Health & Fitness Tips: ಈ ರೀತಿಯ ವ್ಯಾಯಾಮ ಗರ್ಭಪಾತಕ್ಕೆ ಕಾರಣವಾಗಬಹುದು ಎಚ್ಚರ!
ಹಲವು ಬಾರಿ ಗರ್ಭಪಾತವಾಗಿದ್ದಲ್ಲಿ ಅಥವಾ ಪ್ರಸ್ತುತ ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಲಕ್ಷಣವನ್ನು ಹೊಂದಿರುವವರು ತಮ್ಮ ಒಂಬತ್ತು ತಿಂಗಳ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಮಾಡುವ ಕೆಲವು ವ್ಯಾಯಾಮಗಳು ಗರ್ಭಪಾತಕ್ಕೆ ಎಡೆಮಾಡಿಕೊಡಬಹುದು. ಹಾಗಾಗಿಯೇ ಗರ್ಭಪಾತವನ್ನು ತಪ್ಪಿಸಲು ಹೆಚ್ಚಿನ ಮಹಿಳೆಯರು ಗರ್ಭಧಾರಣೆಯ ಮೊದಲ ಹನ್ನೆರಡು ವಾರಗಳಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸುತ್ತಾರೆ. ನೀವು ಯಾವ ರೀತಿಯ ಚಟುವಟಿಕೆಗಳನ್ನು ಮಾಡಬಹುದು ಎಂಬುದರ ಕುರಿತು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ.
ಗರ್ಭಧಾರಣೆ ಎನ್ನುವುದು ದಾಂಪತ್ಯ ಜೀವನದ ಸುಂದರವಾದ ಘಟ್ಟ. ಈ ಸಮಯದಲ್ಲಿ ತಾಯಿ ಮತ್ತು ಮಗುವಿನ ಸುರಕ್ಷತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಕೂಡ ಅತ್ಯಗತ್ಯವಾಗಿರುತ್ತದೆ. ಆದರೆ ಸದಾ ಕುಳಿತುಕೊಂಡೇ ಇರುವುದು ಒಳ್ಳೆಯದಲ್ಲ. ಗರ್ಭಧಾರಣೆಯು ಸರಾಗವಾಗಲು ಸ್ವಲ್ಪ ವ್ಯಾಯಾಮ ಮಾಡಬೇಕು. ತಜ್ಞರು ಹೇಳುವ ಪ್ರಕಾರ ಗರ್ಭಿಣಿಯಾಗಿದ್ದಾಗ ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ಸುರಕ್ಷಿತವಾಗಿ ವ್ಯಾಯಾಮ ಮಾಡುವುದರಿಂದ ಬೆನ್ನು ನೋವು, ಕಾಲುಗಳು ಊದಿಕೊಳ್ಳುವುದು ಸೇರಿದಂತೆ ರಾತ್ರಿಯಲ್ಲಿ ಆರಾಮವಾಗಿ ಮಲಗಲು ಸಹಾಯ ಮಾಡುತ್ತದೆ.
ಆದರೆ, ಈ ಮೊದಲು ಹಲವು ಬಾರಿ ಗರ್ಭಪಾತವಾಗಿದ್ದಲ್ಲಿ ಅಥವಾ ಪ್ರಸ್ತುತ ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಲಕ್ಷಣವನ್ನು ಹೊಂದಿರುವವರು ತಮ್ಮ ಒಂಬತ್ತು ತಿಂಗಳ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಮಾಡುವ ಕೆಲವು ವ್ಯಾಯಾಮಗಳು ಗರ್ಭಪಾತಕ್ಕೆ ಎಡೆಮಾಡಿಕೊಡಬಹುದು. ಹಾಗಾಗಿಯೇ ಗರ್ಭಪಾತವನ್ನು ತಪ್ಪಿಸಲು ಹೆಚ್ಚಿನ ಮಹಿಳೆಯರು ಗರ್ಭಧಾರಣೆಯ ಮೊದಲ ಹನ್ನೆರಡು ವಾರಗಳಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸುತ್ತಾರೆ. ನೀವು ಯಾವ ರೀತಿಯ ಚಟುವಟಿಕೆಗಳನ್ನು ಮಾಡಬಹುದು ಎಂಬುದರ ಕುರಿತು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ.
ಮತ್ತಷ್ಟು ಓದಿ:12 ವರ್ಷದ ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದ ಕೇರಳ ಹೈಕೋರ್ಟ್: ವರದಿ
ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದಾದ ವ್ಯಾಯಾಮಗಳು;
ಅತಿಯಾದ ಭಾರ ಎತ್ತುವುದು; ಗರ್ಭಾವಸ್ಥೆಯಲ್ಲಿ ಅತಿಯಾದ ಭಾರ ಎತ್ತುವುದು ಅಪಾಯ ತರಬಹುದು. ಈ ರೀತಿ ಮಾಡುವುದರಿಂದ ಕಿಬ್ಬೊಟ್ಟೆಯ ಒತ್ತಡ ಹೆಚ್ಚುತ್ತದೆ. ಜೊತೆಗೆ ಭಾರ ಎತ್ತುವುದು ಗರ್ಭಪಾತ ಮತ್ತು ಅವಧಿಪೂರ್ವ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಅಪಾಯಗಳನ್ನು ಕಡಿಮೆ ಮಾಡಲು 10 ಕಿ. ಗ್ರಾಂ. ಗಳಿಗಿಂತ ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ.
ಗರ್ಭಾಶಯದ ಮೇಲೆ ಒತ್ತಡ ತರುವ ಏರೋಬಿಕ್ಸ್; ಓಟ, ಜಿಗಿತ, ಅಥವಾ ತೀವ್ರವಾದ ಕಾರ್ಡಿಯೋ ಸೆಷನ್ ಗಳಂತಹ ಏರೋಬಿಕ್ಸ್, ಗರ್ಭಾಶಯ ಮತ್ತು ಸ್ನಾಯುಗಳ ಮೇಲೆ ಅನಗತ್ಯ ಒತ್ತಡವನ್ನು ಉಂಟು ಮಾಡುತ್ತದೆ, ಅಲ್ಲದೆ ಇದು ಗರ್ಭಪಾತಕ್ಕೆ ಕಾರಣವಾಗಬಹುದು, ಹಾಗಾಗಿ ಮೊದಲ ತ್ರೈಮಾಸಿಕದಲ್ಲಿ ವೈದ್ಯರ ಸಲಹೆ ತೆಗೆದುಕೊಂಡು ಈಜು ಅಥವಾ ಪ್ರಸವಪೂರ್ವ ಯೋಗಗಳನ್ನು ಅನುಸರಿಸಬಹುದು.
ನೇರ ಆಘಾತ ನೀಡುವ ಕ್ರೀಡೆಗಳು; ಬ್ಯಾಸ್ಕೆಟ್ ಬಾಲ್, ಕ್ರಿಕೆಟ್ ಮತ್ತು ಬಾಕ್ಸಿಂಗ್ ನಂತಹ ಕ್ರೀಡೆಗಳು ಹೊಟ್ಟೆಗೆ ನೇರ ಆಘಾತ ನೀಡಬಹುದು, ಇದು ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಕಾರಕವಾಗಿದೆ. ಅಮೇರಿಕನ್ ಕಾಲೇಜ್ ಆಫ್ ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ, ಈ ರೀತಿ ಕ್ರೀಡೆಗಳು ಗರ್ಭಧಾರಣೆಯ ಆರಂಭಿಕ ಮತ್ತು ಮಧ್ಯ ಹಂತಗಳಲ್ಲಿ ಗರ್ಭಪಾತಕ್ಕೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಗರ್ಭಿಣಿಯರು ಇಂತಹ ಅಪಾಯವಿರುವ ಚಟುವಟಿಕೆಗಳನ್ನು ತಪ್ಪಿಸಬೇಕು.
ಗರ್ಭಿಣಿಯರು ವಾಕಿಂಗ್ ಅಥವಾ ಲಘು ಸ್ಟ್ರೆಚಿಂಗ್ ನಂತಹ ವ್ಯಾಯಾಮಗಳನ್ನು ಮಾಡಬಹುದು. ಯೋಗ ಮಾಡುವವರು ಆದಷ್ಟು ತಂಪಾದ, ಉತ್ತಮ ಗಾಳಿಯಾಡುವ ಕೋಣೆಯಲ್ಲಿ ಅಭ್ಯಾಸ ಮಾಡುವುದು ಸುರಕ್ಷಿತವಾಗಿದೆ. ಮೊದಲ ಮತ್ತು ಮೂರನೇ ತಿಂಗಳಲ್ಲಿ ಹೆಚ್ಚು ಆಯಾಸವನ್ನು ಕಾಣುವುದರಿಂದ ಅಂತಹ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿ ಅಗತ್ಯ. ಆದ್ದರಿಂದ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಹೆಚ್ಚು ಪೌಷ್ಟಿಕವಾದ ಆಹಾರವನ್ನು ಸೇವಿಸಿರಿ. ವೈದ್ಯರು ನೀಡಿದ ಸಲಹೆ ಮತ್ತು ಸೂಚನೆಗಳ ಮೇರೆಗೆ ನಿಮ್ಮ ಸ್ಥಿತಿಯನ್ನು ಖಚಿತಪಡಿಸಿಕೊಂಡು ಅನಂತರದಲ್ಲಿ ಲಘು ವ್ಯಾಯಾಮ ಮಾಡುವುದರ ಮೂಲಕ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Mon, 15 July 24