ಬೆಳಗ್ಗೆ ತಿಂಡಿ ತಿನ್ನದೆ ಇರುವ ಪರಿಪಾಠ ಇದೆಯಾ?-ಈ ಕಾಯಿಲೆಗಳಿಗೆ ತುತ್ತಾಗಬಹುದು, ಕೂಡಲೇ ಎಚ್ಚೆತ್ತುಕೊಳ್ಳಿ
ಬ್ರೇಕ್ಫಾಸ್ಟ್ನ್ನು ನಿರಂತರವಾಗಿ ಬಿಡುತ್ತ ಬಂದರೆ ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಕುಂದಬಹುದು. ಇದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಅಷ್ಟೇ ಅಲ್ಲ ಇದರಿಂದ ಮೈಗ್ರೇನ್ ಸಮಸ್ಯೆ ಶುರುವಾಗುತ್ತದೆ.
ಬೆಳಗಿನ ತಿಂಡಿ ದೇಹಕ್ಕೆ ತುಂಬ ಮುಖ್ಯ. ಬೆಳಗಿನ ಉಪಾಹಾರ ತಪ್ಪಿಸಬೇಡಿ ಎಂದು ವೈದ್ಯರು, ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ರಾತ್ರಿ ಊಟ ಮಾಡಿ ಮಲಗಿ, ಬೆಳಗ್ಗೆ ಏಳುವಷ್ಟರಲ್ಲಿ ದೇಹಕ್ಕೆ ಶಕ್ತಿಯ ಅವಶ್ಯಕತೆ ಇರುತ್ತದೆ. ಪೋಷಕಾಂಶಗಳುಳ್ಳ ತಿಂಡಿ ತಿಂದಾಗಲೇ ನಮ್ಮ ದೇಹಕ್ಕೆ ಚೈತನ್ಯ ಬರುತ್ತದೆ. ಆದರೆ ಅದೆಷ್ಟೋ ಜನ ಈ ಬ್ರೇಕ್ಫಾಸ್ಟ್ನ್ನು ಮರೆತೇ ಬಿಡುತ್ತಾರೆ. ಬೆಳಗ್ಗೆ ಏಳಲು ತಡ ಮಾಡಿಕೊಳ್ಳುವುದು, ಒಮ್ಮೆ ಎದ್ದರೂ ಕೆಲಸಕ್ಕೆ ಹೋಗುವ ಗಡಿಬಿಡಿ, ಆಮೇಲೆ ತಿಂದರಾಯಿತು ಬಿಡು ಎಂಬ ಉದಾಸೀನ..ಹೀಗೆ ವಿವಿಧ ಕಾರಣಗಳಿಂದ ಬ್ರೇಕ್ಫಾಸ್ಟ್ಗೆ ಕತ್ತರಿ ಹಾಕುತ್ತಾರೆ. ಅಂದರೆ ಮುನ್ನಾದಿನ ರಾತ್ರಿ ಊಟ ಮಾಡಿದವರು, ಮರುದಿನ ಮಧ್ಯಾಹ್ನದ ಊಟವನ್ನೇ ಮಾಡುತ್ತಾರೆ. ಅಂದರೆ ಮಧ್ಯ ಸುಮಾರು 12 ತಾಸುಗಳ ಕಾಲ ಹೊಟ್ಟೆಗೇನೂ ಹಾಕದೆ ಕಳೆಯುತ್ತಾರೆ..! ನೀವು ಸಹ ಇದೇ ಸಾಲಿಗೆ ಸೇರುವವರಾಗಿದ್ದರೆ ಇಂದೇ ಆ ಅಭ್ಯಾಸ ಬಿಟ್ಟುಬಿಡಿ. ಯಾಕೆಂದ್ರೆ ಬೆಳಗ್ಗಿನ ತಿಂಡಿ ತಪ್ಪಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಬ್ರೇಕ್ಫಾಸ್ ತಪ್ಪಿಸುವುದರಿಂದ ಯಾವೆಲ್ಲ ದುಷ್ಪರಿಣಾಮಗಳು ಉಂಟಾಗುತ್ತವೆ ನೋಡಿ
ತೂಕದಲ್ಲಿ ಹೆಚ್ಚಳ
ನೀವೇನಾದರೂ ಪ್ರತಿದಿನ ಬೆಳಗ್ಗೆ ತಿಂಡಿ ತಿನ್ನದೆ, ಸೀದಾ ಮಧ್ಯಾಹ್ನದ ಊಟವನ್ನೇ ಮಾಡುತ್ತಿದ್ದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಂದರೆ ನಿಮಗೆ ತುಂಬ ಹಸಿವಾಗಿದ್ದರೂ ಅದನ್ನು ತಡೆದುಕೊಂಡು ಮಧ್ಯಾಹ್ನದವರೆಗೆ ಕಾಯುತ್ತಿರುತ್ತೀರಿ. ಹಾಗಾಗಿ ಸಹಜವಾಗಿಯೇ ಮಧ್ಯಾಹ್ನ ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಬೇಕು ಎನ್ನಿಸುತ್ತದೆ. ಹಸಿವು ತುಂಬ ಇದ್ದಾಗ ಕೊಬ್ಬಿನ ಅಂಶ ಜಾಸ್ತಿ ಇರುವ ಮತ್ತು ಸಕ್ಕರೆ ಪ್ರಮಾಣ ಅಧಿಕವಾಗಿರುವ ಆಹಾರಗಳನ್ನು ಸೇವಿಸುವ ಬಯಕೆ ಆಗುತ್ತದೆ. ಇದರಿಂದಾಗಿ ನಿಮ್ಮ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮಧುಮೇಹ ಕಾಯಿಲೆ ಬರಬಹುದು !
ನೀವು ಸತತವಾಗಿ ಬ್ರೇಕ್ಫಾಸ್ಟ್ ತಪ್ಪಿಸುತ್ತಿದ್ದರೆ ಮಧುಮೇಹ ಕಾಯಿಲೆಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚ. ಅಂದರೆ ತುಂಬ ಸುದೀರ್ಘ ಸಮಯದವರೆಗೆ ಏನನ್ನೂ ತಿನ್ನದೆ, ಒಮ್ಮೆಲೇ ಜಾಸ್ತಿ ಊಟ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟದ ಒಮ್ಮೆಲೇ ಹೆಚ್ಚುತ್ತದೆ. ದೇಹದಲ್ಲಿ ಈ ಪ್ರಕ್ರಿಯೆ ಸತತವಾಗಿ ನಡೆಯುತ್ತಿದ್ದರೆ ಅಂಥವರಿಗೆ ಟೈಪ್ 2 ವಿಧದ ಡಯಾಬಿಟಿಸ್ ಬರಬಹುದು.
ಮಾನಸಿಕ ಅಸ್ವಸ್ಥತೆ
ಇದು ವಿಚಿತ್ರವಾದರೂ ಸತ್ಯ ಎನ್ನುತ್ತದೆ ಒಂದು ಸಂಶೋಧನೆ. ಹ್ಯೂಮನ್ ಸೈನ್ಸನ್ಸ್ ಆಫ್ ಹೆಲ್ತ್-ಸೋಷಿಯಲ್ ಸರ್ವೀಸಸ್ ಎಂಬ ಜಪಾನ್ನ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ, ಯಾರು ಪ್ರತಿದಿನವೂ ಬೆಳಗ್ಗಿನ ತಿಂಡಿಯನ್ನು ತಿನ್ನುವುದಿಲ್ಲವೋ ಅಂಥವರ ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂದರೆ ಬೆಳಗಿನ ಉಪಾಹಾರ ತಿನ್ನದೆ ಇರುವ ಪರಿಪಾಠವನ್ನು ತುಂಬ ದಿನ ನಡೆಸಿಕೊಂಡು ಬಂದರೆ ಅದು ಮಿದುಳಿನ ಜೀವಕೋಶಗಳ ಕಾರ್ಯಾಚರಣೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಅರಿವಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಅದು ಬುದ್ಧಿಮಾಂದ್ಯತೆಗೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಮೈಗ್ರೇನ್
ಬ್ರೇಕ್ಫಾಸ್ಟ್ನ್ನು ನಿರಂತರವಾಗಿ ಬಿಡುತ್ತ ಬಂದರೆ ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಕುಂದಬಹುದು. ಇದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಅಷ್ಟೇ ಅಲ್ಲ ಇದರಿಂದ ಮೈಗ್ರೇನ್ ಸಮಸ್ಯೆ ಶುರುವಾಗುತ್ತದೆ. ಆರಂಭದಲ್ಲಿ ಸಣ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳುವ ತಲೆ ನೋವು ಬರುಬರುತ್ತ ಮೈಗ್ರೇನ್ಗೆ ತಿರುಗುತ್ತದೆ. ಇನ್ನು ಜೀರ್ಣ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ.
ರೋಗ ನಿರೋಧಕ ಶಕ್ತಿ ಕುಂದುತ್ತದೆ
ಬೆಳಗ್ಗಿನ ತಿಂಡಿ ತಿನ್ನದೆ ಇದ್ದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಹೀಗಾಗಿ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ. ಇದರಿಂದ ನಮ್ಮ ದೇಹಕ್ಕೆ ಯಾವುದೇ ಬ್ಯಾಕ್ಟೀರಿಯಾ, ವೈರಸ್ ಪ್ರವೇಶಿಸಿದರೂ ಅದರ ವಿರುದ್ಧ ಹೋರಾಡುವ ಶಕ್ತಿ ಕುಂದುತ್ತದೆ. ಹೀಗಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.
ಇದನ್ನೂ ಓದಿ: ನೆಹರು ಅವರಿಂದ ಮೋದಿವರೆಗೆ: 14 ಪ್ರಧಾನಿಗಳ ಕೊಡುಗೆಯನ್ನು ಸ್ಮರಿಸುವ ಪ್ರಧಾನ ಮಂತ್ರಿ ಸಂಗ್ರಹಾಲಯದಲ್ಲಿ ಏನೇನಿದೆ?