ಪ್ರತಿದಿನ ಕಿತ್ತಳೆ ತಿಂದರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ? ಅಧ್ಯಯನ ಏನು ಹೇಳುತ್ತದೆ?

ಕಿತ್ತಳೆ ತಿನ್ನುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ತಿಳಿದ ವಿಚಾರ. ಅವುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಕಿತ್ತಳೆ ಹಣ್ಣಿನಲ್ಲಿ ಫೈಬರ್ ಕೂಡ ಇರುತ್ತದೆ, ಆದರೆ ಕಿತ್ತಳೆ ಹಣ್ಣನ್ನು ಸೇವನೆ ಮಾಡುವುದರಿಂದ ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಗಟ್ಟಬಹುದೇ? ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇದರ ಬಗ್ಗೆ ಒಂದು ಅಧ್ಯಯನ ನಡೆದಿದೆ. ಹಾಗಾದರೆ ಅಧ್ಯಯನದಲ್ಲಿ ಹೇಳಿರುವುದೇನು, ಕಿತ್ತಳೆ ನಿಜವಾಗಿಯೂ ಲಿವರ್‌ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಪ್ರತಿದಿನ ಕಿತ್ತಳೆ ತಿಂದರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ? ಅಧ್ಯಯನ ಏನು ಹೇಳುತ್ತದೆ?
Oranges Benefits For Fatty Liver
Image Credit source: Getty Images

Updated on: Apr 22, 2026 | 6:31 PM

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಈ ದೊಡ್ಡ ಸಮಸ್ಯೆಯನ್ನು ಕೇವಲ ಒಂದು ಹಣ್ಣನ್ನು ಸೇವನೆ ಮಾಡುವುದರಿಂದ ತಡೆಗಟ್ಟಬಹುದು ಎಂದರೆ ನಮಬುತ್ತೀರಾ… ಹೌದು, ಪ್ರತಿದಿನ ಕಿತ್ತಳೆ ಹಣ್ಣು ತಿನ್ನುವುದರಿಂದ ಫ್ಯಾಟಿ ಲಿವರ್ ನಿಯಂತ್ರಣ ಸಾಧ್ಯವೆಂಬ ಹೊಸ ಅಧ್ಯಯನ ಎಲ್ಲರ ಗಮನ ಸೆಳೆದಿದೆ. ಹಾಗಾದರೆ ಅಧ್ಯಯನದಲ್ಲಿ ಹೇಳಿರುವುದೇನು, ಕಿತ್ತಳೆ ನಿಜವಾಗಿಯೂ ಲಿವರ್‌ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಅಧ್ಯಯನದಲ್ಲಿ ಹೇಳಿರುವುದೇನು?

‘ನ್ಯೂಟ್ರಿಯಂಟ್ಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 30ರಿಂದ 65 ವರ್ಷದ 60 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು. ಇವರಲ್ಲಿ ಅರ್ಧ ಮಂದಿಗೆ ನಾಲ್ಕು ವಾರಗಳ ಕಾಲ ಪ್ರತಿದಿನ ಸುಮಾರು 400 ಗ್ರಾಂ ಬೀಜವಿಲ್ಲದ ಕಿತ್ತಳೆ ಹಣ್ಣುಗಳನ್ನು ನೀಡಲಾಗಿದೆ. ಈ ಗುಂಪಿನಲ್ಲಿ ಲಿವರ್‌ಗೆ ಸಂಬಂಧಿಸಿದ ಹಲವಾರು ಆರೋಗ್ಯ ಸೂಚಕಗಳಲ್ಲಿ ಸುಧಾರಣೆ ಕಂಡುಬಂದಿದ್ದು, ಲಿವರ್‌ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುವುದು ಗಮನಿಸಲಾಗಿದೆ.

ಬೀಜವಿಲ್ಲದ ಕಿತ್ತಳೆ ಎಂದರೇನು?

ಸಾಮಾನ್ಯವಾಗಿ ಬೀಜವಿಲ್ಲದ ಕಿತ್ತಳೆ ಹಣ್ಣುಗಳನ್ನು ನವೇಳಿನಾ ಕಿತ್ತಳೆ ಎಂದು ಕರೆಯಲಾಗುತ್ತದೆ. ಇದು ಬೀಜರಹಿತ ತಳಿಯ ಕಿತ್ತಳೆ. ಇದರ ಮೂಲ ಉತ್ಪಾದನೆ ಸ್ಪೇನ್ ದೇಶದಲ್ಲಿ ನಡೆಯುತ್ತದೆ. ಇದು ಸಿಹಿ ರುಚಿಯುಳ್ಳದಾಗಿದ್ದು, ವಿಟಮಿನ್ C ಮತ್ತು ಪಾಲಿಫೀನಾಲ್‌ಗಳ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶಗಳು ಮೆಟಾಬಾಲಿಸಂ ಸುಧಾರಿಸಲು ಮತ್ತು ಲಿವರ್ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಕಿತ್ತಳೆಯಲ್ಲಿರುವ ಆಂಟಿಆಕ್ಸಿಡೆಂಟ್ಸ್ ಮತ್ತು ಫೈಬರ್ ದೇಹದ ಡಿಟಾಕ್ಸಿಫಿಕೇಶನ್ ಪ್ರಕ್ರಿಯೆಗೆ ನೆರವಾಗುತ್ತವೆ. ಇದು ಲಿವರ್ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಆದರೆ, ಕಿತ್ತಳೆ ಮಾತ್ರದಿಂದಲೇ ಫ್ಯಾಟಿ ಲಿವರ್ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!

ಈ ಕಿತ್ತಳೆ ಭಾರತದಲ್ಲಿಯೂ ಲಭ್ಯವಿದೆ. ಆದ್ದರಿಂದ, ವೈದ್ಯರ ಸಲಹೆಯೊಂದಿಗೆ ಇದನ್ನು ಆಹಾರದಲ್ಲಿ ಸೇರಿಸಬಹುದು. ವಿಶೇಷವಾಗಿ ಫ್ಯಾಟಿ ಲಿವರ್ ಇರುವವರಿಗೆ ಇದು ಸಹಾಯಕವಾಗಬಹುದು. ಆದರೆ ಜ್ಯೂಸ್ ರೂಪದಲ್ಲಿ ಅಲ್ಲ, ಹಣ್ಣನ್ನೇ ತಿನ್ನುವುದು ಉತ್ತಮ. ಇನ್ನು, ಮಧುಮೇಹ ಇರುವವರು ಕಿತ್ತಳೆ ಸೇವನೆಯನ್ನು ಮಿತವಾಗಿ ಮಾಡಬೇಕು. ಯಾವುದೇ ಹೊಸ ಆಹಾರ ಪದ್ಧತಿ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಕಿತ್ತಳೆ ಸೇವನೆ ಮಾಡಿದರೆ ಲಿವರ್ ಆರೋಗ್ಯವನ್ನು ಸುಧಾರಿಸಲು ಸಹಕಾರಿ ಆಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us