ಮಕ್ಕಳಿಗೆ ಸ್ಟೀಮ್ ಥೆರಪಿ ನೀಡುತ್ತೀರಾ?; ಅದರ ಅಡ್ಡ ಪರಿಣಾಮಗಳೂ ತಿಳಿದಿರಲಿ
ಬೇರೆಲ್ಲ ಮನೆಮದ್ದುಗಳಂತೆ ಸ್ಟೀಮ್ ಥೆರಪಿಯನ್ನು ಕೂಡ ಅತಿಯಾಗಿ ಬಳಸಿದರೆ ಅದರಿಂದ ಮಕ್ಕಳ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಆಗಾಗ ಬಿಸಿನೀರಿನ ಹಬೆಯನ್ನು (Steam Inhalation) ತೆಗೆದುಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಲ್ಲೂ ಶೀತವಾದಾಗ, ಕಫವಿದ್ದಾಗ ಈ ರೀತಿ ಮಾಡುವುದರಿಂದ ಆರಾಮದಾಯಕವೆನಿಸುತ್ತದೆ. ಆದರೆ, ಮಕ್ಕಳಿಗೆ ಬಿಸಿನೀರಿನ ಹಬೆ ನೀಡುವುದರಿಂದ ಕೆಲವು ಅಡ್ಡಪರಿಣಾಮಗಳು ಕೂಡ ಇವೆ. ಹವಾಮಾನ ಬದಲಾಗುತ್ತಿದ್ದಂತೆ ಮಕ್ಕಳಲ್ಲಿ ಉಸಿರಾಟದ ತೊಂದರೆ, ಶೀತ (Cold), ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದಕ್ಕೆ ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದೇ ಕಾರಣ. ಹೀಗಾಗಿ, ಮಕ್ಕಳಿಗೆ ಶೀತವಾದರೆ ಬಿಸಿ ನೀರಿನ ಹಬೆಯನ್ನು ನೀಡಲಾಗುತ್ತದೆ. ಆದರೆ, ಈ ಸ್ಟೀಮ್ ಥೆರಪಿ ಮಕ್ಕಳಿಗೆ ತೀರಾ ಒಳ್ಳೆಯದಲ್ಲ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಬೇರೆಲ್ಲ ಮನೆಮದ್ದುಗಳಂತೆ ಸ್ಟೀಮ್ ಥೆರಪಿಯನ್ನು ಕೂಡ ಅತಿಯಾಗಿ ಬಳಸಿದರೆ ಅದರಿಂದ ಮಕ್ಕಳ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ತಜ್ಞರ ಪ್ರಕಾರ 6 ವರ್ಷದೊಳಗಿನ ಮಕ್ಕಳಿಗೆ ಸ್ಟೀಮ್ ಅಥವಾ ಬಿಸಿ ಹಬೆ ನೀಡುವುದು ಒಳ್ಳೆಯದಲ್ಲ.
ಇದನ್ನೂ ಓದಿ: ಮಕ್ಕಳಲ್ಲಿ ಏಕಾಗ್ರತೆ ಕಡಿಮೆ ಮಾಡಿ ಹೈಪರ್ಆ್ಯಕ್ಟಿವ್ ಮಾಡುವ 5 ಆಹಾರಗಳಿವು
ಸ್ಟೀಮ್ ಥೆರಪಿಯಿಂದ ಆ ಕ್ಷಣಕ್ಕೆ ಆರಾಮವೆನಿಸಬಹುದು. ಅದರಿಂದ ಯಾವ ಆರೋಗ್ಯ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗಲಾರದು. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಸ್ಟೀಮ್ ನೀಡಿದರೆ ಅದರಿಂದ ಮಕ್ಕಳಿಗೆ ಕಣ್ಣುರಿ ಉಂಟಾಗುತ್ತದೆ. ಬಿಸಿನೀರಿಗೆ ವಿಕ್ಸ್ ಮತ್ತಿತರ ಔಷಧಿ, ಆಯಿಲ್ ಅನ್ನು ಹಾಕಿ ಸ್ಟೀಮ್ ನೀಡುವುದರಿಂದ ಕಣ್ಣಿಗೆ ರಕ್ತದ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ಕಣ್ಣುಗಳು ಊದಿಕೊಂಡು, ಕೆಂಪಾಗುತ್ತದೆ.
ಹಾಗೇ, ಮಕ್ಕಳ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ. ಸ್ಟೀಮ್ ಥೆರಪಿಯಿಂದ ಚರ್ಮದ ರಂಧ್ರಗಳು ಓಪನ್ ಆಗುವುದರಿಂದ ಚರ್ಮ ಒಣಗಿದಂತಾಗುತ್ತದೆ. ಇದರಿಂದ ಚರ್ಮದಲ್ಲಿ ಬ್ಯಾಕ್ಟೀರಿಯಾ ಬೆಳೆಯಬಹುದು.
ಇದನ್ನೂ ಓದಿ: ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಇಲ್ಲಿದೆ 5 ಸುಲಭ ಯೋಗಾಸನ
ಹೀಗಾಗಿ, ಮಕ್ಕಳಿಗೆ ಸ್ಟೀಮ್ ಥೆರಪಿ ನೀಡಲು ಮನೆಯಲ್ಲಿ ನೀವೇ ಬಕೆಟ್ನಲ್ಲಿ ಬಿಸಿ ನೀರು ಹಾಕಿ ಪ್ರಯತ್ನಿಸುವ ಬದಲು ವೈದ್ಯರ ಬಳಿ ಸರಿಯಾದ ವಿಧಾನವನ್ನು ಕೇಳಿಕೊಂಡು ನಂತರ ಅದನ್ನು ಟ್ರೈ ಮಾಡಿ. ಏಕೆಂದರೆ ಸ್ಟೀಮ್ ತೆಗೆದುಕೊಳ್ಳುವಾಗ ಬಿಸಿ ನೀರು ಚೆಲ್ಲಿ ಮಕ್ಕಳು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಹೀಗಾಗಿ, ನೀವು ಶವರ್ನಲ್ಲಿ ಬಿಸಿ ನೀರು ಬಿಟ್ಟು ಸ್ನಾನ ಮಾಡುವಾಗ ಅದೇ ಬಾತ್ರೂಂನಲ್ಲಿ ಮಗುವನ್ನು ಕೂರಿಸಿಕೊಂಡರೂ ಮಗುವಿಗೆ ಸ್ಟೀಮ್ ಸಿಗುತ್ತದೆ. ಇದು ಸುರಕ್ಷಿತ ವಿಧಾನವಾಗಿದೆ. ನೀವು ಆನ್‌ಲೈನ್‌ನಲ್ಲಿ ಅಥವಾ ಅಂಗಡಿಗಳಲ್ಲಿ ಖರೀದಿಸುವ ಸ್ಟೀಮ್ ಇನ್ಹಲೇಷನ್ ವ್ಯವಸ್ಥೆಗಳು ಸುರಕ್ಷಿತವಾಗಿರುತ್ತವೆ. ಇದು ನಿಮ್ಮ ಚರ್ಮದ ಮೇಲೆ ಸುಲಭವಾಗಿ ಚೆಲ್ಲುವುದಿಲ್ಲ.