
ಡ್ರೈ ಫ್ರೂಟ್ಸ್‌ಗಳಲ್ಲಿ ಖರ್ಜೂರ ಮತ್ತು ಅಂಜೂರಕ್ಕೆ ವಿಶೇಷ ಸ್ಥಾನವಿದೆ. ನೈಸರ್ಗಿಕ ಸಿಹಿ, ಫೈಬರ್ ಮತ್ತು ಹಲವು ಪೋಷಕಾಂಶಗಳನ್ನು ಹೊಂದಿರುವ ಈ ಎರಡನ್ನೂ ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಖರ್ಜೂರ ಮತ್ತು ಅಂಜೂರ ಇವೆರಡರಲ್ಲಿ ಯಾವುದರಲ್ಲಿ ಹೆಚ್ಚು ಪೋಷಕಾಂಶವಿದೆ ಮತ್ತು ತೂಕ ಮಾಡಿಕೊಳ್ಳಲು ಬಯಸುವವರು ಯಾವುದನ್ನು ಆಯ್ಕೆ ಮಾಡಿದರೆ ಒಳ್ಳೆಯದು, ಜೊತೆಗೆ ಜೀರ್ಣಕ್ರಿಯೆ, ಹೃದಯ ಮತ್ತು ಮೂಳೆಗಳ ಆರೋಗ್ಯಕ್ಕೆ ಯಾವುದು ಹೆಚ್ಚು ಎಂಬ ಪ್ರಶ್ನೆಗಳು ಹಲವರಲ್ಲಿವೆ. ಹಾಗಾಗಿ ಇಂತಹ ಗೊಂದಲಗಳನ್ನು ಪರಿಹರಿಸಲು ಕೆಲವು ಉಪಯುಕ್ತ ಮಾಹಿತಿಯನ್ನು ಈ ಸ್ಟೋರಿಯಲ್ಲಿ ನೀಡಲಾಗಿದೆ.
ಖರ್ಜೂರದಲ್ಲಿ ಪೊಟ್ಯಾಸಿಯಂ, ಮೆಗ್ನೀಷಿಯಂ, ಕಬ್ಬಿಣ ಮತ್ತು ಫೈಬರ್ ಉತ್ತಮ ಪ್ರಮಾಣದಲ್ಲಿದ್ದರೆ, ಅಂಜೂರದಲ್ಲಿ ಕ್ಯಾಲ್ಸಿಯಂ ಸೇರಿದಂತೆ ವಿವಿಧ ವಿಟಮಿನ್‌ಗಳು ಮತ್ತು ಖನಿಜಾಂಶಗಳು ದೊರೆಯುತ್ತವೆ. ಆದರೆ ಎರಡನ್ನೂ ಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ.
ಯುಎಸ್ಡಿಎ ಮಾಹಿತಿಯ ಪ್ರಕಾರ, 100 ಗ್ರಾಂ ಖರ್ಜೂರದಲ್ಲಿ ಸುಮಾರು 2.45 ಗ್ರಾಂ ಪ್ರೋಟೀನ್ ಮತ್ತು 8 ಗ್ರಾಂ ಡಯಟರಿ ಫೈಬರ್ ಇರುತ್ತದೆ. ಇದರ ಜೊತೆಗೆ,
100 ಗ್ರಾಂ ಅಂಜೂರದಲ್ಲಿ ಸುಮಾರು 0.75 ಗ್ರಾಂ ಪ್ರೋಟೀನ್ ಮತ್ತು 2.9 ಗ್ರಾಂ ಡಯಟರಿ ಫೈಬರ್ ಇರುತ್ತದೆ.
ಸಾಮಾನ್ಯವಾಗಿ ಖರ್ಜೂರದಲ್ಲಿ ಫೈಬರ್ ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗಬಹುದು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ತ್ವರಿತವಾಗಿ ಶಕ್ತಿಯನ್ನು ಒದಗಿಸಲು ಸಹಕಾರಿಯಾಗಬಹುದು. ಕಬ್ಬಿಣವೂ ಇರುವುದರಿಂದ ಸಮತೋಲಿತ ಆಹಾರದ ಭಾಗವಾಗಿ ಇದನ್ನು ಸೇರಿಸಿಕೊಳ್ಳಬಹುದು. ಆದರೆ ಖರ್ಜೂರ ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ಮಧುಮೇಹ ಇರುವವರು ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ದಿನಕ್ಕೆ 2–4 ಖರ್ಜೂರ ಸಾಕಾಗಬಹುದು. ಆದರೆ ವ್ಯಕ್ತಿಯ ಒಟ್ಟಾರೆ ಆಹಾರ, ಕ್ಯಾಲೊರಿ ಅಗತ್ಯ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಇದು ಬದಲಾಗಬಹುದು.
ಸಾಮಾನ್ಯವಾಗಿ ಅಂಜೂರದಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಇತರ ಖನಿಜಾಂಶಗಳು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಅಂಜೂರದಲ್ಲಿ ವಿಟಮಿನ್ A, C, E ಮತ್ತು K ಸೇರಿದಂತೆ ಹಲವು ಪೋಷಕಾಂಶಗಳು ಇರುವುದರಿಂದ ಸಮತೋಲಿತ ಆಹಾರವಾಗಿ ಸೇವಿಸಬಹುದು. 2–3 ಒಣ ಅಂಜೂರವನ್ನು ನೆನೆಸಿ ಬೆಳಗ್ಗೆ ತಿನ್ನಬಹುದು.
ಖರ್ಜೂರದಲ್ಲಿ ಫೈಬರ್ ಮತ್ತು ಪೊಟ್ಯಾಸಿಯಂ ಹೆಚ್ಚು, ಆದರೆ ಅಂಜೂರದಲ್ಲೂ ಕ್ಯಾಲ್ಸಿಯಂ ಮತ್ತು ವಿವಿಧ ವಿಟಮಿನ್‌ಗಳು ದೊರೆಯುತ್ತವೆ. ಆದ್ದರಿಂದ ನಿಮ್ಮ ಆರೋಗ್ಯದ ಅಗತ್ಯಕ್ಕೆ ಅನುಗುಣವಾಗಿ ಎರಡನ್ನೂ ಮಿತ ಪ್ರಮಾಣದಲ್ಲಿ ಸೇವಿಸಬಹುದು. ಡ್ರೈ ಫ್ರೂಟ್ಸ್ ಆರೋಗ್ಯಕರವಾಗಿದ್ದರೂ ಅವುಗಳಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೊರಿಗಳು ಹೆಚ್ಚು ಇರಬಹುದು. ಹೀಗಾಗಿ ಮಿತ ಪ್ರಮಾಣವೇ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ