ಮೋಷನ್ ಸಿಕ್ನೆಸ್: ಪ್ರಯಾಣ ಮಾಡುವಾಗ ತಲೆತಿರುಗಿದಂತಾಗಿ ವಾಂತಿಯಾಗುವುದಕ್ಕೆ ನಿಜವಾದ ಕಾರಣ ಇಲ್ಲಿದೆ
Motion Sickness: ಅನೇಕರು ಕಾರು ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ ವಾಕರಿಕೆ, ವಾಂತಿ, ತಲೆತಿರುಗುವಿಕೆಯನ್ನು ಅನುಭವಿಸಿರುತ್ತಾರೆ. ಇದೊಂದು ಸಾಮಾನ್ಯ ಸಮಸ್ಯೆ. ಆದರೆ ಈ ರೀತಿಯ ಸಮಸ್ಯೆಗಳಿಂದ ಪ್ರಯಾಣ ಮಾಡುವುದನ್ನು ನಿಲ್ಲಿಸಲು ಅಥವಾ ಕಡಿಮೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರಯಾಣ ಮಾಡುವಾಗ ಉಂಟಾಗುವ ಅಸ್ವಸ್ಥತೆಯಿಂದ ಮುಕ್ತಿ ಪಡೆಯಲು ಕೆಲವು ಸರಳ ಸಲಹೆಗಳನ್ನು ಅನುಸರಿಸಬಹುದು ಆ ಮೂಲಕ ಪ್ರಯಾಣವನ್ನು ಯಾವುದೇ ರೀತಿಯ ಅಡಚಣೆಯಿಲ್ಲದೆ ಮಾಡಬಹುದು. ಹಾಗಾದರೆ ಯಾವ ರೀತಿಯ ಸಲಹೆಗಳನ್ನು ಅನುಸರಿಸಿದರೆ ಪ್ರಯಾಣ ಮಾಡುವಾಗ ಉಂಟಾಗುವ ಅಸ್ವಸ್ಥತೆಯನ್ನು ತಡೆಯಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರಯಾಣವನ್ನು ಎಲ್ಲರೂ ಇಷ್ಟಪಡುತ್ತಾರೆ ಆದರೆ ಅನೇಕರಿಗೆ ಕಾರು ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ ವಾಕರಿಕೆಯ ಅನುಭವವಾಗುತ್ತದೆ. ಇದನ್ನು ಸಾಮಾನ್ಯವಾಗಿ ಚಲನೆಯ ಅಸ್ವಸ್ಥತೆ (Motion Sickness) ಎನ್ನಲಾಗುತ್ತದೆ. ಈ ಸಮಸ್ಯೆ ವಿಶೇಷವಾಗಿ ದೀರ್ಘ ಪ್ರಯಾಣ ಮಾಡುವಾಗ ಅಥವಾ ಜನಸಂದಣಿ ಹೆಚ್ಚಿದ್ದಾಗ ಕಂಡುಬರುತ್ತದೆ. ಎಲ್ಲರಲ್ಲಿಯೂ ಒಂದೇ ರೀತಿಯ ಲಕ್ಷಣಗಳು ಕಂಡು ಬರುವುದಿಲ್ಲ ಆದರೆ ಹೆಚ್ಚಾಗಿ ತಲೆತಿರುಗುವಿಕೆ, ವಾಕರಿಕೆ, ಅಸ್ವಸ್ಥತೆ ಮತ್ತು ಅತಿಯಾದ ಬೆವರುವಿಕೆ ಕಂಡುಬರುತ್ತದೆ. ಆದರೆ ಈ ರೀತಿಯ ಸಮಸ್ಯೆಯನ್ನು ಕೆಲವು ಸಾಮಾನ್ಯ ವಿಧಾನಗಳ ಮೂಲಕ ನಿಯಂತ್ರಿಸಬಹುದು. ಹಾಗಾದರೆ ಯಾವ ರೀತಿಯ ಸಲಹೆಗಳನ್ನು ಅನುಸರಿಸಿದರೆ ಪ್ರಯಾಣ ಮಾಡುವಾಗ ಉಂಟಾಗುವ ಅಸ್ವಸ್ಥತೆಯನ್ನು ತಡೆಯಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕಾರಿನ ಮುಂಭಾಗದಲ್ಲಿ ಅಥವಾ ಕಿಟಕಿಯ ಬಳಿ ಕುಳಿತುಕೊಳ್ಳುವುದರಿಂದ ಪ್ರಯಾಣ ಮಾಡುವಾಗ ಉಂಟಾಗುವ ಅಸ್ವಸ್ಥತೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹಿಂಭಾಗದಲ್ಲಿ ಅಥವಾ ಕಿಟಕಿಗಳಿಲ್ಲದ ಸ್ಥಳಗಳಲ್ಲಿ ಕುಳಿತುಕೊಳ್ಳುವುದರಿಂದ ಗಾಳಿಯ ಹರಿವು ಸೀಮಿತವಾಗುವುದರಿಂದ ಈ ರೀತಿಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವುದರಿಂದ ರಸ್ತೆಯನ್ನು ನೋಡಲು ನಿಮಗೆ ಅವಕಾಶವಿರುತ್ತದೆ, ಇದು ಮೆದುಳು- ಕಣ್ಣಿನ ಸಮನ್ವಯಕ್ಕೆ ಸಹಾಯ ಮಾಡುತ್ತದೆ ಮತ್ತು ತಲೆ ತಿರುಗುವಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಪ್ರಯಾಣ ಮಾಡುವಾಗ ತಲೆಯನ್ನು ನೇರವಾಗಿ ಮತ್ತು ಸ್ಥಿರವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಅಗತ್ಯವಿದ್ದರೆ, ನಿಮ್ಮ ಕುತ್ತಿಗೆ ಮತ್ತು ತಲೆಯ ನಡುವೆ ಕುಶನ್ ಅನ್ನು ಬಳಸಬಹುದು.
ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು?
ಆಮ್ಲಜನಕದ ಕೊರತೆ ಮತ್ತು ಯಾವುದೇ ರೀತಿಯ ಗಾಢವಾದ ಪರಿಮಳ ಅಥವಾ ವಾಸನೆಯು ವಾಂತಿಗೆ ಕಾರಣವಾಗಬಹುದು. ಆದ್ದರಿಂದ, ಸಾಧ್ಯವಾದಷ್ಟು ಕಿಟಕಿ ತೆರೆದಿಟ್ಟು ಅದರ ಬಳಿ ಕುಳಿತುಕೊಳ್ಳುವುದು ಒಳ್ಳೆಯದು. ಕಾರಿನಲ್ಲಿ ಹವಾನಿಯಂತ್ರಣವಿದ್ದರೆ ಇನ್ನೂ ಉತ್ತಮ. ಇದು ಉಸಿರಾಟವನ್ನು ಸುಲಭಗೊಳಿಸುತ್ತದೆ ಮತ್ತು ವಾಕರಿಕೆ ಬರದಂತೆ ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸುವುದು ವಾಂತಿಯಾಗುವ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾತ್ರವಲ್ಲ ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನುವುದು ಕೂಡ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಪ್ರಯಾಣ ಮಾಡುವ ಮೊದಲು, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವನೆ ಮಾಡಿ. ಭಾರವಾದ, ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಆದಷ್ಟು ತಪ್ಪಿಸುವುದು ಉತ್ತಮ.
ಇದನ್ನೂ ಓದಿ: Pregnancy care: ಗರ್ಭಾವಸ್ಥೆಯಲ್ಲಿ ವಾಂತಿಯಾಗುವುದಕ್ಕೆ ಕಾರಣವೇನು? ಅದನ್ನು ತಡೆಯಲು ಇಲ್ಲಿದೆ ಸರಳ ಸಲಹೆಗಳು
ಪ್ರಯಾಣದ ಅಸ್ವಸ್ಥತೆ ತಡೆಯಲು ಇಲ್ಲಿದೆ ಸಲಹೆ:
ಪ್ರಯಾಣ ಮಾಡುವಾಗ ಸಾಕಷ್ಟು ನೀರು ಕುಡಿಯಿರಿ, ಆದರೆ ಒಮ್ಮೆಲೇ ಹೆಚ್ಚು ನೀರನ್ನು ಕುಡಿಯಬೇಡಿ. ಬಯಸಿದಲ್ಲಿ, ಪ್ರಯಾಣದ ಸಮಯದಲ್ಲಿ ನಿಂಬೆ ನೀರು, ಶುಂಠಿ ಚಹಾ ಅಥವಾ ಪುದೀನ ರಸವನ್ನು ಸೇವಿಸಬಹುದು. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಶುಂಠಿ ಬೆರೆಸಿರುವಂತಹ ಸಿಹಿತಿಂಡಿಗಳನ್ನು ಸೇವಿಸುವುದು ಸಹ ಪ್ರಯೋಜನಕಾರಿಯಾಗಿದೆ. ಪುಸ್ತಕಗಳನ್ನು ಓದುವುದು, ಮೊಬೈಲ್ ಫೋನ್ ನೋಡುವುದು ಅಥವಾ ಚಲಿಸುವ ಕಾರಿನಲ್ಲಿ ಆಗಾಗ ಹಿಂದಕ್ಕೆ ಮತ್ತು ಮುಂದಕ್ಕೆ ನೋಡುವುದರಿಂದ ಕಣ್ಣು ಮತ್ತು ಕಿವಿಗಳ ಸಮತೋಲನವು ತೊಂದರೆಗೊಳಗಾಗಬಹುದು, ಆಗ ಅಸ್ವಸ್ಥತೆ ಹೆಚ್ಚಾಗುತ್ತದೆ. ಪ್ರಯಾಣ ಮಾಡುವಾಗ ಈ ರೀತಿ ಸಮಸ್ಯೆ ಎದುರಿಸುವವರು ವೈದ್ಯರ ಸಲಹೆಪಡೆದು ವಾಂತಿಯಾಗದಂತಹ ಮಾತ್ರೆಗಳನ್ನು (ಡೊಂಪೆರಿಡೋನ್ ಅಥವಾ ಸಿನ್ನಾರಿಜಿನ್ ನಂತಹ) ತೆಗೆದುಕೊಳ್ಳಬಹುದು. ಇದರ ಜೊತೆಗೆ ಪ್ರಯಾಣ ಮಾಡುವಾಗ ತುಳಸಿ, ನಿಂಬೆ, ಪುದೀನಗಳನ್ನು ಕೊಂಡೊಯ್ಯುವುದು ಸಹ ಉಪಯುಕ್ತವಾಗಿದೆ. ಇದರ ಪರಿಮಳ ತೆಗೆದುಕೊಳ್ಳುವುದರಿಂದ ವಾಕರಿಕೆ, ವಾಂತಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




