯಾಗಿ, ಎಲ್ಲರಿಗೂ ನನ್ನ ಸಂದೇಶ ಅತ್ಯಂತ ಸರಳವಾದದ್ದು, ಆದರೆ ಪರಿಣಾಮಕಾರಿಯಾದದ್ದು. ಅದೇನೆಂದರೆ, ನಿಮ್ಮ ಮೆದುಳಿನ ಸ್ವಾಸ್ಥ್ಯಕ್ಕೆ ಆದ್ಯತೆ ನೀಡಿ. ನಮಗೆ ನಮ್ಮ ಆನುವಂಶಿಕತೆಯ ಮೇಲೆ ಸಂಪೂರ್ಣ ಹಿಡಿತವಿಲ್ಲದೆ ಹೋದರೂ, ಅಲ್ಝೈಮರ್ಸ್ ಖಾಯಿಲೆಯ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಜೀವನಶೈಲಿಯಲ್ಲಿ ನಾವು ಬದಲಾವಣೆ ಖಂಡಿತಾ ತರಬಹುದು. ನಿಯಮಿತವಾಗಿ ವ್ಯಾಯಾಮ ನಡೆಸುವುದು, ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳನ್ನು ಒಳಗೊಂಡ ಆಹಾರ ಸೇವಿಸುವುದು, ಪಜ಼ಲ್ ಮತ್ತು ಆ ರೀತಿಯ ಹೊಸ ಕೌಶಲಗಳು, ಚಟುವಟಿಕೆಗಳನ್ನು ಕಲಿಯುವುದರಿಂದ ಮೆದುಳಿಗೆ ಪ್ರಚೋದನೆ ನೀಡುವುದು, ಉತ್ತಮ ಸಾಮಾಜಿಕ ಸಂಪರ್ಕ ಹೊಂದಿ, ಮೆದುಳಿನ ಸ್ಥಿತಿಸ್ಥಾಪಕತೆಯನ್ನು ಸಾಧಿಸುವುದು ಈ ಜೀವನಶೈಲಿಯ ಬದಲಾವಣೆಗಳಲ್ಲಿ ಮಹತ್ವದ್ದಾಗಿವೆ. ಮನಸ್ಸನ್ನು ಆರೋಗ್ಯಕರವಾಗಿಡುವಂತಹ ಚಟುವಟಿಕೆಗಳನ್ನು ನಡೆಸುವುದರಿಂದ, ಅರಿವಿನ ಕುಸಿತ ನಿಧಾನಗೊಂಡು, ಒಟ್ಟಾರೆ ಜೀವನಮಟ್ಟ ಉತ್ತಮಗೊಳ್ಳುತ್ತದೆ.
ಇದನ್ನೂ ಓದಿ: ರಕ್ತ ಕ್ಯಾನ್ಸರ್ ಕುರಿತಾದ ತಪ್ಪು ಕಲ್ಪನೆಗಳು ಮತ್ತು ವಾಸ್ತವಾಂಶಗಳು
ಕೊನೆಯದಾಗಿ, ಅಲ್ಝೈಮರ್ಸ್ ಖಾಯಿಲೆ ಒಂದು ಅಸಾಧಾರಣ ಎದುರಾಳಿಯಾಗಿದ್ದು, ಮೆದುಳಿನ ಸಂಕೀರ್ಣತೆಯನ್ನು ಅರ್ಥೈಸಿಕೊಳ್ಳುವಲ್ಲಿ ಸವಾಲೊಡ್ಡುತ್ತದೆ. ನಾವು ಇದಕ್ಕೆ ಒಂದು ನಿರ್ಣಾಯಕ ಚಿಕಿತ್ಸೆಗಾಗಿ ಹುಡುಕಾಟ ನಡೆಸುತ್ತಿರುವಾಗಲೇ, ನಮ್ಮ ಆದ್ಯತೆ ರೋಗ ಬರದಂತೆ ತಡೆಯುವುದು, ಆರಂಭದಲ್ಲೇ ಗುರುತಿಸಿ, ಚಿಕಿತ್ಸೆ ನೀಡುವುದು ಹಾಗೂ ಮೆದುಳಿನ ಆರೋಗ್ಯ ಉತ್ತಮಪಡಿಸುವುದರ ಕಡೆಗಿರಬೇಕು. ಉತ್ತಮ ಆಯ್ಕೆಗಳನ್ನು ಕೈಗೊಳ್ಳುವುದರಿಂದ, ಸಂಶೋಧನೆಗಳನ್ನು ಬೆಂಬಲಿಸುವುದರಿಂದ, ನಾವು ಅಲ್ಝೈಮರ್ಸ್ ಖಾಯಿಲೆಯನ್ನು ಭಯದಿಂದ ನೋಡುವ ಬದಲು, ಒಂದು ಸವಾಲಾಗಿ ಪರಿಗಣಿಸುವಂತೆ ಮಾಡಬಹುದು. ಮಾನವರ ಮೆದುಳನ್ನು ಅರ್ಥ ಮಾಡಿಕೊಳ್ಳುವ ಕುರಿತು ನಮ್ಮ ಸ್ಥಿರ ಬದ್ಧತೆಯ ಮೂಲಕ ನಾವು ಈ ಸವಾಲನ್ನು ಗೆಲ್ಲಲು ಸಾಧ್ಯವಾಗಬಹುದು.
ಡಾ. ಸೋನಿಯಾ ತಾಂಬೆ
(ಲೇಖಕರು: ಕನ್ಸಲ್ಟೆಂಟ್ – ನ್ಯೂರಾಲಜಿ, ಕಾವೇರಿ ಆಸ್ಪತ್ರೆ, ಇಲೆಕ್ಟ್ರಾನಿಕ್ ಸಿಟಿ, ಬೆಂಗಳೂರು)