70% ಕೋಕೋ ಇರುವ ಡಾರ್ಕ್ ಚಾಕೊಲೇಟ್ ಏಕೆ ಒಳ್ಳೆಯದು? ವೈದ್ಯರು ಹೇಳಿರುವ ಮಾಹಿತಿ ಇಲ್ಲಿದೆ

ಇತರ ಚಾಕೊಲೇಟ್‌ಗಳಿಗೆ ಹೋಲಿಸಿದರೆ ಡಾರ್ಕ್ ಚಾಕೊಲೇಟ್ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಡಾರ್ಕ್ ಚಾಕೊಲೇಟ್‌ನ ಪ್ರಯೋಜನ ಪಡೆಯಲು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಹಾಗೂ ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಹಾಗಾದರೆ ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಹೇಗೆ ಸಹಕಾರಿ ಮತ್ತು ಯಾರಿಗೆ ಇದು ಸೂಕ್ತವಲ್ಲ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

70% ಕೋಕೋ ಇರುವ ಡಾರ್ಕ್ ಚಾಕೊಲೇಟ್ ಏಕೆ ಒಳ್ಳೆಯದು? ವೈದ್ಯರು ಹೇಳಿರುವ ಮಾಹಿತಿ ಇಲ್ಲಿದೆ
Health Benefits Of Dark Chocolate
Image Credit source: Getty Images

Updated on: Aug 07, 2026 | 4:32 PM

ಮುಖ್ಯಾಂಶಗಳು

  • ಪ್ರತಿದಿನ ಡಾರ್ಕ್ ಚಾಕೊಲೇಟ್ ತಿನ್ನಬಹುದೇ? ಆರೋಗ್ಯಕ್ಕೆ ಸಿಗುವ ಲಾಭ ಮತ್ತು ಎಚ್ಚರಿಕೆಗಳು
  • ಡಾರ್ಕ್ ಚಾಕೊಲೇಟ್‌ನಲ್ಲಿ ಅಡಗಿದೆ ಆರೋಗ್ಯದ ರಹಸ್ಯ! ಹೃದಯದಿಂದ ಜೀರ್ಣಕ್ರಿಯೆಯವರೆಗೆ ಹಲವು ಪ್ರಯೋಜನಗಳು
  • ಡಾರ್ಕ್ ಚಾಕೊಲೇಟ್ ಖರೀದಿಸುವಾಗ ಗಮನಿಸಬೇಕಾದ ಅಂಶಗಳು

ಚಾಕೊಲೇಟ್ ಎಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಇಷ್ಟ. ಆದರೆ ಎಲ್ಲಾ ಚಾಕೊಲೇಟ್‌ಗಳು ಆರೋಗ್ಯಕ್ಕೆ ಒಂದೇ ರೀತಿಯ ಪ್ರಯೋಜನ ನೀಡುವುದಿಲ್ಲ. ವಿಶೇಷವಾಗಿ ಡಾರ್ಕ್ ಚಾಕೊಲೇಟ್ (Dark Chocolate) ಅನ್ನು ಸಾಮಾನ್ಯ ಮಿಲ್ಕ್ ಚಾಕೊಲೇಟ್‌ಗಿಂತ ಹೆಚ್ಚು ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಐರನ್, ಮ್ಯಾಗ್ನೀಶಿಯಂ, ಕಾಪರ್, ಮ್ಯಾಂಗನೀಸ್, ಫೈಬರ್ ಹಾಗೂ ಫ್ಲೇವನಾಯ್ಡ್ಸ್ (Flavonoids) ಎಂಬ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ಹೃದಯದ ಆರೋಗ್ಯ, ರಕ್ತನಾಳಗಳ ಕಾರ್ಯಕ್ಷಮತೆ ಹಾಗೂ ದೇಹದ ಕೋಶಗಳನ್ನು ರಕ್ಷಿಸಲು ಸಹಕಾರಿ ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಆದರೆ ಡಾರ್ಕ್ ಚಾಕೊಲೇಟ್‌ನ ಪ್ರಯೋಜನ ಪಡೆಯಲು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಹಾಗೂ ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಹಾಗಾದರೆ ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಹೇಗೆ ಸಹಕಾರಿ ಮತ್ತು ಯಾರಿಗೆ ಇದು ಸೂಕ್ತವಲ್ಲ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಾರ್ಕ್ ಚಾಕೊಲೇಟ್ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು:

ಹೃದಯದ ಆರೋಗ್ಯಕ್ಕೆ ಸಹಕಾರಿ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್ಸ್ ರಕ್ತನಾಳಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ ಇದು ರಕ್ತದ ಹರಿವು ಉತ್ತಮಗೊಳಿಸುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ ಆಗಬಹುದು.

ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳ ಮೂಲ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳ ಹಾನಿಯಿಂದ ರಕ್ಷಿಸಲು ನೆರವಾಗುತ್ತವೆ. ಇದರಿಂದ ದೀರ್ಘಕಾಲಿಕ ಆರೋಗ್ಯ ಕಾಪಾಡಲು ಸಹಾಯವಾಗಬಹುದು.

ಇದನ್ನೂ ಓದಿ: ಬ್ಲೂಬೆರಿ, ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ… ಯಾವ ಬೆರ್ರಿ ಹಣ್ಣು ಯಾವ ಆರೋಗ್ಯ ಸಮಸ್ಯೆಗೆ ಉತ್ತಮ ತಿಳಿದುಕೊಳ್ಳಿ

ಮೆದುಳಿನ ಕಾರ್ಯಕ್ಷಮತೆಗೆ ನೆರವು: ಡಾರ್ಕ್ ಚಾಕೊಲೇಟ್ ಸೇವನೆಯಿಂದ ಮೆದುಳಿಗೆ ರಕ್ತ ಸಂಚಾರ ಸುಧಾರಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಏಕಾಗ್ರತೆ ಮತ್ತು ಮೆದುಳಿನ ಕಾರ್ಯಕ್ಷಮತೆಗೆ ನೆರವಾಗುವ ಸಾಧ್ಯತೆಯಿದೆ.

ದೇಹಕ್ಕೆ ಅಗತ್ಯ ಖನಿಜಗಳ ಪೂರೈಕೆ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಐರನ್ ಕೆಂಪು ರಕ್ತಕಣಗಳು ಹೆಚ್ಚಾಗಲು ಸಹಕಾರಿ ಮತ್ತು ಮ್ಯಾಗ್ನೀಶಿಯಂ ನರಗಳು ಮತ್ತು ಸ್ನಾಯುಗಳ ಆರೋಗ್ಯಕ್ಕೆ ಅಗತ್ಯ ಜೊತೆಗೆ ಕಾಪರ್ ಮತ್ತು ಮ್ಯಾಂಗನೀಸ್ ದೇಹದ ಅನೇಕ ಚಯಾಪಚಯ ಕ್ರಿಯೆಗಳಿಗೆ ನೆರವಾಗುತ್ತದೆ.

ಜೀರ್ಣಕ್ರಿಯೆಗೆ ಸಹಾಯಕಾರಿ: ಡಾರ್ಕ್ ಚಾಕೊಲೇಟ್‌ನಲ್ಲಿ ಸ್ವಲ್ಪ ಪ್ರಮಾಣದ ಫೈಬರ್ ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ನೆರವಾಗಬಹುದು.

ಡಾರ್ಕ್ ಚಾಕೊಲೇಟ್ ಖರೀದಿಸುವಾಗ ಗಮನಿಸಬೇಕಾದ ಅಂಶಗಳು

  • ಕನಿಷ್ಠ 70% ಅಥವಾ ಅದಕ್ಕಿಂತ ಹೆಚ್ಚು ಕೋಕೋ (Cocoa) ಇರುವ ಚಾಕೊಲೇಟ್ ಆಯ್ಕೆ ಮಾಡಿ.
  • ಕಡಿಮೆ ಸಕ್ಕರೆ ಹೊಂದಿರುವ ಉತ್ಪನ್ನವನ್ನು ಆರಿಸಿ.
  • ಕೃತಕ ಸಿಹಿಪದಾರ್ಥಗಳು ಮತ್ತು ಹೆಚ್ಚು ಸೇರ್ಪಡೆಗಳಿರುವ ಚಾಕೊಲೇಟ್‌ಗಳನ್ನು ತಪ್ಪಿಸಿ.
  • ಪೌಷ್ಟಿಕಾಂಶದ ಲೇಬಲ್ ಓದುವುದು ಅಭ್ಯಾಸವಾಗಲಿ.

ಯಾರು ಎಚ್ಚರ ವಹಿಸಬೇಕು?

ಈ ಕೆಳಗಿನವರು ಡಾರ್ಕ್ ಚಾಕೊಲೇಟ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ:

  • ಮಧುಮೇಹ ಇರುವವರು
  • ಮೈಗ್ರೇನ್ ಸಮಸ್ಯೆ ಇರುವವರು
  • ಕ್ಯಾಫಿನ್‌ಗೆ ಅತಿಸೂಕ್ಷ್ಮತೆ ಇರುವವರು
  • ಚಾಕೊಲೇಟ್‌ಗೆ ಅಲರ್ಜಿ ಇರುವವರು
  • ವೈದ್ಯರು ಚಾಕೊಲೇಟ್ ಸೇವಿಸಬೇಡಿ ಎಂದು ಸೂಚಿಸಿರುವವರು

ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡಬಹುದು. ಆದರೆ ಇದು ಔಷಧಿಯಲ್ಲ. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಸಮತೋಲನ ಜೀವನಶೈಲಿಯೊಂದಿಗೆ ಮಿತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಇದರ ಲಾಭವನ್ನು ಪಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us