parijatha Health Benefits: ಪಾರಿಜಾತ ಗಿಡದಲ್ಲಿ ಅಡಗಿದೆ ಔಷಧೀಯ ಗುಣ; ಹೂವು, ಎಲೆ, ತೊಗಟೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಪಾರಿಜಾತ ಗಿಡದ ಕಾಂಡ, ಅದರ ಎಲೆಗಳ ಜೊತೆಗೆ, ಹೂವು ಕೂಡ ಔಷಧೀಯ ಗುಣಗಳನ್ನು ಹೊಂದಿದೆ. ಪಾರಿಜಾತ ಹೂವುಗಳು ಕಣ್ಣುಗಳ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ.
ಪಾರಿಜಾತ ಒಂದು ಔಷಧೀಯ ಸಸ್ಯವಾಗಿದ್ದು, ಈ ಪಾರಿಜಾತ ಗಿಡವನ್ನು ದೇವರಾಜ ಇಂದ್ರನು ಸ್ವರ್ಗದಲ್ಲಿ ನೆಟ್ಟಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಅಂತೆಯೇ ಸ್ವರ್ಗದ ಐದು ವೃಕ್ಷಗಳಲ್ಲಿ ಪಾರಿಜಾತ ಕೂಡ ಒಂದು ಎಂದು ಹೇಳಲಾಗುತ್ತದೆ. ಈ ಸಸ್ಯ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದು, ದೇವರ ಪೂಜೆಗೆ ಪಾರಿಜಾತ ಹೂವನ್ನು ಬಳಸಲಾಗುತ್ತದೆ. ಪುರಾಣ ಪುಣ್ಯ ಕತೆಗಳಲ್ಲಿ ಹಲವೆಡೆ ಸ್ಥಾನ ಪಡೆದಿರುವ ಪಾರಿಜಾತ ಪರಿಮಳಯುಕ್ತವಾದ ಹೂವು. ಬಿಳಿ ಬಣ್ಣದ ಹೂವಿಗೆ, ಕೇಸರಿ ಬಣ್ಣ ಸೇರಿದ್ದು, ಎಂತವರನ್ನು ಈ ಹೂವು ಆಕರ್ಷಿಸುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೊದಿಯವರು ರಾಮ ಜನ್ಮಭೂಮಿ ಭೂಮಿ ಪೂಜೆ ವೇಳೆ ಪಾರಜಾತ ಗಿಡ ನೆಟ್ಟು ಪೂಜೆ ಸಲ್ಲಿಸಿದ್ದು, ಕೂಡ ಈ ಗಿಡದ ಮಹಿಮೆಯನ್ನು ಸಾರಿದೆ. ಪಾರಿಜಾತ ಹೂವು ಕೇವಲ ಚೆಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಪಾರಿಜಾತ ಗಿಡದ ಕಾಂಡ, ಅದರ ಎಲೆಗಳ ಜೊತೆಗೆ, ಹೂವು ಕೂಡ ಔಷಧೀಯ ಗುಣಗಳನ್ನು ಹೊಂದಿದೆ. ಪಾರಿಜಾತ ಹೂವುಗಳು ಕಣ್ಣುಗಳ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ.
ಪಾರಿಜಾತದ ಎಲೆ ಕೆಮ್ಮಿನಿಂದ ಮುಕ್ತಿ ನೀಡುತ್ತದೆ ಪಾರಿಜಾತ ಗಿಡದ ಎಲೆಗಳು ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದರ ಎಲೆಗಳು ಕೆಮ್ಮನ್ನು ಕಡಿಮೆ ಮಾಡುತ್ತದೆ. ಕುದಿಯುವ ನೀರಿಗೆ ಇದರ ಎಲೆಗಳನ್ನು ಹಾಕಿ ಕುಡಿಯುವುದು ಉತ್ತಮ. ಇನ್ನು ಪಾರಿಜಾತದ ಗಿಡದ ತೊಗಟೆಯನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ಕೆಮ್ಮು ದೂರವಾಗುತ್ತದೆ.
ಮೂಗಿನ ರಕ್ತಸ್ರಾವದ ಸಮಸ್ಯೆಗೆ ರಾಮಬಾಣ ಕೆಲವರಿಗೆ ಮೂಗಿನಲ್ಲಿ ರಕ್ತಸ್ರಾವವಾಗುವ ಕಾಯಿಲೆ ಇರುತ್ತದೆ. ಅಂತವರು ಪಾರಿಜಾತವನ್ನು ಬಳಸಬಹುದು. ಈ ಸಸ್ಯದ ಎಲೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ಅಗಿಯಿರಿ. ಇದು ಮೂಗು, ಕಿವಿ, ಗಂಟಲು ಇತ್ಯಾದಿಗಳಿಂದ ಹೊರಬರುವ ರಕ್ತವನ್ನು ನಿಲ್ಲಿಸುತ್ತದೆ.
ಹೊಟ್ಟೆಯ ಹುಳುಗಳನ್ನು ತೊಡೆದುಹಾಕುತ್ತದೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರಲ್ಲಿಯೂ ಹೊಟ್ಟೆ ಹುಳು ಸಮಸ್ಯೆ ಇರುತ್ತದೆ. ಹೀಗಾಗಿ ಅಂತವರು ಪಾರಿಜಾತದ ಎಲೆಗಳನ್ನು ತಂದು ಅದರ ರಸ ತೆಗೆದು ಸಕ್ಕರೆಯೊಂದಿಗೆ ಬೆರೆಸಿ ಸೇವಿಸುವುದರಿಂದ ಹೊಟ್ಟೆ ಹುಳು ದೂರವಾಗುತ್ತದೆ. ಪಾರಿಜಾತ ಹೊಟ್ಟೆ ಮತ್ತು ಕರುಳಿನಲ್ಲಿನ ಹಾನಿಕಾರಕ ಹುಳುಗಳನ್ನು ಕೊಲ್ಲುತ್ತದೆ.
ಮೂತ್ರ ವಿಸರ್ಜನೆ ಸಮಸ್ಯೆಗೆ ಪರಿಹಾರ ನೀಡುತ್ತದೆ ಕೆಲವು ಜನರಿಗೆ ಆಗಾಗ್ಗೆ ಮೂತ್ರ ವಿಸರ್ಜನೆ ಆಗುವ ಸಮಸ್ಯೆ ಇರುತ್ತದೆ. ಅಂತವರು ಪಾರಿಜಾತ ಗಿಡದ ಕಾಂಡ, ಎಲೆಗಳು, ಬೇರು ಮತ್ತು ಹೂವುಗಳಿಂದ ಕಷಾಯ ಮಾಡಿ ಕುಡಿಯುವುದು ಉತ್ತಮ. ಪಾರಿಜಾತದಿಂದ ತಯಾರಿಸಿದ ಕಷಾಯವನ್ನು 10-30 ಮಿಲಿ ಪ್ರಮಾಣದಲ್ಲಿ ಸೇವಿಸಿ. ಇದು ಮೂತ್ರ ವಿಸರ್ಜನೆಯ ಸಮಸ್ಯೆಗಳನ್ನು ತೊಡೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.
ಗಾಯಗಳನ್ನು ಗುಣಪಡಿಸುತ್ತದೆ ಔಷಧೀಯ ಗುಣಗಳಿಂದ ಕೂಡಿದ ಪಾರಿಜಾತ ಗಿಡವು ಶೀಘ್ರದಲ್ಲೇ ಗಾಯವನ್ನು ಗುಣಪಡಿಸುತ್ತದೆ. ಪಾರಿಜಾತದ ಎಲೆಗಳಿಂದ ತಯಾರಿಸಿದ ಪೇಸ್ಟ್ ಅನ್ನು ಗಾಯದ ಮೇಲೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.
ಸಕ್ಕರೆ ಕಾಯಿಲೆ ನಿವಾರಣೆಗೆ ಸಹಕಾರಿ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರದ ಜನರು, 10-30 ಮಿಲಿ ಪಾರಿಜಾತ ಎಲೆಗಳ ಕಷಾಯವನ್ನು ತಯಾರಿಸಿ ಸೇವಿಸುವುದು ಉತ್ತಮ. ಪಾರಿಜಾತ ಎಲೆಗಳು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ: Silver Anklets: ಅಂದಕ್ಕಷ್ಟೇ ಬೆಳ್ಳಿ ಗೆಜ್ಜೆ ಸೀಮಿತವಾಗಿಲ್ಲ, ಮಹಿಳೆಯರ ಆರೋಗ್ಯ ಕಾಪಾಡುವ ಗುಣಗಳು ಕಾಲ್ಗೆಜ್ಜೆಯಲ್ಲಿ ಅಡಗಿವೆ
Jaggery Benefits: ಬೆಲ್ಲದ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದರೆ, ಸಕ್ಕರೆ ಬದಲು ಸಿಹಿಗಾಗಿ ಇದನ್ನೇ ಬಳಸುತ್ತೀರಿ