
ಬಿಸಿಲಿನಲ್ಲಿ ಹೊರಗೆ ಹೋದ ತಕ್ಷಣ ಅನೇಕರಿಗೆ ತಲೆನೋವು (Headache) ಬರುತ್ತದೆ. ಇದನ್ನು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷಿಸುವುದು ಸೂಕ್ತವಲ್ಲ, ಏಕೆಂದರೆ ಇದು ದೇಹದಲ್ಲಿನ ಕೆಲವು ಅಸಮತೋಲನದ ಸಂಕೇತವಾಗಿರಬಹುದು. ತಲೆ ಭಾರ, ಕಣ್ಣುಗಳಲ್ಲಿ ಉರಿ, ತಲೆತಿರುಗುವಿಕೆ, ದೌರ್ಬಲ್ಯ, ಅತಿಯಾದ ಬೆವರು ಅಥವಾ ಚಡಪಡಿಕೆ ಮುಂತಾದ ಲಕ್ಷಣಗಳು ಸೂರ್ಯನ ಬೆಳಕಿಗೆ ಒಡ್ಡಿಕೊಂಡ ತಕ್ಷಣ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ವೇಗದ ಹೃದಯ ಬಡಿತ, ಆಯಾಸ ಕಂಡುಬರಬಹುದು. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು, ಈ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದೆಹಲಿಯ ವೈದ್ಯರಾದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ತೀವ್ರ ಬಿಸಿಲು ಮತ್ತು ಉಷ್ಣತೆಯಿಂದ ದೇಹದ ತಾಪಮಾನ ತಕ್ಷಣ ಏರಿಕೆಯಾಗುತ್ತದೆ. ಇದರಿಂದ ತಲೆಭಾರ ಮತ್ತು ತಲೆನೋವು ಕಾಣಿಸಿಕೊಳ್ಳಬಹುದು. ಜೊತೆಗೆ ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಷನ್) ಉಂಟಾದರೆ, ಬೆವರಿನ ಮೂಲಕ ನೀರು ಮತ್ತು ಖನಿಜಗಳು ಹೊರಗೆ ಹೋದಾಗ ತಲೆನೋವು ಹೆಚ್ಚಾಗಬಹುದು. ಅಷ್ಟೇ ಅಲ್ಲ, ತೀವ್ರ ಬೆಳಕು ಕಣ್ಣಿನ ಮೇಲೆ ಬಿದ್ದಾಗ ಮೈಗ್ರೇನ್ ಇರುವವರಿಗೆ ತಲೆನೋವು ಉಂಟಾಗಬಹುದು. ಖಾಲಿ ಹೊಟ್ಟೆಯಲ್ಲಿ ಬಿಸಿಲಿಗೆ ಹೋಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿಯಬಹುದು, ಇದು ಕೂಡ ತಲೆನೋವಿಗೆ ಕಾರಣವಾಗುತ್ತದೆ. ಇದಲ್ಲದೆ ನಿದ್ರೆ ಕೊರತೆ, ದಣಿವು ಮತ್ತು ಬಿಸಿ ಗಾಳಿ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಬಹುದು.
ಇದನ್ನೂ ಓದಿ: Cold Water Vs Warm Water: ಬಿಸಿ ನೀರು ಅಥವಾ ತಣ್ಣೀರು; ಬೇಸಿಗೆಯಲ್ಲಿ ಕುಡಿಯಲು ಯಾವುದು ಬೆಸ್ಟ್?
ಮೈಗ್ರೇನ್ ಇರುವವರು, ಶೀಘ್ರವಾಗಿ ಡಿಹೈಡ್ರೇಷನ್ ಆಗುವವರು, ದೀರ್ಘಕಾಲ ಖಾಲಿ ಹೊಟ್ಟೆಯಲ್ಲಿ ಇರುವವರು ಹೆಚ್ಚು ಸಮಸ್ಯೆಗೆ ಒಳಗಾಗಬಹುದು. ಮಕ್ಕಳಲ್ಲಿ, ವೃದ್ಧರಲ್ಲಿ, ಗರ್ಭಿಣಿಯರಲ್ಲಿ ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಬಹುದು.
ಬಿಸಿಲಿಗೆ ಹೋಗುವ ಮೊದಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ತಲೆ ಮುಚ್ಚಲು ಟೋಪಿ, ದುಪ್ಪಟ್ಟಾ ಅಥವಾ ಛತ್ರಿ ಬಳಸುವುದು ಉತ್ತಮ. ಕಣ್ಣನ್ನು ರಕ್ಷಿಸಲು ಸನ್‌ಗ್ಲಾಸ್ ಧರಿಸಬಹುದು. ಸಾಧ್ಯವಾದಷ್ಟು ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೋಗಲೇ ಬೇಕಾದಾಗ ಹೊರಗೆ ಹೋಗುವ ಮೊದಲು ಸ್ವಲ್ಪ ಏನಾದರೂ ದೇಹ ತಂಪಾಗಿಸುವ ಆಹಾರ ಸೇವಿಸುವುದು ಮುಖ್ಯ. ಹಗುರ ಮತ್ತು ಸಡಿಲವಾಗಿರುವ ಉಡುಪನ್ನು ಧರಿಸುವುದರಿಂದ ದೇಹ ತಂಪಾಗಿರುತ್ತದೆ. ಈ ಸರಳ ಕ್ರಮಗಳು ತಲೆನೋವು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಬಿಸಿಲಿಗೆ ಹೋದ ತಕ್ಷಣ ತಲೆನೋವು ಕಾಣಿಸಿಕೊಳ್ಳುವುದು ದೇಹದ ಎಚ್ಚರಿಕೆಯ ಸೂಚನೆ ಆಗಿರಬಹುದು. ಆದ್ದರಿಂದ ದೇಹದ ಸಂಕೇತಗಳನ್ನು ಗಮನಿಸಿ, ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಮತ್ತು ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ