
ಮಳೆಗಾಲದ ವಾತಾವರಣ ಖುಷಿ ಕೊಡುತ್ತದೆ ಆದರೆ ತೇವಾಂಶ ಮತ್ತು ಆರ್ದ್ರತೆ ಹೆಚ್ಚಾಗಿರುವುದರಿಂದ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಬೆಳೆಯಲು ಅನುಕೂಲಕರವಾಗಿರುತ್ತದೆ. ವಿಶೇಷವಾಗಿ ಕಾಲುಗಳು ಮಳೆನೀರು, ಕೆಸರು ಮತ್ತು ತೇವಾಂಶಕ್ಕೆ ಪದೇಪದೇ ಒಡ್ಡಿಕೊಳ್ಳುವುದರಿಂದ ಫಂಗಲ್ ಇನ್ಫೆಕ್ಷನ್ ಅಪಾಯ ಹೆಚ್ಚಾಗಬಹುದು. ಕಾಲುಗಳಲ್ಲಿ ತುರಿಕೆ, ಉರಿ, ಚರ್ಮ ಕೆಂಪಾಗುವುದು, ಸಣ್ಣ ಗುಳ್ಳೆಗಳು ಅಥವಾ ಚರ್ಮದ ಪದರ ಸುಲಿಯುವುದು ಕಾಣಿಸಿಕೊಂಡರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಥ್ಲೀಟ್ಸ್ ಫುಟ್ (Athlete’s Foot) ಕೂಡ ಒಂದು ರೀತಿಯ ಚರ್ಮದ ಸೋಂಕಾಗಿದೆ. ಸರಿಯಾದ ಆರೈಕೆ ಮಾಡದಿದ್ದಾಗ ಸಮಸ್ಯೆ ಮುಂದುವರಿಯಬಹುದು. ಹಾಗಾದರೆ ಈ ರೀತಿ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹೊರಗಿನಿಂದ ಮನೆಗೆ ಬಂದ ನಂತರ ಕಾಲುಗಳನ್ನು ಸ್ವಚ್ಛವಾಗಿ ತೊಳೆಯದೇ ಇದ್ದರೆ ಕೊಳಕು ಮತ್ತು ಸೂಕ್ಷ್ಮಜೀವಿಗಳು ಚರ್ಮದ ಮೇಲೆ ಉಳಿಯಬಹುದು. ಏಕೆಂದರೆ ಮಳೆಗಾಲದಲ್ಲಿ ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಇತರ ಪ್ರದೇಶಗಳಲ್ಲಿ ನೀರು ಹಾಗೂ ಕೆಸರು ನಿಂತಿರಬಹುದು. ಇದು ಕಾಲಿಗೆ ತಾಗುವುದರಿಂದ ಕಾಲು ಕೊಳಕಾಗುತ್ತದೆ ಆದ್ದರಿಂದ ಹೊರಗಿನಿಂದ ಬಂದ ನಂತರ ಸ್ವಚ್ಛ ನೀರಿನಿಂದ ಕಾಲುಗಳನ್ನು ತೊಳೆಯಿರಿ ಮತ್ತು ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಚೆನ್ನಾಗಿ ಒಣಗಿಸಿಕೊಳ್ಳಿ.
ಮಳೆಗಾಲದಲ್ಲಿ ಕೇವಲ ಕಾಲು ತೊಳೆಯುವುದು ಮಾತ್ರವಲ್ಲ, ಅವುಗಳನ್ನು ಸರಿಯಾಗಿ ಒಣಗಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಕಾಲಿನ ಬೆರಳುಗಳ ಮಧ್ಯೆ ತೇವಾಂಶ ಉಳಿಯದಂತೆ ನೋಡಿಕೊಳ್ಳಿ. ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಚರ್ಮ ಒಣಗುತ್ತಿದ್ದರೆ ಸೂಕ್ತ ಮಾಯಿಶ್ಚರೈಸರ್ ಬಳಸಬಹುದು. ಆದರೆ ಬೆರಳುಗಳ ನಡುವಿನ ಭಾಗದಲ್ಲಿ ಫಂಗಲ್ ಇನ್ಫೆಕ್ಷನ್ ಇದ್ದರೆ ಅಲ್ಲಿ ಅತಿಯಾದ ತೇವಾಂಶ ಉಳಿಯದಂತೆ ನೋಡಿಕೊಳ್ಳುವುದು ಮುಖ್ಯ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಮಾಡುವ ಮತ್ತೊಂದು ತಪ್ಪು ಎಂದರೆ ಒದ್ದೆಯಾದ ಫುಟ್‌ವೇರ್ ಅನ್ನು ಗಂಟೆಗಟ್ಟಲೆ ಧರಿಸುವುದು. ಒದ್ದೆಯಾದ ಶೂ ಅಥವಾ ಸಾಕ್ಸ್‌ನಲ್ಲಿ ಕಾಲುಗಳು ದೀರ್ಘಕಾಲ ತೇವವಾಗಿದ್ದರೆ ಫಂಗಸ್ ಬೆಳೆಯಲು ಅನುಕೂಲವಾಗಬಹುದು. ಹೀಗಾಗಿ ಮಳೆಯಲ್ಲಿ ಶೂಗಳು ಒದ್ದೆಯಾದರೆ ಸಾಧ್ಯವಾದಷ್ಟು ಬೇಗ ಅವುಗಳನ್ನು ಬದಲಾಯಿಸಿ. ಬೇಗ ಒಣಗುವ ಹಾಗೂ ಗಾಳಿಯಾಡುವ ಫುಟ್‌ವೇರ್ ಆಯ್ಕೆ ಮಾಡುವುದು ಉತ್ತಮ. ಸಾಕ್ಸ್ ಕೂಡ ಒದ್ದೆಯಾಗಿದ್ದರೆ ತಕ್ಷಣ ಬದಲಾಯಿಸಿ.
ಇದನ್ನೂ ಓದಿ: ಹೈಹೀಲ್ಸ್‌ನಿಂದ ಪಾದ ನೋವು ಮಾತ್ರವಲ್ಲ, ಬೆನ್ನು ನೋವೂ ಬರಬಹುದು! ತಜ್ಞರ ಎಚ್ಚರಿಕೆ
ಕಾಲಿನಲ್ಲಿ ಸಣ್ಣ ಗುಳ್ಳೆ, ಗಾಯ, ಚರ್ಮ ಕೆಂಪಾಗುವುದು ಅಥವಾ ತುರಿಕೆ ಕಂಡುಬಂದಾಗ ಅನೇಕರು ಅದನ್ನು ನಿರ್ಲಕ್ಷಿಸುತ್ತಾರೆ. ಆದರೆ ಮಳೆಗಾಲದಲ್ಲಿ ತೇವಾಂಶದ ಕಾರಣ ಕೆಲವು ಚರ್ಮದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು. ತುರಿಕೆ ಹೆಚ್ಚಾಗುತ್ತಿದ್ದರೆ, ಚರ್ಮ ಬಿರುಕು ಬಿಡುತ್ತಿದ್ದರೆ, ನೋವು ಅಥವಾ ಊತ ಕಾಣಿಸಿಕೊಂಡರೆ ಅಥವಾ ಗಾಯದಿಂದ ದ್ರವ/ಕೀವು ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಮಳೆಗಾಲದಲ್ಲಿ ಕಾಲುಗಳಲ್ಲಿ ತುರಿಕೆ ಅಥವಾ ಚರ್ಮ ಸುಲಿಯುವುದು ಕಂಡರೆ ಅದು ಯಾವಾಗಲೂ ಫಂಗಲ್ ಇನ್ಫೆಕ್ಷನ್ ಎಂದರ್ಥವಲ್ಲ. ಅಲರ್ಜಿ, ಡರ್ಮಟೈಟಿಸ್ ಅಥವಾ ಇತರ ಚರ್ಮದ ಸಮಸ್ಯೆಗಳೂ ಇದೇ ರೀತಿಯ ಲಕ್ಷಣಗಳನ್ನು ಉಂಟುಮಾಡಬಹುದು. ಆದ್ದರಿಂದ ಸಮಸ್ಯೆ ಮುಂದುವರಿದರೆ ವೈದ್ಯರಿಂದ ಸರಿಯಾದ ಪರೀಕ್ಷೆ ಪಡೆಯುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ