ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ, ಧ್ಯಾನ; ಕೊರೊನಾ ಸಮಯದಲ್ಲಿ ದೇಹದ ಸದೃಢತೆ ಮುಖ್ಯ

ಮುಖ್ಯವಾಗಿ 5 ಯೋಗ ವ್ಯಾಯಾಮದ ಹಂತಗಳನ್ನು ಪ್ರತಿನಿತ್ಯ ಅಭ್ಯಾಸದಲ್ಲಿರಿಸಿಕೊಳ್ಳುವುದರಿಂದ ಶ್ವಾಸಕೋಶದ ಸದೃಢತೆ ಸುಧಾರಿಸುತ್ತದೆ. ಮತ್ತು ಸರಾಗವಾದ ಉಸಿರಾಟಕ್ಕೆ ಸಹಾಯವಾಗುತ್ತದೆ. ಕೊವಿಡ್​ 19 ಕಾಯಿಲೆ ಹೆಚ್ಚು ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿತ ಕಾಯಿಲೆ ಆಗಿರುವುದರಿಂದ ಯೋಗ ಮತ್ತು ಧ್ಯಾನದ ಮೂಲಕವಾಗಿ ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ, ಧ್ಯಾನ; ಕೊರೊನಾ ಸಮಯದಲ್ಲಿ ದೇಹದ ಸದೃಢತೆ ಮುಖ್ಯ
ಯೋಗ, ಧ್ಯಾನ
Follow us
shruti hegde
|

Updated on: May 11, 2021 | 12:01 PM

ಕೊವಿಡ್ 19 ಎರಡನೇ ಅಲೆಯು ಈಗಾಗಲೇ ಭಾರತದಲ್ಲಿ ಆಮ್ಲಜನಕದ ಕೊರತೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯ ಬಗ್ಗೆ ಭೀತಿಯನ್ನು ಹುಟ್ಟುಹಾಕಿದೆ. ಇದೀಗ ಮೂರನೇ ಅಲೆಯ ಕುರಿತಾಗಿ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ನಮ್ಮ ಆರೋಗ್ಯ ಸುಧಾರಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಯೋಗ ಮತ್ತು ಧ್ಯಾನದ ಮೂಲಕ ಕೊವಿಡ್​ ನಿಯಂತ್ರಿಸಬಹುದು ಎಂಬುದನ್ನು ಜನರಲ್​ ಆಫ್ ಆಲ್ಟರ್​ನೇಟಿವ್​ ಆ್ಯಂಡ್​ ಕಾಂಪ್ಲಿಮೆಂಟರಿ ಮೆಡಿಸಿನ್​ನಲ್ಲಿನ ಅಧ್ಯಯನವು ತಿಳಿಸಿದೆ.

ಧ್ಯಾನ ಮತ್ತು ಯೋಗದಿಂದ ಉಂಟಾಗುವ ಪ್ರಯೋಜನಗಳ ಕುರಿತಾಗಿ ಅಧ್ಯಯನವು ತಿಳಿಸಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಉರಿಯೂತದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯೋಗ ಮತ್ತು ಧ್ಯಾನ ಉತ್ತಮ ಮಾರ್ಗ. ಪ್ರಾಣಾಯಾಮದಿಂದ ಸಾಂಕ್ರಾಮಿಕ ಸವಾಲನ್ನು ಎದುರಿಸಬಹುದು ಎಂದು ತಿಳಿಸಿದೆ.

ಮುಖ್ಯವಾಗಿ 5 ಯೋಗ ವ್ಯಾಯಾಮದ ಹಂತಗಳನ್ನು ಪ್ರತಿನಿತ್ಯ ಅಭ್ಯಾಸದಲ್ಲಿರಿಸಿಕೊಳ್ಳುವುದರಿಂದ ಶ್ವಾಸಕೋಶದ ಸದೃಢತೆ ಸುಧಾರಿಸುತ್ತದೆ. ಮತ್ತು ಸರಾಗವಾದ ಉಸಿರಾಟಕ್ಕೆ ಸಹಾಯವಾಗುತ್ತದೆ. ಕೊವಿಡ್​ 19 ಕಾಯಿಲೆ ಹೆಚ್ಚು ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿತ ಕಾಯಿಲೆ ಆಗಿರುವುದರಿಂದ ಯೋಗ ಮತ್ತು ಧ್ಯಾನದ ಮೂಲಕವಾಗಿ ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು.

1) ಅನುಲೋಮ- ವಿಲೋಮ ಪ್ರಾಣಾಯಾಮ ವಿಧಾನ- ಕಣ್ಣು ಮುಚ್ಚಿ ಶಿಸ್ತುಬದ್ದವಾಗಿ ಕುಳಿತು ಮೊಣಕಾಲಿನ ಮೇಲೆ ನಿಮ್ಮ ಕೈಗಳನ್ನು ಇಟ್ಟುಕೊಟ್ಟಿ. ನಂತರ ಎಡಗೈ ಚಿನ್ಮುದ್ರೆ ಅಥವಾ ಜ್ಞಾನಮುದ್ರೆ ಇರಲಿ. ಬಲಗೈನಲ್ಲಿ ನಾಸಿಕ ಮುದ್ರೆ ಅಂದರೆ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಮಡಚಿ, ಉಂಗುರ ಬೆರಳು ಹಾಗೂ ಕಿರುಬೆರಳು ನೇರವಾಗಿರಬೇಕು. ನಂತರದ ಹಂತದಲ್ಲಿ ಬಲಗೈ ಹೆಬ್ಬೆರಳನ್ನು ಮೂಗಿನ ಬಲಭಾಗದ ಮೂಗಿನ ಹೊಳ್ಳೆಯ ಮೇರೆ ಇರಿಸಿ, ನಿಧಾನವಾಗಿ ಬಲಹೊಳೆಯನ್ನು ಒತ್ತಿ, ಮೂಗಿನ ಎಡಬದಿಯ ಹೊಳ್ಳೆಯಿಂದ ನಿಧಾನವಾಗಿ ಉಸಿರು ಎಳೆದುಕೊಳ್ಳಿ. ಎಡಮೂಗಿನ ಹೊಳ್ಳೆಯ ಮೇಲೆ ಉಂಗುರಬೆರಳು ಹಾಗೂ ಕಿರುಬೆರಳನ್ನು ಇರಿಸಿ, ಸ್ವಲ್ಪ ಒತ್ತಿ ಬಲಮೂಗಿನಿಂದ ನಿಧಾನವಾಗಿ ಉಸಿರನ್ನು ಹೊರಬಿಡಬೇಕು. ನಂತರ ಬಲಮೂಗಿನಿಂದ ಉಸಿರನ್ನು ಒಳಗೆಳೆದುಕೊಂಡು ಬಲಹೊಳ್ಳೆಯನ್ನು ಬಲಗೈಯ ಹೆಬ್ಬೆರಳಿನಿಂದ ಸ್ವಲ್ಪ ಒತ್ತಿ ಹಿಡಿದು, ಎಡಮೂಗಿನಿಂದ ಉಸಿರನ್ನು ಹೊರಗೆ ಬಿಡಬೇಕು. ಈ ಪ್ರಾಣಾಯಾಮವನ್ನು ಎಡಮೂಗಿನಿಂದ ಪ್ರಾರಂಭ ಮಾಡಿ ಬಲಮೂಗಿನಿಂದ ಉಸಿರನ್ನು ಹೊರಬಿಡುವುದರ ಮೂಲಕ ಕೊನೆಗೊಳಿಸಬೇಕು. ಪ್ರಯೋಜನಗಳು: ಈ ಪ್ರಾಣಾಯಾಮದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ರಕ್ತದೊತ್ತಡವನ್ನು ನಿಯಂತ್ರಿಸಲು ಯೋಗ ಧ್ಯಾನ ಸಹಾಯ ಮಾಡುತ್ತದೆ. ಮತ್ತು ನಿದ್ರೆಯ ಕೊರತೆಯನ್ನು ದೂರ ಮಾಡಲು ಅನುಲೋಮ, ವಿಲೋಮ ಪ್ರಾಣಾಯಾಮ ಸಹಾಯ ಮಾಡುತ್ತದೆ.

2) ವೃಕ್ಷಾಸನ ವಿಧಾನ- ಬೆಳಗಿನ ಜಾವ ಸೂರ್ಯನ ಶಾಖ ಬರುವೆಡೆ ನಿಂತುಕೊಳ್ಳಿರಿ. ಮೊದಲಿಗೆ, ತಾಡಾಸನವನ್ನು ಹಾಕಬೇಕು. ತೋಳುಗಳು ದೇಹದ ಎರಡೂ ಬದಿಯಲ್ಲಿ ಆರಾಮವಾಗಿರಿಸಬೇಕು. ನಿಧಾನವಾಗಿ ಮಂಡಿಯನ್ನು ಬಾಗಿಸಿ, ಪಾದವನ್ನು ಇನ್ನೊಂದು ತೊಡೆಯ ಮೇಲಿರಿಸಬೇಕು. ಮತ್ತೊಂದು ಕಾಲು ನೇರವಾಗಿರಲಿ. ಕೈಗಳೆರಡನ್ನು ಮೇಲಕ್ಕೆ ಎತ್ತಿ ದೀರ್ಘ ನಮಸ್ಕಾರ ಮಾಡಿರಿ. ಬೆನ್ನೆಲುಬು ನೇರವಾಗಿರಲಿ. ಈಗ ದೀರ್ಘವಾಗಿ ಉಸಿರಾಟ ಕ್ರಿಯೆ ಆರಂಭಿಸಿ. ಹೀಗೆಯೇ ಒಂದು ಕಾಲಇನ ಮೇಲೆ ನಿಂತಾದ ಮೇಲೆ ಮತ್ತೊಂದು ಕಾಲಿನಲ್ಲಿ ನಿಂತು ಉಸಿರಾಟ ಪ್ರಾರಂಭಿಸಿ.

ಪ್ರಯೋಜನಗಳು: ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ವೃಕ್ಷಾಸನ ಪ್ರಮುಖ ಪಾತ್ರವಹಿಸುತ್ತದೆ. ಏಕಾಗ್ರತೆ, ಸ್ವಚ್ಛವಾದ ಉಸಿರಾಟದ ಜೊತೆಗೆ ದೇಹ ಸದೃಢವಾಗಿರಲು ಆ ಆಸನ ಮಹತ್ವದ್ದಾಗಿದೆ.

3) ಭುಜಂಗಾಸನ ವಿಧಾನ- ಮೊದಲು ನಿಧಾನವಾಗಿ ಹೊಟ್ಟೆಯ ಮೇಲೆ ಮಲಗಿ ಇದೀಗ ಎರಡು ಹಸ್ತಗಳನ್ನು ಪಕ್ಕೆಲುಬಿನ ಪಕ್ಕದಲ್ಲಿ ಊರಿ. ಕಾಲ್ಬೆರಳುಗಳು ಹಿಂದಕ್ಕೆ ಚಾಚಿರಲಿ. ಸಂಪೂರ್ಣವಾಗಿ ಎದೆಯ ಭಾಗ ಮೇಲಕ್ಕೆ ಬಂದಿರಬೇಕು. ಕಣ್ಣಿನ ದೃಷ್ಟಿ ಮೇಲೆ ಹಾಗೂ ಎರಡೂ ಭುಜಗಳು ಹಿಂದಕ್ಕೆ ಬಾಗಿರಲಿ. ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಸ್ಥಿತಿಯಲ್ಲಿರುವಾಗ ಸಹಜವಾದ ಉಸಿರಾಟ ಕ್ರಿಯೆ ಪ್ರಾರಂಭಿಸಿ. ದೇಹಕ್ಕೆ ಯಾವುದೇ ಒತ್ತಡ ಕೊಡದೇ ಆರಾಮಾಗಿ ಇರಿ. ಉಸಿರನ್ನು ಹೊರಹಾಕುತ್ತಾ ಪೂರ್ತಿ ಕೆಳಗೆ ಬರಬೇಕು. ಹಣೆಯನ್ನು ನೆಲಕ್ಕೆ ತಾಗಿಸಿ ವಿಶ್ರಾಂತಿ ಮಾಡಬೇಕು.

ಪ್ರಯೋಜನಗಳು: ದೇಹದ ನರಭಾಗಗಳನ್ನು ಸದೃಢಗೊಳಿಸಲು ಈ ಆಸನ ಸಹಾಯಕ. ಶ್ವಾಸಕೋಶಗಳಿ ಹಿಗ್ಗುವುದರಿಂದ ಉಸಿರಾಟ ಸಂಭಂದಿತ ತೊಂದರೆ ಇರುವವರಿಗೆ ಈ ಆಸನ ಸಹಾಕಯವಾಗುತ್ತದೆ. ಉಸಿರಾಟ ಕ್ರಿಯೆ ಸರಾಗವಾಗುತ್ತದೆ. ಮತ್ತು ಹೃದಯ ಚೈತನ್ಯಗೊಳ್ಳಲು ಸಹಾಯಕ.

4) ಮತ್ಸ್ಯಾಸನ ವಿಧಾನ- ಮೊದಲು ಪದ್ಮಾಸನ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಮೊಣಕೈಅನ್ನು ನೆಲದಮೇಲೆ ಇಡುತ್ತಾ ಬೆನ್ನಿನ ಮೇಲೆ ಮಲಗಿಕೊಳ್ಳಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ಬೆನ್ನು ಮತ್ತು ಎದೆಯ ಭಾಗವನ್ನು ಮೇಲಕ್ಕೆ ಎತ್ತಿ. ತಲೆಯ ಮೇಲ್ಭಾಗ ಅಂದರೆ ನೆತ್ತಿಯ ಭಾಗ ನೆಲಕ್ಕೆ ತಾಗಿರಬೇಕು. ಎರಡೂ ಕೈಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಪದ್ಮಾಸನದಲ್ಲಿರುವುದರಿಂದ ಬಲಗೈಯಿಂದ ಎಡಗಾಲಿನ ಹೆಬ್ಬೆರಳನ್ನು ಮತ್ತು ಎಡಗೈಯಿಂದ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಎರಡು ಮೊಣಕೈ ಪಕ್ಕೆಲುಬಿನ ಪಕ್ಕ ನೆಲದ ಮೆಲೆ ಇಡುತ್ತಾ ಇದೇ ಸ್ಥಿತಿಯಲ್ಲಿ 20ರಿಂದ 30 ಸೆಕೆಂಡುಗಳ ಕಾಲ ಹಾಗೆಯೇ ಇರಿ. ನಂತರ ಕೈಬೆರಳುಗಳನ್ನು ಬಿಡಿಸಿ ಉಸಿರನ್ನು ಹೊರಹಾಕುತ್ತಾ ಎರಡೂ ಮೊಣಕೈ ಸಹಾಯದಿಂದ ಮೇಲಕ್ಕೆ ಬಂದು ಪದ್ಮಾಸನ ಬಿಡಿಸಿ ಕಾಲುಗಳನ್ನು ಮುಂದಕ್ಕೆ ಚಾಚಿ ವಿಶ್ರಾಂತಿ ತೆಗೆದುಕೊಳ್ಳಿ.

ಪ್ರಯೋಜನಗಳು: ಅಸ್ತಮಾ, ಹೃದಯ ಸಮಸ್ಯೆ, ಸಕ್ಕರೆ ಕಾಯಿಲೆ, ಥೈರಾಯಿಡ್​ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಆಸನ. ಉಸಿರಾಟವನ್ನು ನಿರಾಳವಾಗಿಸುತ್ತದೆ. ಹಾಗೂ ಸರಾಗವಾಗಿ ಉಸಿರಾಟ ಕ್ರಿಯೆ ನಡೆಸಲು ಸಹಾಯವಾಗುತ್ತದೆ. ಬೆನ್ನಿನ ಭಾಗವನ್ನು ಸದೃಢಗೊಳಿಸುತ್ತದೆ. ಹೊಟ್ಟೆ ಮತ್ತು ಗಂಟಲಿನ ಭಾಗವನ್ನು ಹಿಗ್ಗಿಸುತ್ತದೆ.

5) ಪಶ್ಚಿಮೊತ್ತಾನಾಸನ: ವಿಧಾನ- ನೇರವಾಗಿ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ಬೆನ್ನಿನ ಭಾಗವನ್ನು ನೇರವಾಗಿರಿಸಿಕೊಂಡು ಕುಳಿತುಕೊಳ್ಳಿ. ಮನಸ್ಸು ಏಕಾಗ್ರತೆಯಿಂದ ಕೂಡಿರಲಿ. ನೆರವಾಗಿ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನಮಸ್ಕರಿಸಿ. ಊಸಿರಾಟ ಕ್ರಿಯೆ ಸರಾಗವಾಗಿರಲಿ. ನಂತರ ಮುಂದಕ್ಕೆ ಬಾಗುತ್ತಾ, ನೆರವಾಗಿರುವ ಎರಡು ಕಾಲಿನ ಪಾದಗಳ ಹೆಬ್ಬೆರಳನ್ನು ಕೈಗಳಿಂದ ಹಿಡಿದು. ನಿಮ್ಮ ಮುಖ ಮೊಣಕಾಲಿಗೆ ತಾಗಿಸುಷ್ಟು ಬಾಗಬೇಕು. ಆಗುವಷ್ಟು ಕಾಲ ಹಾಗೆಯೇ ಉಸಿರು ಬಿಗಿ ಹಿಡಿದು ಬಾಗಿಯೇ ಇರಬೇಕು. ನಂತರ ನಿಧಾನವಾಗಿ ಕೈಗಳಿಂದ ಹಿಡಿದ ಕಾಲ್ಬೆರಳುಗಳನ್ನು ಬಿಡುತ್ತಾ ಮೇಲೇರಬೇಕು. ನಂತರ ಉಸಿರಾಟ ಕ್ರಿಯೆ ನಿಧಾನವಾಗಿ ಸಾಗಲಿ. ಹೀಗೆ ಪ್ರತಿನಿತ್ಯ ಅಭ್ಯಾಸವಿರುವುದು ಉತ್ತಮ.

ಪ್ರಯೋಜನಗಳು: ರಕ್ತದೊತ್ತಡದಂತಹ ಸಮಸ್ಯೆಗೆ ಧ್ಯಾನ ಮತ್ತು ಯೋಗ ಬಹಳ ಪ್ರಯೋಜನಕಾರಿ. ಹಾಗೂ ಉಸಿರಾಟ ಕ್ರಿಯೆ ಸರಾಗವಾಗಿ ನಡೆಯುತ್ತದೆ. ಕಾಲು ನೋವು, ಸೊಂಟ ನೋವಿನ ಸಮಸ್ಯೆಗೆ ಈ ಆಸನದಿಂದ ಪರಿಹಾರ ಕಂಡುಕೊಳ್ಳಬಹುದು. ನಿದ್ರಾಹೀನತೆ ಖಿನ್ನತೆಗೆ ಉತ್ತಮ ಮಾರ್ಗ ಈ ಆಸನವಾಗಿದೆ. ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಆರೋಗ್ಯದಲ್ಲಿ ಏರುಪೇರು; ಯೋಗಾಸನದ ಮೊರೆಹೋದ ಶಾಸಕ ರೇಣುಕಾಚಾರ್ಯ