ಪಾರ್ಶ್ವವಾಯು ದೇಹದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ಸಂಭವಿಸುತ್ತದೆ. ಇದು ವಿವಿಧ ಕಾರಣಗಳಿಂದ ಸಂಭವಿಸಬಹುದು. ಪಾರ್ಶ್ವವಾಯು ಪುರುಷರು ಮತ್ತು ಮಹಿಳೆಯರ ಆರೋಗ್ಯದ ಮೇಲೆ ವಿಭಿನ್ನವಾಗಿ ಪರಿಣಾಮ ಬೀರಬಹುದು. ಆದರೆ, ಪಾರ್ಶ್ವವಾಯುವಿನಿಂದ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ ಮತ್ತು ಮಹಿಳೆಯರು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ತಿಳಿಸಿವೆ.
ಅಪಾಯಕಾರಿ ಅಂಶಗಳು ಒಂದೇ ರೀತಿಯಾಗಿದ್ದರೂ, ಪುರುಷರು ಮತ್ತು ಮಹಿಳೆಯರ ನಡುವಿನ ಸ್ಟ್ರೋಕ್ ಅಪಾಯದಲ್ಲಿ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗೆ, ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು, ಗರ್ಭಧಾರಣೆ ಮತ್ತು ಋತುಬಂಧಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳು ಉಂಟಾಗಬಹುದು. ಕೆಲವು ಅಧ್ಯಯನಗಳು ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸ್ವಲ್ಪ ವಿಭಿನ್ನವಾದ ಸ್ಟ್ರೋಕ್ ರೋಗಲಕ್ಷಣಗಳನ್ನು ಅನುಭವಿಸಬಹುದು ಎಂದು ಹೇಳಿವೆ. ಮಹಿಳೆಯರಲ್ಲಿ ಪಾರ್ಶ್ವವಾಯುವಿನ ರೋಗಲಕ್ಷಣಗಳ ಬಗ್ಗೆ ನಿಮಗೆ ತಿಳಿದಿರಬೇಕಾದುದು ಅಗತ್ಯ.
ಮಹಿಳೆಯರಲ್ಲಿ ಬ್ರೈನ್ ಸ್ಟ್ರೋಕ್ನ 7 ಲಕ್ಷಣಗಳು:
ದಿಢೀರ್ ಮರಗಟ್ಟುವಿಕೆ ಅಥವಾ ದೌರ್ಬಲ್ಯ:
ಮಹಿಳೆಯರು ಮುಖ, ತೋಳು ಅಥವಾ ಕಾಲುಗಳಲ್ಲಿ, ವಿಶೇಷವಾಗಿ ದೇಹದ ಒಂದು ಭಾಗದಲ್ಲಿ ಹಠಾತ್ ಮರಗಟ್ಟುವಿಕೆ ಅಥವಾ ದೌರ್ಬಲ್ಯವನ್ನು ಅನುಭವಿಸಬಹುದು. ಇಳಿಬೀಳುವ ಮುಖ ಅಥವಾ ಒಂದು ತೋಳನ್ನು ಬಳಸಲಾಗದಂತಹ ಸ್ಥಿತಿಯ ಬಗ್ಗೆ ಗಮನವಿರಿಸಿ.
ಇದನ್ನೂ ಓದಿ: ಹೊಟ್ಟೆ ಬೊಜ್ಜು ಕರಗಿಸಲು ನೀವು ಸೇವಿಸಬೇಕಾದ ಪಾನೀಯಗಳು ಇಲ್ಲಿವೆ
ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ತೊಂದರೆ:
ಮಹಿಳೆಯರಿಗೆ ಮಾತನಾಡಲು ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಅಸ್ಪಷ್ಟವಾದ ಮಾತು ಅಥವಾ ಅಸಂಗತ ಭಾಷೆಯು ಪಾರ್ಶ್ವವಾಯುವಿನ ಸಂಕೇತವಾಗಿರಬಹುದು.
ತೀವ್ರ ತಲೆನೋವು:
ದಿಢೀರನೆ ತೀವ್ರವಾದ ತಲೆನೋವು ಉಂಟಾಗಬಹುದು. ಇದನ್ನು ಜೀವನದ ಕೆಟ್ಟ ತಲೆನೋವು ಎಂದು ವಿವರಿಸಲಾಗುತ್ತದೆ. ಇದು ಪಾರ್ಶ್ವವಾಯುವಿನ ಲಕ್ಷಣವಾಗಿರಬಹುದು.
ದೃಷ್ಟಿ ಸಮಸ್ಯೆಗಳು:
ಮಸುಕಾದ ದೃಷ್ಟಿ, ಎರಡೆರಡು ವಸ್ತುಗಳು ಕಾಣುವುದು, ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಹಠಾತ್ ದೃಷ್ಟಿ ನಷ್ಟವು ಸ್ಟ್ರೋಕ್ನ ಸೂಚಕವಾಗಿದೆ.
ತಲೆತಿರುಗುವುದು ಮತ್ತು ಸಮತೋಲನದ ಕೊರತೆ:
ಅಸ್ಥಿರತೆ, ತಲೆತಿರುಗುವಿಕೆ ಅಥವಾ ಸಮತೋಲನ ಮತ್ತು ಸಮನ್ವಯದ ಕೊರತೆಯನ್ನು ಅನುಭವಿಸುವುದು ಸ್ಟ್ರೋಕ್ನ ಸಂಕೇತವಾಗಿದೆ.
ಇದನ್ನೂ ಓದಿ: ವಾಯುಮಾಲಿನ್ಯ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು
ಗೊಂದಲ:
ಮಹಿಳೆಯರು ಇದ್ದಕ್ಕಿದ್ದಂತೆ ಗೊಂದಲಕ್ಕೊಳಗಾಗಬಹುದು, ದಿಗ್ಭ್ರಮೆಗೊಳ್ಳಬಹುದು ಅಥವಾ ಅವರ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತೊಂದರೆಯಾಗಬಹುದು.
ನಡೆಯಲು ತೊಂದರೆ:
ನಡಿಗೆಯಲ್ಲಿ ತೊಂದರೆ, ಸಮನ್ವಯದ ಕೊರತೆ, ಅಥವಾ ಹಠಾತ್ ಸಮತೋಲನ ಕಳೆದುಕೊಳ್ಳುವುದು ಸಹ ಪಾರ್ಶ್ವವಾಯುವನ್ನು ಸೂಚಿಸುತ್ತದೆ.
ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಈ ಯಾವುದೇ ಚಿಹ್ನೆಗಳನ್ನು ಅನುಭವಿಸಿದರೆ, ತಕ್ಷಣದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಬಹಳ ಮುಖ್ಯ. ಸ್ಟ್ರೋಕ್ ಅನ್ನು ಎಷ್ಟು ಬೇಗನೆ ಗುರುತಿಸಿ ಚಿಕಿತ್ಸೆ ನೀಡಲಾಗುತ್ತದೆಯೋ ಚೇತರಿಕೆಯ ಸಾಧ್ಯತೆಗಳು ಕೂಡ ಅಷ್ಟೇ ಹೆಚ್ಚಾಗಿರುತ್ತವೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ