
ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಮಾಡಿಕೊಂಡಂತಹ ಬದಲಾವಣೆಗಳಿಂದ ಹೃದಯ (Heart) ಸಂಬಂಧಿ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ನಿಧಾನವಾಗಿ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೌದು, ಉತ್ತಮವಲ್ಲದ ಆಹಾರ ಸೇವನೆಯಿಂದ ಹೃದಯದ ರಕ್ತನಾಳಗಳಲ್ಲಿ ಕೊಬ್ಬು ಮತ್ತು ಮಲಿನಾಂಶಗಳು ಜಮೆಯಾಗಬಹುದು, ಇದರಿಂದ ರಕ್ತದ ಹರಿವಿಗೆ ಅಡ್ಡಿಯಾಗಬಹುದು. ಪರಿಣಾಮವಾಗಿ ಹೆಚ್ಚಿನ ಕೊಲೆಸ್ಟ್ರಾಲ್, ರಕ್ತದೊತ್ತಡ (ಹೈ ಬಿಪಿ) ಮತ್ತು ಹೃದಯಾಘಾತದ ಅಪಾಯ ಹೆಚ್ಚುತ್ತದೆ. ದೇಹಕ್ಕೆ ಒಳ್ಳೆಯದಲ್ಲದ ಆಹಾರ ದೇಹದಲ್ಲಿ ಉರಿಯೂತ ಹೆಚ್ಚಿಸಿ, ಹೃದಯಕ್ಕೆ ಹೆಚ್ಚು ಒತ್ತಡ ಉಂಟುಮಾಡಬಹುದು. ಹಾಗಾಗಿ ದೇಹ ನೀಡುವ ಕೆಲವು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಹಾಗಾದರೆ ನಮ್ಮ ಆಹಾರ ಪದ್ಧತಿ ಸರಿಯಾಗಿ ಇಲ್ಲ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಆಹಾರ ಪದ್ಧತಿ ಸರಿಯಾಗಿಲ್ಲ ಎಂದಾಗ ದೇಹ ಕೆಲವು ಸೂಚನೆಯನ್ನು ನೀಡುತ್ತವೆ. ಉದಾಹರಣೆಗೆ, ಬೇಗನೇ ದಣಿವು ಕಾಣಿಸಿಕೊಳ್ಳುವುದು, ಎದೆ ಭಾರವಾಗುವುದು, ಉಸಿರಾಟದಲ್ಲಿ ತೊಂದರೆ, ತೂಕ ವೇಗವಾಗಿ ಹೆಚ್ಚಾಗುವುದು ಹಾಗೂ ಪದೇ ಪದೇ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವುದು. ಈ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ ಗಂಭೀರ ಹೃದಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಹೃದಯವನ್ನು ಆರೋಗ್ಯಕರವಾಗಿಡಲು ಆಹಾರ ಪದ್ಧತಿ ಸರಿಯಾಗಿರುವುದು ಅತ್ಯಗತ್ಯವಾಗಿದೆ.
ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಕೆಲವು ಆಹಾರ ಪದಾರ್ಥಗಳು ಹೃದಯದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿವೆ. ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಪ್ರೊಸೆಸ್ಡ್ ಮತ್ತು ಪ್ಯಾಕೆಟ್ ಆಹಾರಗಳಲ್ಲಿ ಉಪ್ಪು ಹಾಗೂ ಕೊಬ್ಬಿನ ಪ್ರಮಾಣ ಹೆಚ್ಚಿರುವುದರಿಂದ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸಕ್ಕರೆ ಹೊಂದಿರುವ ಆಹಾರಗಳು ಮತ್ತು ಮಿಠಾಯಿ ಪದಾರ್ಥಗಳು ತೂಕ ಹೆಚ್ಚಳಕ್ಕೆ ಹಾಗೂ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ, ಹಾಗಾಗಿ ಇದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಜೊತೆಗೆ ರೆಡ್ ಮೀಟ್ ಹಾಗೂ ಹೆಚ್ಚಿನ ಕೊಬ್ಬುಳ್ಳ ಆಹಾರಗಳು ರಕ್ತನಾಳಗಳನ್ನು ಸಂಕೋಚಗೊಳಿಸಬಹುದು. ಅಷ್ಟೇಅಲ್ಲ ಪದೇ ಪದೇ ಸೇವನೆ ಮಾಡುವ ಜಂಕ್ ಫುಡ್ ಕೂಡ ಹೃದಯ ದುರ್ಬಲವಾಗುವುದಕ್ಕೆ ಕಾರಣವಾಗಬಹುದು. ಈ ಅಭ್ಯಾಸಗಳನ್ನು ದೀರ್ಘಕಾಲ ಮುಂದುವರಿಸಿದರೆ ಹೃದಯ ರೋಗಗಳ ಅಪಾಯ ಹೆಚ್ಚುತ್ತದೆ.
ಇದನ್ನೂ ಓದಿ: ಒಮ್ಮೆ ಫ್ರೈ ಮಾಡಲು ಬಳಸಿದ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಬಳಸುವುದರಿಂದಲೂ ಕ್ಯಾನ್ಸರ್ ಬರಬಹುದು
ಸಾಮಾನ್ಯವಾಗಿ ಹೃದಯವನ್ನು ಆರೋಗ್ಯವಾಗಿಡಲು ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಅವಶ್ಯಕವಾಗಿದೆ. ಸೊಪ್ಪು, ತರಕಾರಿಗಳು, ತಾಜಾ ಹಣ್ಣು ಮತ್ತು ಧಾನ್ಯಗಳು ಹೃದಯಕ್ಕೆ ಒಳ್ಳೆಯವು. ಒಮೇಗಾ- 3 ಫ್ಯಾಟಿ ಆಸಿಡ್‌ಗಳಿಂದ ಸಮೃದ್ಧವಾದ ಆಹಾರಗಳು ಹೃದಯವನ್ನು ಬಲಪಡಿಸುತ್ತವೆ. ಬೇಳೆ, ಕಾಯಿ ಹಾಗೂ ಬೀಜಗಳು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಕಡಿಮೆ ಕೊಬ್ಬಿನ ಹಾಲು ಮತ್ತು ಮೊಸರು ಆಹಾರದಲ್ಲಿ ಸೇರಿಸಬಹುದು. ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ನಿಯಂತ್ರಿತವಾಗಿಡಬೇಕು ಹಾಗೂ ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಹೃದಯ ದೀರ್ಘಕಾಲ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.
ಆಹಾರ ಮಾತ್ರವಲ್ಲ, ಜೀವನಶೈಲಿಯೂ ಹೃದಯದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಲಘು ವ್ಯಾಯಾಮ ಅಥವಾ ನಡಿಗೆ ಮಾಡುವುದರಿಂದ ಹೃದಯ ಬಲವಾಗುತ್ತದೆ. ಜೊತೆಗೆ ಮಾನಸಿಕ ಒತ್ತಡ ಮತ್ತು ಆತಂಕದಿಂದ ದೂರವಿರುವುದು ಕೂಡ ಅಗತ್ಯ, ಏಕೆಂದರೆ ಮನೋಭಾರ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಸರಿಯಾಗಿ ನಿದ್ರೆ ಮಾಡುವುದು ಮತ್ತು ದೀರ್ಘಕಾಲ ಕುಳಿತೇ ಇರುವುದನ್ನು ತಪ್ಪಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ