ಮಹಿಳೆಯರಲ್ಲಿ ಶ್ರಮದ ಕೆಲಸ ಇಲ್ಲದಿರುವುದೇ ಪಿಸಿಒಡಿ ಸಮಸ್ಯೆ ಹೆಚ್ಚಳಕ್ಕೆ ಕಾರಣ: ಡಾ। ಅಶೋಕ್ ಭಟ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 11, 2024 | 4:53 PM

PCOD: ಪಿಸಿಒಡಿ (Polycystic Ovarian Disease) ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಸಂಭವಿಸುತ್ತದೆ. ಇದು ಸ್ತ್ರೀಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದೇಕೆ? ತಡೆಗಟ್ಟಲು ಏನು ಮಾಡಬೇಕು? ಈ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಡಾ। ಅಶೋಕ್ ಕೃಷ್ಣ ಭಟ್, ಹಳಕಾರ ಇವರು ಕೆಲವು ವಿಷಯಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರಲ್ಲಿ ಶ್ರಮದ ಕೆಲಸ ಇಲ್ಲದಿರುವುದೇ ಪಿಸಿಒಡಿ ಸಮಸ್ಯೆ ಹೆಚ್ಚಳಕ್ಕೆ ಕಾರಣ: ಡಾ। ಅಶೋಕ್ ಭಟ್
ಡಾ। ಅಶೋಕ್ ಕೃಷ್ಣ ಭಟ್
Follow us on

ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಪಿಸಿಒಡಿ (PCOD) ಕೂಡ ಒಂದು. ಇದಕ್ಕೆ ಚಿಕಿತ್ಸೆ ನೀಡುವ ಮೊದಲು ಅದರ ಮೂಲ ಕಾರಣವನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಪಿಸಿಒಡಿ (Polycystic Ovarian Disease) ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಸಂಭವಿಸುತ್ತದೆ. ಆದರೆ ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದೇಕೆ? ತಡೆಗಟ್ಟಲು ಏನು ಮಾಡಬೇಕು? ಈ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಡಾ। ಅಶೋಕ್ ಕೃಷ್ಣ ಭಟ್, ಹಳಕಾರ ಇವರು ಕೆಲವು ವಿಷಯಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

ಪಿಸಿಒಡಿ ಎಂದರೇನು?

“ಅಪರಿಪಕ್ವವಾದ ಅಂಡಾಣು ಗರ್ಭಾಶಯದ ಎರಡೂ ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಒಡಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 28 -30 ದಿನಗಳ ಅವಧಿಗೊಮ್ಮೆ ಋತುಚಕ್ರವಾಗುವುದನ್ನು ಕಾಣಬಹುದು. ಮುಟ್ಟಾದ 11-14 ನೇ ದಿನಗಳ ಮಧ್ಯೆ ಯಾವುದಾದರು ಅಂಡಕೋಶದಿಂದ ಅಂಡಾಣುವು ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತಿರುತ್ತದೆ ಮತ್ತು ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಆದರೆ ಯಾರಲ್ಲಿ ಪಿಸಿಒಡಿ ಸಮಸ್ಯೆ ಇರುತ್ತದೋ ಅವರಲ್ಲಿ ಅಂಡಕೋಶದಿಂದ ಅಂಡಾಣುಗಳು ಬಿಡುಗಡೆಯಾಗದೇ ಅಲ್ಲಿಯೇ ಅಪರಿಪಕ್ವವಾದ ಅಂಡಾಣುಗಳು ನೀರಿನ ಗುಳ್ಳೆಗಳಂತೆ ಅಂಡಕೋಶದ ಒಳ ಪದರ ಮೇಲೆ ಉಳಿದು ಹೋಗುತ್ತದೆ.”

ಕಾರಣವೇನು?

“ಸರಿಸುಮಾರು 45 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ 5 ರಿಂದ 8 ವರ್ಷಗಳ ಈಚೆಗೆ ಈ ಪಿಸಿಒಡಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. 10 ಹೆಣ್ಣು ಮಕ್ಕಳಲ್ಲಿ 2 ರಿಂದ 3 ಜನರಲ್ಲಿ ಇದು ಕಂಡು ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಗಿನವರಲ್ಲಿ ಶ್ರಮದ ಕೆಲಸ ಇಲ್ಲದಿರುವಂತದ್ದು. ಅಂದರೆ ಹಿಂದಿನ ಕಾಲದಲ್ಲಿ ಅವರ ಮನೆಯ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು. ಉದಾಹರಣೆಗೆ ನೀರು ಎತ್ತುವುದು, ನೆಲ ಒರೆಸುವುದು, ಕಸ ಗುಡಿಸುವುದು, ಕೃಷಿ ಆಧಾರಿತ ಕೆಲಸ ಹೀಗೆ ಬೆಳಿಗ್ಗೆ ಎರಡರಿಂದ ಮೂರು ತಾಸು ಅಥವಾ ಪೂರ್ತಿ ದಿನ ಶ್ರಮದ ಕೆಲಸಗಳನ್ನು ಮಾಡುತ್ತಿದ್ದರು ಅವರಿಗೆ ವ್ಯಾಯಾಮ ಅಂದರೆ ಇದೇ ಆಗಿತ್ತು. ಆದರೆ ಈಗ ಯಾಂತ್ರಿಕ ಜೀವನದಿಂದ ನಮ್ಮ ಮನೆ ಕೆಲಸ ಮಾಡಲು ಬೇರೆಯವರನ್ನು ಹಣ ಕೊಟ್ಟು ಇಟ್ಟುಕೊಳ್ಳುತ್ತೇವೆ, ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವುದು, ಸಂಜೆ ಮನೆಗೆ ಬಂದು ಅದನ್ನೇ ಮಾಡುವುದು ಇದರಿಂದ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮ ಇಲ್ಲವಾಗಿದೆ ಈ ರೀತಿಯ ಜೀವನ ಶೈಲಿ ಪಿಸಿಒಡಿ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ”

“ಇದಲ್ಲದೆ ಈಗಿನ ಹೆಣ್ಣು ಮಕ್ಕಳ ಆಹಾರ ಶೈಲಿ, ಒತ್ತಡದ ಜೀವನ, ಕೆಲಸದ ಪಾಳಿ ಬದಲಾವಣೆಯಿಂದ ನಿದ್ರೆಯ ಕೊರತೆ, ಸರಿಯಾದ ಸಮಯದಲ್ಲಿ ಊಟ ತಿಂಡಿ ಸೇವನೆ ಮಾಡದಿರುವುದು, ಪೋಷಕಾಂಶ ಮತ್ತು ವಿಟಮಿನ್ ಕೊರತೆ ಇವೆಲ್ಲವೂ ಕೂಡ ಪಿಸಿಒಡಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದೆಲ್ಲದರ ಹೊರತಾಗಿ ಕೆಲವೊಮ್ಮೆ ಆನುವಂಶಿಕವಾಗಿ ಅಂದರೆ ಕುಟುಂಬದಲ್ಲಿ ಯಾರಾದರೂ ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆ ಬರುವ ಸಾಧ್ಯತೆ ಇದೆ.”

ಇದನ್ನೂ ಓದಿ: ಪ್ರತಿದಿನ ಬಿಸಿ ನೀರಿನ ಸ್ನಾನ ಮಾಡಿದ್ರೆ ಈ ಅಪಾಯ ಖಂಡಿತ

ತಡೆಗಟ್ಟುವುದು ಹೇಗೆ?

“ಬೆಳಿಗ್ಗೆ ಎದ್ದ ತಕ್ಷಣ ಸ್ವಲ್ಪ ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ಓಂಕಾರದ ಉಚ್ಛರಣೆ, ದೇವರ ಪೂಜೆ, ಮಂತ್ರ ಪಠಣ, ಭಜನೆ, ಶಂಖನಾದ ಅಥವಾ ಸಂಗೀತ, ನೃತ್ಯ, ಏರೋಬಿಕ್ಸ್, ಸ್ವಿಮಿಂಗ್, ಸೈಕ್ಲಿಂಗ್, ಯೋಗ ಹೀಗೆ ಯಾವುದಾದರೂ ಒಂದು ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಳ್ಳಿ ಸಾಧ್ಯವಾದರೆ ಎಲ್ಲವನ್ನೂ ಮಾಡಬಹುದು. ಅಥವಾ ಬೆಳಗ್ಗಿನ ಸಮಯದಲ್ಲಿ ನಿಮ್ಮ ಮನಸ್ಸಿಗೆ ಖುಷಿ ನೀಡುವಂತಹ ಕೆಲಸ ಮಾಡಿ. ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಆಹಾರ ಕ್ರಮವನ್ನು ಸುಧಾರಿಸಿಕೊಳ್ಳಿ. ಅಂದರೆ ಬೇಡದ ಆಹಾರಗಳ ಸೇವನೆ, ಹೆಚ್ಚು ಮೈದಾ ಬಳಕೆ ಮಾಡುವುದು, ಕಡಿಮೆ ಪೌಷ್ಟಿಕಾಂಶವಿರುವ ಆಹಾರಗಳ ಸೇವನೆ ಮಾಡುವುದನ್ನು ತಪ್ಪಿಸಿ. ತಿಂಗಳಿನಲ್ಲಿ ಒಂದು ದಿನವಾದರೂ ಉಪವಾಸ ಮಾಡಿ, ನೀವು ಮಾಂಸ ಪ್ರೀಯರಾದರೆ ವಾರದಲ್ಲಿ ಎರಡು ಅಥವಾ ಮೂರು ದಿನ ಅದನ್ನು ಸೇವನೆ ಮಾಡಬೇಡಿ. 7-8 ಗಂಟೆ ಸರಿಯಾಗಿ ನಿದ್ರೆ ಮಾಡಿ. ಇದರಿಂದ ನಿಮ್ಮ ದೇಹ ಆರೋಗ್ಯಕರವಾಗಿರುತ್ತದೆ.

ಪಿಸಿಒಡಿ ಸಮಸ್ಯೆಯ ಲಕ್ಷಣಗಳೇನು?

ತೂಕ ಹೆಚ್ಚಳ

ಅನಗತ್ಯ ಕೂದಲ ಬೆಳವಣಿಗೆ ಅಥವಾ ಬೇಡದ ಜಾಗದಲ್ಲಿ ಕೂದಲು ಬರುವಂತದ್ದು

ತಲೆ ಕೂದಲು ತುಂಬಾ ಉದುರುವುದು

ಮೊಡವೆ ಸಮಸ್ಯೆ

ಬಹಳ ತಿಂಗಳಾದರೂ ಮಟ್ಟು ಆಗದಿರುವುದು

ಮುಟ್ಟಿನ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವವಾಗುವುದು ಅಥವಾ ಅತಿಯಾದ ಹೊಟ್ಟೆ ನೋವು

ಎರಡು ಋತುಚಕ್ರದ ಮಧ್ಯೆ ಮತ್ತೆ ರಕ್ತಸ್ರಾವ ಕಾಣಿಸಿಕೊಳ್ಳುವುದು
ಚಿಂತೆ ಮತ್ತು ಮಾನಸಿಕ ಖಿನ್ನತೆ

ಉಬ್ಬಸ

ಈ ಕಾಯಿಲೆಯಿಂದಾಗುವ ಇತರೆ ಪರಿಣಾಮಗಳು ಎಂದರೆ ಬಂಜೆತನ.

ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

“ಹಸಿರು ಸೊಪ್ಪು ತರಕಾರಿಗಳು, ದ್ವಿದಳ ಧಾನ್ಯಗಳು ಅದರಲ್ಲಿಯೂ ಸೋಯಾ ಬೀನ್ಸ್‌ಗಳ ಸೇವನೆ ಮಾಡಬೇಕು. ಜೊತೆಗೆ ತಾಜಾ ಹಣ್ಣುಗಳು ಅದರ ರಸ, ಒಮೇಗಾ–3 ಅಂಶ ಹೆಚ್ಚಿರುವ ಆಹಾರಗಳು, ಕೆಂಪಕ್ಕಿಯ ಜೊತೆ ಹೆಚ್ಚು ನಾರಿನ ಅಂಶವುಳ್ಳ ಸಮತೋಲಿತ ಆಹಾರ ಸೇವಿಸಬೇಕು. ಜೊತೆಗೆ ಅನಗತ್ಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು, ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಿಕೊಂಡು ಹಾರ್ಮೋನ್‌ಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದಾಗಿದೆ.”

“ಪೀರಿಯೆಡ್ಸ್ ಬದಲಾವಣೆ ಆಗುತ್ತಿದ್ದರೆ, ಅದಕ್ಕೆ ಹೆದರುವ ಬದಲು ಈ ಸಮಸ್ಯೆ ಪತ್ತೆ ಹಚ್ಚಿ ಆರಂಭದಲ್ಲೇ ಚಿಕಿತ್ಸೆ ನೀಡುವುದು ಮುಖ್ಯವಾಗುತ್ತದೆ. ಇದರಿಂದ ಈ ಸಮಸ್ಯೆಯನ್ನು ಹತೋಟಿಯಲ್ಲಿಡಬಹುದು. ಜೊತೆಗೆ ಗರ್ಭಧಾರಣೆಯ ಸಮಯದಲ್ಲಿ ತೊಂದರೆ ಅನುಭವಿಸುವುದನ್ನು ತಪ್ಪಿಸಲು ಆಹಾರಕ್ರಮ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಇದರಿಂದ ಸಂತಾನೋತ್ಪತ್ತಿಯ ಸಾಧ್ಯತೆ ಹೆಚ್ಚಾಗುತ್ತದೆ. ಈ ಸಮಸ್ಯೆ ಇರುವ ಕೆಲವರಲ್ಲಿ ತಮಗೆ ಮಕ್ಕಳೇ ಆಗುವುದಿಲ್ಲ ಎಂಬ ಹೆದರಿಕೆ ಇರುತ್ತದೆ ಅಂತವರು 6 ರಿಂದ 7 ತಿಂಗಳು ಸರಿಯಾಗಿ ವ್ಯಾಯಾಮ ಮಾಡಿ, ನಿಮ್ಮ ಆಹಾರ ಪದ್ದತಿಯನ್ನು ಸರಿಯಾಗಿ ಇಟ್ಟುಕೊಳ್ಳಿ, ಇದರಿಂದ ಹೆದರುವ ಅವಶ್ಯಕತೆ ಇರುವುದಿಲ್ಲ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ