ದೇಹದ ಪ್ರತಿಯೊಂದು ಅಂಗಗಳು ಸುಸ್ಥಿತಿಯಲ್ಲಿರಲು ಕ್ಯಾಲ್ಸಿಯಂ (Calcium)ಅತೀ ಅಗತ್ಯವಾಗಿದೆ. ಹೃದಯ, ಮೂಳೆ (Bones) ಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮುಖ್ಯವಾಗಿರುತ್ತದೆ. ಕ್ಯಾಲ್ಸಿಯಂ ಕೊರತೆಯಾದರೆ ಮೂಳೆ ಮುರಿತ, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಮುಟ್ಟಿನ ಸಮಸ್ಯೆಯಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಪ್ರತೀ ಮಹಿಳೆ ತನ್ನ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಪ್ರಮಾಣವನ್ನು ಸರಿಯಾಗಿ ಪೂರೈಸಿಕೊಳ್ಳುವುದು ಅಗತ್ಯವಾಗಿದೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಮಾನವನ ದೇಹದ 99 ರಷ್ಟು ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳಲ್ಲಿರುತ್ತದೆ. ಅಧ್ಯಯನದ ಪ್ರಕಾರ ಮಹಿಳೆಯರಲ್ಲಿಯೇ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ.
ತಜ್ಞರ ಪ್ರಕಾರ 50 ವರ್ಷ ಮೇಲ್ಪಟ್ಟ ಪ್ರತೀ ಇಬ್ಬರು ಮಹಿಳೆಯರಲ್ಲಿ ಒಬ್ಬರಿಗೆ ಕ್ಯಾಲ್ಸಿಯಂ ಸಮಸ್ಯೆಯಿಂದ ಮೂಳೆಗಳ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಅವರು ಆಹಾರ ಪದ್ಧತಿಯೂ ಒಂದು ರೀತಿಯಲ್ಲಿ ಕಾರಣವಾಗುತ್ತದೆ ಎನ್ನುತ್ತಾರೆ. ಇತ್ತೀಚೆಗೆ ಭಾರತದಲ್ಲಿಯೂ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. 2019ರ ಅಧ್ಯಯನದ ಪ್ರಕಾರ ದೇಶದಲ್ಲಿ ಅಸ್ಥಿರಂಧ್ರತೆಯಿಂದ (osteoporosis ) 25 ಮಿಲಿಯನ್ ಭಾರತೀಯರು ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಿಕೊಳ್ಳಲು ನಿಮಗೆ ಈ ಆಹಾರಗಳು ನೆರವಾಗಬಲ್ಲದು.
ಡೈರಿ ಉತ್ಪನ್ನಗಳು :
ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಚೀಸ್ಗಳಲ್ಲಿ ಸಮೃದ್ಧವಾದ ಕ್ಯಾಲ್ಸಿಯಂ ಅಂಶವಿರುತ್ತದೆ. ಇವುಗಳ ಸೇವನೆಯಿಂದ ನಿಮ್ಮ ಕ್ಯಾಲ್ಸಿಯಂ ಸಮಸ್ಯೆ ಪರಿಹಾರವಾಗಿ ಮೂಳೆಗಳೂ ಬಲವಾಗುತ್ತವೆ.
ತರಕಾರಿಗಳು:
ಎಲೆಕೋಸು, ಬ್ರೋಕೋಲಿಯಂತಹ ಸೊಪ್ಪಿನ ಆಹಾರಗಳಲ್ಲಿ ಕ್ಯಾಲ್ಸಿಯಂ ಅಂಶ ಯಥೇಚ್ಛವಾಗಿರುತ್ತದೆ. ಹೀಗಾಗಿ ನಿಯಮಿತವಾಗಿ ತರಕಾರಿಗಳ ಸೇವನೆ ಮೂಳೆ ಮುರಿದಂತಹ ಸಮಸ್ಯೆಗೆ ಕಾರಣವಾಗುವ ಕ್ಯಾಲ್ಸಿಯಂ ಕೊರತೆಯನ್ನು ಸರಿದೂಗಿಸುತ್ತದೆ.
ಬಾದಾಮಿ :
ಒಂದು ಹಿಡಿ ಬಾದಾಮಿಯಲ್ಲಿ ಸುಮಾರು 70 ಎಂಜಿ ಕ್ಯಾಲ್ಸಿಯಮ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ನೀವು ಪ್ರತಿದಿನ ರಾತ್ರಿ ಹಾಲು ಅಥವಾ ನೀರಿನಲ್ಲಿ ಒಂದೆರಡು ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸಬಹುದು. ಇದರಿಂದ ನಿಮ್ಮ ತ್ವಚೆಯೂ ಕಾಂತಿಯುತವಾಗುತ್ತದೆ.
ಸೋಯಾಬಿನ್ ಮತ್ತು ಹುರಿದ ಎಳ್ಳು :
ಸೋಯಾಬಿನ್ ನಿಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಅಂಶಗಳನ್ನು ಪೂರೈಸುತ್ತದೆ. ಒಂದು ಬೌಲ್ ಸೋಯಾಬಿನ್ನಲ್ಲಿ ಸುಮಾರಿ 230 ಎಂಜಿ ಕ್ಯಾಲ್ಸಿಯಂ ಅಂಶವಿರುತ್ತದೆ. ಅದೇ ರೀತಿ ಹುರಿದ ಎಳ್ಳು ಕೂಡ ಯಥೇಚ್ಛವಾದ ಕ್ಯಾಲ್ಸಿಯಂ ಗುಣಗಳನ್ನು ಹೊಂದಿರುತ್ತದೆ. ತಜ್ಞರ ಪ್ರಕಾರ ಒಂದು ಹಿಡಿ ಹುರಿದ ಎಳ್ಳಿನಲ್ಲಿ ಸುಮಾರು 277 ಎಂಜಿ ಕ್ಯಾಲ್ಸಿಯಂ ಅಂಶವಿರುತ್ತದೆ. ನೀವು ಹುರಿದ ಎಳ್ಳನ್ನು ಸಿಹಿತಿನಿಸನ್ನು ತಯಾರಿಸಿಯೂ ಸೇವಿಸಬಹುದಾಗಿದೆ.
ಇದನ್ನೂ ಒದಿ:
Fat Burning Juices: ದೇಹದ ತೂಕ ಇಳಿಸಲು ಈ 5 ಜ್ಯೂಸ್ಗಳನ್ನು ನಿಯಮಿತವಾಗಿ ಸೇವಿಸಿ
Published On - 4:25 pm, Wed, 2 February 22