Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 25ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 25ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಕ್ಕು ಹಗುರಾಗುವುದಕ್ಕೆ ಬೇಕಾದ ವಾತಾವರಣದಲ್ಲಿ ಈ ದಿನ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಸ್ನೇಹಿತರು- ಸಂಬಂಧಿಗಳು ಜತೆಗೂಡಿ ರೆಸಾರ್ಟ್, ಕಿರು ಪ್ರವಾಸ ಇಂಥವುಗಳಿಗೆ ಹೋಗುವ ಯೋಗ ಇದೆ. ಯಾವ ವ್ಯಕ್ತಿಯಿಂದ ನಿಮಗೇನೂ ಅನುಕೂಲ ಆಗುವುದಿಲ್ಲ ಎಂದುಕೊಂಡು ಬಿಟ್ಟಿರುತ್ತೀರೋ ಅಂಥವರಿಂದಲೇ ವೃತ್ತಿ- ವ್ಯವಹಾರ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಮಹತ್ತರವಾದ ಸಹಾಯ ಆಗಲಿದೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚು ಆಗಲಿದೆ. ಬ್ರ್ಯಾಂಡೆಡ್ ಉತ್ಪನ್ನಗಳನ್ನೇ ಖರೀದಿಸಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಮನಸ್ಸಿನಲ್ಲಿ ಒಂದು ಬಗೆ ತಲ್ಲಣ ಇರಲಿದೆ. ಹಣಕಾಸಿನ ವಿಚಾರಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಕ್ಕೆ ಸಾಧ್ಯ ಆಗುತ್ತದೋ ಇಲ್ಲವೋ ಎಂಬ ಕಾರಣವು ನಿಮ್ಮ ಸ್ಥಿತಿಗೆ ಕಾರಣ ಆಗಲಿದೆ. ಇದ್ದದ್ದನ್ನು ಇದ್ದಂತೆಯೇ ನೇರವಾಗಿ ಹೇಳುವುದಕ್ಕೆ ಸಂಕೋಚ ಪಟ್ಟುಕೊಂಡಿದ್ದರಿಂದಲೇ ಇಂಥ ಪರಿಸ್ಥಿತಿ ನಿರ್ಮಾಣ ಆಯಿತು ಎಂದು ನಾಲ್ಕಾರು ಬಾರಿ ಅಂದುಕೊಳ್ಳುತ್ತೀರಿ. ನಿಮ್ಮ ಜೊತೆಗೆ ಕೆಲಸ ಮಾಡುವವರು ಹೆಚ್ಚುವರಿಯಾಗಿ ಆದಾಯ ಬರುವಂತೆ ಕೆಲವು ಸಲಹೆಗಳನ್ನು ನೀಡಲಿದ್ದಾರೆ. ಭಾರವಾದ ವಸ್ತುಗಳನ್ನು ಸಾಗಿಸುವಾಗ ಜಾಗ್ರತೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಕೇಳಿದಷ್ಟು ಹಣವನ್ನು ನೀಡಿದ ಮೇಲೂ ಅಂದುಕೊಂಡಂಥ ಗುಣಮಟ್ಟ ಬರುತ್ತಿಲ್ಲ ಎಂಬುದು ನಿಮ್ಮ ಆಕ್ಷೇಪದ ಮೂಲ ಆಗಲಿದೆ. ಸಣ್ಣ- ಪುಟ್ಟ ಕೆಲಸ ಅಥವಾ ಜವಾಬ್ದಾರಿ ಎಂದು ನೋಡದೆ ನೀವೇ ಮುಂದೆ ನಿಂತು ಮಾಡಿದಂಥ ಕಾರ್ಯಗಳಿಗೆ ಹಲವು ಕಡೆಯಿಂದ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ನಿಮಗಾಗಿ ಖರೀದಿ ಮಾಡಿದ್ದಂಥ ಕೆಲವು ಎಲೆಕ್ಟ್ರಿಕ್ ವಸ್ತುವನ್ನು ಇತರರಿಗೆ ನೀಡುವ ಸನ್ನಿವೇಶ ಸೃಷ್ಟಿ ಆಗಲಿದೆ. ರಂಗಭೂಮಿ- ಸಿನಿಮಾ- ಧಾರಾವಾಹಿ- ಯಕ್ಷಗಾನ ಕ್ಷೇತ್ರದಲ್ಲಿ ಯಶಸ್ಸಿದೆ.
ಲೇಖನ- ಸ್ವಾತಿ ಎನ್.ಕೆ.
