ಮಧುಮೇಹಿಗಳಿಗೆ ಸಿಹಿ ಸುದ್ದಿ: ನೀಡಲ್ ಸಹಾಯವಿಲ್ಲದೆ ಉಸಿರಿನಿಂದಲೇ ಶುಗರ್ ಪರೀಕ್ಷೆ!

ನಾಗ್ಪುರ ವಿಶ್ವವಿದ್ಯಾಲಯದ ಸಂಶೋಧಕರು ಸೂಜಿಯನ್ನು ಬಳಸದೆ ಉಸಿರಾಟದ ಮೂಲಕವೇ ಮಧುಮೇಹವನ್ನು ಪತ್ತೆಹಚ್ಚಬಹುದಾದ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಇದು ಅಂತಾರಾಷ್ಟ್ರೀಯ ಯುಕೆ ವಿನ್ಯಾಸ ಪ್ರಮಾಣೀಕರಣವನ್ನು ಪಡೆದಿದೆ. ಇದು ಮಾರುಕಟ್ಟೆಗೆ ಬಂದಲ್ಲಿ ಮಧುಮೇಹಿಗಳಿಗೆ ದಿನನಿತ್ಯದ ಪರೀಕ್ಷೆ ಸುಲಭವಾಗುತ್ತದೆ. ಮನೆಯಲ್ಲಿಯೇ ಸರಳವಾಗಿ ಪರೀಕ್ಷೆ ನಡೆಸಬಹುದು ಮತ್ತು ಆಸ್ಪತ್ರೆಗೆ ಹೋಗುವ ಅಗತ್ಯ ಕಡಿಮೆಯಾಗುತ್ತದೆ. ಹಾಗಾದರೆ ಈ ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಧುಮೇಹಿಗಳಿಗೆ ಸಿಹಿ ಸುದ್ದಿ: ನೀಡಲ್ ಸಹಾಯವಿಲ್ಲದೆ ಉಸಿರಿನಿಂದಲೇ ಶುಗರ್ ಪರೀಕ್ಷೆ!
Needle Free Diabetes Testing
Image Credit source: Getty Images

Updated on: Apr 18, 2026 | 5:17 PM

ಮಧುಮೇಹ (Diabetes) ರೋಗಿಗಳಿಗೆ ದಿನನಿತ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಸೂಜಿ ಚುಚ್ಚುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಇದು ನೋವು ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ನಾಗ್ಪುರದ ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದ (RTMNU) ಸಂಶೋಧಕರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ಮೂಲಕ ಕೇವಲ ಉಸಿರಿನ ಸಹಾಯದಿಂದಲೇ ಶುಗರ್ ಮಟ್ಟವನ್ನು ಪರೀಕ್ಷಿಸಬಹುದಾಗಿದೆ. ಹೌದು, ಕೇಳುವಾಗ ಆಶ್ಚರ್ಯ ಹುಟ್ಟಿಸಿದರೂ ಕೂಡ ಇದರಿಂದ ಅನೇಕರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಈ ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಈ ಸಾಧನವು ‘ನಾನ್- ಇನ್ವೇಸಿವ್’ ತಂತ್ರಜ್ಞಾನವನ್ನು ಆಧರಿಸಿದೆ. ಅಂದರೆ ದೇಹಕ್ಕೆ ಯಾವುದೇ ರೀತಿಯ ಹಾನಿ ಮಾಡದೇ ಪರೀಕ್ಷೆ ನಡೆಸಬಹುದು. ವ್ಯಕ್ತಿಯ ಉಸಿರಿನಲ್ಲಿರುವ ರಾಸಾಯನಿಕ ಅಂಶಗಳನ್ನು ವಿಶ್ಲೇಷಿಸಿ, ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಅಂದಾಜು ಮಾಡುತ್ತದೆ. ಈ ತಂತ್ರಜ್ಞಾನವು ಶುದ್ಧ, ವೇಗವಾದ ಮತ್ತು ನೋವಿಲ್ಲದ ಪರೀಕ್ಷೆಗೆ ಸಹಾಯ ಮಾಡುತ್ತದೆ. ಈ ಆವಿಷ್ಕಾರಕ್ಕೆ ಯುಕೆ ಡಿಸೈನ್ ಪ್ರಮಾಣಪತ್ರ ದೊರೆತಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಶೋಧನೆಯ ಮಹತ್ವವನ್ನು ತೋರಿಸುತ್ತದೆ. ಈ ಸಾಧನ ಅಭಿವೃದ್ಧಿಯಲ್ಲಿ ಡಾ. ವರ್ಷಾ ಧುರ್ವೆ, ಹರ್ಷ ತಿವಾರಿ, ಸಬ್ರೀನ್ ಬಾನು ಸೇರಿದಂತೆ ಹಲವು ತಜ್ಞರು ಪ್ರಮುಖ ಪಾತ್ರವಹಿಸಿದ್ದಾರೆ. ಇತರ ದೇಶಗಳ ವಿಜ್ಞಾನಿಗಳ ಸಹಕಾರವೂ ಇದರಲ್ಲಿ ಇದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ

ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ;

ಈ ಸಾಧನವು ಯಶಸ್ವಿಯಾಗಿ ಮಾರುಕಟ್ಟೆಗೆ ಬಂದರೆ, ಮಧುಮೇಹಿಗಳಿಗೆ ದಿನನಿತ್ಯದ ಪರೀಕ್ಷೆ ಸುಲಭವಾಗುತ್ತದೆ. ಮನೆಲ್ಲಿಯೇ ಸರಳವಾಗಿ ಪರೀಕ್ಷೆ ನಡೆಸಬಹುದು ಮತ್ತು ಆಸ್ಪತ್ರೆಗೆ ಹೋಗುವ ಅಗತ್ಯ ಕಡಿಮೆಯಾಗುತ್ತದೆ. ಇದರಿಂದ ಚಿಕಿತ್ಸೆ ಪ್ರಕ್ರಿಯೆ ಹೆಚ್ಚು ಸುಗಮವಾಗುವ ಸಾಧ್ಯತೆ ಇದೆ. ಪ್ರಸ್ತುತ ಈ ಸಾಧನದ ಶುದ್ಧತೆ ಮತ್ತು ನಿಖರತೆಯನ್ನು ಖಚಿತಪಡಿಸಲು ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಇದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ಈ ಹೊಸ ತಂತ್ರಜ್ಞಾನ ಮಧುಮೇಹಿಗಳ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಲಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us