ಕೋವಿಡ್-19 ಮೂರನೇ ಅಲೆ, ಬ್ಲ್ಯಾಕ್ ಫಂಗಸ್​ನಿಂದ ಮಕ್ಕಳ ರಕ್ಷಣೆ ಹೇಗೆನ್ನುವುದನ್ನು ತಜ್ಞರು ಇಲ್ಲಿ ವಿವರಿಸಿದ್ದಾರೆ

ಕೋವಿಡ್-19 ಮೂರನೇ ಅಲೆ, ಬ್ಲ್ಯಾಕ್ ಫಂಗಸ್​ನಿಂದ ಮಕ್ಕಳ ರಕ್ಷಣೆ ಹೇಗೆನ್ನುವುದನ್ನು ತಜ್ಞರು ಇಲ್ಲಿ ವಿವರಿಸಿದ್ದಾರೆ
ಪ್ರಾತಿನಿಧಿಕ ಚಿತ್ರ

ಮಾಸ್ಕ್​ ಧರಿಸುವುದು ದೈಹಿಕ ಅಂತರ ಕಾಯ್ದುಕೊಳ್ಳವುದದಕ್ಕೆ ಪರ್ಯಾಯವಲ್ಲ. ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳವುದರ ಜೊತೆಗೆ ಮಾಸ್ಕ್​ಗಳನ್ನು ಮಕ್ಕಳು ಧರಿಸಿರಬೇಕು. ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಡಬೇಕು

Arun Belly

|

May 26, 2021 | 11:21 PM

ಕೋವಿಡ್-19 ಎರಡನೇ ಅಲೆ ಇಡೀ ಭಾರತವನ್ನೇ ತತ್ತರಿಸುವಂತೆ ಮಾಡಿದೆ. ಇದುವರೆಗೆ ಕೇವಲ ಸೋಂಕಿನ ಅಪಾಯದ ಬಗ್ಗೆ ಮಾತ್ರ ಜನ ಚಿಂತಿತರಾಗಿದ್ದರು. ಆದರೀಗ ಅದರ ಜೊತೆಗೆ ಬ್ಲ್ಯಾಕ್, ವೈಟ್​ ಮತ್ತು ಯೆಲ್ಲೋ ಫಂಗಸ್​ಗಳ ಹಾವಳಿ ಜನರನ್ನು ಕಂಗೆಡುವಂತೆ ಮಾಡಿದೆ. ಚಿಕ್ಕ ಮಕ್ಕಳನ್ನು ಹೊಂದಿರುವ ಪೋಷಕರಂತೂ ಅವರನ್ನು ಈ ರೋಗಗಳಿಂದ ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರೆಷ್ಟೇ ಜಾಗರೂಕತೆವಹಿಸಿದರೂ ಹಲವು ಸಂದೇಹಗಳು ಮನಸ್ಸಿನಲ್ಲಿ ಉಳಿದು ಬಿಡುತ್ತವೆ. ಸೋಂಕುಗಳಿಗೆ ಸಂಬಂಧಿಸಿದಂತೆ ಕೆಲವು ಮೂಲ ಮತ್ತು ಪ್ರಾಮುಖ್ಯವಾದ ಸಮಸ್ಯೆಗಳಿಗೆ ಪರಿಣಿತ ಮತ್ತು ತಜ್ಞ ವೈದ್ಯರ ಸಲಹೆ ಮತ್ತು ಎಚ್ಚರಿಕೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಚಿಕ್ಕ ಮಕ್ಕಳ ತಂದೆ-ತಾಯಿಗಳಿಗೆ ಈ ಮಾಹಿತಿ ಬಹಳ ಉಪಯೋಗವಾಗಲಿದೆ.

ಮಕ್ಕಳು ಲಸಿಕೆ ಪಡೆಯಲು ಅರ್ಹರಾಗುವವರೆಗೆ ಅವರನ್ನು ಸೋಂಕಿನಿಂದ ಹೇಗೆ ತಡೆಯುವುದು?

ಮಕ್ಕಳ ಮೇಲೆ ನಡೆಸಿರುವ ಕ್ಲಿನಿಕಲ್ ಟ್ರಯಲ್​ಗಳ ಫಲಿತಾಂಶಗಳು ಮತ್ತು ಸಲಹೆ ಗಳು ಇಷ್ಟರಲ್ಲೇ ಲಭ್ಯವಾಗಲಿವೆ. ಏತನ್ಮಧ್ಯೆ, ಕುಟುಂಬದ ಹಿರಿಯರ ಮೇಲೆ ಮಕ್ಕಳನ್ನು ಸೋಂಕಿನಿಂದ ರಕ್ಷಿಸುವ ಗುರುತರವಾದ ಜವಾಬ್ದಾರಿಯಿದೆ. ಯಾಕೆಂದರೆ, ವೈರಸ್ ಅವರ ದೇಹದಲ್ಲೇ ಹೊಕ್ಕಿರುವ ಸಾಧ್ಯತೆ ಇದ್ದು ಅದು ಅವರ ಮೂಲಕ ಮಕ್ಕಳಿಗೆ ಹರಡಬಹುದು. ಎರಡಕ್ಕಿಂತ ಜಾಸ್ತಿ ವಯಸ್ಸಿನ ಮಕ್ಕಳಿಗೆ ಮಾಸ್ಕ್ ತೊಡಿಸಿ ಬೇರೆ ಮಕ್ಕಳ ಗುಂಪಿನೊಂದಿಗೆ ಬೆರೆತು ಆಡುವವುದನ್ನು ತಪ್ಪಿಸಬೇಕು. ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಪೌಷ್ಠಿಕಾಂಶಭರಿತ ಆಹಾರ ನೀಡಬೇಕು.

ಪೋಷಕರು ಆರಂಭಿಕ ಹಂತದಲ್ಲೇ ಗಮನಿಸಬೇಕಿರುವ ಕೊವಿಡ್​ ರೋಗದ ಲಕ್ಷಣಗಳ್ಯಾವು? ಯಾವ ಹಂತದಲ್ಲಿ ಅವು ಅಪಾಯಕಾರಿ ಎನಿಸುತ್ತವೆ?

ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸುವ ರೋಗಲಕ್ಷಣಗಳೆಂದರೆ, ಜ್ವರ, ಕೆಮ್ಮು, ಶೀತ, ವಾಂತಿ, ಅತಿಸಾರ, ಗಂಟಲು ನೋವು, ಮೈಕೈ ನೋವು ಮತ್ತು ದಣಿವು. ಸಾಮಾನ್ಯವಾಗಿ ಕೆಲ ಋತುಗಳಲ್ಲಿ ಕಾಡುವ ಫ್ಲು ರೋಗಲಕ್ಷಣಗಳೂ ಇವೇ ಆಗಿರುವುದರಿಂದ ಕುಟುಂಬ ವೈದ್ಯರಿಂದ, ಇಲ್ಲವೇ ಮಕ್ಕಳ ರೋಗ ತಜ್ಞರಿಂದ ಚಿಕಿತ್ಸೆ ಕೊಡಿಸಬೇಕು. ಪೋಷಕರು ಮಕ್ಕಳಲ್ಲಿ ಕಳಡುಬರುವ ಲಕ್ಷಣಗಳ ಒಂದು ಚಾರ್ಟ್ ಮಾಡಿ ಅದನ್ನು ವೈದ್ಯರಿಗೆ ತೋರಿಸುವುದು ಒಳಿತು. ಕೆಲಸಕ್ಕೆ ಹೋಗುವ ತಂದೆ-ತಾಯಿಗಳು ಒಂದೆರಡಡು ದಿನ ರಜೆ ಹಾಕಿ ಮಕ್ಕಳ ಆರೋಗ್ಯವನ್ನು ಮಾನಿಟರ್ ಮಾಡಬೇಕು

ಕೊವಿಡ್​ ಲಕ್ಷಣಗಳು ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಮಹಾಮಾರಿ ಮಾಡುವ ಪರಿಣಾಮದ ಬಗ್ಗೆ ಪೋಷರು ಎಚ್ಚರವಹಿಸಬೇಕು

ಮಗುವಿನ ಅರೋಗ್ಯ ಕ್ಷಿಣಿಸುತ್ತಿರುವ ಹಾಗೆ ಕಂಡರೆ ಅದನ್ನು ಕೂಡಲೇ ವೈದ್ಯರಲ್ಲಿಗೆ ಕರದೊಯ್ಯಬೇಕು. ಬಹಳ ಸಮಯದವರೆಗೆ ಜ್ವರ ಕಡಿಮೆಯಾಗದಿದ್ದರೆ, ಉಸಿರಾಟದ ಸಮಸ್ಯೆ, ಸರಿಯಾಗಿ ಊಟ ಮಾಡದಿರುವುದು, ವಾಂತಿ ಅತಿಸಾರ, ಡಿಹೈಡ್ರೇಶನ್, ಅತಿಯಾದ ಹೊಟ್ಟೆನೋವು, ತಲೆನೋವು, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಗುವಿನ ವರ್ತನೆಯಲ್ಲಿ ಬದಲಾವಣೆ ಅಥವಾ ಸಿಡುಕುತನ ಕಂಡುಬರುವುದು, ಕಣ್ಣು ಕೆಂಪಾಗಿವುದು ತುಟಿಗಳಲ್ಲಿ ಊತ ಮತ್ತು ದೇಹದ ಮೇಲೆ ತರುಚಿದಂಥ ಗಾಯಗಳು-ಇವುಗಳು ಮಕ್ಕಳಲ್ಲಿ ಕಂಡರೆ ಪೋಷಕರು ತಡಮಾಡದೆ ಅವರನ್ನು ಮಕ್ಕಳ ತಜ್ಞರಲ್ಲಿಗೆ ಕರದೊಯ್ಯಬೇಕು.

ಬ್ಲ್ಯಾಕ್ ಫಂಗಸ್ ಅಂದರೇನು ಅದು ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆಯೇ?

ಬ್ಲ್ಯಾಕ್ ಫಂಗಸ್ ಅಥವಾ ಮ್ಯುಕರ್​ಮೈಕೊಸಿಸ್ ಒಂದು ಅಪರೂಪದ ಫಂಗಲ್ (ಶಿಲೀಂಧ್ರ) ಸೋಂಕಾಗಿದೆ. ಫಂಗಿ ಸಾಮಾನ್ಯವಾಗಿ ಒಬ್ಬ ಅರೋಗ್ಯವಂತ ಮತ್ತು ಸಾಮಾನ್ಯ ಜೀವ ನಿರೋಧಕ ಶಕ್ತಿಯುಳ್ಳ ವ್ಯಕ್ತಿಗೆ ತಾಕಲಾರದು. ಕೇವಲ ದುರ್ಬಲ ರೋಗ ನಿರೋಧಕ ಶಕ್ತಿಯುಳ್ಳವರಿಗೆ ಮಾತ್ರ ಇದು ಕಾಡುತ್ತದೆ. ಹಾಗಾಗೇ ಅವುಗಳನ್ನು ಅವಕಾಶವಾದಿ ರೋಗಕಣಗಳೆಂದು ಕರೆಯಲಾಗತ್ತದೆ. ವಯಸ್ಕರಿಗೆ ಹೋಲಿಸಿದರೆ ಕೊವಿಡ್​ ಸೋಂಕಿನಿಂದ ಬಳಲುತ್ತಿರುವ ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆ ತೀರ ಅಪರೂಪ. ಮಧುಮೇಹ ಮತ್ತು ಇತರ ಕಾಯಿಗಳಿಂದ ಬಳಲುತ್ತಿರರುವವರು ಕೋವಿಡ್​ ಸೋಂಕಿಗಿಡಾದರೆ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇಲ್ಲವೇ ಬೇಕಾಬಿಟ್ಟಿಯಾಗಿ ಸ್ಟಿರಾಯ್ಡ್​ಗಳನ್ನು ತೆಗೆದುಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಮಕ್ಕಳನ್ನು ಒಂದು ಪಕ್ಷ ಐಸಿಯುನಲ್ಲಿ ದಾಖಲಿಸಿದ್ದರೆ, ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ.

ಸೋಂಕು ಗಾಳಿಯಲ್ಲಿ ಹರಡುವುದರಿಂದ ಮಕ್ಕಳನ್ನು ಹೊರಹೋಗಲು ಬಿಡದೆ ಮನೆಯಲ್ಲೇ ಕೂಡಿಹಾಕಬೇಕೇ?

ಹೊಸ ಮಾರ್ಗಸೂಚಿಗಳ ಪ್ರಕಾರ ಸೋಂಕಿತನ ಸೀನು ಮತ್ತು ಉಗುಳು 10 ಮೀಟರ್​ಗಳವರೆಗೆ ಸೋಂಕನ್ನು ಹರಡಬಲ್ಲವು. ಹೀಗಾಗಿ, ಮಕ್ಕಳನ್ನು ಆಟವಾಡಲು ಹೊರಗಡೆ ಕಳಿಸದಿರುವುದೇ ಉತ್ತಮ. ಮಾಸ್ಕ್ ಕಡ್ಡಾಯವಾಗಿ ಧರಿಸುವುದನ್ನು ನೋಡಿಕೊಳ್ಳಬೇಕು. ಎರಡಕ್ಕಿಂತ ಜಾಸ್ತ ವಯಸ್ಸಿನ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿರಬೇಕು ಮತ್ತು ಮನೆಗೆ ಯಾರಾದರೂ ಅತಿಥಿಗಳು ಬಂದಾಗಲೂ ಅವರ ಮಾಸ್ಕ್​ ಧರಿಸಿರಬೇಕು. ಆದರೆ, ಮಾಸ್ಕ್​ ಧರಿಸುವುದು ದೈಹಿಕ ಅಂತರ ಕಾಯ್ದುಕೊಳ್ಳವುದಕ್ಕೆ ಪರ್ಯಾಯವಲ್ಲ. ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳವುದರ ಜೊತೆಗೆ ಮಾಸ್ಕ್​ಗಳನ್ನು ಮಕ್ಕಳು ಧರಿಸಿರಬೇಕು. ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಡಬೇಕು. ಮಾಸ್ಕ್ ಮೂಗು ಮತ್ತು ಬಾಯಿಯನ್ನು ಸಂಪೂರ್ಣವಾಗಿ ಕವರ್​ ಮಾಡಿರಬೇಕು ಮತ್ತು ಯಾವುದೇ ಭಾಗದಲ್ಲಿ ಗ್ಯಾಪ್​ ಇರಬಾರದು.

ಮನೆಯಲ್ಲಿ ಯಾರಿಗಾದರೂ ಸೋಂಕು ತಾಕಿದ್ದರೆ ಮಕ್ಕಳು ಮನೆಯಲ್ಲೂ ಮಾಸ್ಕ್​ ಧರಿಸಬೇಕು. ತಮ್ಮ ಕೈಗಳನ್ನು ಸೋಪಿನಿಂದ ಕನಿಷ್ಟ 20 ಸೆಕೆಂಡುಗಳವರೆಗೆ ತೊಳೆಯುವ ಮತ್ತು ಆಗಾಗ ಸ್ಯಾನಿಟೈಸ್ ಮಾಡಿಕೊಳ್ಳುವ ತರಬೇತಿಯನ್ನು ಅವರಿಗೆ ನೀಡಬೇಕು. ಕನಿಷ್ಟ ಶೇಕಡಾ 60 ರಷ್ಟು ಆಲ್ಕೋಹಾಲ್ ಪ್ರಮಾಣ ಇರುವ ಸ್ಯಾನಿಟೈಸರನ್ನು ಮನೆಯಲ್ಲಿ ಇಟ್ಟಿರಬೇಕು.

ಮಕ್ಕಳಿಗೆ ಲಸಿಕೆ ಯಾವಾಗ ಲಭ್ಯವಾಗಲಿದೆ, ಅವರಿಗೂ ಎರಡು ಡೋಸ್ ಬೇಕಾಗುತ್ತವೆಯೇ?

ಈ ವರ್ಷದ ಸೆಪ್ಟಂಬರ್ ಒಳಗೆ 12 ಕ್ಕಿಂತ ಜಾಸ್ತಿ ವಯಸ್ಸಿನ ಮಕ್ಕಳಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ. ಅದಾದ ಸುಮಾರು 6-8 ತಿಂಗಳುಗಳ ನಂತರ 12ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಸಿಗಲಿದೆ. ಹೌದು, ಅವರೂ ಸಹ ಎರಡು ಡೋಸ್ ತೆಗೆದುಕೊಳ್ಳಬೇಕು. ಮೂಗಿನ ಮೂಲಕ ನೀಡಬಹುದಾದ ಲಸಿಕೆಗಳ ಟ್ರಯಲ್ ನಡೆಯುತ್ತಿದೆ. ಇದು ಶ್ವಾಸೋಚ್ವಾಸ ನಾಳಗಳಿಗೆ ಸ್ಥಳೀಯ ರೋಗ ನಿರೋಧಕ ಶಕ್ತಿಯನ್ನು ಒದಗಿಸಿ ವೈರಸ್ ದೇಹವನನ್ನು ಪ್ರವೇಶಿದಂತೆ ತಡೆಯುತ್ತದೆ.

ಮೂರನೇ ಅಲೆ ಮಕ್ಕಳನ್ನು ಜಾಸ್ತಿ ತೊಂದರೆಗೀಡು ಮಾಡಲಿದೆಯೆಂಬ ಮಾತಿದೆ, ಅದು ಯಾಕೆ ಹಾಗೆ?

ಕೊವಿಡ್-19 ವೈರಸ್ ಮಕ್ಕಳನ್ನು ಜಾಸ್ತಿ ಸೋಂಕಿಗೊಳಪಡಿಸುತ್ತದೆ ಎನ್ನುವ ಬಗ್ಗೆ ಖಚಿತವಾದ ಪುರಾವೆಯಿಲ್ಲ. ಮೊದಲ ಅಲೆ ಹಿರಿಯ ನಾಗರಿಕರು ಮತ್ತು ಎರಡನೇ ಅಲೆ ವಯಸ್ಕರ ಮೇಲೆ ಜಾಸ್ತಿ ಪ್ರಭಾವ ಬೀರಿತು. ಈ ಕೆಟೆಗರಿಯಲ್ಲಿ ಬರುವ ಬಹತೇಕ ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಈ ವಯೋಮಾನದವರಿಗೆ ಲಸಿಕೆ ಹಾಕಿಸಿಕೊಳ್ಳುವ ಅವಕಾಶವೂ ಸಿಕ್ಕಿದೆ. ಇನ್ನು ಉಳಿದವರೆಂದರೆ 18ಕ್ಕಿಂತ ಕಡಿಮೆ ವಯಸ್ಸಿನವರು. ಭಾರತದ ಜನಸಂಖ್ಯೆಯ ಶೇಕಡಾ 40 ರಷ್ಟನ್ನು ಈ ಪ್ರಾಯದವರೇ ಪ್ರತಿನಿಧಿಸುವುದರಿಂದ ಅವರಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ.

ಒಂದು ಮಗು ಈಗಾಗಲೇ ಸೋಂಕಿಗೊಳಗಾಗಿ ಚೇತರಿಸಿಕೊಂಡಿದ್ದರೆ, ರೋಗ ನಿರೋಧಕ ಶಕ್ತಿ (ಇಮ್ಯುನಿಟಿ) ಎಷ್ಟು ಸಮಯ ಇರುತ್ತದೆ?

ಕೋವಿಡ್ ಸೋಂಕು ಬಾಧಿಸಿದ ನಂತರ ರೋಗ ನಿರೋಧಕ ಶಕ್ತಿ 6 ತಿಂಗಳುಗಳಿಂದ ದಶಕಗಳವರೆಗೆ ಇರಬಹುದು. ನಿಖರವಾಗಿ ಇಷ್ಟೇ ಅವಧಿವರೆಗೆ ಅನ್ನೋದು ಸಾಬೀತಾಗಿಲ್ಲ.

ಯಾವ ಬಗೆಯ ಆಹಾರ ಮಕ್ಕಳಲ್ಲಿ ಇಮ್ಯುನಿಟಿ ಹೆಚ್ಚಿಸುತ್ತದೆ?

ಸಮತೂಕದ, ಪೌಷ್ಠಿಕ, ಪ್ರೊಟೀನ್ ಅಂಶಗಳೊಂದಿಗೆ ಕಬ್ಬಿಣ, ಎಲ್ಲ ಬಗೆಯ ವಿಟ್​ಮನ್​ಗಳು ಮತ್ತು ಇತರ ಮೈಕ್ರೋನ್ಯೂಟ್ರಿಯೆಂಟ್ಸ್ ಇರುವ ಆಹಾರವನ್ನು ಮಕ್ಕಳಿಗೆ ನೀಡಬೇಕು. ಸರಿಯಾದ ನಿದ್ರೆ, ಸೂಕ್ತವಾದ ಜೀವನಶೈಲಿ ಮತ್ತು ದೈಹಿಕ ಕಸರತ್ತು ಬಹಳ ಮುಖ್ಯ. ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತವೆ.

ಮಕ್ಕಳು ಮನೆಯಲ್ಲೇ ಇದ್ದು ಫಿಟ್​ ಆಗಿರುವುದು ಹೇಗೆ?

ಮಕ್ಕಳು ಚೆನ್ನಾಗಿ ಊಟ ಮಾಡಬೇಕು, ವ್ಯಾಯಾಮ ಮಾಡುತ್ತಾ ಪಾಸಿಟವ್ ಧೋರಣೆಯನ್ನು ಹೊಂದಿರಬೇಕು. ಒಂದು ನಿಯಮಿತ ಶೆಡ್ಯೂಲ್ ಪಾಲಿಸುವುದು ಒಳಿತು. ಈ ಶೆಡ್ಯೂಲ್​ನಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಅವರ ವೈಯಕ್ತಿಕ ಮತ್ತು ಮನೆಗೆಲಸಗಳು ಸೇರಿರಬೇಕು. ಮನೆಗೆಲಸದಲ್ಲಿ ತಂದೆ-ತಾಯಿಗಳಿಗೆ ನೆರವಾಗುವುದು, ಮರ-ಗಿಡಗಳಿಗೆ ನೀರುಣಿಸುವುದು, ಅಣ್ಣ-ತಮ್ಮಂದಿರೊಂದಿಗೆ, ಅಕ್ಕ-ತಂಗಿಯರೊಂದಿಗೆ ಆಟ ಮೊದಲಾದವುಗಳನ್ನು ಅವರು ಮಾಡುತ್ತಿರಬೇಕು. ಮನೆಯಲ್ಲಿ ಉಲ್ಲಾಸಮಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಪೇಂಟಿಂಗ್, ಡ್ಯಾನ್ಸ್, ಪುಸ್ತಕ ಓದುವುದು, ಪದಬಂಧ ಬಿಡಿಸುವುದು ಮಕ್ಕಳು ಮಾಡುವಂತೆ ಪ್ರೋತ್ಸಾಹಿಸಬೇಕು. ಮನೆಯವರೆಲ್ಲ ಮನೆ ಸ್ವಚ್ಛಗೊಳಿಸುವುದರಲ್ಲಿ ಬಹಳ ಸಂತೋಷ ಅಡಗಿದೆ.

ರಾಷ್ಟ್ರೀಯ ಶೆಡ್ಯೂಲ್ ಪ್ರಕಾರ ನಿಯಮಿತವಾಗಿ ಲಸಿಕೆ ಹಾಕಿಸಿಕೊಳ್ಳವುದು ಬಹಳ ಮುಖ್ಯವಾಗಿದೆ. ಇದು ಮಕ್ಕಳಿಗೆ ಸೋಂಕು ತಟ್ಟದಂತೆ ತಡೆಗಟ್ಟುತ್ತದೆ. ಇನ್ನೇನು ಮಾನ್ಸೂನ್ ಸೀಸನ್ ಶುರುವಾಗಲಿರುವದರಿಂದ ಮಕ್ಕಳು ಕಾಯಿಲೆ ಬೀಳದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: Black Fungus Vaccine: ಇದು ಕನ್ನಡಿಗರು ಹೆಮ್ಮೆಪಡುವ ಸುದ್ದಿ; ಬ್ಲ್ಯಾಕ್ ಫಂಗಸ್ ಔಷಧ ಅಭಿವೃದ್ಧಿ ಹಿಂದೆ ಕರಾವಳಿ ಕನ್ನಡಿಗ

Follow us on

Related Stories

Most Read Stories

Click on your DTH Provider to Add TV9 Kannada