Number 1 Yearly Horoscope 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 1ಕ್ಕೆ 2025ರ ವರ್ಷ ಭವಿಷ್ಯ
ಜನ್ಮಸಂಖ್ಯೆ 1ರ ವರ್ಷ ಭವಿಷ್ಯ 2025: ಜನ್ಮಸಂಖ್ಯೆ 1 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 1 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಜನ್ಮಸಂಖ್ಯೆ 1 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 1 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಗುಣ- ಸ್ವಭಾವ
ಈ ಜನ್ಮ ಸಂಖ್ಯೆ ಯಾರದೋ ಅವರ ಅಧಿಪತಿ ರವಿ. ನಾಯಕತ್ವ ಗುಣ ಇವರಲ್ಲಿ ಹೆಚ್ಚು. ಇತರರ ಮಾತನ್ನು, ಹಾದಿಯನ್ನು ಅನುಸರಿಸುವುದು ಇವರಿಗೆ ಬಹಳ ಕಷ್ಟ ಕಷ್ಟ. ಅಧಿಕಾರ, ಹುದ್ದೆ, ಬಲ ಇಂಥವೆಲ್ಲ ಬಹಳ ಖುಷಿಯನ್ನು ನೀಡುತ್ತದೆ. ಈ ಸಂಖ್ಯೆಯ ವ್ಯಕ್ತಿಗಳನ್ನು ಇಷ್ಟಪಡುವವರಿಗೆ ಗೊತ್ತಾಗಬೇಕಾದ ಸಂಗತಿ ಏನೆಂದರೆ, ಈಗೋ ಸ್ವಲ್ಪ ಜಾಸ್ತಿಯೇ ಇರುವ ಈ ಜನರು ಹೇಳುವ ವಿಚಾರಗಳಿಗೆ ಶುರುವಿನಲ್ಲಿಯೇ ಆಕ್ಷೇಪ ಹೇಳಬಾರದು. ಆಯಾ ಕ್ಷಣಕ್ಕೆ, ದಿನಕ್ಕೆ, ಸನ್ನಿವೇಶಕ್ಕೆ ಈ ಜನರ ಮನಸ್ಥಿತಿ ಹೇಗಿದೆ ಎಂಬುದನ್ನು ಅರಿತು ಮಾತುಕತೆ ಆಡಬೇಕು. ಒಂದು ವೇಳೆ ಈ ಜನರಿಗೆ ತಾರ್ಕಿಕವಾದ ಕಾರಣಗಳನ್ನು ನೀಡಿ, ಏನು ತಪ್ಪು ಮಾಡುತ್ತಿದ್ದಾರೆ- ಮಾತನಾಡುತ್ತಿದ್ದಾರೆ ಎಂದೇನಾದರೂ ಹೇಳಿದರೆ ಅಲ್ಲಿಗೆ ಯುದ್ಧದ ವಾತಾವರಣವೇ ಸೃಷ್ಟಿ ಮಾಡಿಕೊಂಡಂತೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು, ಯೋಜನೆಗಳು, ಸರ್ಕಾರದಿಂದ ದೊರೆಯಬೇಕಾದ ದಾಖಲೆ- ಪತ್ರಗಳನ್ನು ದಕ್ಕಿಸಿಕೊಳ್ಳುವುದರಲ್ಲಿ ಈ ಜನರು ಎತ್ತಿದ ಕೈ. ಇನ್ನು ಯಾರಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದರಲ್ಲಿಯೂ ಬಲೇ ಲೆಕ್ಕಾಚಾರದ ಜನರು ಇವರಾಗಿರುತ್ತಾರೆ.
ಸಾಮಾನ್ಯ ಸಂಗತಿಗಳು
ಇನ್ನು ಈ ಹೊಸ ವರ್ಷ ಭವಿಷ್ಯದ ವಿಚಾರಕ್ಕೆ ಬರುವುದಾದರೆ ನಿಮಗೆ ಸಾಮಾನ್ಯವಾಗಿಯೇ ಅತಿಯಾದ ವಿಶ್ವಾಸ. ಅದಕ್ಕೆ ಕಾರಣ ನಿಮ್ಮನ್ನು ಮುನ್ನಡೆಸುವಂಥ ಅಧಿಪತಿಯಾದ ರವಿ. ಆದರೆ ಪದೇಪದೇ ಹಿನ್ನಡೆ, ವೈಫಲ್ಯಗಳು ಕಾಣುತ್ತೀರಿ ಹಾಗೂ ಅಂದುಕೊಂಡಂತೆ ಉತ್ತಮ ಫಲಿತಾಂಶಗಳು ಕಾಣದ ಕಾರಣಕ್ಕೆ ಉತ್ಸಾಹ ಧಸಕ್ಕನೆ ಇಳಿದು ಹೋಗುತ್ತದೆ. ಆದರೆ ನಿಮ್ಮ ಸ್ವಭಾವವೇ ಆಶಾಭಾವವೊಂದನ್ನು ಕೊರಳಿಗೆ ನೇತು ಹಾಕಿ, ಮುಂದೆ ಮುಂದಕ್ಕೆ ಸಾಗುವಂತೆ ಮಾಡಲಿದೆ. ನಿಮಗೆ ಗೊತ್ತಿರುವ ವಿಷಯಗಳೇ ಆದರೂ ಒಂದಕ್ಕೆ ಎರಡು ಬಾರಿಗೆ ಎಂಬಂತೆ ಪರಿಶೀಲನೆ ಮಾಡಿಕೊಳ್ಳಿ. ಅದು ನಿಮ್ಮ ಅಕೌಂಟ್ ನಲ್ಲಿರುವ ಮೊತ್ತವೇ ಇರಬಹುದು, ಮೊಬೈಲ್ ಫೋನ್ ನಲ್ಲಿರುವ ಕಾಂಟ್ಯಾಕ್ಟ್ ಇರಬಹುದು. ಖಚಿತ ಆಗುವ ಮುಂಚೆಯೇ ವಿಪರೀತ ವಿಶ್ವಾಸದಿಂದ ಮಾತನಾಡುವುದಕ್ಕೆ ಹೋಗಬೇಡಿ. ಏಪ್ರಿಲ್ ನಿಂದ ಆಚೆಗೆ ಬರುವಂಥ ವಿದೇಶ ಪ್ರಯಾಣ, ದೂರ ಪ್ರದೇಶಗಳಿಗೆ ತೆರಳುವ ವಿಚಾರದಲ್ಲೂ ಬಹಳ ಜಾಗ್ರತೆ ಇರಬೇಕು.ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಆಸಕ್ತಿ ಕುಂಠಿತವಾಗಲಿದೆ. ಗರ್ಭ ಧರಿಸಿದಂಥ ಅಥವಾ ಅದಕ್ಕಾಗಿ ಪ್ರಯತ್ನಿಸುತ್ತಿರುವ ಹೆಣ್ಣುಮಕ್ಕಳು ಸೂಕ್ತ ವೈದ್ಯಕೀಯ ಮಾರ್ಗದರ್ಶನ ಪಡೆದುಕೊಳ್ಳಿ. ಗಾಸಿಪ್ ಮಾತನಾಡುವವರು/ಹಬ್ಬಿಸುವವರಿಂದ ದೂರ ಇರುವುದು ಕ್ಷೇಮ.
ಆರೋಗ್ಯ
ಈ ವರ್ಷ ಆರೋಗ್ಯದ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀವು ನೀಡಬೇಕಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಡುತ್ತವೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಾಡಬಹುದು. ಇನ್ನು ಯಾರಿಗೆ ನರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮಸ್ಯೆ ಇದೆಯೋ ಅಂಥವರಿಗೆ ಅದು ಬಿಗಡಾಯಿಸಲಿದೆ. ಪದೇಪದೇ ವೈದ್ಯರನ್ನು ಬದಲಾಯಿಸುವುದಕ್ಕೆ ಹೋಗಬೇಡಿ. ಔಷಧದ ವಿಧಾನದಲ್ಲಿಯೋ ಅಥವಾ ಪದ್ಧತಿಯಲ್ಲಿಯೋ ಬದಲಾವಣೆ ಮಾಡಿಕೊಳ್ಳುವುದಕ್ಕೆ ಮುಂದಾದರೆ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಆಲೋಚಿಸಿ, ಮುಂದುವರಿಯುವುದು ಒಳ್ಳೆಯದು. ನೀರು ಸೇವನೆ ಸೂಕ್ತ ಪ್ರಮಾಣದಲ್ಲಿ ಮಾಡುವುದಕ್ಕೆ ಆದ್ಯತೆಯನ್ನು ನೀಡಿ. ಒಂದು ವೇಳೆ ಈಗಾಗಲೇ ಡಯಾಲಿಸಿಸ್ ಮಾಡಿಸುತ್ತಿದ್ದಲ್ಲಿ ಪರಿಸ್ಥಿತಿ ಆತಂಕಕ್ಕೆ ಕಾರಣವಾಗಬಹುದು. ಇನ್ನು ನಿಮ್ಮಲ್ಲಿ ಕೆಲವರು ಈ ವರ್ಷದಲ್ಲಿ ಡಯಾಲಿಸಿಸ್ ಶುರು ಮಾಡಲೇಬೇಕಾದ ಸ್ಥಿತಿಗೆ ತಲುಪಲಿದ್ದೀರಿ. ಮಧುಮೇಹ ಇರುವಂಥವರಿಗೆ ಅದರ ಸಲುವಾಗಿ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ ಸೃಷ್ಟಿಯಾಗಲಿದೆ.
ಆಸ್ತಿ-ಹಣ- ಹೂಡಿಕೆ
ಆಸ್ತಿ ಖರೀದಿ, ಷೇರು ಪೇಟೆಯಲ್ಲಿನ ಅಪಾಯವನ್ನು ಮೈ ಮೇಲೆ ಹಾಕಿಕೊಳ್ಳುವಂಥ ಹೂಡಿಕೆ ಅಥವಾ ಸಾಲ ಮಾಡಿ ವಿಲಾಸಿ ವಸ್ತುಗಳನ್ನು ಖರೀದಿ ಮಾಡುವುದು… ಇಂಥವುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಇನ್ನು ಇದೇ ಅವಧಿಯಲ್ಲಿ ಈಗಾಗಲೇ ಆರಂಭ ಮಾಡಿದ ಮನೆ ನಿರ್ಮಾಣ ಅಥವಾ ಫ್ಲ್ಯಾಟ್ ಖರೀದಿಗೆ/ಮನೆ ಖರೀದಿಗೆ ಹಣ ನೀಡಿದ್ದೀರಿ ಅಂತಾದಲ್ಲಿ ವ್ಯವಹಾರಗಳನ್ನು ಪೂರ್ತಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇಂಟೀರಿಯರ್ ಡಿಸೈನಿಂಗ್, ಗೃಹಾಲಂಕಾರ ವಸ್ತುಗಳನ್ನು ಜೋಡಿಸಿಕೊಳ್ಳುವುದು ಇವುಗಳಲ್ಲಿ ನೀವು ಅಂದುಕೊಂಡಂತೆ ನಡೆಯದೆ ಮನಸ್ಸಿಗೆ ಬೇಸರ ಕಾಡಲಿದೆ. ಅಥವಾ ನೀವು ಅದಕ್ಕಾಗಿ ಹಣ ಪಾವತಿಸಿದ ನಂತರದಲ್ಲೂ ನಿಮಗೆ ವಂಚನೆಗಳಾಗಬಹುದು. ಕಳಪೆ ವಸ್ತುಗಳನ್ನು ನೀಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಯಾರು ಬಡ್ಡಿಗೆ ಹಣ ನೀಡುವ ವ್ಯವಹಾರವನ್ನು ಮಾಡುತ್ತಿದ್ದೀರಿ, ಅಂಥವರು ಸಾಲ ನೀಡುವ ವ್ಯವಹಾರದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲಿದ್ದೀರಿ.
ಪ್ರೇಮ-ಮದುವೆ ಇತ್ಯಾದಿ
ದಂಪತಿ ಹಾಗೂ ಪ್ರೇಮಿಗಳ ಮಧ್ಯೆ ವಿರಸ- ಮಾತಿನಲ್ಲಿ ಅಭಿಪ್ರಾಯ ಭೇದಗಳು ಹೆಚ್ಚಲಿವೆ. ವಿವಾಹಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ಹಿಂದೆ ಬಂದಿದ್ದಂಥ ಸಂಬಂಧವೇ ಮತ್ತೊಮ್ಮೆ ಹುಡುಕಿಕೊಂಡು ಬರಲಿದೆ. ನೀವೇನಾದರೂ ಹೊಸ ಉದ್ಯಮ- ವ್ಯವಹಾರ ಶುರು ಮಾಡಬೇಕು ಎಂದಿದ್ದಲ್ಲಿ ಅತ್ತೆ- ಮಾವ, ಸಂಗಾತಿಯ ಬಳಿ ಹೂಡಿಕೆಗೆ ಹಣಕಾಸನ್ನು ಕೇಳದಿರುವುದು ಉತ್ತಮ. ಈ ಸಲಹೆಯನ್ನು ಮೀರಿಯೂ ಏನಾದರೂ ಪ್ರಯತ್ನಿಸಿದಲ್ಲಿ ಸೌಹಾರ್ದ ಸಂಬಂಧ ಹಾಳಾಗಲಿದೆ. ಪ್ರೇಮ ನಿವೇದನೆ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಈ ವ್ಯಕ್ತಿ ನಿಮಗೆ ಸರಿ ಹೊಂದುವಂಥವರಲ್ಲ ಎಂದು ಎನಿಸುವ ಸಾಧ್ಯತೆಗಳಿವೆ.
ಉದ್ಯೋಗ- ವೃತ್ತಿ
ನೀವಾಗಿಯೇ ಉದ್ಯೋಗ ಬಿಡುವ ನಿರ್ಧಾರವನ್ನು ಮಾಡಬೇಡಿ. ಒಂದು ವೇಳೆ ಉದ್ಯೋಗ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ನೀವು ಸೇರಲಿರುವ ಹೊಸ ಸಂಸ್ಥೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿ. ಯಾರು ವ್ಯಾಪಾರ ಅಥವಾ ಉದ್ಯಮವನ್ನು ಮಾಡುತ್ತಿದ್ದೀರಿ ಅಂಥವರಿಗೆ ವರ್ಷದ ದ್ವಿತೀಯಾರ್ಧದಲ್ಲಿ ಆದಾಯ ಹಾಗೂ ಲಾಭದ ಪ್ರಮಾಣದಲ್ಲಿ ಸಮಾಧಾನ ತರುವಂಥ ಬೆಳವಣಿಗೆಗಳು ಆಗಲಿವೆ. ಸಮಾಧಾನ, ತಾಳ್ಮೆಯಿಂದ ವರ್ತನೆ ಇದ್ದಲ್ಲಿ ಕೆಲವು ಅವಕಾಶಗಳು ಹುಡುಕಿಕೊಂಡು ಬಂದಾಗ ಅದನ್ನು ಸದುಪಯೋಗ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.
-ಸ್ವಾತಿ ಎನ್.ಕೆ.
Published On - 8:29 am, Sat, 28 December 24