ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದನ್ನು ಕೆಲವರು ದೇಹದಲ್ಲಿ ಉಷ್ಣತೆ ಜಾಸ್ತಿಯಾಗಿ ಈ ರೀತಿ ಆಗಿರಬಹುದು ಎಂದು ತಿಳಿದು ಅದನ್ನು ಸಾಮಾನ್ಯ ಸಮಸ್ಯೆಯಂತೆ ನಿರ್ಲಕ್ಷ್ಯ ಮಾಡುತ್ತಾರೆ. ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಆದರೆ ಈ ಸ್ಥಿತಿ ಮುಂದುವರಿದರೆ ಅದು ಕಿಡ್ನಿ ಕ್ಯಾನ್ಸರ್‌ನ ಲಕ್ಷಣವಾಗಿರಬಹುದೆಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆ ಯಾಕಾಗಿ ಕಂಡುಬರುತ್ತದೆ, ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದು ಅತ್ಯಗತ್ಯ.

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು
Blood in Urine: Kidney Cancer Warning Signs
Image Credit source: Getty Images

Updated on: Mar 04, 2026 | 3:15 PM

ಮೂತ್ರದಲ್ಲಿ (Urine) ರಕ್ತ ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇದಕ್ಕೆ ಯೂರಿನರಿ ಇನ್ಫೆಕ್ಷನ್, ಕಿಡ್ನಿ ಸ್ಟೋನ್ ಅಥವಾ ಕೆಲವು ಔಷಧಿಗಳ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳು ಕೂಡ ಕಾರಣವಾಗಿರಬಹುದು. ಕೆಲವೊಮ್ಮೆ ಪ್ರೋಸ್ಟೇಟ್ ಸಮಸ್ಯೆಯೂ ಈ ಸಮಸ್ಯೆಗೆ ಕಾರಣವಾಗಬಹುದು. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಇದು ಕ್ಯಾನ್ಸರ್‌ನ ಲಕ್ಷಣವೆಂದು ಅರ್ಥೈಸುವುದು ತಪ್ಪು. ಹಾಗಂತ ಈ ರೀತಿಯ ಈ ಲಕ್ಷಣವನ್ನು ನಿರ್ಲಕ್ಷ್ಯ ಮಾಡುವುದು ಕೂಡ ಬಹಳ ಅಪಾಯಕಾರಿ. ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಈ ಸಮಸ್ಯೆ ಮುಂದುವರಿದರೆ ಅಥವಾ ಪದೇ ಪದೇ ಈ ರೀತಿ ಆಗುತ್ತಿದ್ದರೆ ಅಸಡ್ಡೆ ಮಾಡಬಾರದು. ಇದೆಲ್ಲದರ ಜೊತೆಗೆ ಈ ರೀತಿಯ ಸಮಸ್ಯೆ ಯಾಕಾಗಿ ಕಂಡುಬರುತ್ತದೆ, ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದು ಅತ್ಯಗತ್ಯ.

ದೆಹಲಿ ನಗರದ ಸಫ್ದರ್‌ಜಂಗ್ ಆಸ್ಪತ್ರೆಯ ಸೀನಿಯರ್ ರೆಸಿಡೆಂಟ್ ವೈದ್ಯರಾದ ಡಾ. ದೀಪಕ್ ಕುಮಾರ್ ಸುಮನ್ ಹೇಳುವಂತೆ, ಜನರು ಮೂತ್ರ ಸಂಬಂಧಿತ ಸಮಸ್ಯೆಗಳನ್ನು ಲಘುವಾಗಿ ತೆಗದುಕೊಳ್ಳುತ್ತಾರೆ ಮೂತ್ರ ಮಾಡುವಾಗ ದುರ್ವಾಸನೆ ಬರುವುದು, ಮೂತ್ರವಿಸರ್ಜನೆ ಸಮಯದಲ್ಲಿ ಉರಿ ಉಂಟಾಗುವುದು ಮುಂತಾದ ಲಕ್ಷಣಗಳನ್ನು ಸಾಮಾನ್ಯವೆಂದು ಕಡೆಗಣಿಸಲಾಗುತ್ತದೆ. ಜೊತೆಗೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದನ್ನು ಕೂಡ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಈ ರೀತಿ ಮಾಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎಂದಿದ್ದಾರೆ.

ಮೂತ್ರದಲ್ಲಿ ರಕ್ತ ಬರುವುದು ಕ್ಯಾನ್ಸರ್ ಲಕ್ಷಣವೇ?

ಡಾ. ದೀಪಕ್ ಅವರ ಪ್ರಕಾರ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದೇ ಕಿಡ್ನಿ ಕ್ಯಾನ್ಸರ್‌ನ ಏಕೈಕ ಲಕ್ಷಣವಲ್ಲ. ಆದರೆ ಈ ರೀತಿ ಪದೇಪದೇ ಕಾಣಿಸಿಕೊಳ್ಳುವುದು, ತೀವ್ರ ನೋವು, ದೇಹದ ತೂಕ ಕಡಿಮೆಯಾಗುವುದು, ಬೆನ್ನು ಭಾಗದ ಒಂದು ಕಡೆ ನಿರಂತರವಾದ ನೋವು ಇತ್ಯಾದಿ ಲಕ್ಷಣಗಳು ಜೊತೆಯಾಗಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಏಕೆಂದರೆ ಪ್ರಾರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಯಾದರೆ ಚಿಕಿತ್ಸೆ ಸುಲಭವಾಗುತ್ತದೆ.

ಇದನ್ನೂ ಓದಿ: ಮೂತ್ರ ವಿಸರ್ಜನೆ ಮಾಡುವಾಗ ಅತಿಯಾಗಿ ನೊರೆ ಬರುವುದು ನಿರ್ಜಲೀಕರಣವೇ ಅಥವಾ ಮಧುಮೇಹದ ಸಂಕೇತವೇ ತಿಳಿದುಕೊಳ್ಳಿ

ಪರೀಕ್ಷೆಗಳು ಹೇಗೆ ನಡೆಯುತ್ತದೆ?

ಪ್ರಾಥಮಿಕವಾಗಿ ಮೂತ್ರ ಪರೀಕ್ಷೆ (ಯೂರಿನ್ ಟೆಸ್ಟ್) ಮತ್ತು ಅಲ್ಟ್ರಾಸೌಂಡ್ ಮಾಡಲಾಗುತ್ತದೆ. ಕೆಲವು ಗಂಭೀರ ಸಂದರ್ಭಗಳಲ್ಲಿ ಸಿಸ್ಟೋಸ್ಕೋಪಿ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಲಕ್ಷಣಗಳು ತೀವ್ರವಾಗಿದ್ದಾಗ ಮಾತ್ರ ಈ ಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುತ್ತದೆ. ವೈದ್ಯರ ಪ್ರಕಾರ, ಒಂದು ಅಥವಾ ಎರಡು ದಿನ ಈ ಸಮಸ್ಯೆ ಕಂಡುಬಂದರೆ ಹೆಚ್ಚಿನ ಆತಂಕ ಬೇಡ. ಆದರೆ ಎರಡು ದಿನಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಮೂತ್ರದಲ್ಲಿ ರಕ್ತ ಬರುವುದನ್ನು ತಡೆಗಟ್ಟುವುದು ಹೇಗೆ?

  • ಪ್ರತಿದಿನ ಕನಿಷ್ಠ 7 ಗ್ಲಾಸ್ ನೀರು ಕುಡಿಯಿರಿ
  • ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಡಿ
  • ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ
  • ಮೂತ್ರದಲ್ಲಿ ರಕ್ತ ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆಯ ಸೂಚಕವಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us