Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 5ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 5ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 5ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮಗೆ ಇಷ್ಟ ಇರಲಿ, ಬಿಡಲಿ ಒಂದೇ ವಿಚಾರಕ್ಕೆ -ಕೆಲಸಕ್ಕೆ ಬಹಳ ಸಮಯವನ್ನು ಮೀಸಲಿಡಬೇಕಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಉದ್ದೇಶದಿಂದ ಕೆಲಸ ಮಾಡಿಕೊಡುವುದಾಗಿ ಅಥವಾ ಸಹಾಯಕ್ಕೆ ನಿಲ್ಲುವುದಾಗಿ ನೀವು ಹೇಳಿದ್ದೇ ಸಮಸ್ಯೆಯಾಗಿ ಮಾರ್ಪಡಲಿದೆ. ನಿಮಗೆ ಮೇಲ್ನೋಟಕ್ಕೆ ಏನು ಕಾಣುತ್ತದೋ ಅದೇ ಸತ್ಯ ಎಂಬುದನ್ನು ತಲೆಯಿಂದ ತೆಗೆದು ಹಾಕುವುದು ಉತ್ತಮ. ಹಣತ ಅಗತ್ಯ ತೀವ್ರವಾಗಿ ಕಾಡುವುದರಿಂದ ಸಾಲವನ್ನು ಮಾಡಬೇಕಾಗಿ ಬರಬಹುದು. ಕುಟುಂಬ ಸದಸ್ಯರ ಉನ್ನತ ಶಿಕ್ಷಣದ ಸಲುವಾಗಿ ಬ್ಯಾಂಕ್ ಲೋನ್ ಮಾಡಬೇಕಾಗಿ ಬರಬಹುದು ಎಂಬುದನ್ನು ಚರ್ಚೆ ಮಾಡಲಿದ್ದೀರಿ. ತಕ್ಷಣಕ್ಕೆ ಹಣ ಬಂದರಾಯಿತು, ನೀವು ಮಾಡಿದ ಕೆಲಸವನ್ನು ಒಪ್ಪಿಸುವುದು ಸಲೀಸು ಎಂದೇನಾದರೂ ಅಂದುಕೊಂಡರೆ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ದೇವತಾ ಕಾರ್ಯಗಳನ್ನು ಆಯೋಜನೆ ಮಾಡುವ ಬಗ್ಗೆ ಮನೆಯಲ್ಲಿ ಚರ್ಚೆ ಮಾಡಲಿದ್ದೀರಿ. ಬೇರೆ ಉದ್ದೇಶಕ್ಕಾಗಿ ಕೂಡಿಟ್ಟಿದ್ದ ಹಣವನ್ನು ತೆಗೆಯಬೇಕಾದ ಸನ್ನಿವೇಶ ಎದುರಾಗಲಿದೆ. ಇತರರು ಸಹ ಕೈಜೋಡಿಸಲಿದ್ದಾರೆ, ಕೆಲಸ ಸುಲಭವಾಗಿ ಆಗಲಿದೆ ಎಂದು ನೀವು ಯಾವುದನ್ನು ಅಂದುಕೊಂಡಿದ್ದೀರಾ ಅದನ್ನು ಒಬ್ಬರೇ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ದೂರದ ದೇಶಗಳಿಗೆ ಅಥವಾ ಸ್ಥಳಗಳಿಗೆ ಮಕ್ಕಳು ಶಿಕ್ಷಣ ಅಥವಾ ಉದ್ಯೋಗದ ಸಲುವಾಗಿ ತೆರಳಿದ್ದಾರೆ ಅಂತಾದಲ್ಲಿ ಅವರಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು, ನಿಮಗೆ ಆತಂಕ ಕಾಡಬಹುದು. ಪಿತ್ರಾರ್ಜಿತ ಆಸ್ತಿ ವಿಚಾರಗಳಿಗೆ ಸೋದರ ಸಂಬಂಧಿಗಳ ಜೊತೆಗೆ ಅಭಿಪ್ರಾಯಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಈ ಹಿಂದೆ ನಿಮ್ಮ ಕೈಯಾರೆ ಹಣ ಹಾಕಿ, ಸಹಾಯ ಮಾಡಿದಂತಹ ವ್ಯಕ್ತಿ ಈ ದಿನ ನಿಮಗೆ ನೆರವು ನೀಡುವ ಸಾಧ್ಯತೆಗಳಿವೆ. ಸಹಕಾರ ಸಂಘ- ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವ ಕೃಷಿಕರಿಗೆ ಪ್ರಭಾವಿಗಳ ನೆರವು ದೊರೆಯಲಿದೆ. ಇನ್ನು ಆಗಲಾರದು ಎಂದು ಕೈ ಬಿಟ್ಟಿದ್ದ ಕೆಲಸ ಒಂದಕ್ಕೆ ವೇಗ ದೊರೆತು ಬಹಳ ಶೀಘ್ರದಲ್ಲಿ ಮುಗಿಯುವ ಸೂಚನೆಗಳು ದೊರೆಯಲಿದೆ. ಮಹಿಳೆಯರಿಗೆ ಸಂಬಂಧಿಕರು ಬೆಲೆಬಾಳುವಂತಹ ವಸ್ತ್ರಗಳನ್ನು ಉಡುಗೊರೆಯಾಗಿ ನೀಡುವಂತಹ ಯೋಗ ಇದೆ. ದಿನದ ದ್ವಿತೀಯಾರ್ಧದಲ್ಲಿ ಸ್ನೇಹಿತರು, ಸಂಬಂಧಿಗಳಿಂದ ಹೋಟೆಲ್ ರೆಸ್ಟೋರೆಂಟ್ ಗಳಿಗೆ ಆಹ್ವಾನ ಬರುವಂತಹ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮಲ್ಲಿ ಕೆಲವರಿಗೆ ಚರ್ಮ ರೋಗದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಚರ್ಮರೋಗ ಇದೆ ಎಂದಾದಲ್ಲಿ ಅದು ಉಲ್ಬಣ ಕೂಡ ಆಗಬಹುದು. ಮೊಬೈಲ್ ಫೋನ್ ಸೇರಿದಂತೆ ಒಡವೆ ವಸ್ತ್ರಗಳು ಅಥವಾ ಇನ್ಯಾವುದೇ ವಸ್ತುಗಳನ್ನು ಖರೀದಿ ಮಾಡುತ್ತಿದ್ದೀರಿ ಎಂದಾದಲ್ಲಿ ಗುಣಮಟ್ಟದ ಕಡೆಗೆ ಹೆಚ್ಚಿನ ಲಕ್ಷ್ಯ ಕೊಡಿ. ಇಲ್ಲದಿದ್ದಲ್ಲಿ ನಿಮಗೆ ಮೋಸವಾಗುವ ಸಾಧ್ಯತೆಗಳಿವೆ. ದ್ವಿಚಕ್ರ ವಾಹನಗಳನ್ನು ಓಡಿಸುವಂಥವರು ಈ ದಿನ ದೂರದ ಸ್ಥಳಗಳಿಗೆ ತೆರಳದಿರುವುದು ಕ್ಷೇಮ. ಒಂದು ವೇಳೆ ಹಾಗೆ ಪ್ರಯಾಣ ತೆರಳುವುದು ಅನಿವಾರ್ಯ ಅಂತಾದಲ್ಲಿ ವಾಹನದ ಸರ್ವೀಸ್ ಆಗಿದೆಯೇ ಹಾಗೂ ಸುಸ್ಥಿತಿಯಲ್ಲಿ ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಈ ದಿನ ಕೆಲವರು ನಿಮಗೆ ಬೇಕಂತಲೇ ಸಿಟ್ಟು ಬರಿಸುವುದಕ್ಕೆ ಪ್ರಯತ್ನಿಸಲಿದ್ದಾರೆ. ನೀವು ಇತರರು ಆಡುವ ಎಲ್ಲ ಮಾತುಗಳಿಗೂ ಉತ್ತರಿಸಲೇಬೇಕು ಎಂದೇನೂ ಇಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಮನೆ ಕಟ್ಟಿದ್ದೀರೋ ಇಲ್ಲವೋ ನಿಮ್ಮ ಬಳಿ ಒಡವೆ ವಸ್ತ್ರಗಳು ಇವೆಯೋ ಇಲ್ಲವೋ ಇಂಥ ಚರ್ಚೆಗಳು ಎಲ್ಲಾದರೂ ಆಗುತ್ತಿದೆ ಎಂದಾದರೆ ಅಲ್ಲಿ ತುಂಬಾ ಹೊತ್ತು ನಿಲ್ಲಲು ಹೋಗಬೇಡಿ. ಸಾಕು ಪ್ರಾಣಿಗಳಿಂದ ಈ ದಿನ ಒಂದಿಷ್ಟು ಎಚ್ಚರಿಕೆಯಿಂದ ಇರುವುದು ಉತ್ತಮ. ಏಕೆಂದರೆ ಪ್ರಾಣಿಗಳ ಕಡಿತಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಿವೆ. ನಿಮಗೆ ಎಷ್ಟೇ ಆಪ್ತರಾದರೂ ಸರಿ, ಅವರ ವೈಯಕ್ತಿಕ ವಿಚಾರಗಳಲ್ಲಿ ಯಾವುದೇ ಅಭಿಪ್ರಾಯವನ್ನು ಹೇಳುವುದಕ್ಕೆ ಹೋಗಬೇಡಿ. ಇದರಿಂದ ಮನಸ್ತಾಪಗಳು ಆಗಲಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸಣ್ಣದಾಗಿ ಆರಂಭಿಸಿದ ಯೋಜನೆ ಅಥವಾ ಆಲೋಚನೆ ಅಥವಾ ಒಂದು ಪ್ರಾಜೆಕ್ಟ್ ತುಂಬಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದು ಕೊಡಲಿದೆ. ಮನೆಗೆ ದೊಡ್ಡ ಅಳತೆಯ ಟಿವಿ, ಹೋಂ ಥಿಯೇಟರ್, ಫ್ರಿಡ್ಜ್ ಅಥವಾ ವಾಷಿಂಗ್ ಮಷೀನ್ ಖರೀದಿ ಮಾಡುವಂತಹ ಯೋಗ ಇದೆ. ನಿಮ್ಮ ಪರಿಚಿತರು ಅಥವಾ ಸ್ನೇಹಿತರ ಮೂಲಕವಾಗಿ ಆಫರ್ ಗಳು ದೊರೆಯುವ ಅವಕಾಶಗಳು ಸಹ ಕಂಡುಬರುತ್ತಿವೆ. ಮಕ್ಕಳ ಸಲುವಾಗಿ ಸೈಟು ಅಥವಾ ಕಟ್ಟಿರುವ ಮನೆಯನ್ನು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ನಿಮಗೆ ಬರಬೇಕಾದ ಹಳೆ ಸಾಲ ಬಾಕಿ ಇದ್ದಲ್ಲಿ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ನೀವು ಈ ಹಿಂದೆ ಮಾಡಿದ ಕೆಲಸವನ್ನು ಮೆಚ್ಚಿಕೊಂಡು, ಕೆಲವರು ಈಗ ಹೊಸದಾಗಿ ಮತ್ತೆ ಕೆಲಸವನ್ನು ವಹಿಸುವ ಯೋಗ ಕಂಡುಬರುತ್ತಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅಥವಾ ಆದಾಯದ ಮೂಲಗಳನ್ನೇ ಜಾಸ್ತಿ ಮಾಡಿಕೊಳ್ಳುವುದಕ್ಕೆ ಶ್ರಮ ಹಾಕಲಿದ್ದೀರಿ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರು ಹಾಗೂ ಈವೆಂಟ್ ಮ್ಯಾನೇಜ್ ಮೆಂಟ್ ವಹಿಸಿಕೊಳ್ಳುವಂತಹವರು ಹಾಗೂ ಟೂರಿಸ್ಟ್ ಆಪರೇಟರ್ ಗಳಿಗೆ ಉತ್ತಮವಾದ ದಿನ ಇದು. ಕಚೇರಿ ಬದಲಾವಣೆ ಮಾಡುವ ಸಾಧ್ಯತೆಗಳು ಸಹ ಇವೆ. ಈ ದಿನದ ಎಚ್ಚರಿಕೆ ಏನೆಂದರೆ ನೀವಾಗಿಯೇ ವಹಿಸಿಕೊಂಡ ಕೆಲಸವೊಂದನ್ನು ಆಲಸ್ಯದ ಕಾರಣಕ್ಕಾಗಿ ತಡ ಮಾಡಿ, ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಸ್ವಂತ ವ್ಯವಹಾರ ಅಥವಾ ಉದ್ಯಮವನ್ನು ಮಾಡುತ್ತಿರುವವರು ವಿಸ್ತರಣೆಗಾಗಿ ಹಣಕಾಸಿನ ಸಾಲ ಮಾಡುವ ಬಗ್ಗೆ ಮನೆಯಲ್ಲಿ ಚರ್ಚೆ ಮಾಡಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ಆದಾಯಕ್ಕೆ ಮೀರಿದ ಅಥವಾ ಶಕ್ತಿಗೆ ಮೀರಿದ ಸಾಲವನ್ನು ಮಾಡಲಿಕ್ಕೆ ಈ ದಿನ ಹೋಗಬೇಡಿ. ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಅಂತಲೋ ಅಥವಾ ಇಎಂಐನಲ್ಲಿ ಹಿಂತಿರುಗಿಸಬಹುದು ಎಂಬ ಕಾರಣಕ್ಕೋ ನಿಮಗೆ ಅಗತ್ಯ ಇಲ್ಲದಿರುವ ವಸ್ತುಗಳನ್ನು ಸಹ ಖರೀದಿಸುವುದಕ್ಕೆ ಮುಂದಾಗಬೇಡಿ. ಇತರರ ವೈಯಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದೋ ಅಥವಾ ಕಮೆಂಟ್ ಮಾಡಿದಲ್ಲಿ ವಿವಾದಗಳಿಗೆ ಸಿಲುಕಿಕೊಳ್ಳಲಿದ್ದೀರಿ. ಈ ಹಿಂದೆ ಯಾವಾಗಲೂ ಕೊಟ್ಟಿದ್ದ ಮಾತಿನಂತೆ ನಡೆದುಕೊಳ್ಳಬೇಕಾಗುವ ಸಂದರ್ಭ ಎದುರಾಗಿ, ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಧೋರಣೆ ಸಿಟ್ಟು ತರಿಸಲಿದೆ. ನಿಮ್ಮ ವಸ್ತುವನ್ನು ಅಥವಾ ಹಣವನ್ನು ತಮ್ಮದೇ ಎಂಬಂತೆ ಭಾವಿಸುತ್ತಿದ್ದಾರೆ ಎಂದು ನಿಮಗೆ ಅನಿಸಲು ಆರಂಭವಾಗುತ್ತದೆ. ಯಾವ ಕೆಲಸ ತುಂಬಾ ಕಡಿಮೆ ಹಣದಲ್ಲಿ ಮುಗಿದು ಹೋಗುತ್ತದೆ ಎಂಬ ಲೆಕ್ಕಾಚಾರ ಹಾಕಿಕೊಂಡು, ಸಾಲ ಮಾಡಿರುತ್ತೀರೋ ಅದೇ ಕೆಲಸಕ್ಕೆ ಮತ್ತೊಮ್ಮೆ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಮಕ್ಕಳು ಶಿಕ್ಷಣದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂಬುದು ಈ ದಿನ ನಿಮ್ಮ ಗಮನಕ್ಕೆ ಬರಲಿದ್ದು, ಒಂದಿಷ್ಟು ಚಿಂತೆಗೆ ಕಾರಣವಾಗಲಿದೆ. ಹೆಚ್ಚು ಜನರ ಗುಂಪು ಇರುವಂತಹ ಕಡೆ ನಿಮಗೆ ಸಂಪೂರ್ಣ ಮಾಹಿತಿ ಇಲ್ಲದ ವಿಷಯದ ಬಗ್ಗೆ ಮಾತನಾಡುವುದಕ್ಕೆ ಹೋಗಬೇಡಿ.