Health Tips: ಮಳೆಗಾಲದಲ್ಲಿ ಆಹಾರವನ್ನು ಫ್ರೆಶ್ ಆಗಿಟ್ಟುಕೊಳ್ಳುವುದು ಹೇಗೆ?; ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ…
Monsoon Food Care: ಮಳೆಗಾಲದಲ್ಲಿ ಹಣ್ಣು, ತರಕಾರಿ, ಆಹಾರ ಪದಾರ್ಥಗಳನ್ನು ಬಳಸುವ ಮುನ್ನ ಯಾವ ರೀತಿಯ ಎಚ್ಚರಿಕೆ ವಹಿಸಬೇಕೆಂಬ ಬಗ್ಗೆ ಇಲ್ಲಿದೆ ಮಾಹಿತಿ.
ಹೊರಗೆ ಧೋ… ಎಂದು ಒಂದೇಸಮನೆ ಮಳೆ ಸುರಿಯುತ್ತಿದ್ದರೆ ಏನಾದರೂ ಬಿಸಿ ಬಿಸಿಯಾಗಿ, ಖಾರವಾಗಿ ತಿನ್ನಬೇಕೆಂದು ಆಸೆಯಾಗುವುದು ಸಹಜ. ಆದರೆ, ಒಂದು ಕಡೆ ಕೊರೋನಾ ಹಾವಳಿ (Covid-19). ಇನ್ನೊಂದು ಕಡೆ ಮಳೆಗಾಲ (Monsoon). ಈ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ, ನಾವು ಸೇವಿಸುವ ಆಹಾರದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. ಹಾಗಾದರೆ, ಮಳೆಗಾಲದಲ್ಲಿ ಆಹಾರ ಪದಾರ್ಥಗಳನ್ನು ತಾಜಾ ಮತ್ತು ಶುಚಿಯಾಗಿಡುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್…
ಮಳೆಗಾಲದಲ್ಲಿ ತೇವಾಂಶದಿಂದ ಬಹಳ ಬೇಗ ಆಹಾರ ಪದಾರ್ಥಗಳು, ಹಣ್ಣುಗಳು ಹಾಳಾಗುತ್ತವೆ. ಮಳೆ ನೀರಿನಲ್ಲೇ ತರಕಾರಿ, ಹಣ್ಣುಗಳನ್ನು ಬೆಳೆಯುವುದರಿಂದ ಅವು ಬಹಳ ಬೇಗ ಕೊಳೆತು ಹೋಗುವ ಸಾಧ್ಯತೆಯೂ ಹೆಚ್ಚು. ಹಾಗೇ, ಕೊರೋನಾವೈರಸ್ ಯಾವ ರೂಪದಲ್ಲಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ, ನಾವು ಸೇವಿಸಬೇಕಾದ ಆಹಾರದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಉತ್ತಮ. ಮಳೆಗಾಲದಲ್ಲಿ ಹಣ್ಣು, ತರಕಾರಿ, ಆಹಾರ ಪದಾರ್ಥಗಳನ್ನು ಬಳಸುವ ಮುನ್ನ ಯಾವ ರೀತಿಯ ಎಚ್ಚರಿಕೆ ವಹಿಸಬೇಕೆಂಬ ಬಗ್ಗೆ ಇಲ್ಲಿದೆ ಮಾಹಿತಿ.
* ನೀವು ಬಳಸುವ ಹಣ್ಣು, ತರಕಾರಿಗಳನ್ನು ಸ್ವಚ್ಛವಾಗಿ ತೊಳೆದ ನಂತರವಷ್ಟೇ ಬಳಸಿ. ಸುಮ್ಮನೆ ನೀರಿನಲ್ಲಿ ಅದ್ದಿ ತೆಗೆಯುವ ಬದಲು ಸರಿಯಾಗಿ ಉಜ್ಜಿ ತೊಳೆಯಿರಿ. * ಯಾವುದೇ ಕಾರಣಕ್ಕೂ ಈಗಾಗಲೇ ಕಟ್ ಮಾಡಿಟ್ಟಿರುವ ತರಕಾರಿಗಳನ್ನು ಖರೀದಿಸಬೇಡಿ. ಆ ತರಕಾರಿಗಳಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಾಗಿ ಸೇರಿಕೊಂಡಿರುವ ಸಾಧ್ಯತೆಗಳಿರುತ್ತವೆ. * ಮಳೆಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗಲು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಇದರಿಂದ ಜ್ವರ ಮುಂತಾದ ಸೋಂಕುಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಾಧ್ಯವಿದೆ. * ಔಷಧೀಯ ಅಂಶಗಳಿರುವ ಅರಿಶಿಣ, ಶುಂಠಿ, ಕಾಳು ಮೆಣಸುಗಳನ್ನು ಹೆಚ್ಚಾಗಿ ಬಳಸಿದರೆ ನಿಮ್ಮ ದೇಹ ಬೆಚ್ಚಗೆ ಇರುತ್ತದೆ. ಇದರಿಂದ ಶೀತ, ಜ್ವರ ಉಂಟಾಗುವುದನ್ನು ತಡೆಯಬಹುದು. * ಮಳೆಗಾಲದಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಕೆಂಬ ಆಸೆಯಾಗುವುದು ಸಹಜ. ಆದರೆ, ಆದಷ್ಟು ಅಂತಹ ಪದಾರ್ಥಗಳಿಂದ ದೂರವಿರಿ. ಹಾಗೇ ರಸ್ತೆ ಬದಿಯ ತಿನಿಸುಗಳಿಂದಲೂ ದೂರವಿರುವುದು ಉತ್ತಮ.
ಮಳೆಗಾಲದ ಜೊತೆಗೆ ಕೊರೋನಾ ಅಟ್ಟಹಾಸವೂ ಇರುವುದರಿಂದ ಆರೋಗ್ಯದ ಬಗ್ಗೆ ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೂ ಕಡಿಮೆಯೇ. ಆದಷ್ಟು ಮನೆಯಲ್ಲಿ ಮಾಡಿದ ಅಡುಗೆಯನ್ನೇ ಸೇವಿಸಿ, ಔಷಧೀಯ ಗುಣವಿರುವ ಹರ್ಬಲ್ ಟೀ, ಕಷಾಯ, ಶುಂಠಿ ಟೀಯನ್ನು ಕುಡಿದು ದೇಹವನ್ನು ಬಿಸಿಯಾಗಿಟ್ಟುಕೊಳ್ಳುವುದು ಉತ್ತಮ. ಇಷ್ಟು ಮಾಡಿದರೆ ಈ ಮಳೆಗಾಲಕ್ಕೆ ನೀವು ರೆಡಿ!
ಇದನ್ನೂ ಓದಿ: Health Tips: ದಿನಕ್ಕೆ ಎರಡು ಬಾರಿ ಬಾದಾಮಿ ಸೇವಿಸುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಇದನ್ನೂ ಓದಿ: Health Tips: ಬಾಳೆ ಹಣ್ಣಿನ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
(Health Tips Best Hacks to Keep your Food Fresh During Monsoon)