AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಚಳಿಗಾಲದಲ್ಲಿ ಕಣ್ಣುಗಳು ಒಣಗದಂತೆ ತಡೆಯಲು ಇಲ್ಲಿದೆ ಸುಲಭ ಉಪಾಯ

Eye Care: ಚಳಿಗಾಲದಲ್ಲಿ ಕಣ್ಣುಗಳ ಕಿರಿಕಿರಿ, ಬರ್ನಿಂಗ್ ಕಾಣಿಸಿಕೊಳ್ಳುವುದು ಸಾಮಾನ್ಯ. ಅದಕ್ಕೆ ಚಳಿಗಾಲದಲ್ಲೂ ಕಣ್ಣುಗಳು ಒಣಗದಂತೆ ಸುಲಭವಾಗಿ ಎಚ್ಚರ ವಹಿಸಬಹುದು.

Health Tips: ಚಳಿಗಾಲದಲ್ಲಿ ಕಣ್ಣುಗಳು ಒಣಗದಂತೆ ತಡೆಯಲು ಇಲ್ಲಿದೆ ಸುಲಭ ಉಪಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 10, 2022 | 6:15 PM

ಚಳಿಗಾಲ (Winter Season) ಆರಂಭವಾಗುತ್ತಿದ್ದಂತೆ ಜನರು ಬೆಚ್ಚಗೆ ಮನೆಯೊಳಗೇ ಇರಲು ಇಷ್ಟಪಡುತ್ತಾರೆ. ಮನೆಯೊಳಗೆ ಗಾಳಿ, ಬೆಳಕು ಸರಿಯಾಗಿ ಬಾರದ ಕಾರಣ ನಮ್ಮ ದೇಹದಲ್ಲಿ ಶುಷ್ಕತೆ, ತುರಿಕೆ ಮತ್ತು ನೀರಿನ ಗುಳ್ಳೆಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದ ಕಣ್ಣಿನ ತೇವಾಂಶವೂ ಕಡಿಮೆಯಾಗಿ, ಒಣಗಿದಂತಾಗುತ್ತವೆ. ಒಣಗಿದ ಕಣ್ಣುಗಳು (Dry Eyes) ಕಣ್ಣಿನಲ್ಲಿ ಕಡಿಮೆ ನೀರು ಉತ್ಪಾದನೆಯಿಂದ ಅಥವಾ ಕಣ್ಣೀರಿನ ಗುಣಮಟ್ಟ ಕಳಪೆಯಾಗಿದ್ದಾಗ ಉಂಟಾಗುವ ಸಮಸ್ಯೆಯಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ಕಣ್ಣುಗಳ ಕಿರಿಕಿರಿ, ಬರ್ನಿಂಗ್ ಕಾಣಿಸಿಕೊಳ್ಳುವುದು ಸಾಮಾನ್ಯ. ಅದಕ್ಕೆ ಚಳಿಗಾಲದಲ್ಲೂ ಕಣ್ಣುಗಳು ಒಣಗದಂತೆ ಸುಲಭವಾಗಿ ಎಚ್ಚರ ವಹಿಸಬಹುದು.

ಈ ಕುರಿತು ಶಾರ್ಪ್ ಸೈಟ್ ಕಣ್ಣಿನ ಆಸ್ಪತ್ರೆಯ ಹಿರಿಯ ಸಲಹೆಗಾರರಾದ ಡಾ. ಸೌಮ್ಯ ಶರ್ಮಾ ‘ಇಂಡಿಯಾ ಡಾಟ್’ ಕಾಮ್ ಜೊತೆ ಮಾತನಾಡಿರುವ ಪ್ರಮುಖ ಅಂಶಗಳು ಇಲ್ಲಿವೆ. ಚಳಿಗಾಲದಲ್ಲಿ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ದೇಹವನ್ನು ತೇವಾಂಶಭರಿತವಾಗಿರಿಸಬಹುದು. ಯಥೇಚ್ಛವಾಗಿ ನೀರು ಕುಡಿಯುವುದರಿಂದ ನಮ್ಮ ಕಣ್ಣುಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ನಿಮ್ಮ ಮುಖಕ್ಕೆ ನೇರವಾದ ಶಾಖ ಬೀಳುವುದನ್ನು ತಪ್ಪಿಸಿ. ಏಕೆಂದರೆ ನಮ್ಮ ಮುಖದ ಮೇಲೆ ನೇರವಾದ ಶಾಖವು ನಿಮ್ಮ ಕಣ್ಣುಗಳಲ್ಲಿ ತೇವಾಂಶವನ್ನು ಒಣಗಿಸುತ್ತದೆ. ತೀವ್ರವಾದ ಚಳಿ ಅಥವಾ ಗಾಳಿಯಿಂದ ಕಣ್ಣುಗಳನ್ನು ರಕ್ಷಿಸಲು ಮರೆಯದಿರಿ. ಉತ್ತಮ ಸುರಕ್ಷತೆಗಾಗಿ ಗಾಳಿ ಮತ್ತು ಧೂಳಿನ ಕಣಗಳು ಕಣ್ಣುಗಳಿಗೆ ಹೋಗದಂತೆ ಕನ್ನಡಕ ಅಥವಾ ಕೂಲಿಂಗ್ ಗ್ಲಾಸ್ ಧರಿಸುವುದನ್ನು ಮರೆಯಬೇಡಿ. ಕಣ್ಣಿಗೆ ಲೆನ್ಸ್‌ಗಳನ್ನು ಹಾಕುವ ಮೊದಲು ಮತ್ತು ಪ್ರತಿ ತೆಗೆದ ನಂತರ ಒಮ್ಮೆ ಸ್ವಚ್ಛಗೊಳಿಸಲು ಮರೆಯದಿರಿ. ಇಲ್ಲವಾದರೆ ತುರಿಕೆ, ಅಲರ್ಜಿ ಶುರುವಾಗಬಹುದು.

ಒಣ ಕಣ್ಣು ಹೊಂದಿರುವ ಜನರು ತುರಿಕೆ, ನೋವು, ಆಯಾಸ, ಸುಡುವಿಕೆ ಅಥವಾ ರೆಡ್ ಐ ಸಮಸ್ಯೆಯನ್ನು ಅನುಭವಿಸುತ್ತಾರೆ. ದೃಷ್ಟಿ ಮಸುಕು ಮತ್ತು ಬೆಳಕಿಗೆ ಸೂಕ್ಷ್ಮತೆಯ ಸಮಸ್ಯೆ ಕೂಡ ಸಂಭವಿಸಬಹುದು. ಈ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಲಾಗುವುದಿಲ್ಲ. ಹೀಗಾಗಿ, ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.

ಕಣ್ಣಿನ ಆರೋಗ್ಯಕ್ಕೆ ಪೌಷ್ಠಿಕ ಮತ್ತು ಸಮತೋಲನದ ಆಹಾರ ಬಹಳ ಮುಖ್ಯ. ನಿಮ್ಮ ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳು, ಮೀನು, ಮೊಟ್ಟೆ, ತುಪ್ಪ, ಬೀಜಗಳು, ಬೀನ್ಸ್, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳನ್ನು ಹೆಚ್ಚು ಬಳಸಿ. ಮೊಬೈಲ್ ಡಿಸ್​ಪ್ಲೇ ಅನ್ನು ದೀರ್ಘಕಾಲದವರೆಗೆ ನೋಡುವುದರಿಂದ ದೃಷ್ಟಿ ಮಸುಕಾಗುತ್ತದೆ. ನೀವು ಲ್ಯಾಪ್‌ಟಾಪ್‌ ನೋಡುತ್ತಾ ದೀರ್ಘಕಾಲ ಕೆಲಸ ಮಾಡುತ್ತಿದ್ದರೆ, ಇದಕ್ಕಾಗಿ ಆಂಟಿ-ಗ್ಲೇರ್ ಪರದೆಯನ್ನು ಬಳಸಿ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವಾಗ ಆಗಾಗ ಕಣ್ಣು ಮಿಟುಕಿಸಿ, ಕಣ್ಣಿಗೆ ಸ್ವಲ್ಪ ವಿಶ್ರಾಂತಿ ನೀಡುತ್ತಿರಿ.

ಇದನ್ನೂ ಓದಿ: Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ

Health Tips: ನೀವು ಕಾಫಿ, ಜ್ಯೂಸ್​ ಪ್ರಿಯರಾ?; ಪಾನೀಯ ಸೇವಿಸುವಾಗ ಈ 5 ತಪ್ಪನ್ನು ಎಂದೂ ಮಾಡಬೇಡಿ!