ಗರ್ಭಾವಸ್ಥೆಯಲ್ಲಿ ವಾಕರಿಕೆ ಒಂದು ಸಮಸ್ಯೆಯೆ? ಪರಿಹಾರವೇನು?
Morning sickness; ಗರ್ಭಾವಸ್ಥೆಯ ವಾಕರಿಕೆ ಅಥವಾ ಮಾರ್ನಿಂಗ್ ಸಿಕ್ನೆಸ್ಗೆ ಕಾರಣಗಳೇನು? ಪರಿಹಾರಗಳೇನು? ಮನೆಯಲ್ಲೇ ಮಾಡಿಕೊಳ್ಳಬಹುದಾದ ಸುಲಭ ಪರಿಹಾರಗಳೇನು? ಯಾವ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು? ಇತ್ಯಾದಿ ವಿಚಾರಗಳ ಬಗ್ಗೆ ತಜ್ಞ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.
ಗರ್ಭಾವಸ್ಥೆಯಲ್ಲಿ (Pregnancy) ವಾಕರಿಕೆ ಅತ್ಯಂತ ಸಾಮಾನ್ಯವಾದ ಸ್ಥಿತಿಯಾಗಿದ್ದು, ಹೆಚ್ಚಿನ ಗರ್ಭಿಣಿಯರನ್ನು ಬಾಧಿಸುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಬೆಳಗಿನ ಕಾಯಿಲೆ ಅಥವಾ ಮಾರ್ನಿಂಗ್ ಸಿಕ್ನೆಸ್ (Morning sickness)’ ಎನ್ನುತ್ತಾರೆ. ದಿನವಿಡೀ ನಿಮಗೆ ವಾಕರಿಯಾಗಬಹುದು. ಇದು ಸಾಮಾನ್ಯವಾಗಿ ಗರ್ಭಧಾರಣೆಯ 12-14 ವಾರಗಳವರೆಗೆ ಸಂಭವಿಸುತ್ತದೆ, ಆದರೆ ಕೆಲವರಿಗೆ ಇದು ಹಲವು ವಾರಗಳವರೆಗೆ ಅಥವಾ ಗರ್ಭಾವಸ್ಥೆಯ ಉದ್ದಕ್ಕೂ ಕಾಣಿಸಿಕೊಳ್ಳಬಹುದು.
ಗರ್ಭಾವಸ್ಥೆಯ ವಾಕರಿಕೆಗೆ ಕಾರಣವೇನು?
ಇದು ಆತಂಕಪಡಬೇಕಾದ ಕಾಯಿಲೆಯಲ್ಲ. ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿ ಮುಖ್ಯವಾಗಿ ಹಾರ್ಮೋನ್ ಬದಲಾವಣೆಗಳಿಂದ ಉಂಟಾಗುತ್ತದೆ ಮತ್ತು ಮಗುವಿನ ಅಥವಾ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ಇದು ಮಹಿಳೆಯ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ಗರ್ಭಾವಸ್ಥೆಯ ವಾಕರಿಕೆಗೆ ಪರಿಹಾರವೇನು?
ನೀವು ಗರ್ಭಾವಸ್ಥೆಯಲ್ಲಿ ವಾಕರಿಕೆ ಅಥವಾ ವಾಂತಿಯಿಂದ ಬಳಲುತ್ತಿದ್ದರೆ ನಿಮ್ಮ ರೋಗಲಕ್ಷಣಗಳನ್ನು ಸುಧಾರಿಸುವ ಆಹಾರ ಮತ್ತು ಜೀವನಶೈಲಿಯ ಮಾರ್ಪಾಡುಗಳನ್ನು ಒಳಗೊಂಡಿರುವ ಕೆಲವು ಪರಿಹಾರಗಳು ಇಲ್ಲಿವೆ:
- ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಆಯಾಸವು ವಾಕರಿಕೆ ಮತ್ತು ವಾಂತಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು
- ಮಸಾಲೆಯುಕ್ತ, ಎಣ್ಣೆಯುಕ್ತ, ತುಂಬಾ ಸಿಹಿ ಆಹಾರಗಳನ್ನು ಸೇವಿಸಬೇಡಿ.
- ಅಕ್ಕಿ, ಟೋಸ್ಟ್, ಕ್ರ್ಯಾಕರ್‌ಗಳು, ಆಲೂಗಡ್ಡೆ ಮತ್ತು ಬಾಳೆಹಣ್ಣಿನಂತಹ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಸಣ್ಣ ಪ್ರಮಾಣದ ಆಹಾರವನ್ನು ಸೇವಿಸಿ.
- ಸಾಕಷ್ಟು ನೀರು/ದ್ರವಗಳನ್ನು ಕುಡಿಯಿರಿ ಆದರೆ ಸಣ್ಣ ಪ್ರಮಾಣದಲ್ಲಿ ಸೇವಿಸಿ ಮತ್ತು ದೊಡ್ಡ ಪ್ರಮಾಣದಲ್ಲಿ ಒಮ್ಮೆ ಕುಡಿಯುವುದನ್ನು ತಪ್ಪಿಸಿ, ವಿಶೇಷವಾಗಿ ಊಟದೊಂದಿಗೆ ನೀರು ಕುಡಿಯಬೇಡಿ.
- ವಾಕರಿಕೆಯನ್ನು ಪ್ರಚೋದಿಸುವ ಯಾವುದೇ ವಾಸನೆ ಅಥವಾ ಶಬ್ದದಿಂದ ದೂರವಿರಿ.
- ವಾಕರಿಗೆ ತಪ್ಪಿಸಲು ಶುಂಠಿಯು ತುಂಬಾ ಪ್ರಯೋಜನಕಾರಿ ಎಂದು ತಿಳಿದುಬಂದಿದೆ, ವಿಶೇಷವಾಗಿ ಆಹಾರದೊಂದಿಗೆ ಅಥವಾ ಶುಂಠಿಯನ್ನು ಮಿಠಾಯಿಗಳ ರೂಪದಲ್ಲಿ ಸೇವಿಸಬಹುದು.
- ಆರಾಮದಾಯಕ ಉಡುಪು ಮತ್ತು ಉತ್ತಮ ಗಾಳಿಯಾಡುವ ಕೊಠಡಿ ಆಯ್ಕೆ ಮಾಡಿಕೊಳ್ಳಿ.
- ವಿಚಲಿತಗೊಳ್ಳಬೇಡಿ ಮತ್ತು ನಿಮ್ಮ ಕುಟುಂಬದ ಸಹಾಯ ಮತ್ತು ಬೆಂಬಲವನ್ನು ತೆಗೆದುಕೊಳ್ಳಿ
ಆದಾಗ್ಯೂ, ಈ ಮನೆಮದ್ದುಗಳ ಹೊರತಾಗಿಯೂ ಈ ರೋಗಲಕ್ಷಣಗಳು ಮುಂದುವರಿದರೆ, ಗರ್ಭಾವಸ್ಥೆಯಲ್ಲಿ ಸುರಕ್ಷಿತವಾದ ಸಣ್ಣ ಪ್ರಮಾಣದ ಪ್ರತಿಜೀವಕ ನೀಡಬಹುದು. ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಈ ಲಕ್ಷಣಗಳಿಗೆ ವೈದ್ಯರನ್ನು ಭೇಟಿ ಮಾಡಿ
ಕೆಲವು ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ತೀವ್ರವಾದ ವಾಕರಿಕೆ ಮತ್ತು ವಾಂತಿಯಿಂದ ಬಳಲುತ್ತಾರೆ. ಇದು ಹೈಪರೆಮೆಸಿಸ್ ಗ್ರಾವಿಡಾರಮ್ ಸಮಸ್ಯೆಯಾಗಿರಬಹುದು. ಈ ಕೆಳಗಿನ ಲಕ್ಷಣಗಳು ಕಂಡರೆ ನೀವು ನಿಮ್ಮ ಸ್ತ್ರೀರೋಗತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ.
- ಒಂದು ದಿನದಲ್ಲಿ ನಿಮ್ಮ ವಾಂತಿ ಅತಿಯಾಗಿದ್ದರೆ ಮತ್ತು ಸೇವಿಸಿದ ಯಾವ ಆಹಾರವೂ ನಿಲ್ಲದಿದ್ದರೆ
- ಸಾಕಷ್ಟು ಮೂತ್ರ ಅಥವಾ ಅತಿ ಹೆಚ್ಚು ಬಣ್ಣದ ಮೂತ್ರವನ್ನು ಹೊರಹಾಕದಿರುವುದು.
- ತೀವ್ರವಾಗಿ ದುರ್ಬಲಗೊಳ್ಳುವುದು ಮತ್ತು ತಲೆತಿರುಗುವಿಕೆ.
- ವಾಂತಿಯಲ್ಲಿ ರಕ್ತ.
ಈ ಪರಿಸ್ಥಿತಿಗಳಲ್ಲಿ ಇಂಟ್ರಾವೆನಸ್ ದ್ರವಗಳು ಮತ್ತು ಇತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ನಿಮ್ಮ ವೈದ್ಯರು ಸಲಹೆ ನೀಡಬಹುದು.
ಇದನ್ನೂ ಓದಿ: Nail Care: ಉಗುರಿನ ಮೇಲೆ ಬಿಳಿ ಚುಕ್ಕೆ ಉಂಟಾಗಲು ಕಾರಣವೇನು?
ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿ ಕೆಲವರಿಗೆ ಸಮಸ್ಯೆಯಾಗಬಹುದು. ಆದರೆ ವೈದ್ಯಕೀಯ ಮಧ್ಯಸ್ಥಿಕೆಗಳೊಂದಿಗೆ ಕುಟುಂಬ ಮತ್ತು ಸ್ನೇಹಿತರ ಸಹಾಯದಿಂದ ಕೆಲವು ಸರಳ ಮಾರ್ಪಾಡುಗಳ ಮೂಲಕ ಅದನ್ನು ನಿರ್ವಹಿಸಬಹುದು. ಚಿಂತೆಪಡದೆ ನಿಮ್ಮ ತಾಯ್ತತನವನ್ನು ಆನಂದಿಸಿ.
ಡಾ. ದೀಪಾ ರಾಜೇಂದ್ರನ್, ಎಂಬಿಬಿಎಸ್, ಎಂಸ್
(ಲೇಖಕರು: ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಸಲಹೆಗಾರರು ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ, ಬೆಂಗಳೂರು)
Published On - 7:18 pm, Mon, 11 September 23