ಪ್ರತಿದಿನ 1 ಕಿಲೋಮೀಟರ್ ನಡೆದರೆ ಎಷ್ಟು ಕ್ಯಾಲೊರಿ ಕರಗುತ್ತೆ ಗೊತ್ತಾ? ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ

ಇತ್ತೀಚಿನ ದಿನಗಳಲ್ಲಿ, 30 ವರ್ಷ ವಯಸ್ಸಿನಲ್ಲೂ ಹೃದಯ ಸಂಬಂಧಿ ಕಾಯಿಲೆಗಳು, ಒತ್ತಡ ಮತ್ತು ನಿದ್ರಾಹೀನತೆ ತುಂಬಾ ಸಾಮಾನ್ಯವಾಗಿದೆ. ಇವೆಲ್ಲವನ್ನೂ ತಡೆಯಲು ನಮ್ಮ ಮುಂದೆ ಒಂದು ಸಿಂಪಲ್ ಪರಿಹಾರವಿದೆ. ಅದು ವಾಕಿಂಗ್. ದಿನಕ್ಕೆ ಕೇವಲ ಒಂದು ಕಿಲೋಮೀಟರ್ ನಡೆಯುವುದರಿಂದ ನಿಮ್ಮ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ವಾಕಿಂಗ್ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? 1 ಕಿಲೋಮೀಟರ್ ನಡೆಯುವ ಅಭ್ಯಾಸದಿಂದ ಎಷ್ಟೆಲ್ಲಾ ಲಾಭವಿದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರತಿದಿನ 1 ಕಿಲೋಮೀಟರ್ ನಡೆದರೆ ಎಷ್ಟು ಕ್ಯಾಲೊರಿ ಕರಗುತ್ತೆ ಗೊತ್ತಾ? ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ
1 Km Walk Benefits
Image Credit source: Getty Images

Updated on: May 26, 2026 | 9:10 PM

ಇಂದಿನ ವೇಗದ ಜೀವನಶೈಲಿಯಲ್ಲಿ ಫಿಟ್ ಆಗಿರುವುದು ದೊಡ್ಡ ಸವಾಲಾಗಿದೆ. ವ್ಯಾಯಾಮ ಮಾಡುವುದಕ್ಕೂ ಸಮಯ ಸಿಗದವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕೇವಲ 1 ಕಿಲೋಮೀಟರ್ ನಡೆಯುವ (Walk) ಅಭ್ಯಾಸವೂ ದೇಹದ ಆರೋಗ್ಯದಲ್ಲಿ ದೊಡ್ಡ ಬದಲಾವಣೆ ತರಬಹುದು. ಹೌದು, ತಜ್ಞರು ನೀಡಿರುವ ಮಾಹಿತಿ ಅನುಸಾರ, ಸಾಮಾನ್ಯವಾಗಿ 1 ಕಿ.ಮೀ. ನಡೆದರೆ ಸುಮಾರು 60ರಿಂದ 100 ಕ್ಯಾಲೊರಿಗಳವರೆಗೆ ಕರಗಿಸಬಹುದು. ಇದು ವ್ಯಕ್ತಿಯ ತೂಕ, ಎತ್ತರ ಮತ್ತು ನಡೆಯುವ ವೇಗದ ಮೇಲೆ ಅವಲಂಬಿತವಾಗಿರುತ್ತದೆ. ವೇಗವಾಗಿ ನಡೆದಷ್ಟು ಹೆಚ್ಚು ಕ್ಯಾಲೊರಿ ಕರಗುತ್ತದೆ.

ವಾಕಿಂಗ್ ಮಾಡುವುದರಿಂದ ಸಿಗುವ ಪ್ರಯೋಜನಗಳು:

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಪ್ರತಿದಿನ ವಾಕಿಂಗ್ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ: ನಡೆಯುವಾಗ ದೇಹದಲ್ಲಿ ‘ಹ್ಯಾಪಿ ಹಾರ್ಮೋನ್’ ಎಂದು ಕರೆಯಲಾಗುವ ಎಂಡಾರ್ಫಿನ್ ಬಿಡುಗಡೆ ಆಗುತ್ತದೆ. ಇದು ಒತ್ತಡ, ಆತಂಕ ಮತ್ತು ಮನಸ್ಸಿನ ದೌರ್ಬಲ್ಯ ಕಡಿಮೆ ಮಾಡಲು ಸಹಕಾರಿ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಪ್ರತಿದಿನ ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಲಬದ್ಧತೆ ಸಮಸ್ಯೆ ಕಡಿಮೆಯಾಗಬಹುದು ಮತ್ತು ದೇಹದ ಮೆಟಾಬಾಲಿಸಂ ಚುರುಕಾಗುತ್ತದೆ.

ಚೆನ್ನಾಗಿ ನಿದ್ರೆ ಬರುತ್ತದೆ: ವಾಕಿಂಗ್ ದೇಹಕ್ಕೆ ಸಹಜವಾದ ಶ್ರಮ ನೀಡುತ್ತದೆ. ಇದರಿಂದ ರಾತ್ರಿ ಗಾಢ ನಿದ್ರೆ ಬರಲು ಸಹಾಯವಾಗುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗಬಹುದು.

ತೂಕ ಇಳಿಕೆಗೆ ಸಹಕಾರಿ: ಸರಿಯಾದ ಆಹಾರ ಪದ್ಧತಿಯ ಜೊತೆಗೆ ಪ್ರತಿದಿನ ವಾಕಿಂಗ್ ಮಾಡಿದರೆ ತೂಕ ಇಳಿಕೆಗೆ ಉತ್ತಮ ಫಲಿತಾಂಶ ಸಿಗಬಹುದು. ವಿಶೇಷವಾಗಿ ಹೊಟ್ಟೆ ಸುತ್ತಿನ ಕೊಬ್ಬು ಕಡಿಮೆ ಮಾಡಲು ಸಹಾಯವಾಗುತ್ತದೆ.

ತಜ್ಞರ ಪ್ರಕಾರ, ಕೇವಲ 1 ಕಿಲೋಮೀಟರ್ ಎಂದು ನಿರ್ಲಕ್ಷಿಸಬಾರದು. ಈ ಚಿಕ್ಕ ಅಭ್ಯಾಸವನ್ನು ಪ್ರತಿದಿನ ಮುಂದುವರಿಸಿದರೆ ದೀರ್ಘಾವಧಿಯಲ್ಲಿ ಸಾವಿರಾರು ಕ್ಯಾಲೊರಿಗಳನ್ನು ಕರಗಿಸಬಹುದು. ಯಾವುದೇ ವೆಚ್ಚವಿಲ್ಲದೆ ಆರೋಗ್ಯಕರ ಜೀವನಶೈಲಿ ಪಾಲಿಸಲು ವಾಕಿಂಗ್ ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us