ಮಾವಿನಹಣ್ಣುಗಳನ್ನು ಇಷ್ಟಪಡುತ್ತೀರಾ? ಅದರೊಂದಿಗೆ ಈ 5 ಆಹಾರಗಳನ್ನು ಸೇವಿಸಲೇಬಾರದು
ಮಾವು ಬೇಸಿಗೆಯ ಅತ್ಯಂತ ಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ, ಆದರೆ ಅದನ್ನು ಸೇವಿಸುವಾಗ ತಪ್ಪಿಸಬೇಕಾದ ಕೆಲವು ಆಹಾರಗಳಿವೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಮಾವಿನಹಣ್ಣು(Mango) ಬೇಸಿಗೆ ಕಾಲದ ಮಿತ್ರನಿದ್ದಂತೆ . ಈ ರಸಭರಿತ ಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲಿಯೂ ವಿಧ ವಿಧವಾದ ಮಾವಿನ ಹಣ್ಣುಗಳನ್ನು ಸವಿಯುವುದೇ ಆನಂದ. ಸುಡುವ ಶಾಖದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಾ ಈ ಹಣ್ಣನ್ನು ಆನಂದಿಸುವ ಅದೆಷ್ಟೋ ಮಕ್ಕಳಿದ್ದಾರೆ. ಇದು ಬೇಸಗೆ ರಜೆಯಲ್ಲಿ ವಿಶೇಷವಾಗಿ ಸಿಗುವ ಹಣ್ಣಾದ್ದರಿಂದ ಹೋದಲೆಲ್ಲಾ ಇದರದ್ದೇ ಹಾವಳಿ. ಈಗಂತೂ ಇದನ್ನು ವಿಶಿಷ್ಟ ಪಾಕವಿಧಾನಗಳಿಗೆ ಬಳಸಿಕೊಳ್ಳುವವರು ಹೆಚ್ಚಾಗಿದ್ದರೆ. ಇನ್ನೂ ಹೆಚ್ಚು ಹೆಚ್ಚು ಪ್ರಯೋಗ ನಡೆಯುತ್ತಲೇ ಇದೆ. ಹಾಗಾಗಿ ಇದರ ಬೇಡಿಕೆ ಗಗನಕ್ಕೇರಿದೆ.
ನಿಮಗೆ ಗೊತ್ತಾ? ನಾವು ಅದರ ರಸಭರಿತ ರುಚಿಯನ್ನು ಆನಂದಿಸುವುದು ಮಾತ್ರವಲ್ಲದೆ ಅದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೇವೆ. ಆದರೆ ಮಾವಿನಹಣ್ಣಿನೊಂದಿಗೆ ನೀವು ಸೇವಿಸಬಾರದ ಕೆಲವು ಆಹಾರಗಳಿವೆ ಎಂದು ನಿಮಗೆ ತಿಳಿದಿದೆಯೇ? ಆಯುರ್ವೇದದ ಪ್ರಕಾರ, ಕೆಲವು ಆಹಾರ ಒಂದಕ್ಕೊಂದು ಸರಿಹೊಂದುವುದಿಲ್ಲ ಮತ್ತು ಅವುಗಳನ್ನು ‘ವಿರುದ್ದ ಆಹಾರ’ ಎಂದು ಕರೆಯಲಾಗುತ್ತದೆ.
ಮತ್ತಷ್ಟು ಓದಿ: ಭಾರತದ ಪ್ರಮುಖ ಮಾವಿನ ಹಣ್ಣಿನ ತಳಿಗಳ ಮಾಹಿತಿ ಇಲ್ಲಿವೆ
ಕನ್ಸಲ್ಟೆಂಟ್ ಪೌಷ್ಟಿಕತಜ್ಞೆ ರೂಪಾಲಿ ದತ್ತಾ ಅವರು ಹೇಳುವ ಪ್ರಕಾರ, “ಈ ಆಹಾರಗಳು ವಿರುದ್ಧ ಗುಣಗಳಿಂದಾಗಿ ಹೊಂದಿಕೆಯಾಗುವುದಿಲ್ಲ ಎಂದು ಭಾವಿಸಲಾಗಿದೆ. ಒಂದು ಬಿಸಿಯಾಗಿರಬಹುದು ಮತ್ತು ಇನ್ನೊಂದು ತಣ್ಣಗಿರಬಹುದು, ಅಥವಾ ಎರಡೂ ಪದಾರ್ಥಗಳು ಒಂದೇ ರೀತಿಯ ಗುಣಗಳನ್ನು ಹೊಂದಿರಬಹುದು. ಅಂತಹ ಆಹಾರಗಳನ್ನು ಒಟ್ಟಿಗೆ ಸೇವಿಸಿದಾಗ, ದೇಹದಲ್ಲಿ ಮತ್ತಷ್ಟು ಅಸಮತೋಲನಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಹಾಗಾದರೆ ಆ ಆಹಾರಗಳು ಯಾವುದು? ಹೇಗೆ ಸೇವಿಸಬೇಕು ಈ ಬಗ್ಗೆ ಮಾಹಿತಿ ಇಲ್ಲಿದೆ.
ಮಾವಿನ ಹಣ್ಣಿನೊಂದಿಗೆ ನೀವು ಸೇವಿಸಬಾರದ 5 ಆಹಾರಗಳು ಇಲ್ಲಿವೆ: -ಮೊಸರು ಮತ್ತು ಮಾವು: ಅನೇಕ ಜನರು ಮಾವಿನ ಹಣ್ಣಿನೊಂದಿಗೆ ಮೊಸರು ತಿನ್ನುವುದನ್ನು ಆನಂದಿಸುತ್ತಾರೆ. ಆದರೆ ಇದು ಜೀರ್ಣಕ್ರಿಯೆಗೆ ಉತ್ತಮ ಸಂಯೋಜನೆಯಲ್ಲ ಎಂದು ತಜ್ಞರು ಹೇಳುತ್ತಾರೆ. ಮಾವಿನ ಹಣ್ಣುಗಳು ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಮತ್ತು ಮೊಸರು ವಿರುದ್ಧ ತಂಪಾಗಿಸುವ ಪರಿಣಾಮವನ್ನು ಹೊಂದಿರುವುದರಿಂದ, ಇದು ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು. ಅಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
– ಐಸ್ ಕ್ರೀಮ್ ಮತ್ತು ಮ್ಯಾಂಗೊ: ಮಾವಿನ ಹಣ್ಣಿನೊಂದಿಗೆ ನೀವು ತಪ್ಪಿಸಬೇಕಾದ ಮತ್ತೊಂದು ಆಹಾರವೆಂದರೆ ಐಸ್ ಕ್ರೀಮ್. ನಮ್ಮಲ್ಲಿ ಹೆಚ್ಚಿನವರು ಬೇಸಿಗೆಯಲ್ಲಿ ಹೊಸದಾಗಿ ಕತ್ತರಿಸಿದ ಮಾವಿನಹಣ್ಣಿನೊಂದಿಗೆ ವೆನಿಲ್ಲಾ ಅಥವಾ ಇನ್ನಿತರ ಐಸ್ ಕ್ರೀಮ್ ಅನ್ನು ಸೇವಿಸಲು ಇಷ್ಟಪಡುತ್ತಾರೆ. ಇದು ದೇಹಕ್ಕೆ ಆರೋಗ್ಯಕರವಲ್ಲ. ತಾಪಮಾನದಲ್ಲಿನ ವ್ಯತ್ಯಾಸವು ಜೀರ್ಣಕ್ರಿಯೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಮಾವಿನಹಣ್ಣಿನೊಂದಿಗೆ ಐಸ್ ಕ್ರೀಮ್ ತಿನ್ನಲು ಯೋಜಿಸುತ್ತಿದ್ದರೆ, ಸಾಧ್ಯವಾದಷ್ಟು ಅದನ್ನು ತಪ್ಪಿಸಿ.
-ಸಿಟ್ರಸ್ ಹಣ್ಣುಗಳು ಮತ್ತು ಮಾವು: ಹಲವಾರು ಅಧ್ಯಯನಗಳ ಪ್ರಕಾರ, ಮಾವಿನ ಹಣ್ಣಿನೊಂದಿಗೆ ಸಿಟ್ರಸ್ ಹಣ್ಣುಗಳು ಸೇರಿದಂತೆ ಕೆಲವು ಆಹಾರಗಳನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು. ಕಿತ್ತಳೆ, ಬೆರ್ರಿ ಮತ್ತು ಕಿವಿಯಂತಹ ಹಣ್ಣುಗಳನ್ನು ಮಾವಿನಹಣ್ಣಿನೊಂದಿಗೆ ಸಂಯೋಜಿಸುವುದು ದೇಹದ ಪಿಎಚ್ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ, ಇದು ನಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರಬಹುದು.
-ಕಾರ್ಬೊನೇಟೆಡ್ ಪಾನೀಯಗಳು ಮತ್ತು ಮ್ಯಾಂಗೊ: ನೀವು ಮಾವಿನ ಹಣ್ಣಿನೊಂದಿಗೆ ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದನ್ನು ಆನಂದಿಸುವವರಾಗಿದ್ದರೆ, ಈಗಲೇ ನಿಲ್ಲಿಸುವುದು ಒಳ್ಳೆಯದು. ಮಾವಿನಹಣ್ಣು ಮತ್ತು ಕಾರ್ಬೊನೇಟೆಡ್ ಪಾನೀಯಗಳೆರಡೂ ಸಕ್ಕರೆಯ ಅಂಶವನ್ನು ಹೆಚ್ಚಾಗಿ ಹೊಂದಿರುವುದರಿಂದ ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಏರಿಕೆಗೆ ಕಾರಣವಾಗಬಹುದು. ಮಾವಿನ ಹಣ್ಣಿನೊಂದಿಗೆ ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸಲು ಸಹ ಶಿಫಾರಸು ಮಾಡಲಾಗಿದೆ ಏಕೆಂದರೆ ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
-ಮಸಾಲೆಯುಕ್ತ ಆಹಾರ ಮತ್ತು ಮಾವು: ಅನೇಕ ಜನರು ತಮ್ಮ ಊಟದೊಂದಿಗೆ ಮಾವಿನಹಣ್ಣುಗಳನ್ನು ತಿನ್ನುವುದನ್ನು ಆನಂದಿಸುತ್ತಿದ್ದರೆ, ಅವುಗಳನ್ನು ಪಲ್ಯ ಅಥವಾ ಸಬ್ಜಿಯಂತಹ ಮಸಾಲೆಯುಕ್ತ ಆಹಾರಗಳೊಂದಿಗೆ ಜೋಡಿಸುವುದರಿಂದ ದೇಹದ ಶಾಖವನ್ನು ಹೆಚ್ಚಿಸಬಹುದು ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಆಗಾಗ್ಗೆ ಆಸಿಡ್ ರಿಫ್ಲಕ್ಸ್ ಅನುಭವಿಸುವ ಜನರು ವಿಶೇಷವಾಗಿ ಈ ಆಹಾರವನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸಬೇಕು.
ಆದ್ದರಿಂದ, ಮುಂದಿನ ಬಾರಿ ನೀವು ಮಾವಿನಹಣ್ಣನ್ನು ತಿನ್ನುವಾಗ, ಈ ಆಹಾರಗಳನ್ನು ತಪ್ಪಿಸಿ ಮತ್ತು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುವ ಸಮಸ್ಯೆಗಳನ್ನು ದೂರವಿಡಿ. ಆರೋಗ್ಯವಾಗಿರಿ!
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Wed, 3 May 23