Skin cancer: ದೇಹದ ಮೇಲಿನ ಮಚ್ಚೆಯ ಆಕಾರವು ಬದಲಾಗುತ್ತಿದೆಯೇ? ಇದು ಚರ್ಮದ ಕ್ಯಾನ್ಸರ್ನ ಅಪಾಯದ ಸೂಚಕವಾಗಿರಬಹುದು
ಮಚ್ಚೆಯನ್ನು ಸೌಂದರ್ಯದ ಸಂಕೇತವೆಂದು ಹೇಳುತ್ತಾರೆ. ಆದರೆ ಮಚ್ಚೆಗಳಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬಂದಾಗ ಅಥವಾ ದೇಹದಲ್ಲಿ ಅಸಹಜ ಮಚ್ಚೆಗಳು ಕಾಣಿಸಿಕೊಂಡಾಗ ಇದರ ಬಗ್ಗೆ ನೀವು ಬಹಳ ಜಾಗರೂಕವಾಗಿರಬೇಕು. ಏಕೆಂದರೆ ಇದು ಚರ್ಮದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.
ದೇಹದ ಮೇಲಿನ ಮಚ್ಚೆಯನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಮಚ್ಚೆಗಳನ್ನು ಶುಭ ಸಂಕೇತವೆದು ಹೇಳಲಾಗುತ್ತದೆ. ಆದರೆ ನಿಮಗೆ ಗೊತ್ತೇ ವೈದ್ಯಕೀಯ ವಿಜ್ಞಾನದ ಪ್ರಕಾರ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಮಚ್ಚೆಗಳು ಚರ್ಮದ ಕ್ಯಾನ್ಸರ್ ನ ಲಕ್ಷಣವಂತೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಕಂಡುಬರುತ್ತವೆ. ಆದರೆ ವಯಸ್ಸಾದಂತೆ ದೇಹದಲ್ಲಿ ಅಸಹಜವಾಗಿ ಮಚ್ಚೆಗಳು ಗೋಚರಿಸಿದರೆ ಇದು ಚರ್ಮದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಈ ರೀತಿ ಕಾಣಿಸಿಕೊಳ್ಳುವ ಮಚ್ಚೆಗಳನ್ನು ‘ಮೆಲನೋಮಾ ಮೋಲ್’ ಎಂದು ಕರೆಯುತ್ತಾರೆ. ವಾಸ್ತವವಾಗಿ ಮಚ್ಚೆಗಳು ಕ್ಯಾನ್ಸರ್ ಗೆ ಕಾರಣವಲ್ಲ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ದೇಹದಲ್ಲಿ 50 ಕ್ಕಿಂತ ಹೆಚ್ಚು ಮಚ್ಚೆಗಳನ್ನು ಹೊಂದಿದ್ದರೆ, ಅದು ನಂತರದಲ್ಲಿ ಚರ್ಮದ ಕ್ಯಾನ್ಸರ್ ಗೆ ಕಾರಣವಾಗಬಹುದು. ತಜ್ಞರ ಪ್ರಕಾರ ನಮ್ಮ ಚರ್ಮದ ಮೇಲೆ ಮಚ್ಚೆ ಇದ್ದರೆ ಮತ್ತು ಅದು ವೇಗವಾಗಿ ಆಕಾರವನ್ನು ಬದಲಿಸುತ್ತಿದ್ದರೆ ಹಾಗೂ ರಕ್ತಸ್ರಾವ, ತುರಿಕೆಗೆ ಕಾರಣವಾದರೆ ಅವುಗಳು ಚರ್ಮದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಹಾಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ಅವುಗಳನ್ನು ಲಘುವಾಗಿ ಪರಿಗಣಿಸದೆ ವೈದ್ಯರ ಬಳಿ ಸೂಕ್ತ ತಪಾಸಣೆಯ್ನು ಮಾಡಿಕೊಳ್ಳುವುದು ಮುಖ್ಯವಾಗಿದೆ.
ದೇಹದಲ್ಲಿ ಮಚ್ಚೆ ಬೆಳೆಯಲು ಕಾರಣವೇನು?
ಮಚ್ಚೆಗಳು ವಿವಿಧ ಕಾರಣಗಳಿಂದ ಉಂಟಾಗಬಹುದು. ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಅಥವಾ ಕುಟುಂಬದಲ್ಲಿ ಈ ಹಿಂದೆ ಯಾರಾದರೂ ಮಚ್ಚೆಯನ್ನು ಹೊಂದಿದ್ದರೆ ನಿಮ್ಮ ದೇಹದಲ್ಲೂ ಅದೇ ರೀತಿಯ ಮಚ್ಚೆ ಬೆಳೆಯಬಹುದು. ಮುಖ್ಯವಾಗಿ ಹೇಳಬೇಕೆಂದರೆ ಚರ್ಮದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯದ ಅತಿಯಾದ ಉತ್ಪಾದನೆಯಿಂದ ಮಚ್ಚೆಗಳು ಉಂಟಾಗುತ್ತದೆ. ಈ ವರ್ಣದ್ರವ್ಯವು ಚರ್ಮಕ್ಕೆ ಬಣ್ಣವನ್ನು ನೀಡುತ್ತದೆ. ಹಾಗಾಗಿ ದೇಹದಲ್ಲಿ ಕಂದು ಅಥವಾ ಕಪ್ಪು ಬಣ್ಣಗಳ ನರಹುಲಿಗಳು ಕಾಣಿಸಿಕೊಳ್ಳುತ್ತವೆ.
ಮೆಲನೋಮ ಎಂದರೆನೇನು?
ಮೆಲನೋಮವು ಚರ್ಮದ ಕ್ಯಾನ್ಸರ್ ನ ಒಂದು ವಿಧವಾಗಿದೆ. ಹೆಚ್ಚಿನ ಸೂರ್ಯನ ನೇರಳಾತೀತ ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಮೆಲನೋಮ ವರ್ಣದ್ರವ್ಯ ಚರ್ಮದಲ್ಲಿ ಮಚ್ಚೆಯ ಕಾಣಿಸಿಕೊಳ್ಳುವಿಕೆಗೆ ಕಾರಣವಾಗುತ್ತದೆ. ಇದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಸಕಾಲಿಕ ರೋಗನಿರ್ಣಯವನ್ನು ಪಡೆದರೆ ಈ ಕಾಯಿಲೆಯಿಂದ ಗುಣಮುಖವಾಗಬಹುದು.
ಇದನ್ನೂ ಓದಿ: ಅತಿಯಾದ ಸಕ್ಕರೆ ಸೇವನೆ ಚರ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಚರ್ಮರೋಗ ತಜ್ಞರು ಹೇಳೊದೇನು?
ಚರ್ಮದ ಕ್ಯಾನ್ಸರ್ ನಿಂದ ಮಚ್ಚೆಯಲ್ಲಿ ಯಾವೆಲ್ಲಾ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ:
ಮಚ್ಚೆಯ ಆಕಾರ, ಬಣ್ಣ, ಗಾತ್ರ ದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳು ಕಂಡುಬಂದರೆ ಇದು ಕ್ಯಾನ್ಸರ್ ನ ಸೂಚಕವಾಗಿರಬಹುದು. ಆದ್ದರಿಂದ ಯಾವುದೇ ನಿರ್ಲಕ್ಷ್ಯ ತೋರದೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ. ಅಲ್ಲದೆ ಮಚ್ಚೆಗಳಲ್ಲಿ ರಕ್ತಸ್ರಾವ, ಉರಿಯೂತ, ಚರ್ಮದಲ್ಲಿ ತುರಿಕೆ, ನೋವು ಕಾಣಿಸಿಕೊಳ್ಳುವುದು ಇದೂ ಕೂಡಾ ಚರ್ಮದ ಕ್ಯಾನ್ಸರ್ ನ ಚಿಹ್ನೆಗಳಾಗಿವೆ.
ಚರ್ಮದ ಕ್ಯಾನ್ಸರ್ ಅಪಾಯವನ್ನು ತಪ್ಪಿಸುವುದು ಹೇಗೆ?
- ಎಸ್.ಪಿ.ಎಫ್. ಸನ್ಸ್ಕ್ರೀನ್ ನ್ನು ಪ್ರತಿನಿತ್ಯ ಮುಖಕ್ಕೆ ಅನ್ವಯಿಸಿ. ಮತ್ತು ಸೂರ್ಯನ ಕಿರಣಗಳಿಗೆ ಒಗ್ಗಿಕೊಂಡಾಗ ಪ್ರತಿ ಎರಡು ಗಂಟೆಗಳಿಗೊಮ್ಮೆ ಸನ್ಸ್ಕ್ರೀನ್ ಹಚ್ಚಿ.
- ನಿಮ್ಮ ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮವನ್ನು ರಕ್ಷಿಸಲು ಯು.ವಿ.ಎ ಮತ್ತು ಯು.ವಿ.ಬಿ ಕಿರಣಗಳನ್ನು ನಿರ್ಬಂಧಿಸುವ ಸನ್ ಗ್ಲಾಸ್ ಗಳನ್ನು ಧರಿಸಿ.
- ನಿಯಮಿತವಾಗಿ ತಜ್ಞರ ಬಳಿ ಚರ್ಮವನ್ನು ಪರೀಕ್ಷಿಸುತ್ತಿರಿ. ಮತ್ತು ಚರ್ಮದಲ್ಲಿ ಯಾವುದೇ ಬದಲಾವಣೆ ಕಂಡರೂ ಆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
- ಉದ್ದ ತೋಳಿನ ಅಂಗಿ, ಉದ್ದ ಪ್ಯಾಂಟ್ ಗಳಂತಹ ಚರ್ಮವನ್ನು ಮುಚ್ಚಿಕೊಳ್ಳುವ ಬಟ್ಟೆಗಳನ್ನು ಧರಿಸಿ.
- ಹಣ್ಣುಗಳು, ತರಕಾರಿಗಳು, ಧಾನ್ಯಗಳು ಸೇರಿದಂತೆ ಪೌಷ್ಟಿಕಾಂಶಭರಿತ ಆಹಾರವನ್ನು ತಿನ್ನುವುದು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: