Aam Panna: ಕಚ್ಚಾ ಮಾವಿನ ಪಾನೀಯದಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ನೋಡಿ; ಮಾಡುವ ವಿಧಾನ ಇಲ್ಲಿದೆ
ಮಾವಿನ ಪಾನೀಯದಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಮ್ಮು ಮತ್ತು ಶೀತವನ್ನೂ ನಿಯಂತ್ರಿಸುತ್ತದೆ.
ಬೇಸಿಗೆ ಬಂತೆಂದರೆ, ಮಾವಿನ ಸೀಸನ್ ಕೂಡ ಬಂದಂತೆ. ಲೆಕ್ಕಕ್ಕೆ ಸಿಗದಷ್ಟು ವರ್ಗದ ಮಾವಿನ ಕಾಯಿ, ಹಣ್ಣುಗಳು ಈಗ ಸಿಗುತ್ತವೆ. ಭಾರತದಲ್ಲಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಈ ಹಣ್ಣು ಚಿರಪರಿಚಿತ. ಮಾವಿನ ಹಣ್ಣು ಯಾರಿಗೆ ಪ್ರಿಯವಲ್ಲ ಹೇಳಿ? ಬರೀ ಹಣ್ಣಷ್ಟೇ ಅಲ್ಲ, ಭಾರತದಲ್ಲಿ ಅದರ ಕಾಯಿಯಿಂದಲೂ ವಿವಿಧ ತಿನಿಸು ತಯಾರಿಸಲಾಗುತ್ತದೆ. ಮಾವಿನ ಹಣ್ಣನ್ನು ಹಣ್ಣುಗಳ ರಾಜನೆಂದೇ ಕರೆಯಲಾಗುತ್ತದೆ. ಕಾಯಿ ಹುಳಿಯಿದ್ದರೂ, ಹಣ್ಣು ಬಲು ಸಿಹಿ. ಆದರೆ ನೆನಪಿರಲಿ, ಹಣ್ಣಿನಲ್ಲಿ ಸಿಹಿ ಅಂಶ ಮಾತ್ರವಲ್ಲ ಹೇರಳವಾದ ಪೋಷಕಾಂಶವೂ ಇರುತ್ತದೆ. ಈ ಮಾವು ಪುಟ್ಟ ಮಿಡಿಯಿದ್ದಾಗಿನಿಂದ (ಬೆಳೆಯುವ ಹಂತದ ಕಾಯಿ) ಹಣ್ಣಿನವರೆಗೆ ವಿವಿಧ ರೀತಿಯ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಮಾವಿನ ಸೀಸನ್ನಲ್ಲಿ ಅದರ ವಿವಿಧ ರಿಸಿಪಿಗಳು ತಯಾರಾಗುತ್ತವೆ. ಅದಾಗದೆ ಇದ್ದರೆ ಹಾಗೇ ಕೂಡ ತಿನ್ನುತ್ತಾರೆ. ಪೂರ್ತಿ ಮಾವಿನ ಸೀಸನ್ ಮುಗಿಯುವವರೆಗೂ ಅದರದ್ದೇ ಕಾರುಬಾರು.
ಈಗ ನಾವಿಲ್ಲಿ ಮಾವಿನ ಪಾನೀಯದ ಬಗ್ಗೆ ಹೇಳುತ್ತಿದ್ದೇವೆ. ಬೇಸಿಗೆ ಬಂದರೆ ಸಾಕು ಬಿಸಿಲಿನ ಉಷ್ಣತೆಯನ್ನು ತಡೆದುಕೊಳ್ಳಲು ಪರದಾಡಬೇಕು. ತಂಪಾಗಿ ಏನಾದರೂ ಕುಡಿದರೆ ಸಾಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಬಿರುಬೇಸಿಗೆಯಿದ್ದಾಗ ದೇಹದಲ್ಲಿ ಡಿಹೈಡ್ರೇಶನ್ ಬೇಗನೇ ಆಗುತ್ತದೆ. ಅದನ್ನು ತಡೆಯಲು ವಿವಿಧ ಜ್ಯೂಸ್, ಪಾನಕಗಳು, ಎಳೆನೀರಿನಂಥ ಪಾನೀಯಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಅಂಥ ಪಾನೀಯಗಳ ಸಾಲಿಗೆ ನೀವು ಮಾವಿನ ಪಾನಕ ಅಥವಾ ಪನ್ನಾವನ್ನೂ ಸೇರಿಸಬಹುದು. ಇದು ಸ್ವಲ್ಪ ಉಪ್ಪು, ಸಿಹಿ, ಪಾನೀಯವಾಗಿದ್ದು, ನಾಲಿಗೆಗೆ ಹಿತಕೊಡುತ್ತದೆ. ಆರೋಗ್ಯಕ್ಕೂ ಒಳ್ಳೆಯದು.
ಮಾಡುವುದು ಹೇಗೆ?
ಮಾವಿನ ಪಾನೀಯವನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು. ಇದು ಮಾವಿನ ಕಾಯಿಯಿಂದ ಮಾಡುವ ಒಂದು ಪಾನಕ. ಇಲ್ಲಿದೆ ನೋಡಿ ವಿಧಾನ.
1. ಮೊದಲು ಎರಡು ಮಾವಿನ ಕಾಯಿಯನ್ನು ತೆಗೆದುಕೊಂಡು ಅದನ್ನು ಸಿಪ್ಪೆ ತೆಗೆದುಕೊಳ್ಳಿ (ಎಷ್ಟು ಜನರು ಇದ್ದಾರೆ ಎಂಬುದರ ಆಧಾರದ ಮೇಲೆ ಕಾಯಿಯನ್ನು ತೆಗೆದುಕೊಳ್ಳಬೇಕು)
2. ಅದನ್ನು ಚೊಕ್ಕವಾಗಿ ತೊಳೆದು, ಅರ್ಧಕಪ್ ನೀರು ಹಾಕಿ ಕುಕ್ಕರ್ನಲ್ಲಿ ಬೇಯಿಸಿ (ಮೀಡಿಯಂ ಫ್ಲೇಮ್ನಲ್ಲಿಟ್ಟು 3-4 ಸೀಟಿ ಹೊಡೆಸಬೇಕು.)
3. ಅದು ನೀರು ಇಂಗಲು ಹಾಗೇ ಬಿಡಬೇಕು. ಪೂರ್ತಿ ತಣ್ಣಗಾಗುವವರೆಗೆ ಏನೂ ಮಾಡಲು ಹೋಗಬಾರದು. ಪೂರ್ತಿ ತಣ್ಣಗಾದ ಬಳಿಕ ಅದರಲ್ಲಿರುವ ಗೊರಟೆ (ಕಾಯಿ ತುಂಬ ಹಸಿಯಿದ್ದಾಗ ಗೊರಟೆ ಗಟ್ಟಿಯಾಗಿರುವುದಿಲ್ಲ.)ಯನ್ನು ತೆಗೆದು ತಿರುಳನ್ನು ಸ್ಮ್ಯಾಶ್ ಮಾಡಿಕೊಳ್ಳಿ
4. ಇದನ್ನು ನೀರು ಹಾಕದೆ ಮಿಕ್ಸಿಯಲ್ಲಿ ಬೀಸಿಕೊಳ್ಳಿ. ಇನ್ನೊಂದು ಕಡೆ ನೀವು ಸರ್ವ್ ಮಾಡಬೇಕಾದ ಗ್ಲಾಸ್ನಲ್ಲಿ ಒಂದೆರಡು ಐಸ್ಕ್ಯೂಬ್ ಹಾಕಿಕೊಂಡು, ಅದಕ್ಕೆ ಹುರಿದ ಜೀರಿಗೆ ಪುಡಿ ಮುಕ್ಕಾಲು ಸ್ಪೂನ್, ಚಿಟಿಕೆ ಕಪ್ಪು ಉಪ್ಪು ಹಾಕಿಕೊಂಡಿರಿ. ಸ್ವಲ್ಪ ಸಕ್ಕರೆ ಆ್ಯಡ್ ಮಾಡಿಕೊಳ್ಳಿ. ಬಳಿಕ ಬೀಸಿಕೊಂಡ ಮಾವಿನ ತಿರುಳನ್ನು ಮೂರು ಟೇಬಲ್ ಸ್ಪೂನ್ಗಳನ್ನು ಅದಕ್ಕೆ ಹಾಕಿ. ನಂತರ ನೀರು ಹಾಕಿ ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ ಕುಡಿಯಿರಿ. ನಿಮಗೆ ಬೇಕಾದರೆ ಕೋಲ್ಡ್ ನೀರನ್ನೂ ಹಾಕಿಕೊಳ್ಳಬಹುದು. ಫ್ಲೆವರ್ಗೆ
ಆರೋಗ್ಯ ಅನುಕೂಲವೇನು?
1. ದೇಹವನ್ನು ತಂಪಾಗಿರಿಸುತ್ತದೆ
ಬೇಸಿಗೆಯಲ್ಲಿ ದೇಹ ಡಿಹೈಡ್ರೇಟ್ ಆಗುವುದು ಸಾಮಾನ್ಯ. ಅದನ್ನು ಈ ಪಾನೀಯ ತಪ್ಪಿಸುತ್ತದೆ. ಅಷ್ಟೇ ಅಲ್ಲ ದೇಹವನ್ನು ತಂಪಾಗಿ ಇರಿಸುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ಸೋಡಿಯಂ ಕ್ಲೋರೈಡ್ ಮತ್ತು ಕಬ್ಬಿಣದ ಅಂಶ ಕಡಿಮೆಯಾಗುವುದನ್ನು ತಪ್ಪಿಸುತ್ತದೆ.
2. ಜೀರ್ಣಕ್ರಿಯೆ ಸರಾಗ ಮಾಡುತ್ತದೆ
ಬೇಸಿಗೆಯಲ್ಲಿ ಇದೊಂದು ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತದೆ. ಗಟ್ಟಿ ಪದಾರ್ಥಗಳನ್ನು ತಿಂದರೆ ಹೊಟ್ಟೆ ಉಬ್ಬರಿಸುವುದು, ಅಜೀರ್ಣ ಉಂಟಾಗುತ್ತದೆ. ಆದರೆ ಈ ಕಚ್ಚಾ ಮಾವಿನ ಪಾನೀಯದಲ್ಲಿ ನಾರಿನ ಅಂಶ ಸಿಕ್ಕಾಪಟೆ ಇರುತ್ತದೆ. ಅಷ್ಟೇ ಅಲ್ಲ ಖನಿಜಾಂಶಗಳೂ ಹೇರಳವಾಗಿರುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಆ್ಯಸಿಡಿಟಿ, ಮಲಬದ್ಧತೆ, ವಾಕರಿಕೆ, ಅಜೀರ್ಣತೆಯಂತ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಒಟ್ಟಾರೆ ಕರುಳಿನ ಆರೋಗ್ಯಕ್ಕೆ ಇದು ಅತ್ಯುತ್ತಮ ಮದ್ದು. ಈ ಪಾನೀಯ ಪಿತ್ತರಸ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಈ ಮೂಲಕ ಲಿವರ್ ಕೆಲಸ ಸುಗಮವಾಗುವಂತೆ ಮಾಡುತ್ತದೆ.
3. ರೋಗ ನಿರೋಧಕ ಶಕ್ತಿ ಹೆಚ್ಚಳ
ಮಾವಿನ ಪಾನೀಯದಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಮ್ಮು ಮತ್ತು ಶೀತವನ್ನೂ ನಿಯಂತ್ರಿಸುತ್ತದೆ. ಇದರಲ್ಲಿ ವಿಟಮಿನ್ ಬಿ3 ಇರುವದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ.
ಇದನ್ನೂ ಓದಿ: ಬೆಳಗಾವಿ ಬಿಜೆಪಿ ಒಳ ಜಗಳ ಶಮನಕ್ಕೆ ಮುಂದಾದ ಬಿಎಸ್ ಯಡಿಯೂರಪ್ಪ; ಎರಡೂ ಬಣಗಳ ಜೊತೆ ಸಭೆಗೆ ಸಿದ್ಧತೆ
Published On - 8:46 am, Tue, 12 April 22