
ಇಂದಿನ ಬಹುತೇಕ ಮನೆಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಸ್ಟೋವ್ (Gas Stove) ಬಳಸಲಾಗುತ್ತದೆ. ಆದರೆ ಮನೆಯ ಒಳಗಿನ ಗಾಳಿಯ ಗುಣಮಟ್ಟವೂ ಆರೋಗ್ಯಕ್ಕೆ ಬಹಳ ಮುಖ್ಯ ಎನ್ನಲಾಗುತ್ತದೆ. ವಿಶೇಷವಾಗಿ ಅಡುಗೆ ಮನೆಯಲ್ಲಿ ಉಂಟಾಗುವ ಹೊಗೆ ಮತ್ತು ಅನಿಲಗಳು ಮನೆಯ ಗಾಳಿಯನ್ನು ದುಷಿತಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ (EPA) ಹೇಳಿರುವ ಪ್ರಕಾರ, ಗ್ಯಾಸ್ ಸ್ಟೋವ್ ಬಳಸುವ ವೇಳೆ ಕೆಲವು ಹಾನಿಕಾರಕ ಅನಿಲಗಳು ಮತ್ತು ಸೂಕ್ಷ್ಮ ಕಣಗಳು ಹೊರಬರುತ್ತವೆ. ಇದರಲ್ಲಿ ನೈಟ್ರೋಜನ್ ಡೈಆಕ್ಸೈಡ್ (NO₂), ಕಾರ್ಬನ್ ಮೋನಾಕ್ಸೈಡ್ (CO) ಮತ್ತು PM2.5 ಮಾದರಿಯ ಸೂಕ್ಷ್ಮ ಮಾಲಿನ್ಯ ಕಣಗಳು ಸೇರಿವೆ. ಇವು ಮನೆಯ ಒಳಗಿನ ಗಾಳಿಯ ಗುಣಮಟ್ಟವನ್ನು ಹಾಳು ಮಾಡಬಹುದು. ಹಾಗಾದರೆ ಮನೆಯೊಳಗಿನ ಗಾಳಿ ಹರಿವನ್ನು ಸ್ವಚ್ಛವಾಗಿಡಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಡುಗೆ ಮನೆಯಲ್ಲಿ ಸರಿಯಾದ ಗಾಳಿಯ ಹರಿವು ಇಲ್ಲದಿದ್ದರೆ ಈ ಮಾಲಿನ್ಯಕಾರಿ ಕಣಗಳು ಮನೆಯೊಳಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಮಕ್ಕಳು, ವಯೋವೃದ್ಧರು ಮತ್ತು ಈಗಾಗಲೇ ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ಇದು ಹೆಚ್ಚು ತೊಂದರೆ ಉಂಟುಮಾಡಬಹುದು. ಗ್ಯಾಸ್ ಸ್ಟೋವ್‌ನಿಂದ ಹೊರಬರುವ ಮಾಲಿನ್ಯಕಾರಕಗಳು ಉಸಿರಾಟದ ತೊಂದರೆ, ಗಂಟಲಿನ ಕೆರಡು, ಕಣ್ಣಿನ ಉರಿಯೂತ ಮತ್ತು ಅಲರ್ಜಿಗೆ ಕಾರಣವಾಗಬಹುದು. ಕೆಲವರಲ್ಲಿ ಅಸ್ತಮಾ ಸಮಸ್ಯೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ. ದೀರ್ಘಕಾಲ ಇಂತಹ ವಾತಾವರಣದಲ್ಲಿ ಇರುವುದರಿಂದ ಶ್ವಾಸಕೋಶದ ಆರೋಗ್ಯದ ಮೇಲೂ ಪರಿಣಾಮ ಬೀಳಬಹುದು.
ಇದನ್ನೂ ಓದಿ: GBA 1KmChallenge: ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್; ಮೊದಲು ಫುಟ್‌ಪಾತ್ ಸರಿ ಮಾಡಿ ಎಂದ ಜನ!
ಅಡುಗೆ ಮಾಡುವಾಗ ಮನೆಯ ಕಿಟಕಿಗಳನ್ನು ತೆರೆದಿಡುವುದು ಬಹಳ ಉತ್ತಮ. ಚಿಮ್ನಿ ಅಥವಾ ಎಗ್ಜಾಸ್ಟ್ ಫ್ಯಾನ್ ಬಳಸುವುದರಿಂದ ಹೊಗೆ ಮತ್ತು ಅನಿಲಗಳು ಹೊರಗೆ ಹೋಗಲು ಸಹಾಯವಾಗುತ್ತದೆ. ಗ್ಯಾಸ್ ಸ್ಟೋವ್ ಅನ್ನು ನಿಯಮಿತವಾಗಿ ಪರಿಶೀಲಿಸಿ ಸ್ವಚ್ಛವಾಗಿಡುವುದು ಕೂಡ ಮುಖ್ಯ. ಇದಲ್ಲದೆ, ಮನೆಯ ಒಳಗೆ ಮತ್ತು ಹೊರಗೆ ಗಾಳಿಯ ಹರಿವು ಇರಲು ಆದಷ್ಟು ಗಿಡಗಳನ್ನು ಬೆಳೆಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ