
ಇತ್ತೀಚಿನ ದಿನಗಳಲ್ಲಿ “ಸೂಪರ್‌ಫುಡ್”ಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಆದರೆ ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ ನುಗ್ಗೆ ಸೊಪ್ಪು (Moringa Leaves) ಪೌಷ್ಟಿಕಾಂಶಗಳ ಭಂಡಾರವಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯಾಧಾರಿತ ಪ್ರೋಟೀನ್‌ಗಳು ಸಮೃದ್ಧವಾಗಿದ್ದು, ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಈ ಸೊಪ್ಪು ಕಾಯಿಲೆಗೆ ಔಷಧವಲ್ಲದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರದ ಭಾಗವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಇದು ಯಾವ ರೀತಿ ಪ್ರಯೋಜನಕಾರಿ ಮತ್ತು ಯಾವ ರೀತಿ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವಿಟಮಿನ್ ಎ – ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ವಿಟಮಿನ್ ಸಿ – ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ ಇ – ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ
ಕ್ಯಾಲ್ಸಿಯಂ – ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಕಾರಿ
ಕಬ್ಬಿಣ (Iron) – ರಕ್ತಹೀನತೆ ತಡೆಗಟ್ಟಲು ನೆರವಾಗಬಹುದು
ಪೊಟ್ಯಾಸಿಯಂ – ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕಾರಿ
ಫೈಬರ್ – ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ
ಸಸ್ಯಾಧಾರಿತ ಪ್ರೋಟೀನ್ – ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತವೆ. ಇದರಿಂದ ಸಾಮಾನ್ಯ ವೈರಲ್ ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯ ಉತ್ತಮವಾಗಬಹುದು.
ರಕ್ತಹೀನತೆ ತಡೆಗಟ್ಟಲು ಸಹಕಾರಿ: ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣದ ಅಂಶವಿದ್ದು, ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ನೆರವಾಗಬಹುದು.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು: ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ನಂತಹ ಖನಿಜಾಂಶಗಳು ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ವಯೋವೃದ್ಧರಿಗೆ ಇದು ಪ್ರಯೋಜನಕಾರಿಯಾಗಿದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ: ಫೈಬರ್ ಹೆಚ್ಚಿರುವುದರಿಂದ ಮಲಬದ್ಧತೆ ಕಡಿಮೆಯಾಗಲು ಮತ್ತು ಜೀರ್ಣಾಂಗದ ಕಾರ್ಯ ಸುಧಾರಿಸಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನುವುದನ್ನು ಆದಷ್ಟು ತಪ್ಪಿಸಿ
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯ ಸಂಯುಕ್ತಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಸಮತೋಲಿತ ಆಹಾರ ಮತ್ತು ವ್ಯಾಯಾಮದೊಂದಿಗೆ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಕಣ್ಣಿನ ಆರೋಗ್ಯ ಕಾಪಾಡುತ್ತದೆ: ವಿಟಮಿನ್ಎ ಮತ್ತು ಬೇಟಾ-ಕ್ಯಾರೋಟಿನ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ದೃಷ್ಟಿ ಚೆನ್ನಾಗಿರುತ್ತದೆ.
ಚರ್ಮ ಮತ್ತು ಕೂದಲಿನ ಆರೈಕೆ: ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ