AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ ಕಂಡುಬರುತ್ತಿದ್ದರೆ ಈ ಸಿಂಪಲ್ ಟಿಪ್ಸ್ ನಿಮಗಾಗಿ!

ಮಳೆಗಾಲ ಆರಂಭವಾದಾಗ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ರೀತಿ ಯಾಕಾಗಿ ಆಗುತ್ತದೆ ಎಂಬುದರ ಬಗ್ಗೆ ಯಾರೂ ಅಷ್ಟಾಗಿ ಗಮನಹರಿಸುವುದಿಲ್ಲ. ಆದರೆ ಈ ರೀತಿಯ ಸಮಸ್ಯೆಯನ್ನು ಆದಷ್ಟು ನಾವು ಸೇವಿಸುವ ಆಹಾರದ ಮೂಲಕವೇ ಸರಿಪಡಿಸಿಕೊಳ್ಳಬಹುದು. ಆರೋಗ್ಯ ತಜ್ಞರು ನೀಡಿರುವ ಸಲಹೆಯನುಸಾರ ಕೆಲವು ಸಣ್ಣ ಪುಟ್ಟ ಸಲಹೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆಯನ್ನು ಕಂಟ್ರೋಲ್ ಮಾಡಬಹುದು.

ಮಳೆಗಾಲದಲ್ಲಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ ಕಂಡುಬರುತ್ತಿದ್ದರೆ ಈ ಸಿಂಪಲ್ ಟಿಪ್ಸ್ ನಿಮಗಾಗಿ!
Monsoon HealthImage Credit source: Getty images
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 09, 2026 | 10:34 AM

Share

ಮುಖ್ಯಾಂಶಗಳು

  • ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣಗಳು
  • ಅಜೀರ್ಣ ಸಮಸ್ಯೆ ಇದ್ದಲ್ಲಿ ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ, ಬೋಂಡಾ ತಿನ್ನುವ ಮೊದಲು ಯೋಚಿಸಿ
  • ಮಳೆಗಾಲದಲ್ಲಿ ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆ ಇರುವವರು ಈ ಸಿಂಪಲ್ ಸಲಹೆ ಪಾಲಿಸಿರಿ

ಮಳೆಗಾಲ (Monsoon Rain Season) ಆರಂಭವಾಗುತ್ತಿದ್ದಂತೆ ವೈರಲ್ ಸೋಂಕುಗಳ ಜೊತೆಗೆ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್, ಹೊಟ್ಟೆನೋವು ಅಥವಾ ಅತಿಸಾರ ಪದೇಪದೇ ಕಾಣಿಸಿಕೊಳ್ಳುತ್ತದೆ. ಆರೋಗ್ಯ ತಜ್ಞ ಡಾಕ್ಟರ್​ ಇಂದೂಧರ್​ ಅವರ ಪ್ರಕಾರ, ಮಳೆಗಾಲದಲ್ಲಿ ಹವಾಮಾನದ ಬದಲಾವಣೆ, ತೇವಾಂಶ ಮತ್ತು ಆಹಾರದಲ್ಲಿನ ಅಸ್ವಚ್ಛತೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚಿನ ತೇವಾಂಶದಿಂದ ದೇಹದ ಚಯಾಪಚಯ ಕ್ರಿಯೆ (Metabolism) ಸ್ವಲ್ಪ ನಿಧಾನವಾಗಬಹುದು. ಇದರಿಂದ ಆಹಾರ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಪರಿಣಾಮವಾಗಿ ಹೊಟ್ಟೆ ಭಾರವಾದ ಅನುಭವ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಣಿಸಬಹುದು.

ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ, ಬೋಂಡಾ, ಸಮೋಸಾ ಹಾಗೂ ಇತರೆ ಎಣ್ಣೆಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿ ಆಮ್ಲೀಯತೆ (Acidity) ಮತ್ತು ಎದೆ ಉರಿ ಸಮಸ್ಯೆಯನ್ನು ಹೆಚ್ಚಿಸಬಹುದು. ಇನ್ನೊಂದು ಪ್ರಮುಖ ಕಾರಣವೆಂದರೆ ಕಲುಷಿತ ನೀರು ಮತ್ತು ಆಹಾರ. ಮಳೆಯ ನೀರಿನಿಂದ ಬ್ಯಾಕ್ಟೀರಿಯಾ, ವೈರಸ್ ಆಹಾರ ಮತ್ತು ಕುಡಿಯುವ ನೀರಿಗೆ ಸೇರಬಹುದು. ಇದರಿಂದ ಫುಡ್ ಪಾಯ್ಸನಿಂಗ್, ವಾಂತಿ, ಅತಿಸಾರ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹೊರಗೆ ಕತ್ತರಿಸಿ ಇಟ್ಟ ಹಣ್ಣುಗಳು, ಬೀದಿ ಆಹಾರ ಮತ್ತು ಹೆಚ್ಚು ಸಮಯ ಸಂಗ್ರಹಿಸಿದ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಮಳೆಯಲ್ಲಿ ನೆನೆಯಲು ಇಷ್ಟವಿದ್ದರೆ ಈ ವಿಷಯಗಳನ್ನು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ:

ಆರೋಗ್ಯ ತಜ್ಞ ಡಾಕ್ಟರ್​ ಇಂದೂಧರ್​ ಅವರ ಸಲಹೆಯಂತೆ, ಮಳೆಗಾಲದಲ್ಲಿ ತಾಜಾ ಬಿಸಿ ಆಹಾರ ಸೇವಿಸಿ, ಕುದಿಸಿ ತಣ್ಣಗಾದ ಅಥವಾ ಸುರಕ್ಷಿತ ಕುಡಿಯುವ ನೀರನ್ನು ಮಾತ್ರ ಬಳಸಬೇಕು. ಮೊಸರು ಅಥವಾ ಫರ್ಮೆಂಟೆಡ್ ಆಹಾರಗಳು ಕೆಲವರಿಗೆ ಕರುಳಿನ ಆರೋಗ್ಯಕ್ಕೆ ಸಹಕಾರಿ ಆಗಬಹುದು, ಆದರೆ ಹೊಟ್ಟೆಗೆ ಸಂಬಂಧಪಟ್ಟ ಸೋಂಕು ಅಥವಾ ಅತಿಸಾರ ಇದ್ದರೆ ವೈದ್ಯರ ಸಲಹೆಯಂತೆ ಆಹಾರ ಆಯ್ಕೆ ಮಾಡುವುದು ಸೂಕ್ತ. ಜೊತೆಗೆ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು, ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಆಹಾರದ ಆಯ್ಕೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಸರಿಯಾದ ಆಹಾರ ಪದ್ಧತಿ ಮತ್ತು ಸ್ವಚ್ಛತೆಯನ್ನು ಪಾಲಿಸಿದರೆ ಬಹುತೇಕ ಅಜೀರ್ಣ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು.

Disclaimer: ಇದು ಆರೋಗ್ಯ ತಜ್ಙ ವೈದ್ಯರ ಸಲಹೆಯಾಗಿದೆಯೇ ಹೊರತು ಟಿವಿ9 ಕನ್ನಡ ವಯಕ್ತಿಕ ಆರೋಗ್ಯ ಸಲಹೆಗಳನ್ನು ಕೊಡುವುದಿಲ್ಲ. ಹೆಚ್ಚಿನ ಆರೋಗ್ಯ ಸಲಹೆgಳಿಗೆ ತಜ್ಙ ವೈದ್ಯರನ್ನು ಸಂಪರ್ಕಿಸಿ

Published On - 10:00 am, Thu, 9 July 26

Follow Us