
ತೂಕ ಇಳಿಸಿಕೊಳ್ಳಲು ಹಲವರು ಆಹಾರ ನಿಯಂತ್ರಣ, ವ್ಯಾಯಾಮ ಸೇರಿದಂತೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೂ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಅಂತವರು ತಮ್ಮ ದಿನನಿತ್ಯದ ಅಭ್ಯಾಸಗಳನ್ನು ಸರಿಯಾಗಿ ಪರಿಶೀಲಿಸುವುದು ಬಹಳ ಮುಖ್ಯವಾಗುತ್ತದೆ. ವಿಶೇಷವಾಗಿ ಸಂಜೆ ಸಮಯದಲ್ಲಿ ಅತಿಯಾಗಿ ತಿಂಡಿ ತಿನ್ನುವುದು, ರಾತ್ರಿ ನಿದ್ರೆಯನ್ನು ಸರಿಯಾಗಿ ಮಾಡದೆಯೇ ನಿರ್ಲಕ್ಷಿಸುವುದು ಮತ್ತು ಒತ್ತಡದಿಂದ ಆಹಾರ ಸೇವಿಸುವುದು ತೂಕ ನಿರ್ವಹಣೆಗೆ ಅಡ್ಡಿಯಾಗಬಹುದು. ಹಾಗಾದರೆ ಸಂಜೆ 5 ಗಂಟೆಯ ನಂತರ ತಿನ್ನುವುದರಿಂದಲೇ ತೂಕ ಹೆಚ್ಚಾಗುತ್ತದೆ, ತೂಕ ಇಳಿಸಿಕೊಳ್ಳಲು ಪಾಲಿಸಬೇಕಾದ ಮುಖ್ಯ ಸಲಹೆಗಳು ಯಾವವು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತೂಕ ಇಳಿಸಬೇಕೆಂದು ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟವನ್ನು ಬಿಟ್ಟುಬಿಡುವುದು ಕೆಲವರಲ್ಲಿ ಸಂಜೆ ತೀವ್ರ ಹಸಿವಿಗೆ ಕಾರಣವಾಗಬಹುದು. ಇದರಿಂದ ರಾತ್ರಿ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆ ಇದೆ. ಹೀಗಾಗಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ದಿನವಿಡೀ ಸಮತೋಲನದಿಂದ ಪಡೆಯುವುದು ಉತ್ತಮ.
ಸಂಜೆ ಚಹಾದೊಂದಿಗೆ ಚಿಪ್ಸ್, ಬಿಸ್ಕತ್ತು ಮತ್ತು ಕರಿದ ತಿಂಡಿಗಳನ್ನು ಸೇವಿಸುವುದು ಸಾಮಾನ್ಯ. ಪ್ಯಾಕೆಟ್‌ನಿಂದ ನೇರವಾಗಿ ತಿನ್ನುವಾಗ ಪ್ರಮಾಣದ ಮೇಲೆ ಗಮನ ಕಡಿಮೆಯಾಗಬಹುದು. ಹಾಗಾಗಿ ಅವುಗಳ ಬದಲು ಹಣ್ಣುಗಳು, ಸಕ್ಕರೆ ಸೇರಿಸದ ಮೊಸರು ಅಥವಾ ಮಿತ ಪ್ರಮಾಣದ ಬೀಜಗಳನ್ನು ಪರ್ಯಾಯವಾಗಿ ಆಯ್ಕೆ ಮಾಡಬಹುದು.
ಇದನ್ನೂ ಓದಿ: ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತೀರಾ? ಆಸಿಡ್ ರಿಫ್ಲಕ್ಸ್ ಮಾತ್ರವಲ್ಲ, ಈ ವಿಷಯಗಳನ್ನೂ ತಿಳಿಯಿರಿ
ಸರಿಯಾದ ನಿದ್ರೆ ಇಲ್ಲದಿರುವುದು ಹಸಿವು ಮತ್ತು ಆಹಾರದ ಆಯ್ಕೆಯ ಮೇಲೆ ಪರಿಣಾಮ ಬೀರಬಹುದು. ವಯಸ್ಕರು ಸಾಮಾನ್ಯವಾಗಿ ರಾತ್ರಿ ಏಳರಿಂದ ಒಂಬತ್ತು ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸಬೇಕು. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸವೂ ಸಹಾಯಕವಾಗಬಹುದು.
ತೂಕ ಇಳಿಸಲು ರಾತ್ರಿ ಅನ್ನ ತಿನ್ನಬಾರದು ಎಂಬ ನಿಯಮವಿಲ್ಲ. ಬದಲಾಗಿ, ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಅನ್ನ ಅಥವಾ ಚಪಾತಿಯೊಂದಿಗೆ ತರಕಾರಿಗಳು, ಬೇಳೆಕಾಳುಗಳು ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸುವುದು ಉತ್ತಮ.
ವಾಸ್ತವವಾಗಿ ಹಸಿವಿಲ್ಲದಿದ್ದರೂ ಒತ್ತಡ ಅಥವಾ ಬೇಸರದಿಂದ ತಿಂಡಿ ತಿನ್ನುವ ಅಭ್ಯಾಸದ ಜೊತೆಗೆ ಚಿಂತೆ, ಯಾವುದೋ ಆಲೋಚನೆಯಲ್ಲಿ ಇರುತ್ತೀರಾ ಎಂಬುದನ್ನು ಗಮನಿಸಿ. ಅಗತ್ಯವಿದ್ದರೆ ಸ್ವಲ್ಪ ನಡೆಯುವುದು ಅಥವಾ ವಿಶ್ರಾಂತಿ ಪಡೆಯುವುದು ಸಹಾಯ ಮಾಡಬಹುದು. ನಿಜವಾದ ಹಸಿವನ್ನು ನಿರ್ಲಕ್ಷಿಸಬಾರದು.
ತೂಕ ಇಳಿಕೆಗೆ ಮುಖ್ಯ ಸಲಹೆ: ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆಗೆ ಆದ್ಯತೆ ನೀಡಿ. ವೇಗವಾಗಿ ತೂಕ ಇಳಿಸಿಕೊಳ್ಳಲು ಊಟ ಬಿಡುವುದು ಅಥವಾ ಕಠಿಣ ಡಯಟ್ ಅನುಸರಿಸುವುದನ್ನು ತಪ್ಪಿಸಿ. ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Sun, 11 October 26