AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಹೃದಯ ದಿನ: ‘ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ’ಯಿಂದ 12,500ಕ್ಕೂ ಹೆಚ್ಚು ಜೀವ ರಕ್ಷಣೆ; ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ

ಹೃದಯಾಘಾತದ 'ಗೋಲ್ಡನ್ ಅವರ್' ಮಹತ್ವವನ್ನು ಅರಿಯಿರಿ. ಎದೆನೋವು, ಉಸಿರಾಟದ ತೊಂದರೆ, ಬೆವರುವುದು ಕಂಡುಬಂದರೆ 5 ಗಂಟೆಯೊಳಗೆ ಆಸ್ಪತ್ರೆ ತಲುಪಬೇಕು. ಆರೋಗ್ಯಕರ ಜೀವನಶೈಲಿ, ಮಧುಮೇಹ, ರಕ್ತದೊತ್ತಡ ನಿಯಂತ್ರಣ ಅತಿ ಮುಖ್ಯ. ಸಾರ್ವಜನಿಕ ಸ್ಥಳಗಳಲ್ಲಿ AED ಅಳವಡಿಕೆ ಹಾಗೂ CPR ತರಬೇತಿ ಪಡೆಯುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಬಹುದು. ಜಾಗೃತಿ ಮತ್ತು ಸಕಾಲಿಕ ಕ್ರಮಗಳು ಹೃದಯ ರಕ್ಷಣೆಗೆ ಅಡಿಪಾಯ.

ವಿಶ್ವ ಹೃದಯ ದಿನ: 'ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ'ಯಿಂದ 12,500ಕ್ಕೂ ಹೆಚ್ಚು ಜೀವ ರಕ್ಷಣೆ; ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ
ಹೃದಯ ಜ್ಯೋತಿ ಯೋಜನೆ
ವಿನಯ್​ ಕಾಶಪ್ಪನವರ್​
| Edited By: |

Updated on: Sep 29, 2026 | 10:02 PM

Share

ಬೆಂಗಳೂರು, ಸೆ.29: ಇಂದು (ಸೆ.29) ವಿಶ್ವ ಹೃದಯ ದಿನದ (World Heart Day) ಶುಭ ಸಂದರ್ಭದಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯದ ಜನತೆಗೆ ಅತ್ಯಂತ ಮಹತ್ವದ ಮತ್ತು ಆಶಾದಾಯಕರ ಸುದ್ದಿಯೊಂದನ್ನು ಹಂಚಿಕೊಂಡಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ‘ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ’ಯ ಮೂಲಕ ಇದುವರೆಗೆ 12,500ಕ್ಕೂ ಹೆಚ್ಚು ಜನರ ಜೀವ ಉಳಿಸಲಾಗಿದೆ. ರಾಜ್ಯದಲ್ಲಿ ತೀವ್ರ ಸ್ವರೂಪದ ಹೃದಯಾಘಾತ ಪ್ರಕರಣಗಳಿಗೆ ತಕ್ಷಣವೇ ಸೂಕ್ತ ವೈದ್ಯಕೀಯ ನೆರವು ಒದಗಿಸಲು ಜಾರಿಗೆ ತಂದ ‘ಹಬ್ ಅಂಡ್ ಸ್ಪೋಕ್’ ಮಾದರಿಯು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ.

ರಾಜ್ಯದ 31 ಜಿಲ್ಲೆಗಳಲ್ಲಿ 86 ‘ಸ್ಪೋಕ್’ (Spoke) ಆಸ್ಪತ್ರೆಗಳು ಹಾಗೂ 10 ‘ಹಬ್’ (Hub) ಆಸ್ಪತ್ರೆಗಳ ಬಲವಾದ ನೆಟ್‌ವರ್ಕ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಯೋಜನೆಯಡಿ ಇದುವರೆಗೆ ಒಟ್ಟು 14,94,578 ಇಸಿಜಿ (ECG) ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇಸಿಜಿ ಪರೀಕ್ಷೆಗಳ ಮೂಲಕ 22,579 ತೀವ್ರ ಹೃದಯಾಘಾತ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲಾಗಿದೆ. ಈ ಯೋಜನೆಯಿಂದ 12,500ಕ್ಕೂ ಹೆಚ್ಚು ಜನರ ಜೀವ ರಕ್ಷಿಸಲ್ಪಟ್ಟಿದ್ದು, ಇದರಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,386 ಯುವಕರು ಸೇರಿದ್ದಾರೆ ಎಂಬುದು ಗಮನಾರ್ಹ.

ಉಚಿತ ಚುಚ್ಚುಮದ್ದು ಹಾಗೂ ವೇಗದ ಚಿಕಿತ್ಸೆ

ಹೃದಯಾಘಾತವಾದಾಗ ಪ್ರತಿ ನಿಮಿಷವೂ ಅತ್ಯಂತ ನಿರ್ಣಾಯಕ. ಸಮಯ ವ್ಯರ್ಥವಾಗದಂತೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ತಾಂತ್ರಿಕತೆಯನ್ನು ಬಳಸಿಕೊಂಡು ಚಿಕಿತ್ಸಾ ಸಮಯವನ್ನು ಗಣನೀಯವಾಗಿ ತಗ್ಗಿಸಿದೆ. ಹೃದಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಕರಗಿಸುವ ದುಬಾರಿ Tenecteplase ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ. ಮಾರ್ಚ್ 2024ರಿಂದ ಇದುವರೆಗೆ 2,010 ರೋಗಿಗಳಿಗೆ ಈ ಉಚಿತ ಚಿಕಿತ್ಸೆ ನೀಡಲಾಗಿದೆ.

ಆಸ್ಪತ್ರೆಗೆ ಬಂದ ತಕ್ಷಣ ಚುಚ್ಚುಮದ್ದು ನೀಡುವ ಸಮಯವನ್ನು 34.5 ನಿಮಿಷಗಳಿಂದ 16.6 ನಿಮಿಷಕ್ಕೆ ತಗ್ಗಿಸಲಾಗಿದೆ. ತುರ್ತು ಆಂಜಿಯೋಪ್ಲಾಸ್ಟಿ ಮಾಡುವ ಸಮಯವನ್ನು 170 ನಿಮಿಷಗಳಿಂದ ಕೇವಲ 57.5 ನಿಮಿಷಕ್ಕೆ ಇಳಿಸಿ ಜೀವ ರಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಉಪ್ಪು ಸೇವನೆ ಕುರಿತು ಖಾದರ್ ಮಹತ್ವದ ಕರೆ: ಜನ ನಿಯಮ ಪಾಲಿಸಬೇಕೆಂದ ಆರೋಗ್ಯ ಸಚಿವ

ವಿಶ್ವ ಹೃದಯ ದಿನದ ಹಿನ್ನೆಲೆ ಆರೋಗ್ಯ ಇಲಾಖೆಯ ಮುಖ್ಯ ಸಲಹೆಗಳು:

ಹೃದಯಾಘಾತದ ಸಂದರ್ಭದಲ್ಲಿ ‘ಸಮಯವೇ ಹೃದಯ’ (Time is Heart). ವಿಳಂಬವಾದಷ್ಟು ಹೃದಯದ ಸ್ನಾಯುಗಳು ಶಾಶ್ವತವಾಗಿ ಹಾನಿಗೊಳಗಾಗುತ್ತವೆ. ಆದ್ದರಿಂದ ಸಾರ್ವಜನಿಕರು ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಬೇಕು.

‘ಗೋಲ್ಡನ್ ಅವರ್’ ಜಾಗೃತಿ: ಹೃದಯಾಘಾತದ ಲಕ್ಷಣಗಳು (ಎದೆನೋವು, ಉಸಿರಾಟದ ತೊಂದರೆ, ಬೆವರುವುದು) ಕಂಡುಬಂದ 5 ಗಂಟೆಯೊಳಗೆ (Golden Hour) ಆಸ್ಪತ್ರೆ ತಲುಪಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಆರೋಗ್ಯಕರ ಜೀವನಶೈಲಿ: ಹೆಚ್ಚು ಉಪ್ಪು ಸೇವನೆ, ಧೂಮಪಾನ, ಮದ್ಯಪಾನ ಹಾಗೂ ನಿರಂತರ ಮಾನಸಿಕ ಒತ್ತಡದಿಂದ ದೂರವಿರಬೇಕು.

ನಿಯಮಿತ ತಪಾಸಣೆ: ಮಧುಮೇಹ , ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ತೊಂದರೆ ಇರುವವರು ಕಾಲಕಾಲಕ್ಕೆ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ‘ಎಇಡಿ’ : ಶಾಲೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಬೃಹತ್ ಕಚೇರಿಗಳಲ್ಲಿ ತುರ್ತು ಹೃದಯ ಚಿಕಿತ್ಸೆಗೆ ಅಗತ್ಯವಿರುವ ‘ಆಟೋಮೇಟೆಡ್ ಎಕ್ಸ್‌ಟರ್ನಲ್ ಡಿಫಿಬ್ರಿಲೇಟರ್’ ಯಂತ್ರಗಳನ್ನು ಅಳವಡಿಸಲು ಸಲಹೆ ನೀಡಲಾಗಿದೆ.

ಸಿಪಿಆರ್ ತರಬೇತಿ: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ತುರ್ತು ಪ್ರಥಮ ಚಿಕಿತ್ಸೆಯಾದ ‘ಸಿಪಿಆರ್’ ಮಾಡುವ ಕುರಿತು ಅರಿವು ಮೂಡಿಸಿಕೊಳ್ಳಲು ಆಹ್ವಾನಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More