10 ನಿಮಿಷ ಉಪ್ಪಿನ ಮೇಲೆ ನಿಂತರೆ ಏನಾಗುತ್ತದೆ? ಆರೋಗ್ಯದ ಬಗ್ಗೆ ತಿಳಿಯಬೇಕಾದ ಸತ್ಯಗಳು

ಉಪ್ಪಿನ ಮೇಲೆ ನಿಲ್ಲುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಸಿಗುತ್ತವೆ ಎಂಬ ಹೇಳಿಕೆಗಳಿಗೆ ವೈಜ್ಞಾನಿಕ ಆಧಾರ ಸೀಮಿತವಾಗಿದೆ. ಆದರೆ ಉಗುರುಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಕೆಲವರಿಗೆ ಆಯಾಸ ಕಡಿಮೆಯಾಗಿ ವಿಶ್ರಾಂತಿಯ ಅನುಭವವಾಗಬಹುದು. ಕೆಲವರು ಉಪ್ಪಿನ ನೀರು ನೋವು, ಊತ ಅಥವಾ ರಕ್ತ ಪರಿಚಲನೆಯ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ಎನ್ನುತ್ತಾರೆ. ಹಾಗಾದರೆ ಇದು ಎಷ್ಟರ ಮಟ್ಟಿಗೆ ನಿಜ, ಈ ಅಭ್ಯಾಸ ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

10 ನಿಮಿಷ ಉಪ್ಪಿನ ಮೇಲೆ ನಿಂತರೆ ಏನಾಗುತ್ತದೆ? ಆರೋಗ್ಯದ ಬಗ್ಗೆ ತಿಳಿಯಬೇಕಾದ ಸತ್ಯಗಳು
Salt Water Foot Soak
Image Credit source: Getty Images

Updated on: Oct 11, 2026 | 7:47 PM

ದಿನವಿಡೀ ಕೆಲಸ ಮಾಡಿ ದಣಿದಾಗ ಕಾಲುಗಳಲ್ಲಿ ನೋವು, ಆಯಾಸ ಮತ್ತು ಭಾರವಾದ ಅನುಭವ ಉಂಟಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕೆಲವರು ಉಪ್ಪಿನ ಮೇಲೆ ನಿಲ್ಲುವುದು ಅಥವಾ ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸುವುದು ಉತ್ತಮ ಎಂದು ಹೇಳುತ್ತಾರೆ. ಆದರೆ ಈ ಎರಡು ವಿಧಾನಗಳು ಒಂದೇ ಅಲ್ಲ. ಉಪ್ಪಿನ ಮೇಲೆ ನಿಂತರೆ ದೇಹದ ಒತ್ತಡ ಕಡಿಮೆಯಾಗುತ್ತದೆ, ರಕ್ತ ಪರಿಚಲನೆ ಹೆಚ್ಚುತ್ತದೆ ಅಥವಾ ದೇಹದಲ್ಲಿನ ನಕಾರಾತ್ಮಕ ಶಕ್ತಿ ಹೊರಹೋಗುತ್ತದೆ ಎಂಬ ನಂಬಿಕೆಗಳಿವೆ. ಇದು ನಿಜವಾಗಿಯೂ ಸತ್ಯವೇ, ಈ ಅಭ್ಯಾಸ ಆಯಾಸಕ್ಕೆ ಉಪಶಮನಕಾರಿಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾಲುಗಳ ಆಯಾಸಕ್ಕೆ ಉಪಶಮನ ಸಿಗುತ್ತದೆಯೇ?

ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಕೆಲವರಿಗೆ ಆರಾಮ ಮತ್ತು ವಿಶ್ರಾಂತಿಯ ಅನುಭವವಾಗಬಹುದು. ದಿನವಿಡೀ ನಿಂತು ಕೆಲಸ ಮಾಡುವುದರಿಂದ ಉಂಟಾದ ಆಯಾಸವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿಕೊಳ್ಳಲು ಇದು ಸಹಾಯ ಮಾಡಬಹುದು. ಆದರೆ ಈ ಪರಿಣಾಮ ಉಪ್ಪಿನಿಂದಲೇ ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಇದನ್ನು ಅನುಸರಿಸಿ ನೋಡಿ ಉಪಯೋಗವಾದರೆ ಮುಂದುವರೆಸಬಹುದು.

ರಕ್ತ ಪರಿಚಲನೆ ಸುಧಾರಿಸುತ್ತದೆಯೇ?

ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸುವುದರಿಂದ ಉಷ್ಣತೆಯ ಪರಿಣಾಮವಾಗಿ ರಕ್ತನಾಳಗಳು ತಾತ್ಕಾಲಿಕವಾಗಿ ವಿಸ್ತರಿಸಬಹುದು. ಆದರೂ ಉಪ್ಪಿನ ಮೇಲೆ ನಿಲ್ಲುವುದರಿಂದ ಕಾಲುಗಳ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತೀರಾ? ಆಸಿಡ್ ರಿಫ್ಲಕ್ಸ್ ಮಾತ್ರವಲ್ಲ, ಈ ವಿಷಯಗಳನ್ನೂ ತಿಳಿಯಿರಿ

ಪಾದಗಳ ನೋವು ಮತ್ತು ಊತ ಕಡಿಮೆಯಾಗುತ್ತದೆಯೇ?

ಉಪ್ಪಿನ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಎಲ್ಲ ರೀತಿಯ ನೋವು ಅಥವಾ ಊತ ಕಡಿಮೆಯಾಗುವುದಿಲ್ಲ. ಕೀಲು ನೋವು, ಗಾಯ ಅಥವಾ ನಿರಂತರ ಊತಕ್ಕೆ ನಿರ್ದಿಷ್ಟ ಕಾರಣಗಳಿರಬಹುದು. ಇಂತಹ ಲಕ್ಷಣಗಳಿಗೆ ಉಪ್ಪಿನ ನೀರನ್ನು ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು. ಕೆಲವರಿಗೆ ಸಣ್ಣ ಪುಟ್ಟ ನೋವು ವಾಸಿಯಾಗಬಹುದು.

ಚೆನ್ನಾಗಿ ನಿದ್ರೆ ಬರುವುದಕ್ಕೆ ಸಹಾಯವಾಗುತ್ತದೆಯೇ?

ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸಿಕೊಳ್ಳುವುದು ಕೆಲವರಿಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡಬಹುದು. ಇದರಿಂದ ನಿದ್ರೆಗೆ ಸಿದ್ಧವಾಗಲು ಅನುಕೂಲವಾಗಬಹುದು. ಆದರೆ ಉಪ್ಪಿನ ನೀರು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ.

ಪಾದಗಳನ್ನು ನೆನೆಸುವ ಸರಿಯಾದ ವಿಧಾನ

ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು, ಬಯಸಿದರೆ ಸ್ವಲ್ಪ ಉಪ್ಪು ಸೇರಿಸಿ, ಆರಾಮದಾಯಕವಾಗಿದ್ದರೆ 10–15 ನಿಮಿಷಗಳ ಕಾಲ ಪಾದಗಳನ್ನು ನೆನೆಸಬಹುದು. ನೀರು ತುಂಬಾ ಬಿಸಿಯಾಗಿರಬಾರದು. ನಂತರ ಪಾದಗಳನ್ನು, ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು. ಮಧುಮೇಹ, ಪಾದಗಳಲ್ಲಿ ಸಂವೇದನೆ ಕಡಿಮೆಯಾಗಿರುವ ಸಮಸ್ಯೆ ಅಥವಾ ಗಾಯಗಳಿದ್ದರೆ ಈ ವಿಧಾನ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us