ಮಹಿಳೆಯರಲ್ಲಿ ಐರನ್ ಕೊರತೆ ಇದ್ದಾಗ ಪ್ರೆಗ್ನೆನ್ಸಿಗೆ ಪ್ಲಾನ್ ಮಾಡ್ಬಾರ್ದು ಯಾಕೆ?

ಗರ್ಭಧಾರಣೆಗೆ ಪ್ಲಾನ್ ಮಾಡುವ ಮೊದಲು, ಮಹಿಳೆಯರು ಹಲವಾರು ವಿಷಯಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಅದರಲ್ಲಿಯೂ ದೇಹದಲ್ಲಿ ಐರನ್ ಕೊರತೆ ಇದ್ದರೆ ಗರ್ಭಧಾರಣೆಗೂ ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಐರನ್ ಕೊರತೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾದರೆ ಐರನ್ ದೇಹಕ್ಕೆ ಯಾಕೆ ಮುಖ್ಯ? ಗರ್ಭಧಾರಣೆಯ ಸಮಯದಲ್ಲಿ ಐರನ್ ಕೊರತೆ ಯಾಕೆ ಅಪಾಯಕಾರಿ? ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಹಿಳೆಯರಲ್ಲಿ ಐರನ್ ಕೊರತೆ ಇದ್ದಾಗ ಪ್ರೆಗ್ನೆನ್ಸಿಗೆ ಪ್ಲಾನ್ ಮಾಡ್ಬಾರ್ದು ಯಾಕೆ?
Iron Deficiency In Pregnancy
Image Credit source: Getty Images

Updated on: Mar 08, 2026 | 7:07 PM

ಗರ್ಭಧಾರಣೆ ಅಥವಾ ಪ್ರೆಗ್ನೆನ್ಸಿಗೆ (Pregnancy) ಪ್ಲಾನ್ ಮಾಡುವ ಮೊದಲು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣವಾಗಿ ಗಮನ ಹರಿಸುವುದು ಅತ್ಯಂತ ಅಗತ್ಯ. ದೇಹದಲ್ಲಿ ಯಾವುದೇ ಪೋಷಕಾಂಶಗಳ ಕೊರತೆ ಇದ್ದರೆ ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ದೇಹದಲ್ಲಿ ಐರನ್ (Iron) ಕೊರತೆ ಇದ್ದರೆ ಗರ್ಭಧಾರಣೆಗೂ ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಹಲವು ಸಂದರ್ಭಗಳಲ್ಲಿ ಮಹಿಳೆಯರು ಈ ವಿಷಯಗಳ ಬಗ್ಗೆ ಗಮನಹರಿಸುವುದಿಲ್ಲ. ತಜ್ಞರ ಪ್ರಕಾರ, ಐರನ್ ಕೊರತೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾದರೆ ಐರನ್ ದೇಹಕ್ಕೆ ಯಾಕೆ ಮುಖ್ಯ? ಗರ್ಭಧಾರಣೆಯ ಸಮಯದಲ್ಲಿ ಐರನ್ ಕೊರತೆ ಯಾಕೆ ಅಪಾಯಕಾರಿ? ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಐರನ್ ದೇಹಕ್ಕೆ ಯಾಕೆ ಮುಖ್ಯ?

ಆರ್‌ಎಂಎಲ್ ಆಸ್ಪತ್ರೆಯ ಮಹಿಳಾ ರೋಗ ವಿಭಾಗದ ಡಾ. ಸಲೋನಿ ಚಡ್ಡಾ ಅವರು ಹೇಳುವ ಪ್ರಕಾರ, ದೇಹದಲ್ಲಿ ಐರನ್ ಕೊರತೆ ಇರುವುದು ಆರೋಗ್ಯಕ್ಕೆ ಒಳ್ಳೆಯ ಸೂಚನೆ ಅಲ್ಲ. ಐರನ್ ದೇಹದಲ್ಲಿ ಹೀಮೋಗ್ಲೋಬಿನ್ ಗೆ ಅಗತ್ಯವಾಗಿದೆ. ಐರನ್ ಕಡಿಮೆ ಇದ್ದರೆ ಹೀಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗುತ್ತದೆ. ಹೀಮೋಗ್ಲೋಬಿನ್ ದೇಹದ ಎಲ್ಲಾ ಭಾಗಗಳಿಗೆ ರಕ್ತದ ಮೂಲಕ ಆಮ್ಲಜನಕವನ್ನು (ಆಕ್ಸಿಜನ್) ತಲುಪಿಸುವ ಪ್ರಮುಖ ಕೆಲಸ ಮಾಡುತ್ತದೆ. ಆದ್ದರಿಂದ ದೇಹದಲ್ಲಿ ಐರನ್ ಮಟ್ಟ ಸರಿಯಾಗಿರುವುದು ಬಹಳ ಮುಖ್ಯ.

ಗರ್ಭಧಾರಣೆಯ ಸಮಯದಲ್ಲಿ ಐರನ್ ಕೊರತೆ ಯಾಕೆ ಅಪಾಯಕಾರಿ?

ಡಾ. ಸಲೋನಿ ಅವರ ಪ್ರಕಾರ, ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಐರನ್ ಕೊರತೆ ಇದ್ದರೆ ಅದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಮಗು ಪ್ರೀಮ್ಯಾಚುರ್ ಆಗಿ ಜನಿಸುವ ಸಂಭವವಿರುತ್ತದೆ. ಮಗುವಿನ ತೂಕ ಸಾಮಾನ್ಯಕ್ಕಿಂತ ಕಡಿಮೆ ಇರಬಹುದು, ಡೆಲಿವರಿ ಸಮಯದಲ್ಲಿ ಹೆಚ್ಚು ರಕ್ತಸ್ರಾವ (ಬ್ಲೀಡಿಂಗ್) ಆಗುವ ಅಪಾಯವೂ ಹೆಚ್ಚಾಗಿರುತ್ತದೆ. ಗರ್ಭಧಾರಣೆಗೆ ಮೊದಲೇ ದೇಹದಲ್ಲಿ ಐರನ್ ಕೊರತೆ ಇದ್ದರೆ, ಗರ್ಭಧಾರಣೆಯ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು.

ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ? ಇದು ಅಸಿಡಿಟಿ ಹೆಚ್ಚಿಸುತ್ತದೆಯೇ ತಿಳಿದುಕೊಳ್ಳಿ

ಮಹಿಳೆಯರಲ್ಲಿ ಐರನ್ ಕೊರತೆ ಉಂಟಾಗುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಹಿಳೆಯರಲ್ಲಿ ಐರನ್ ಕೊರತೆ ಅಸಮತೋಲನ ಆಹಾರ ಪದ್ಧತಿ ಮತ್ತು ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಸರಿಯಾದ ಪೌಷ್ಟಿಕ ಆಹಾರ ಸೇವಿಸದಿದ್ದರೆ ಈ ಸಮಸ್ಯೆ ಕಾಣಿಸಬಹುದು. ಅದರಲ್ಲಿಯೂ ಐರನ್ ಕೊರತೆ ಕಂಡುಬರುವ ಮೊದಲು ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತದೆ. ಅದರಲ್ಲಿ ಹೆಚ್ಚು ದಣಿವಾಗುವುದು, ದೌರ್ಬಲ್ಯ, ತಲೆ ಸುತ್ತು, ಶಕ್ತಿಯ ಕೊರತೆಯಂತಹ ಲಕ್ಷಣಗಳು ಕಾಣಿಸಿಕೊಂಡರೆ ದೇಹದಲ್ಲಿ ಐರನ್ ಕೊರತೆ ಇರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರು ರಕ್ತ ಪರೀಕ್ಷೆಯ ಮೂಲಕ ಐರನ್ ಮಟ್ಟವನ್ನು ಪರಿಶೀಲಿಸಿ, ಅಗತ್ಯವಿದ್ದರೆ ಆಹಾರದಲ್ಲಿ ಬದಲಾವಣೆ ಮತ್ತು ಔಷಧಿಗಳ ಮೂಲಕ ಈ ಸಮಸ್ಯೆಯನ್ನು ಸರಿಪಡಿಸಲು ಸಲಹೆ ನೀಡುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us