
ಮಖಾನ ಅಥವಾ ಕಮಲದ ಬೀಜಗಳ (Makhana) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಒಂದು ರೀತಿಯ ವರದಾನವಿದ್ದಂತೆ. ಏಕೆಂದರೆ ಇದು ಪೋಷಕಾಂಶಗಳ ನಿಧಿಯಾಗಿದ್ದು ಇದನ್ನು ಆಹಾರದಲ್ಲಿ ನಾನಾ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಆದರೆ ನಿಮಗೆ ತಿಳಿದಿರುವಂತೆ ಮಾರುಕಟ್ಟೆಯಲ್ಲಿ ಇದು ಸ್ವಲ್ಪ ದುಬಾರಿ. ಹಾಗಾಗಿ ಜನ ಇದನ್ನು ಕೊಂಡುಕೊಳ್ಳಲು ಸ್ವಲ್ಪ ಹಿಂಜರಿಯುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕಡಲೆ (Kala Chana) ಕಡಿಮೆ ಬೆಲೆಗೆ ಲಭ್ಯವಿದೆ. ವಾಸ್ತವದಲ್ಲಿ ಮಖಾನ ಮತ್ತು ಕಡಲೆ ಎರಡೂ ಕೂಡ ನಮ್ಮ ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಖಾನದಲ್ಲಿ ಫೈಬರ್ ಅಧಿಕವಾಗಿದ್ದರೆ, ಕಡಲೆ ಕಬ್ಬಿಣ ಅಂಶದ ಉತ್ತಮ ಮೂಲವಾಗಿದೆ. ಎರಡೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ಎರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ, ಹುರಿದ ಮಖಾನವನ್ನು ಬೆಳಿಗ್ಗಿನ ತಿಂಡಿಯಲ್ಲಿ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಅದರ ಜೊತೆಗೆ ರಾತ್ರಿ ನೆನೆಸಿಟ್ಟ ಕಡಲೆಯನ್ನು ಕೂಡ ಬೆಳಗ್ಗಿನ ತಿಂಡಿಗೆ ಸೇವನೆ ಮಾಡುತ್ತಾರೆ. ಹುರಿದ ಮಖಾನ ಮತ್ತು ನೆನೆಸಿದ ಕಡಲೆ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಎರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಬಂದರೆ ಅದನ್ನು ಅಳೆದು ತೂಗಿ ಹೇಳಬೇಕಾಗುತ್ತದೆ. ಎರಡು ಕೂಡ ನಮ್ಮ ದೇಹಕ್ಕೆ ಒಳ್ಳೆಯದು ಆದರೆ ಪೋಷಕಾಂಶಗಳು ಮತ್ತು ಬಳಸುವ ವಿಧಾನಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಹುರಿದ ಮಖಾನದಲ್ಲಿ ಫೈಬರ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಅವುಗಳನ್ನು ಕಡಿಮೆ ಎಣ್ಣೆಯಿಂದ ಅಥವಾ ಎಣ್ಣೆ ಇಲ್ಲದೆಯೇ ಹುರಿಯಬಹುದು. ಮಾತ್ರವಲ್ಲ ಇದು ಸುಲಭವಾಗಿ ಜೀರ್ಣವಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅಥವಾ ಮಧುಮೇಹ ಇರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿರುವ ಭಾವನೆಯನ್ನು ನೀಡುತ್ತದೆ.
ಇದನ್ನೂ ಓದಿ: Health Care: ಮಖಾನಾವನ್ನು ಹಾಲಿನೊಂದಿಗೆ ಸೇವನೆ ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ
ಇನ್ನು ನೆನೆಸಿದ ಕಡಲೆ ಪ್ರೋಟೀನ್, ಕಬ್ಬಿಣ, ರಂಜಕ, ನಾರು ಮತ್ತು ವಿಟಮಿನ್ ಬಿ 6 ನ ಅತ್ಯುತ್ತಮ ಮೂಲವಾಗಿದೆ. ಮಾತ್ರವಲ್ಲ ಕಡಲೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಸ್ನಾಯುಗಳ ಬೆಂಬಲಕ್ಕೆ ಸಹಾಯ ಮಾಡುತ್ತದೆ. ಅವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಕಡಲೆಯನ್ನು ನೆನೆಸಿಡುವುದರಿಂದ ದೇಹದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಜಾಸ್ತಿಯಾಗುತ್ತದೆ. ಮಾತ್ರವಲ್ಲ ಅವು ಜೀರ್ಣಿಸಿಕೊಳ್ಳುವುದಕ್ಕೂ ಸುಲಭ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇಲ್ಲದವರು, ಬೆಳಿಗ್ಗೆ ನೆನೆಸಿಟ್ಟ ಕಡಲೆಯನ್ನು ತಿನ್ನಬಹುದು ಇದು ಬಹಳ ಪ್ರಯೋಜನಕಾರಿಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳು, ವೃದ್ಧರಿಗೆ ಒಳ್ಳೆಯದು.
ತೂಕ ಇಳಿಸಿಕೊಳ್ಳಬೇಕಾದರೆ ಸುಲಭವಾಗಿ ಜೀರ್ಣವಾಗುವ ಹುರಿದ ಮಖಾನ ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಪ್ರೋಟೀನ್ ಅವಶ್ಯಕತೆ ಇದ್ದಲ್ಲಿ ಕಡ್ಲೆಯನ್ನು ಸೇವನೆ ಮಾಡಬಹುದು. ನಿಮ್ಮ ದೇಹಕ್ಕೆ ಯಾವುದರ ಅಗತ್ಯ ಹೆಚ್ಚಾಗಿದೆ ಎಂಬುದನ್ನು ತಿಳಿದು ಅದನ್ನು ಸೇವನೆ ಮಾಡಬಹುದು ಅಥವಾ ನಿಮ್ಮ ಆಹಾರದಲ್ಲಿ ಎರಡನ್ನೂ ಸಮತೋಲಿತ ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಮಖಾನ ದುಬಾರಿ ಎನಿಸಿದರೆ ಕಡಲೆಯನ್ನು ಸೇವನೆ ಮಾಡಬಹದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ