ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕುರಿತಾಗಿ ಹೆಚ್ಚಿನ ಗಮನವಹಿಸುವುದು ಮಖ್ಯ. ಅದರಲ್ಲಿಯೂ ಮುಖ್ಯವಾಗಿ ಚಿಕ್ಕ ಮಕ್ಕಳಲ್ಲಿಯೇ ದೃಷ್ಟಿ ದೋಷ ಕಂಡು ಬರುತ್ತಿದ್ದು, ಈ ಕುರಿತಾಗಿ ಹೆಚ್ಚು ಗಮನವಹಿಸಲೇಬೇಕು. ಉತ್ತಮ ಆಹಾರ ವ್ಯವಸ್ಥೆ ಜತೆಗೆ ಕಣ್ಣಿನ ರಕ್ಷಣೆಗೆ ಕೆಲವು ಮಾರ್ಗಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಕಣ್ಣಿಗೆ ಆಯಾಸ, ಒತ್ತಡ ನೀಡಿದಷ್ಟು ದೃಷ್ಟಿ ಹಾನಿಗೆ ಒಳಗಾಗುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯ ರಕ್ಷಣೆಗೆ ಏನೆಲ್ಲಾ ಮಾಡಬಹುದು ಎಂಬುದು ಈ ಕೆಳಗಿನಂತಿದೆ.
ನಿಮ್ಮ ದೈನಂದಿನ ಆಹಾರದಲ್ಲಿ ಸಮತೋಲಿತ ಆಹಾರವನ್ನು ಸೇವಿಸಿ. ವಿಟಮಿನ್ ಸಿ ಮತ್ತು ಇ, ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತವೆ. ಹಾಗಿರುವಾಗ ಪಾಲಾಕ್, ಎಲೆಕೋಸು, ಮೊಟ್ಟೆ, ನಿಂಬೆ, ಕಿತ್ತಳೆ ಜತೆಗೆ ಸಿಟ್ರಸ್ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ನಿಮ್ಮ ದೈಹಿಕ ಆರೋಗ್ಯ ಜತೆಗೆ ಕಣ್ಣಿನ ಆರೋಗ್ಯ ಸುಧಾರಣೆಯಾಗುತ್ತದೆ. ಯೋಗ, ಧ್ಯಾನದ ಮೂಲಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಜತೆಗೆ ಮಧುಮೇಹದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ. ಬಿಸಿಲಿನಲ್ಲಿ ಹೊರಹೋಗುವಾಗ ಮತ್ತು ಧೂಳಿನ ಕಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಕನ್ನಡಕವನ್ನು ಬಳಸಿ. ಇವು ನಿಮ್ಮ ಸೂಕ್ಷ್ಮ ಕಣ್ಣುಗಳಿಗೆ ರಕ್ಷಣೆಯನ್ನು ನೀಡುತ್ತವೆ.
ಸರಿಯಾದ ನಿದ್ರೆ ಪಡೆಯಿರಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಣ್ಣಿನ ಒತ್ತಡ ಸಮಸ್ಯೆ ಕಾಣಿಸಿಕೊಳ್ಳಲು ಮುಖ್ಯವಾಗಿ ರಾತ್ರಿ ಒಳ್ಳೆಯ ನಿದ್ರೆ ಇಲ್ಲದಿರುವುದು ಕಾರಣ. ಇದು ಕಣ್ಣಿನ ಉರಿ, ತುರಿಕೆಗೆ ಕಾರಣವಾಗುತ್ತದೆ. ಹಾಗಾಗಿ ಒಳ್ಳೆಯ ನಿದ್ರೆಯ ಜತೆಗೆ ಕಣ್ಣಿನ ಆರೋಗ್ಯವನ್ನು ಸುಧಾರಿಸಿಕೊಳ್ಳಿ.
ಧೂಮಪಾನದಿಂದ ದೂರವಿರಿ. ಧೂಮಪಾನ ಮತ್ತು ಮದ್ಯಪಾನ ಅನೇಕ ಆರೋಗ್ಯ ಸಮಸ್ಯೆಗಳ ಜತೆಗೆ ಕಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಆರೋಗ್ಯವನ್ನು ಹಾಳು ಮಾಡುವ ಧೂಮಪಾನ ಮತ್ತು ಮದ್ಯಪಾನದಿಂದ ಆದಷ್ಟು ದೂರವಿರುವುದು ಒಳ್ಳೆಯದು. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಕಾರಣಕ್ಕೂ ಸಹ ಕಣ್ಣಿನ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ.
ಇದನ್ನೂ ಓದಿ:
Health Tips: ಬೆಳಿಗ್ಗೆ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ
Health Tips: ಪ್ರತಿನಿತ್ಯ ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ!