ಈಗೀಗ ಚಳಿ, ಜ್ವರ, ಕೆಮ್ಮು, ಮೈ-ಕೈ ನೋವು ಏನೇ ಬಂದರೂ ಮಾತ್ರೆಗಳನ್ನು ತಿನ್ನುವ ಅಭ್ಯಾಸ ಶುರುವಾಗಿದೆ. ಆದರೆ, ನಿಯಮಿತವಾಗಿ ಮಾತ್ರೆಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ದಿನವೂ ಪ್ಯಾರಾಸಿಟಮಲ್ (Paracetamol) ಮಾತ್ರೆಯನ್ನು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ, ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು ಅಪಾಯ ಕೂಡ ಹೆಚ್ಚಾಗುತ್ತದೆ. ಮುಖ್ಯವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವ ಜನರು ಪ್ಯಾರಾಸಿಟಮಲ್ ಮಾತ್ರೆಯನ್ನು ತಿನ್ನುವ ಮೊದಲು ಎಚ್ಚರಿಕೆಯಿಂದಿರಿ ಎಂದು ಸಂಶೋಧಕರು ಹೇಳಿದ್ದಾರೆ.
ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ತಜ್ಞರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವ 110 ರೋಗಿಗಳ ಮೇಲೆ ಅಧ್ಯಯನವನ್ನು ನಡೆಸಿದ್ದಾರೆ. “ಒಂದು ಗ್ರಾಂ ಪ್ಯಾರಾಸಿಟಮಲ್ ಮಾತ್ರೆಯನ್ನು ದಿನಕ್ಕೆ ನಾಲ್ಕು ಬಾರಿ ಅಥವಾ ಎರಡು ವಾರಗಳ ಕಾಲ ಪ್ಲಸೀಬೊವನ್ನು ಸೇವಿಸುವಂತೆ ಅವರಿಗೆ ಸೂಚಿಸಲಾಯಿತು” ಎಂದು ದಿ ಟೆಲಿಗ್ರಾಫ್ ಯುಕೆ ವರದಿ ಮಾಡಿದೆ.
ಇದಾದ 4 ದಿನಗಳಲ್ಲಿ ಪ್ಯಾರಾಸಿಟಮಲ್ ಸೇವಿಸಿದ ಗುಂಪಿನಲ್ಲಿದ್ದ ಜನರಲ್ಲಿ ರಕ್ತದೊತ್ತಡವು ಗಮನಾರ್ಹವಾಗಿ ಹೆಚ್ಚಾಯಿತು. ಹೃದಯಾಘಾತ ಅಥವಾ ಪಾರ್ಶ್ವವಾಯು ಸಾಧ್ಯತೆ ಕೂಡ ಶೇ.20ರಷ್ಟು ಹೆಚ್ಚಾಯಿತು. ಇಂಗ್ಲೆಂಡ್ನಲ್ಲಿ ಸುಮಾರು 10 ಜನರಲ್ಲಿ ಒಬ್ಬರಿಗೆ ದೀರ್ಘಕಾಲದ ನೋವಿಗೆ ಪ್ರತಿದಿನ ಪ್ಯಾರಸಿಟಮಾಲ್ ಅನ್ನು ಸೂಚಿಸಲಾಗುತ್ತದೆ. ಇಂಗ್ಲೆಂಡ್ನಲ್ಲಿ ಮೂರು ವಯಸ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.
ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಚಿಕಿತ್ಸಕ ಮತ್ತು ಕ್ಲಿನಿಕಲ್ ಫಾರ್ಮಕಾಲಜಿಯ ಅಧ್ಯಕ್ಷ ಪ್ರೊಫೆಸರ್ ಡೇವಿಡ್ ವೆಬ್ ಪ್ರಕಾರ, “ರಕ್ತದೊತ್ತಡವನ್ನು ಹೆಚ್ಚಿಸಲು ತಿಳಿದಿರುವ ಐಬುಪ್ರೊಫೇನ್‌ನಂತಹ ಔಷಧಿಗಳನ್ನು ಬಳಸುವುದನ್ನು ನಿಲ್ಲಿಸಲು ರೋಗಿಗಳಿಗೆ ಸಲಹೆ ನೀಡುವುದಾದರೆ ಮೊದಲು ಅವರಿಗೆ ಪ್ಯಾರಸಿಟಮಾಲ್ ಮಾತ್ರ ಸೇವಿಸುವುದನ್ನು ನಿಲ್ಲಿಸಲು ಹೇಳಬೇಕು. ಹೃದಯಾಘಾತ ಅಥವಾ ಪಾರ್ಶ್ವವಾಯು ಸಮಸ್ಯೆ ಇರುವ ರೋಗಿಗಳಲ್ಲಿ ಪ್ಯಾರಸಿಟಮಾಲ್ ಬಳಸುವುದನ್ನು ನಿಲ್ಲಿಸುವಂತೆ ವೈದ್ಯರು ಸೂಚಿಸಬೇಕು.
ದೀರ್ಘಕಾಲದ ನೋವಿಗೆ ಪ್ಯಾರಸಿಟಮಾಲ್ ಬಳಸುವವರು ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರತ್ಯೇಕ ಔಷಧಗಳನ್ನು ಬಳಸಬೇಕು ಎಂದು ಸಂಶೋಧಕರು ಹೇಳಿದ್ದಾರೆ. ಅಧಿಕ ರಕ್ತದೊತ್ತಡ ತುಂಬಾ ಸಾಮಾನ್ಯವಾಗಿದೆ. ವಯಸ್ಕರಲ್ಲಿ ಮೂವರಲ್ಲಿ ಒಬ್ಬರು ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ ಮತ್ತು ಅದು ವಯಸ್ಸಾದಂತೆ ಹೆಚ್ಚಾಗುತ್ತದೆ. ಈಗೀಗ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದು ತುಂಬಾ ಸಾಮಾನ್ಯವಾಗಿದೆ ಎಂದು ನಮಗೆ ತಿಳಿದಿದೆ. ಅಧಿಕ ರಕ್ತದೊತ್ತಡ ಹೊಂದಿರುವ ಬಹಳಷ್ಟು ರೋಗಿಗಳು ಪ್ಯಾರೆಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಪ್ಯಾರೆಸಿಟಮಾಲ್ ರೋಗಿಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು ಎಂದಿದ್ದಾರೆ.
ಆಗಾಗ ಪ್ಯಾರಾಸಿಟಮಲ್ ತೆಗೆದುಕೊಳ್ಳುವ ಜನರು ಚಿಂತಿಸಬೇಕಾಗಿಲ್ಲ ಎಂದು NHS ಲೋಥಿಯನ್‌ನಲ್ಲಿ ಕ್ಲಿನಿಕಲ್ ಫಾರ್ಮಾಕಾಲಜಿ ಮತ್ತು ನೆಫ್ರಾಲಜಿಯ ಸಲಹೆಗಾರರಾಗಿರುವ ಡಾ. ಇಯಾನ್ ಮ್ಯಾಕ್‌ಇಂಟೈರ್ ಹೇಳಿದ್ದಾರೆ. ತಲೆನೋವು ಅಥವಾ ಜ್ವರಕ್ಕೆ ಪ್ಯಾರಸಿಟಮಾಲ್ನ ಅಲ್ಪಾವಧಿಯ ಬಳಕೆಯಿಂದ ಸಮಸ್ಯೆಯಿಲ್ಲ. ಆದರೆ ದೀರ್ಘಕಾಲದವರೆಗೆ ನಿಯಮಿತವಾಗಿ ಪ್ಯಾರಾಸಿಟಮಲ್ ಸೇವಿಸುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Health Tips: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆಲ್ಲ ಮಾತ್ರೆ ನುಂಗುತ್ತೀರಾ?; ಈ 5 ಅಪಾಯಗಳ ಬಗ್ಗೆ ಎಚ್ಚರ!
Weight Loss: ಗಟ್ಟಿ ಆಹಾರದ ಬದಲು ಜ್ಯೂಸ್ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತಾ?