AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರುವೆಗಳಿಗೆ ಹೆದರುವುದು ಕೂಡ ಒಂದು ಫೋಬಿಯಾ! ಇದಕ್ಕೆ ಕಾರಣ ಈ ವಿಟಮಿನ್ ಕೊರತೆಯಂತೆ

ಹೆದರಿಕೆ ಅನ್ನುವುದು ಮನುಷ್ಯರಲ್ಲಿ ಸಾಮಾನ್ಯ. ಕೆಲವರು ನಾಯಿಗಳಿಗೆ, ಇನ್ನು ಕೆಲವರು ಹಾವುಗಳಿಗೆ ಹೆದರುತ್ತಾರೆ. ಆದರೆ ಕೆಲವರು ಇರುವೆಗಳಿಗೂ ಹೆದರುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಇದು ಸ್ವಲ್ಪ ವಿಚಿತ್ರವಾಗಿ ಕಾಣಿಸಬಹುದು. ಆದರೆ ಇರುವೆಗಳಿಗೂ ಭಯ ಪಡುವವರು ಇರುತ್ತಾರೆ. ಇತ್ತೀಚೆಗೆ, ಇರುವೆಗಳ ಭಯದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇರುವೆಗಳಿಗೂ ಹೆದರುವವರಿದ್ದಾರಾ ಎಂದು ನಿಮಗೆ ಅನಿಸಬಹುದು. ಹೌದು, ಇದೊಂದು ಫೋಬಿಯಾ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಕೆಲವರು ಇರುವೆಗಳಿಗೆ ಹೆದುರುವುದಕ್ಕೆ ಕಾರಣವೇನು? ವಿಟಮಿನ್ ಕೊರತೆಯೂ ಇದಕ್ಕೆ ಕಾರಣವಾಗುತ್ತದೆಯೇ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇರುವೆಗಳಿಗೆ ಹೆದರುವುದು ಕೂಡ ಒಂದು ಫೋಬಿಯಾ! ಇದಕ್ಕೆ ಕಾರಣ ಈ ವಿಟಮಿನ್ ಕೊರತೆಯಂತೆ
Fear Of Ants
ಪ್ರೀತಿ ಭಟ್​, ಗುಣವಂತೆ
|

Updated on: Nov 11, 2025 | 6:38 PM

Share

ಹೆದರಿಕೆ ಅನ್ನುವುದು ಮನುಷ್ಯರಲ್ಲಿ ಸಾಮಾನ್ಯ. ಕೆಲವರು ಸಿಂಹ, ಹುಲಿ, ಹಾವಿಗೆ ಹೆದರಿದರೆ ಇನ್ನು ಕೆಲವರು ಜಿರಲೆ, ಹಲ್ಲಿಗಳಿಗೆ ಹೆದರುತ್ತಾರೆ. ಆದರೆ ಇರುವೆಗೆ (Ants) ಹೆದರುವವರಿದ್ದಾರೆ ಎಂದರೆ ನಂಬುತ್ತೀರಾ… ಇದು ಒಂದು ರೀತಿ ಆಶ್ಚರ್ಯಕರವಾಗಿದ್ದರೂ ಕೂಡ ನೀವು ನಂಬಲೇ ಬೇಕು. ಹೆದರುವುದು ಮಾತ್ರವಲ್ಲ ಮಹಿಳೆಯೊಬ್ಬರು ಇರುವೆಗಳು ಮನೆಯೊಳಗೆ ಬರುವುದನ್ನು ಸಹಿಸಲಾಗದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಇರುವೆಗಳಿಗೂ ಹೆದರುವವರಿದ್ದಾರಾ ಎಂದು ನಿಮಗೆ ಅನಿಸಬಹುದು. ಹೌದು, ಇದೊಂದು ಫೋಬಿಯಾ (phobia). ಕೆಲವರಿಗೆ ಕತ್ತಲೆ, ಇನ್ನು ಕೆಲವರಿಗೆ ನೀರು ಮತ್ತೊಂದಿಷ್ಟು ಜನರಿಗೆ ಹೈಟ್ ಫೋಬಿಯಾ ಇರುವಂತೆಯೇ ಇರುವೆಗಳನ್ನು ನೋಡಿದರೂ ಕೆಲವರಿಗೆ ಭಯವಾಗುತ್ತದೆ. ಇದು ನಮಗೆ ನಗು ತರಿಸಬಹುದು ಆದರೆ ಆರೋಗ್ಯ ತಜ್ಞರು ಇದು ಸಾಮಾನ್ಯ ಸಮಸ್ಯೆ ಅಲ್ಲ ಎನ್ನುತ್ತಾರೆ. ಹಾಗಾದರೆ ಇರುವೆಗಳಿಗೆ ಹೆದುರುವುದಕ್ಕೆ ಕಾರಣವೇನು? ವಿಟಮಿನ್ ಕೊರತೆಯೂ ಇದಕ್ಕೆ ಕಾರಣವಾಗುತ್ತದೆಯೇ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮನೀಷಾ (25) ಎಂದು ಗುರುತಿಸಲಾಗಿದೆ. ಪೋಷಕರು ಹೇಳಿರುವ ಪ್ರಕಾರ, ಆಕೆಗೆ ಬಾಲ್ಯದಿಂದಲೂ ಇರುವೆಗಳ ಭಯ ಇತ್ತು, ಈ ಹಿಂದೆಯೂ ಆಸ್ಪತ್ರೆಯಲ್ಲಿ ಅವಳಿಗೆ ಚಿಕಿತ್ಸೆಯನ್ನು ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಇನ್ನು ಆತ್ಮಹತ್ಯಾ ಪತ್ರದಲ್ಲಿ “ಕ್ಷಮಿಸಿ ನಾನು ಈ ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಜಾಗರೂಕರಾಗಿರಿ” ಎಂದು ಬರೆದಿದ್ದಾಳೆ. ಸಾಮಾನ್ಯವಾಗಿ ಕೀಟಗಳಿಗೆ ಹೆದರುವವರಿದ್ದಾರೆ. ಆದರೆ ಅದು ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದರೆ ನಂಬುವುದು ಅಸಾಧ್ಯ. ಆದರೆ ಆರೋಗ್ಯ ತಜ್ಞರು ಈ ರೀತಿ ಆಗುವುದಕ್ಕೂ ಕಾರಣವಿದೆ ಎನ್ನುತ್ತಾರೆ.

ಇರುವೆಗಳಿಗೆ ಹೆದರುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಈ ರೀತಿಯ ಭಯವನ್ನು ಮೈರ್ಮೆಕೊಫೋಬಿಯಾ ಎಂದು ಕರೆಯಲಾಗುತ್ತದೆ. ಇದೊಂದು ನಿರ್ದಿಷ್ಟ ಭಯವಾಗಿದ್ದು ಇದರಲ್ಲಿ, ಒಬ್ಬ ವ್ಯಕ್ತಿ ಇರುವೆಗಳ ಬಗ್ಗೆ ತೀವ್ರವಾದ ಭಯ ಅಥವಾ ಆತಂಕವನ್ನು ವ್ಯಕ್ತಪಡಿಸುತ್ತಾನೆ. ಆ ವ್ಯಕ್ತಿಗೆ ಇರುವೆಗಳ ಬಗ್ಗೆ ಯೋಚಿಸುವುದಕ್ಕೂ ಕೂಡ ಕಷ್ಟವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇಂತಹ ಫೋಬಿಯಾ ಇರುವವರು ಇರುವೆಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸುತ್ತಾರೆ. ಅಂದರೆ ತೋಟ, ಬೆಟ್ಟ ಗುಡ್ಡಗಳಿಗೆ ಹೋಗುವುದಕ್ಕೆ ಹೆದರುವುದು ಅಥವಾ ಇರುವೆಗಳು ಹೆಚ್ಚಾಗಿ ಕಂಡು ಬರುವ ಜಾಗಗಳಿಗೆ, ಬೇರೆಯವರ ಮನೆಗಳಿಗೆ ಹೋಗುವುದಕ್ಕೆ ಹೆದರುತ್ತಾರೆ. ಅದರಲ್ಲಿಯೂ ಈ ರೀತಿ ಹೆದರುವ ವ್ಯಕ್ತಿಗಳಲ್ಲಿ ಹೃದಯ ಬಡಿತ ಹೆಚ್ಚಾಗಿರುತ್ತದೆ. ಬೆವರುವುದು, ನಡುಗುವುದು ಅಥವಾ ಇರುವೆಗಳಿಗೆ ಸಂಬಂಧಿಸಿದ ಸ್ಥಳ ಅಥವಾ ವಸ್ತುಗಳನ್ನು ತಪ್ಪಿಸುವಂತಹ ದೈಹಿಕ ಮತ್ತು ಮಾನಸಿಕ ಲಕ್ಷಣಗಳನ್ನು ಕಂಡುಬರುತ್ತದೆ.

ಇದನ್ನೂ ಓದಿ: ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆ, ಪತಿಗೊಂದು ಸಂದೇಶ ಬರೆದಿಟ್ಟಿದ್ದ ಪತ್ನಿ

ಯಾವ ವಿಟಮಿನ್ ಕೊರತೆ ಇದಕ್ಕೆ ಕಾರಣ?

ಈ ಸ್ಥಿತಿಗೆ ಯಾವ ವಿಟಮಿನ್ ಕಾರಣವಾಗಿದೆ ಎಂಬುದಕ್ಕೆ ಇನ್ನೂ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ. ಆದರೆ ಕೆಲವು ವೈದ್ಯಕೀಯ ತಜ್ಞರು ಮತ್ತು ವಿವಿಧ ಅಧ್ಯಯನಗಳು ಹೇಳುವ ಪ್ರಕಾರ ಇದು ವಿಟಮಿನ್ ಬಿ 12 ಕೊರತೆಯಿಂದಾಗಿರಬಹುದು ಎಂದು ಹೇಳಲಾಗುತ್ತದೆ. ವಿಟಮಿನ್ ಬಿ 12 ಆರೋಗ್ಯಕರ ನರಮಂಡಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದರ ಕೊರತೆಯಾದಾಗ ಆಯಾಸ, ದೌರ್ಬಲ್ಯ, ಸ್ಮರಣಶಕ್ತಿ ನಷ್ಟ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳು ಕಂಡುಬರುತ್ತದೆ. ಅದರಲ್ಲಿಯೂ ನರಮಂಡಲವು ದುರ್ಬಲವಾಗಿದ್ದಾಗ, ಸಣ್ಣ ವಿಷಯಗಳು ಸಹ ಭಯವನ್ನು ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ವಿಟಮಿನ್ ಕೊರತೆಯೂ ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಿರಬಹುದು.

ಯಾವುದೇ ಕಾರಣಕ್ಕೂ ಈ ಮಾಹಿತಿಯನ್ನು ವೈದ್ಯಕೀಯ ಸಲಹೆಗೆ ಪರ್ಯಾಯವಾಗಿ ಬಳಸಬಾರದು. ನಿಮಗೂ ಈ ರೀತಿಯ ಲಕ್ಷಣ ಕಂಡುಬಂದರೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಅದರ ಹೊರತಾಗಿ ಯಾವುದೇ ರೀತಿಯ ಸ್ವಯಂ ಔಷಧಗಳ ಬಳಕೆ ಮಾಡಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ