ಚಳಿಗಾಲದಲ್ಲಿ ನಮ್ಮ ದೇಹ ಪೋಷಣೆಗಾಗಿ ಹಂಬಲಿಸುತ್ತದೆ. ಹಾಗಾಗಿ ನಾವು ಆಹಾರದಲ್ಲಿ ಹೆಚ್ಚಾಗಿ ಹಣ್ಣು, ತರಕಾರಿ, ಡ್ರೈ ಫ್ರುಟ್ಸ್ ಸೇರಿಸಲು ಪ್ರಾರಂಭಿಸುತ್ತೇವೆ ಮತ್ತು ಬೆಚ್ಚಗಿನ ಆಹಾರ ಪರ್ಯಾಯಗಳಿಗೆ ಬದಲಾಯಿಸಿಕೊಳ್ಳುತ್ತೇವೆ. ತಿನ್ನಬೇಕೆಂದಿರುವ ಎಲ್ಲಾ ಬಯಕೆಗಳನ್ನು ಪೂರೈಸಲು ಒಂದು ರುಚಿಕರವಾದ ಮತ್ತು ಪೌಷ್ಟಿಕ ಮಾರ್ಗವೆಂದರೆ ಚಳಿಗಾಲದಲ್ಲಿ ಕಡಲೆಕಾಯಿ ತಿನ್ನುವುದು. ಇದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ನೈಸರ್ಗಿಕವಾಗಿ, ಚಳಿಗಾಲದ ಆಹಾರಗಳು ನಮಗೆ ಹೆಚ್ಚು ಉಷ್ಣತೆ ಮತ್ತು ಆರಾಮವನ್ನು ತರುವ ಗುರಿಯನ್ನು ಹೊಂದಿರಬೇಕು. ಇದಕ್ಕೆ ಪೂರಕವಾಗಿ “ಹೃದಯ- ಆರೋಗ್ಯಕರ ಮೊನೊಸ್ಯಾಚುರೇಟೆಡ್ ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬುಗಳಿಂದ ತುಂಬಿರುವ ಕಡಲೆಕಾಯಿ ದಟ್ಟವಾದ ಶಕ್ತಿಯ ಮೂಲವಾಗಿದೆ. ಇದು ಶೀತದ ಸಮಯದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ” ಎಂದು ಪೌಷ್ಟಿಕತಜ್ಞ ಅವನಿ ಕೌಲ್ ಹೇಳುತ್ತಾರೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ನಾವು ಆಲಸ್ಯ ಮತ್ತು ಆಯಾಸ ಅನುಭವಿಸಬಹುದು. ಆದ್ದರಿಂದ, ಇಂತಹ ಸವಾಲಿನ ದಿನಗಳನ್ನು ಕಳೆಯಲು ನಮಗೆ ಹೆಚ್ಚಿನ ಪ್ರೋಟೀನ್ ಅವಶ್ಯಕತೆ ಇರುತ್ತದೆ. ದೇಹಕ್ಕೆ ಶಕ್ತಿಯನ್ನು ನೀಡುವ ಆಹಾರಗಳನ್ನು ನಾವು ಸೇವನೆ ಮಾಡಬೇಕಾಗುತ್ತದೆ. ಹಾಗಾಗಿ ಕಡಲೆಕಾಯಿಯಲ್ಲಿರುವ ಪ್ರೋಟೀನ್ ನಿರಂತರ ಶಕ್ತಿ ವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಆಯಾಸವನ್ನು ಎದುರಿಸಲು ಚಳಿಗಾಲದ ಆಹಾರಕ್ಕೆ ಅತ್ಯುತ್ತಮ ಸೇರ್ಪಡೆಯಾಗಿದೆ.
ಹವಾಮಾನ ಬದಲಾದಂತೆ, ಶೀತ ಅಥವಾ ಅಲರ್ಜಿ ಕಂಡು ಬರುವುದು ಸಹಜ. ಹಾಗಾಗಿ ಕಡಲೆಕಾಯಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮ ದೇಹಕ್ಕೆ ರಕ್ಷಕನಾಗಬಹುದು. ವಿಟಮಿನ್ ಇ ಅಧಿಕವಾಗಿರುವ ಕಡಲೆಕಾಯಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾಲೋಚಿತ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಕಡಲೆಕಾಯಿ ತಿಂದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ
ಚಳಿಗಾಲದಲ್ಲಿ ಕಡಲೆಕಾಯಿ ಸೇವನೆ ಮಾಡುವುದು ಚರ್ಮಕ್ಕೂ ಆರೋಗ್ಯಕರವಾಗಿವೆ. ಇದರಲ್ಲಿರುವ ಪ್ರಭಾವಶಾಲಿ ಪೌಷ್ಠಿಕಾಂಶ ಚರ್ಮವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಕಡಲೆಕಾಯಿ ನಿಮಗೆ ಆರೋಗ್ಯಕರ ಮತ್ತು ಕಾಂತಿಯುತ ಚರ್ಮವನ್ನು ನೀಡಲು ಸಹಾಯ ಮಾಡುತ್ತದೆ.
“ಕಡಲೆಕಾಯಿಯಲ್ಲಿರುವ ಮೆಗ್ನೀಸಿಯಮ್, ರಂಜಕ ಮತ್ತು ಸತುವಿನಂತಹ ಪ್ರಮುಖ ಖನಿಜಗಳು ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಅದರಲ್ಲಿಯೂ ಇದು ಚಳಿಗಾಲದಲ್ಲಿ ಮುಖ್ಯವಾಗಿದೆ” ಎಂದು ಅವನಿ ಕೌಲ್ ಹೇಳುತ್ತಾರೆ.
ಚಳಿಗಾಲದಲ್ಲಿ ಹಾಸಿಗೆ ಬಿಟ್ಟು ಏಳಲು ಹಿಂಜರಿಯುವುದು, ಮಂಕಾಗಿರುವುದು ಇಂತಹ ಮನಸ್ಥಿತಿ ಬದಲಾವಣೆಗಳು ಚಳಿಗಾಲದಲ್ಲಿ ಕಂಡು ಬರುವುದು ಸಹಜ. ಆದರೆ ಇದರಿಂದ ಮುಕ್ತಿ ಹೊಂದಲು ಸುಲಭ ದಾರಿ ಎಂದರೆ ಕಡಲೆಕಾಯಿ ಸೇವನೆ ಮಾಡುವುದು. ಇದರಲ್ಲಿರುವ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವು ಸಿರೊಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಚಳಿಗಾಲದಲ್ಲಿ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ” ಎಂದು ತಜ್ಞರು ಹೇಳುತ್ತಾರೆ.
ಕಡಲೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ, ಆದ್ದರಿಂದ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಚಳಿಗಾಲದ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ.
ಕಡಲೆಕಾಯಿ ಬಹುಮುಖ ಮತ್ತು ಅನುಕೂಲಕರ ಹಾಗೂ ಚಳಿಗಾಲದಲ್ಲಿ ಸೇವನೆ ಮಾಡಲೇಬೇಕಾದ ತಿಂಡಿಯಾಗಿದ್ದು, ತಂಪಾದ ವಾತಾವರಣದಲ್ಲಿ ನಿಮ್ಮ ಯೋಗಕ್ಷೇಮವನ್ನು ಹೆಚ್ಚಿಸುವುದರ ಜೊತೆಗೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ ಕಡಲೆಕಾಯಿ ತಿನ್ನುವಾಗ ನಿಯಂತ್ರಣವಿರಲಿ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ತಿನ್ನುವ ಮೊದಲು ಆಹಾರ ತಜ್ಞರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ